ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಇಂಗ್ಲಿಷ್‌ ವ್ಯಾಕರಣ ಅಂಕ ಗಳಿಕೆಗೆ ಕಾರಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 20:00 IST
Last Updated 11 ಆಗಸ್ಟ್ 2021, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕ್‌ ಪರೀಕ್ಷೆಯಿರಲಿ ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, ಪ್ರತಿಯೊಂದು ಪರೀಕ್ಷೆಯಲ್ಲೂ ಇಂಗ್ಲಿಷ್‌ ವಿಭಾಗಕ್ಕೆ ಮಹತ್ವ ಕೊಡಲೇಬೇಕು. ಈ ವಿಭಾಗದಲ್ಲಿ ಕೇಳಲಾಗುವ ಪ್ರಶ್ನೆಗಳು ಗೊಂದಲ ಉಂಟು ಮಾಡುವಂತೆ ಇರುತ್ತವೆ. ಆದರೆ ಮೂಲಭೂತ ಇಂಗ್ಲಿಷ್‌ ಚೆನ್ನಾಗಿ ಗೊತ್ತಿದ್ದರೆ ಅಂಕಗಳನ್ನು ಸುಲಭವಾಗಿ ಗಳಿಸಬಹುದು.

ಸಾಮಾನ್ಯ ಇಂಗ್ಲಿಷ್‌ ಅನ್ನು ಸುಧಾರಿಸಲು ಕೆಲವು ಸಲಹೆಗಳು

ಭಾಷೆಯನ್ನು ಸುಧಾರಿಸಿಕೊಳ್ಳಲು ಇಂಗ್ಲಿಷ್ ದಿನಪತ್ರಿಕೆ, ನಿಯತಕಾಲಿಕೆ ಹಾಗೂ ಪುಸ್ತಕಗಳನ್ನು ನಿಯಮಿತವಾಗಿ ಓದಬೇಕು. ಇದರಿಂದ ಹಲವಾರು ಲಾಭಗಳಿವೆ. ಕೇವಲ ನಿಮ್ಮ ಇಂಗ್ಲಿಷ್‌ ವ್ಯಾಕರಣ, ಶಬ್ದ ಭಂಡಾರ ಮಾತ್ರ ಸುಧಾರಿಸದೆ, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನದ ಕುರಿತ ಅರಿವನ್ನೂ ಹೆಚ್ಚಿಸಿಕೊಳ್ಳಬಹುದು.

ADVERTISEMENT

ಸ್ಪರ್ಧಾರ್ಥಿಗಳು ವಾಕ್ಯಗಳ ರಚನೆಯನ್ನು ಅವಲೋಕಿಸಿ, ಇಂಗ್ಲಿಷ್‌ ವ್ಯಾಕರಣದ ಬಳಕೆಯ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಇದರ ಮೇಲೆ ಸಣ್ಣ ಟಿಪ್ಪಣಿಯನ್ನು ನಿತ್ಯ ಬರೆದುಕೊಂಡರೆ ಆಗಾಗ ಓದಿಕೊಳ್ಳಲು ಅನುಕೂಲವಾಗುತ್ತದೆ. ಹಾಗೆಯೇ ಹೊಸ ಶಬ್ದಗಳನ್ನು ಬರೆದಿಟ್ಟುಕೊಂಡು ಅವುಗಳ ಅರ್ಥವನ್ನು ನಿಘಂಟಿನ ಸಹಾಯದಿಂದ ತಿಳಿದುಕೊಳ್ಳಬಹುದು.

ಶಬ್ದ ಭಂಡಾರ ಬೆಳೆಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಳ್ಳೆಯ ಶಬ್ದ ಭಂಡಾರವಿದ್ದರೆ ಇಂಗ್ಲಿಷ್‌ ವಿಭಾಗದಲ್ಲಿ ಒಳ್ಳೆಯ ಅಂಕ ಗಳಿಸಬಹುದು. ನಿತ್ಯ ಒಂದು ಹೊಸ ಶಬ್ದ ಕಲಿಯುತ್ತ, ಅದನ್ನು ಬಳಸುತ್ತ ಹೋದರೆ ಇದು ಸಾಧ್ಯ.

ಹೊಸ ಶಬ್ದಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಇನ್ನೊಂದು ವಿಧಾನವಿದೆ. ಅದು ಫ್ಲಾಷ್‌ಕಾರ್ಡ್‌ ಬಳಕೆ. ಈಗಂತೂ ಎಲೆಕ್ಟ್ರಾನಿಕ್‌ ಫ್ಲಾಷ್‌ಕಾರ್ಡ್‌ ಹೆಚ್ಚು ಜನಪ್ರಿಯ. ಇದಕ್ಕಾಗಿ ಸ್ಮಾರ್ಟ್‌ಫೋನ್‌ ಆ್ಯಪ್‌ ಬಳಸಬಹುದು.

ಮೂಲಭೂತ ವ್ಯಾಕರಣ ಕಲಿಕೆ: ಕಾಲಗಳು, ನಾಮಪದ, ಕ್ರಿಯಾಪದ, ವಿಶೇಷಣ, ಶಬ್ದ ಜೋಡಣೆ, ಪ್ರಿಪೋಶಿಷನ್‌, ಆ್ಯಕ್ಟಿವ್‌ ಹಾಗೂ ಪ್ಯಾಸಿವ್‌ ವೈಸ್‌ ಮೊದಲಾದ ಮೂಲಭೂತ ವ್ಯಾಕರಣದ ಬಗ್ಗೆ ಕಲಿತರೆ ಪರೀಕ್ಷೆ ಎದುರಿಸುವುದು ಸುಲಭ. ಇಂಗ್ಲಿಷ್‌ ವ್ಯಾಕರಣ ಕುರಿತ ಪುಸ್ತಕಗಳನ್ನು ಓದಬಹುದು. ಈ ಕುರಿತ ಅಣಕು ಪರೀಕ್ಷೆ ತೆಗೆದುಕೊಳ್ಳಬಹುದು.

ಹಾಗೆಯೇ ಎಲ್ಲಾ ಬಗೆಯ ವ್ಯಾಕರಣ ಕಲಿಯಲು ಬರೆದು ಅಭ್ಯಾಸ ಮಾಡುವುದು ಸೂಕ್ತ. ಇದರಿಂದ ಏನು ತಪ್ಪಾಗಿದೆ ಎಂದು ತಿಳಿದುಕೊಂಡು ಸುಧಾರಿಸಿಕೊಳ್ಳಲು ಸಾಧ್ಯ.

ಕೇಳಿ ಅರ್ಥ ಮಾಡಿಕೊಳ್ಳುವುದು. ಭಾಷೆಯ ಬಗ್ಗೆ ತಿಳಿದುಕೊಳ್ಳುವ ಇನ್ನೊಂದು ವಿಧಾನವೆಂದರೆ ಆಲಿಸುವುದು. ಅಂದರೆ ಇಂಗ್ಲಿಷ್‌ ವಾರ್ತೆಯನ್ನು, ರೇಡಿಯೊ, ಟಿವಿ ಚಾನೆಲ್‌ಗಳಲ್ಲಿ ನಿಯಮಿತವಾಗಿ ಕೇಳಿದರೆ ಶಬ್ದ ಭಂಡಾರ, ವ್ಯಾಕರಣ, ಉಚ್ಛಾರ ಮಾಡುವ ವಿಧಾನ ಸುಧಾರಿಸುತ್ತದೆ.

ಸಮಯದ ನಿರ್ವಹಣೆ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್‌ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುವಾಗ ಸಮಯ ನಿರ್ವಹಣೆ ತುಂಬಾ ಮುಖ್ಯ. ಕಡಿಮೆ ಅವಧಿಯಲ್ಲಿ ಉತ್ತರಿಸುವ ಜಾಣ್ಮೆ ಬೆಳೆಸಿಕೊಳ್ಳುವುದು ಅಭ್ಯಾಸದಿಂದ ಮಾತ್ರ ಸಾಧ್ಯ.

ರೀಡಿಂಗ್‌ ಕಾಂಪ್ರ್‌ಹೆನ್ಶನ್‌: ಇದರಲ್ಲಿ ಒಳ್ಳೆಯ ಅಂಕ ಗಳಿಸಬೇಕಾದರೆ ಓದುವ ವೇಗ, ಉತ್ತಮವಾದ ವಿಶ್ಲೇಷಣೆ, ಪುನರಾವರ್ತನೆ, ಒಳ್ಳೆಯ ಶಬ್ದ ಜ್ಞಾನ ಮುಖ್ಯ. ಇದರಲ್ಲಿ ಸಾಮಾನ್ಯವಾಗಿ ಶಬ್ದಗಳು, ಸಮಾನಾರ್ಥಕ ಹಾಗೂ ವಿರುದ್ಧ ಶಬ್ದಗಳು, ಇನ್‌ಫೆರೆನ್ಸ್‌ ಮೊದಲಾದವುಗಳು ಬರುತ್ತವೆ.

ತಪ್ಪುಗಳನ್ನು ಕಂಡು ಹಿಡಿಯುವುದು: ಈ ವಿಭಾಗದಲ್ಲಿ ಉತ್ತಮ ಅಂಕ ಗಳಿಸಬೇಕಾದರೆ ಹಳೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಅಣಕು ಪರೀಕ್ಷೆಗಳನ್ನು ಎದುರಿಸಿ ಅಭ್ಯಾಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.