ADVERTISEMENT

ಸ್ಪರ್ಧಾ ವಾಣಿ | ಹಿಮಸರೋವರಗಳ ವಿಸ್ತರಣೆ; ದಿಢೀರ್‌ ಪ್ರವಾಹದ ಆಪತ್ತು!

ಚನ್ನಬಸಪ್ಪ ರೊಟ್ಟಿ
Published 15 ಮೇ 2024, 23:48 IST
Last Updated 15 ಮೇ 2024, 23:48 IST
<div class="paragraphs"><p>ಹಿಮಾಲಯ ಪರ್ವತದಲ್ಲಿ ಕರಗಿದ ಹಿಮ&nbsp;</p></div>

ಹಿಮಾಲಯ ಪರ್ವತದಲ್ಲಿ ಕರಗಿದ ಹಿಮ 

   

ಸಂಗ್ರಹ ಚಿತ್ರ

ಹಿಮಾಲಯ ಪರ್ವತ ಪ್ರದೇಶದಲ್ಲಿ ಇಲ್ಲಿಯವರೆಗೆ ಗುರುತಿಸಿರುವ ಹಿಮಸರೋವರಗಳ (Glacial) ಪೈಕಿ ಶೇ 27ಕ್ಕಿಂತ ಹೆಚ್ಚು ಹಿಮಸರೋವರಗಳು ಗಮನಾರ್ಹವಾಗಿ ವಿಸ್ತಾರಗೊಂಡಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವರದಿ ಮಾಡಿದೆ. 1984ರಿಂದ 2023ರವರೆಗೆ ನಡೆಸಿದ ದೀರ್ಘಾವಧಿಯ ಉಪಗ್ರಹ ಆಧರಿತ ಮೇಲ್ವಿಚಾರಣಾ ವರದಿಯನ್ವಯ ಇಸ್ರೊ ಈ ಮಾಹಿತಿ ನೀಡಿದೆ. ಹಿಮಾಲಯ ಪ್ರದೇಶದಲ್ಲಿರುವ 10 ಹೆಕ್ಟೇರ್‌ಗಿಂತ ದೊಡ್ಡದಾದ 2,431 ಹಿಮಸರೋವರಗಳ ಗಾತ್ರದಲ್ಲಿನ ಹೆಚ್ಚಳವನ್ನು ವಿಶ್ಲೇಷಿಸಿ ಈ ನಿರ್ಣಯಕ್ಕೆ ಬಂದಿದೆ.

ADVERTISEMENT

ಹಿಮಾಲಯ ಪ್ರದೇಶದಲ್ಲಿ ಒಟ್ಟಾರೆ 676 ಹಿಮಸರೋವರಗಳು ವಿಸ್ತರಣೆಗೊಳ್ಳುತ್ತಿದ್ದು, ಇವುಗಳ ಪೈಕಿ 130 ಹಿಮಸರೋವರಗಳು ಭಾರತದ ವ್ಯಾಪ್ತಿಗೊಳಪಟ್ಟಿವೆ. ಈ 130 ಹಿಮಸರೋವರಗಳ ಪೈಕಿ 65 ಸಿಂಧೂ ನದಿ ಜಲಾನಯನ ಪ್ರದೇಶದಲ್ಲಿ, 7 ಗಂಗಾ ನದಿ ಜಲಾನಯನ ಪ್ರದೇಶದಲ್ಲಿ ಮತ್ತು 58 ಬ್ರಹ್ಮಪುತ್ರಾ ನದಿ ಜಲಾನಯನ ಪ್ರದೇಶದಲ್ಲಿವೆ. ಹಿಮಸರೋವರಗಳ ವಿಸ್ತರಣೆಯು ಮಾನವ–ಪ್ರೇರಿತ ಹವಾಮಾನ ಬದಲಾವಣೆ ಹಾಗೂ ತಾಪಮಾನ ಹೆಚ್ಚಳದಿಂದ ಉಂಟಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.

ವಿಸ್ತರಿಸುತ್ತಿರುವ ಒಟ್ಟಾರೆ 676 ಹಿಮಸರೋವರಗಳ ಪೈಕಿ 601 ಹಿಮಸರೋವರಗಳು ಈಗಾಗಲೇ ತಮ್ಮ ಮೂಲ ಗಾತ್ರದ ಎರಡು ಪಟ್ಟು ಹೆಚ್ಚು ಗಾತ್ರಕ್ಕೆ ಬೆಳೆದಿವೆ. 10 ತಮ್ಮ ಮೂಲ ಗಾತ್ರದ 1.5 ಪಟ್ಟು ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರಕ್ಕೆ ಬೆಳೆದಿವೆ. 65 ತಮ್ಮ ಮೂಲ ಗಾತ್ರಕ್ಕಿಂತ 1.5 ಪಟ್ಟು ವಿಸ್ತರಿಸಿವೆ. ಈ 676 ಹಿಮಸರೋವರಗಳ ಪೈಕಿ 314 ಹಿಮಸರೋವರಗಳು 4000 ಮೀಟರ್‌ನಿಂದ 5000 ಮೀಟರ್‌ ಎತ್ತರದಲ್ಲಿ ನೆಲೆಗೊಂಡಿವೆ. ಇನ್ನುಳಿದವು 2965 ಮೀಟರ್‌ನಿಂದ 4000 ಮೀಟರ್‌ ಎತ್ತರದಲ್ಲಿ ನೆಲೆಗೊಂಡಿವೆ. ವಿಸ್ತರಿಸುತ್ತಿರುವ 676 ಹಿಮಸರೋವರಗಳ ಪೈಕಿ 307 ಹಿಮಸರೋವರಗಳು ಈಗಾಗಲೇ ಹಿಮದ ಕರಗುವಿಕೆಯಿಂದ ಹೊರಬಂದ ನೀರಿನಿಂದ ತುಂಬಿದ ಜಲಸಂಗ್ರಹ ತಾಣಗಳಾಗಿ (moraine-dammed) ಮಾರ್ಪಟ್ಟಿವೆ. 

265 ಹಿಮಸರೋವರಗಳು ಪೂರ್ಣಕರಗುವಿಕೆ ಅಥವಾ ಸವಕಳಿಯ ಸ್ಥಿತಿಯಲ್ಲಿದ್ದು ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹಾಗೂ ಅರ್ಧಕ್ಕಿಂತ ಕಡಿಮೆ ಪ್ರಮಾಣದ ಮಂಜುಗಡ್ಡೆಗಳಿಂದ ತುಂಬಿ ಕೊಂಡಿರುವ (erosion-dammed) ತಾಣಗಳಾಗಿವೆ. 96 ಹಿಮಸರೋವರಗಳು ಅರೆಕರಗುವಿಕೆಯ ಅಥವಾ ಅರೆಸವಕಳಿಯ ಸ್ಥಿತಿಯಲ್ಲಿದ್ದು ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಮಂಜುಗಡ್ಡೆ ಹಾಗೂ ಅರ್ಧಕ್ಕಿಂತ ಕಡಿಮೆ ಪ್ರಮಾಣದ ನೀರಿನಿಂದ ತುಂಬಿಕೊಂಡಿರುವ (partially erosion-dammed) ತಾಣಗಳಾಗಿವೆ. ಇನ್ನುಳಿದ 8 ಹಿಮಸರೋವರಗಳು ಮೇಲ್ನೋಟಕ್ಕೆ ಮಂಜುಗಡ್ಡೆಯಿಂದ ತುಂಬಿರುವ (ice–dammed) ತಾಣಗಳಾಗಿ ಗೋಚರ ಆಗುತ್ತಿವೆ.

ಆದರೆ, ಅವು ತಮ್ಮ ಮೂಲಗಾತ್ರಕ್ಕಿಂತ ಗಮನಾರ್ಹವಾಗಿ ವಿಸ್ತರಣೆಗೊಳಪಟ್ಟಿವೆ. ಇದು ಅವುಗಳಲ್ಲಿ ಮಂಜುಗಡ್ಡೆ ಕರಗುವಿಕೆ ಪ್ರಕ್ರಿಯೆ ವ್ಯಾಪಕವಾಗಿ ನಡೆದಿರುವುದನ್ನು ಸೂಚಿಸುತ್ತಿದೆ.  ವಿಷಮ ಹವಾಮಾನದ ಕಾರಣದಿಂದ ಹಿಮಸರೋವರಗಳ ಸ್ಥಿತಿಗತಿಯ ನೇರ ಅಧ್ಯಯನ ಅಸಾಧ್ಯ. ಹೀಗಾಗಿ, ಉಪಗ್ರಹ ಆಧಾರಿತ ಅವಲೋಕನ ಮತ್ತು ವಿಶ್ಲೇಷಣೆಯೇ ಹಿಮಸರೋವರಗಳ ವಾಸ್ತವಿಕ ಸ್ಥಿತಿಗತಿಗಳನ್ನು, ವಿಸ್ತರಣೆಯ ಪ್ರಮಾಣ, ಸಂಭವನೀಯ ಗ್ಲೋಫ್(Glacial Lake Outburst Flood) ಅಪಾಯಗಳನ್ನು ಅರಿತುಕೊಳ್ಳಲು ಉತ್ತಮ ಕ್ರಮವಾಗಿದೆ. ‘ಗ್ಲೋಫ್‌’ ಎಂಬುದು, ಹಿಮ ಸರೋವರದಲ್ಲಿನ ಮಂಜುಗಡ್ಡೆಯ ನೈಸರ್ಗಿಕ ಅಣೆಕಟ್ಟು ತೀವ್ರ ಒತ್ತಡದಿಂದ ಸ್ಫೋಟಗೊಂಡು ನೀರು ಪ್ರವಾಹೋಪಾದಿಯಲ್ಲಿ ಹೊರಹೊಮ್ಮುವ ಅಪಾಯಕಾರಿ ಸ್ಥಿತಿಯಾಗಿದೆ.

ಗ್ಲೋಫ್‌ನಂಥ ಅಪಾಯಕರ ಸನ್ನಿವೇಶದಲ್ಲಿ ವರಸ್ವರೂಪಿಯಾದ ಈ ಹಿಮಸರೋವರಗಳೇ ಜನರ ಜೀವ–ಜೀವನಕ್ಕೆ ಎರವಾಗುತ್ತವೆ. ಈ ಅಪಾಯಗಳನ್ನು ತಗ್ಗಿಸಲು ಮತ್ತು ಹಿಮಾಲಯ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ನಿರ್ಣಾಯಕ ಕ್ರಮಗಳನ್ನು ವಹಿಸಬೇಕು ಎಂದು ಇಸ್ರೊ ವರದಿ ಆಗ್ರಹಿಸಿದೆ.

ಅಪಾಯ ಕಟ್ಟಿಟ್ಟ ಬುತ್ತಿ:

ಹಿಮಗಡ್ಡೆಗಳಿಂದ ನಿರ್ಮಿತವಾದ ನೈಸರ್ಗಿಕ ಅಣೆಕಟ್ಟುಗಳ ಕರಗುವಿಕೆಯಿಂದ ದಿಢೀರ್‌ ಪ್ರವಾಹಗಳು ಸಂಭವಿಸುತ್ತವೆ. ಈ ರೀತಿಯ ಅವಾಂತರಕ್ಕೆ ಉದಾಹರಣೆಯಾಗಿ ಸಿಕ್ಕಿಂನಲ್ಲಿ 2023 ಅಕ್ಟೋಬರ್ 4ರಂದು ಚುಂಗ್‌ಥಾಂಗ್‌ನಿಂದ ಉತ್ತರಕ್ಕೆ 50 ಕಿಲೋ ಮೀಟರ್‌ ದೂರದಲ್ಲಿ 5,200 ಮೀಟರ್‌ಗಳಷ್ಟು ಎತ್ತರದಲ್ಲಿರುವ ಲೊನಾಕ್ ಹಿಮಸರೋವರ ಇಂಥ ದಿಢೀರ್‌ ಪ್ರವಾಹಕ್ಕೆ ಕಾರಣವಾಗಿ ಅವಾಂತರ ಉಂಟು ಮಾಡಿದ್ದನ್ನು ನಾವು ಸ್ಮರಿಸಬಹುದು. ಲೊನಾಕ್ ಹಿಮಸರೋವರದಲ್ಲಿ ಉಂಟಾದ ಈ ಹಠಾತ್ ಸ್ಫೋಟಕ ಪ್ರವಾಹದಿಂದ ಅಲ್ಲಿಂದ ಉಗಮವಾಗುವ ಲಾಚೆನ್ ನದಿಯಲ್ಲಿ ತೀವ್ರ ಪ್ರಮಾಣದ ನೀರು ರಭಸವಾಗಿ ಹರಿದು ಬಂದಿತು. ಉಕ್ಕೇರಿದ ಹಠಾತ್ ಪ್ರವಾಹ ಅಪಾರ ಹಾನಿಗೆ ಕಾರಣವಾಗಿದ್ದು, ಕೇವಲ 10 ನಿಮಿಷಗಳಲ್ಲಿ ಚುಂಗ್ಥಾಂಗ್ ಅಣೆಕಟ್ಟು ಒಡೆಯಲು ಕಾರಣವಾಯಿತು. ಮುಂದಿನ ಅರ್ಧ ಗಂಟೆಯಲ್ಲಿ ಲಾಚೆನ್‌ ನದಿ ಇನ್ನೊಂದು ಉಪನದಿ ಲಾಚುಂಗ್ ಅನ್ನು ಸಂಧಿಸಿ ನಂತರ ಮುಖ್ಯ ನದಿ ತೀಸ್ತಾವನ್ನು ಸೇರಿ ಅವೆರಡೂ ನದಿಗಳಲ್ಲಿಯೂ ದಿಢೀರ್‌ ಪ್ರವಾಹ ಉಂಟಾಗಲು ಕಾರಣವಾಯಿತು.

ಹಲವಾರು ಸೇತುವೆಗಳು, NH-10 ರ ಭಾಗಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಮಂಗನ್, ಗ್ಯಾಂಗ್ಟಾಕ್, ಪಕ್ಯೋಂಗ್ ಮತ್ತು ನಾಮ್ಚಿ ಜಿಲ್ಲೆಗಳ ಸಾವಿರಾರು ಹಳ್ಳಿ ಮತ್ತು ಪಟ್ಟಣಗಳು ಈ ದಿಢೀರ್‌ ಪ್ರವಾಹದಿಂತ ಬಾಧಿತವಾದವು. ಪ್ರವಾಹಕ್ಕೆ ಸಿಲುಕಿದ ಭಾರತೀಯ ಸೇನೆಯ 22 ಯೋಧರು ಸೇರಿ 40 ಮಂದಿ ಸಾವಿಗೀಡಾದರು. 70ಕ್ಕೂ ಹೆಚ್ಚು ಜನರು  ನಾಪತ್ತೆಯಾಗಿದ್ದು, ಈವರೆಗೂ ಅವರ ಸುಳಿವು ಲಭಿಸಿಲ್ಲ. ಇಂಥದರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 2000ಕ್ಕೂ ಹೆಚ್ಚು ಜನರನ್ನು ಪ್ರಾಣಾಪಾಯದಿಂದ ರಕ್ಷಿಸಿತು. 2017ರಲ್ಲಿ ನಿರ್ಮಿಸಿದ್ದ 817 ಮೀಟರ್ ಎತ್ತರದ ಚುಂಗ್ಥಾಂಗ್ ಅಣೆಕಟ್ಟೆಯಲ್ಲಿ ‘ರನ್‌ ಆಫ್‌ ದ ರಿವರ್‌’ ತಂತ್ರಜ್ಞಾನ ಆಧರಿಸಿ 1200 MW ಜಲ ವಿದ್ಯುತ್‌ ಉತ್ಪಾದಿಸಲಾಗುತ್ತಿತ್ತು. ಈ ಅಣೆಕಟ್ಟೆಯಿಂದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳಕ್ಕೆ ವಿದ್ಯುತ್ ಪೂರೈಸಲಾಗುತ್ತಿತ್ತು. ದಿಢೀರ್‌ ಪ್ರವಾಹದಿಂದ ಕೋಟ್ಯಂತರ ರೂಪಾಯಿ ವೆಚ್ಚದ ಈ ಯೋಜನೆಯು ನೀರುಪಾಲಾಯಿತು. ಮತ್ತೊಂದೆಡೆ ಮರು ನಿರ್ಮಾಣದ ಹೊರೆಯೂ ಹೆಚ್ಚಿತು.

‘ಘೆಪಾಂಗ್ ಘಾಟ್’ ಗಾತ್ರದಲ್ಲಿ ವಿಸ್ತರಣೆ!

ಹಿಮಾಚಲ ಪ್ರದೇಶ ರಾಜ್ಯದ ವ್ಯಾಪ್ತಿಗೊಳಪಟ್ಟು 4068 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಸಿಂಧೂ ನದಿ ಜಲಾನಯನ ಪ್ರದೇಶದಲ್ಲಿರುವ ‘ಘೆಪಾಂಗ್ ಘಾಟ್’ ಹಿಮಸರೋವರವನ್ನು ISRO ಪ್ರತ್ಯೇಕ ‘ಕೇಸ್‌ ಸ್ಟಡಿ’ ಆಗಿ ಅಭ್ಯಸಿಸಿದ್ದು, ಅದು ಗಣನೀಯ ಬದಲಾವಣೆಗಳಿಗೆ ಒಳಪಟ್ಟಿರುವುದನ್ನು ಎತ್ತಿ ತೋರಿಸಿದೆ. ‘ಘೆಪಾಂಗ್ ಘಾಟ್’ ಸರೋವರ 1989ರಲ್ಲಿ 36.49 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ವ್ಯಾಪಿಸಿತ್ತು. 2022 ರವರೆಗೆ ಈ ಸರೋವರದ ವ್ಯಾಪ್ತಿ 101.30 ಹೆಕ್ಟೇರ್‌ಗಳಿಗೆ ವಿಸ್ತೃತಗೊಂಡಿದ್ದು, ವರ್ಷಕ್ಕೆ ಸರಿಸುಮಾರು 1.96 ಹೆಕ್ಟೇರ್‌ಗಳಷ್ಟು ವಿಸ್ತರಿಸಿದೆ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.