ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಮೊದಲೇ ಸಿದ್ಧತೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೂ ಮೊದಲು ಹಾಗೂ ಪರೀಕ್ಷೆಗೂ ಮೊದಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಅವಶ್ಯ. ಆ ಮೂಲಕ ಯಶಸ್ಸಿನ ಹಾದಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.
ಇತರೆ ಅಭ್ಯರ್ಥಿಗಳೊಂದಿಗೆ ಹೋಲಿಸಿಕೊಳ್ಳದಿರಿ: ಅಭ್ಯರ್ಥಿ ಪರೀಕ್ಷೆಗೆ ತಯಾರಿ ನಡೆಸುವಾಗ ಮಾಡುವ ಅತಿ ದೊಡ್ಡ ತಪ್ಪು ಇದು. ಉದಾಹರಣೆಗೆ ತಮ್ಮ ಸಹಪಾಠಿ ಕೇವಲ ಒಂದೇ ಪ್ರಯತ್ನದಲ್ಲಿ ಎರಡರಿಂದ ಮೂರು ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು ತನಗಿಷ್ಟದ ಒಂದು ಉದ್ಯೋಗ ಪಡೆದ ಬಗ್ಗೆ ಅಥವಾ ಪರೀಕ್ಷಾ ಕೇಂದ್ರದಿಂದ ಹೊರಬರುವಾಗ ಇತರೆ ಅಭ್ಯರ್ಥಿಗಳು, ಸ್ನೇಹಿತರು ಗರಿಷ್ಠ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂಬುದನ್ನು ತಿಳಿದು ನಕಾರಾತ್ಮಕವಾಗಿ ಯೋಚಿಸದಿರಿ. ಅಥವಾ ಇದನ್ನೇ ಗಮನದಲ್ಲಿಟ್ಟುಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಸಿಲುಕಿ ಅಂದಾಜಿನ ಮೇಲೆ ಉತ್ತರಿಸದಿರಿ. ಕಾರಣ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳು ಇರುತ್ತವೆ ಎಂಬುದು ಗಮನದಲ್ಲಿರಲಿ. ಅಷ್ಟಕ್ಕೂ ಅವರು ಗರಿಷ್ಠ ಪ್ರಶ್ನೆಗಳಿಗೆ ಸರಿ ಉತ್ತರವನ್ನೇ ನೀಡಿದ್ದಾರೆ ಎಂದಿಟ್ಟುಕೊಳ್ಳಿ. ಅದು ಅವರ ಪ್ರಯತ್ನ ಹಾಗೂ ಪರಿಶ್ರಮದ ಫಲ. ಎಲ್ಲ ಅಭ್ಯರ್ಥಿಗಳ ಐಕ್ಯೂ ಮಟ್ಟ ಒಂದೇ ರೀತಿ ಇರಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಸಕಾರಾತ್ಮಕವಾಗಿಯೇ ತೆಗೆದುಕೊಂಡು ನಿಮ್ಮ ಪ್ರಯತ್ನ ಮುಂದುವರೆಸಿ. ಇನ್ನು ಕೆಲವು ಅಭ್ಯರ್ಥಿಗಳು ಗರಿಷ್ಠ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂಬ ವಿಷಯಕ್ಕೆ ಬಂದರೆ ಅಂಕಗಳು ನಿರ್ಧಾರವಾಗುವುದು ಗರಿಷ್ಠ ಪ್ರಶ್ನೆಗಳಿಗೆ ಉತ್ತರಿಸಿದ ಆಧಾರದ ಮೇಲೆ ಅಲ್ಲ, ಬದಲಾಗಿ ಅದರಲ್ಲಿ ನಿಖರವಾಗಿ ಉತ್ತರಿಸಿದ ಪ್ರಶ್ನೆಗಳು ಎಷ್ಟು ಎಂಬುದರ ಆಧಾರದ ಮೇಲೆ. ಹಾಗಾಗಿ ನೀವು ಆತ್ಮವಿಶ್ವಾಸದಿಂದ ವೇಗ ಹಾಗೂ ನಿಖರತೆಯೊಂದಿಗೆ ಪ್ರಶ್ನೆಗಳಿಗೆ ಉತ್ತರಿಸಿ. ಅಂದಾಜಿನ ಮೇಲೆ ಪ್ರಶ್ನೆಗಳಿಗೆ ಉತ್ತರಿಸಿ ಋಣಾತ್ಮಕ ಅಂಕಗಳಿಗೆ ಅವಕಾಶ ಮಾಡಿಕೊಡಬೇಡಿ.
ಬ್ಯಾಂಕ್ ಪರೀಕ್ಷೆಯ ಭಾಷಾ ಮಾಧ್ಯಮ ಆಯ್ಕೆ ಮಾಡುವಲ್ಲಿ ಎಡವದಿರಿ: ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕ್ ಪರೀಕ್ಷೆಗಳನ್ನು ಬರೆಯಬೇಕು ಎಂಬ ಬಹುಬೇಡಿಕೆಯ ಬಹಳ ವರ್ಷಗಳ ಕನಸು ಈಗ ನನಸಾಗಿದೆ. ಅದರಂತೆ ಅಭ್ಯರ್ಥಿಯು ಕನ್ನಡ ಮಾಧ್ಯಮದಲ್ಲಿಯೂ ಪರೀಕ್ಷೆ ತೆಗೆದುಕೊಳ್ಳಬಹುದು. ಇದು ಎಲ್ಲರಿಗೂ ಎಷ್ಟರಮಟ್ಟಿಗೆ ಸಹಕಾರಿ ಎಂಬುದು ಅವರವರ ಭಾಷಾ ಸಾಮರ್ಥ್ಯದ ಮೇಲೆ ನಿರ್ಧಾರವಾಗುವಂತಹದ್ದು. ಉದಾಹರಣೆಗೆ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಹಾಗೂ ರೀಸನಿಂಗ್ ವಿಭಾಗದಲ್ಲಿ ಇರುವ ಸುಲಭ ಇಂಗ್ಲಿಷ್ ಪದ ಬಳಕೆಯ ಪ್ರಶ್ನೆಗಳನ್ನು ಅಪ್ಪಟ ಕನ್ನಡಕ್ಕೆ ಅನುವಾದಿಸಿದಾಗ ಅಭ್ಯರ್ಥಿಯು ಪ್ರಶ್ನೆಗಳನ್ನು ವೇಗವಾಗಿ ಗ್ರಹಿಸಲು ಸಾಧ್ಯವಾಗದೆ ಇರಬಹುದು. ಇಂತಹ ಸಂದರ್ಭಗಳಲ್ಲಿ ಅಭ್ಯರ್ಥಿಯು ಪುನಃ ಇಂಗ್ಲಿಷ್ ವಿಭಾಗಕ್ಕೆ ಬದಲಾಗಿ (ಸ್ವಿಚ್ ಆಗಿ) ಪ್ರಶ್ನೆಯನ್ನು ಗ್ರಹಿಸಿ ಉತ್ತರಿಸಬೇಕಾಗುತ್ತದೆ. ನಂತರ ಮುಂದಿನ ಪ್ರಶ್ನೆಗೆ ಉತ್ತರಿಸಲು ಹೋದಾಗ ಮತ್ತೆ ಪ್ರಶ್ನೆಗಳು ಕೊನೆಯವರೆಗೂ ಕನ್ನಡದಲ್ಲಿಯೇ ಪ್ರದರ್ಶಿಸಲ್ಪಡುತ್ತವೆ. ಆಗ ಮತ್ತೆ ಪದಬಳಕೆ ಅರ್ಥವಾಗದಿದ್ದಲ್ಲಿ ಪ್ರತಿ ಪ್ರಶ್ನೆಗೂ ಇಂಗ್ಲಿಷ್ ವಿಭಾಗಕ್ಕೆ ಸ್ವಿಚ್ ಆಗಿ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಹಾಗಾಗಿ ನೀವು ಪೂರ್ವನಿಯೋಜಿತವಾಗಿ (By Default) ಯಾವ ಮಾಧ್ಯಮದಲ್ಲಿ ಪರೀಕ್ಷೆಯನ್ನು ತೆಗೆದುಕೊಂಡರೆ ನನಗೆ ಅನುಕೂಲ ಎಂಬುದನ್ನು ಕೆಲವು ಅಣಕು ಪರೀಕ್ಷೆಗಳನ್ನು ಆ ಮಾಧ್ಯಮದಲ್ಲಿ (ಉದಾಹರಣೆಗೆ ಕನ್ನಡ) ತೆಗೆದುಕೊಂಡು ನಂತರ ಯಾವ ಮಾಧ್ಯಮದಲ್ಲಿ ಪರೀಕ್ಷೆ ತೆಗೆದುಕೊಂಡರೆ ಉತ್ತಮ ಎಂಬುದನ್ನು ನಿರ್ಧರಿಸಿ.
ಒಟ್ಟಿನಲ್ಲಿ ವಯಸ್ಸಿನ ಮಿತಿ, ಸ್ಪರ್ಧೆಯ ಕಠಿಣತೆಯ ಬಗ್ಗೆ ಅಂದಾಜಿಸದೆ ಇತರೆ ಅಭ್ಯರ್ಥಿಗಳ ಜೊತೆಗೆ ಹೋಲಿಸಿಕೊಳ್ಳದೆ ಪ್ರಶ್ನೆಗೆ ಉತ್ತರಿಸಲು ಅನುಕೂಲಕರವಾದ ಪರೀಕ್ಷಾ ಭಾಷಾ ಮಾಧ್ಯಮ ಆಯ್ಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಅರ್ಹರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.