ಅಂಕಪಟ್ಟಿ ನೋಡಿ ಉದ್ಯೋಗ ಕೊಡುವ ಪ್ರವೃತ್ತಿ ಹೋಗಿ ಬಹಳ ಕಾಲವೇ ಆಯಿತು. ಕೆಲವೇ ಕೆಲವು ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಇನ್ನೂ ಪಿಯುಸಿ ಅಥವಾ ಪದವಿ ಅಂಕಗಳನ್ನು ನೋಡಿ ಮೆರಿಟ್‌ಲಿಸ್ಟ್ ತಯಾರಿಸುವ ಪದ್ಧತಿಯಿದೆ. ಉಳಿದಂತೆ ಉದ್ಯೋಗದಾತರಿಗೆ ಅಭ್ಯರ್ಥಿಗಳ ಅಂಕಗಳಿಸುವ ತಾಕತ್ತು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸಂಬಳಕ್ಕೆ ಪ್ರತಿಯಾಗಿ ಇವರು ಏನನ್ನು ನೀಡಬಲ್ಲರು ಎಂಬ ಪ್ರಶ್ನೆಗೆ ಉತ್ತರ ಮಾತ್ರ. ಈ ನಿರೀಕ್ಷೆಯನ್ನು ‘ಉದ್ಯೋಗಾರ್ಹತೆ’ ಎಂದೋ, ‘ಉದ್ಯೋಗಾರ್ಹತೆಯ ಕೌಶಲಗಳು’ ಎಂದೋ ಕರೆಯಬಹುದು.
ಅಂಕಪಟ್ಟಿ ತೋರಿಸುವ ಪರ್ಸೆಂಟೇಜು ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅನೇಕ ಮಾನದಂಡಗಳಲ್ಲಿ ಒಂದಷ್ಟೇ. ಬಹುತೇಕ
ಆಯ್ಕೆ ಪ್ರಕ್ರಿಯೆಗಳಲ್ಲಿ ಸಂದರ್ಶನವೇ ಪ್ರಧಾನ ಭಾಗ. ನಾಗರಿಕ ಸೇವಾ ಪರೀಕ್ಷೆಗಳಲ್ಲಂತೂ ಸಂದರ್ಶನ ಎಂಬ ಪದವನ್ನೂ ಬಳಸುವುದಿಲ್ಲ. ಅವರು ಅದನ್ನು ‘ವ್ಯಕ್ತಿತ್ವ ಪರೀಕ್ಷೆ’ ಎಂದು ಕರೆಯುತ್ತಾರೆ.
ಈ ವ್ಯಕ್ತಿತ್ವ ಮಾಪನ ಪ್ರಕ್ರಿಯೆಯಲ್ಲಿ ಅವರು ಹುಡುಕುವುದು ಅಭ್ಯರ್ಥಿಯ ಉದ್ಯೋ ಗಾರ್ಹತೆಯನ್ನೇ. ಯಾವುದೇ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗಬೇಕಾದರೆ ಶೈಕ್ಷಣಿಕ ವಿದ್ಯಾರ್ಹತೆಗಿಂತ ಹೊರತಾದ ಅನೇಕ ಗುಣಗಳು ಬೇಕೇಬೇಕು. ಸಂವಹನ ಕೌಶಲ, ಹೊಂದಾಣಿಕೆಯ ಪ್ರವೃತ್ತಿ, ಸಮಸ್ಯೆ ಬಗೆಹರಿಸುವಿಕೆ, ಸಮಯ ನಿರ್ವಹಣೆ, ತಂಡ ಮನೋಭಾವ, ಸಂಘಟನಾ ಕೌಶಲ, ಲಭ್ಯ ಮಾಹಿತಿಯ ಬಳಕೆ, ತಂತ್ರಜ್ಞಾನದ ಸದುಪಯೋಗ, ವ್ಯಕ್ತಿತ್ವ ಕೌಶಲಗಳು, ನಾಯಕತ್ವ- ಹೀಗೆ ಹತ್ತಾರು ಇವೆ. ಇವುಗಳಲ್ಲಿ ಕೆಲವು ಆಯಾ ಉದ್ಯೋಗವನ್ನು ನಿರ್ವಹಿಸಲು ಪ್ರಾಥಮಿಕ ಅವಶ್ಯಕತೆಗಳಾದರೆ, ಇನ್ನು ಕೆಲವು ಅದರಲ್ಲಿ ಕ್ಷಮತೆಯನ್ನು ಸಾಧಿಸಲು ಅನಿವಾರ್ಯ.
ಉದ್ಯೋಗಾರ್ಹತೆಯ ಕೌಶಲಗಳು:ಯಾವುದೇ ಉದ್ಯೋಗದಲ್ಲಿರುವವರಿಗೆ ಪ್ರತಿದಿನ ಒಂದಲ್ಲ ಒಂದು ಸವಾಲು ಎದುರಾಗಿಯೇ ಆಗುತ್ತದೆ ಸಣ್ಣ ಹುದ್ದೆಗಳಲ್ಲಿರುವವರಿಗೆ ಅವರ ಜವಾಬ್ದಾರಿ ನಿರ್ವಹಿಸುವಲ್ಲಿ ಸವಾಲುಗಳಾದರೆ, ದೊಡ್ಡ ಹುದ್ದೆಗಳಲ್ಲಿರುವವರಿಗೆ ಸಂಸ್ಥೆಯನ್ನೇ ಮುಂದಕ್ಕೆ ಒಯ್ಯುವಲ್ಲಿ ಸವಾಲುಗಳಿರುತ್ತವೆ. ಅವು ಗಳು ಎದುರಾದ ತಕ್ಷಣ ಎದೆಗುಂದುವ ಬದಲು, ಅವುಗಳನ್ನು ಅಲ್ಲಲ್ಲಿಯೇ ವಿಶ್ಲೇಷಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು, ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವುದು ನಿಜಕ್ಕೂ ಒಂದು ಕೌಶಲವೇ. ಸಂವಹನ ಕೌಶಲವಂತೂ ಒಂದು ಅತಿಪ್ರಮುಖ ಅರ್ಹತೆ. ಹೇಳಬೇಕಾದುದನ್ನು ಗೊಂದಲವಿಲ್ಲದಂತೆ ಸ್ಪಷ್ಟವಾಗಿ ಇನ್ನೊಬ್ಬರಿಗೆ ಹೇಳುವುದೊಂದು ದೊಡ್ಡ ಕಲೆ. ಅನೇಕ ಸಲ ಇದನ್ನೇ ಸರಿಯಾಗಿ ಮಾಡದೆ ಎಡವಟ್ಟುಗಳನ್ನು ಮಾಡಿಕೊಂಡುಬಿಡುತ್ತೇವೆ.
ಸಂವಹನವೆಂದ ಮೇಲೆ ಅದು ಬರವಣಿಗೆ ಮತ್ತು ಮಾತು ಎರಡನ್ನೂ ಒಳಗೊಂಡಿದೆ. ಕೆಲವು ಉದ್ಯೋಗಗಳಲ್ಲಿ ಬರವಣಿಗೆ ಮುಖ್ಯವಾದರೆ ಕೆಲವದರಲ್ಲಿ ಮಾತು ಮುಖ್ಯವಾಗುವುದೂ ಇದೆ ಸರಿಯಾದ ಮಾತೊಂದರಿಂದ ಯುದ್ಧವನ್ನೇ ತಪ್ಪಿಸಬಹುದಂತೆ, ಇನ್ನು ಉದ್ಯೋಗದಲ್ಲಿ ಯಶಸ್ಸು ಕಾಣಲಾಗದೇ? ಬಹುತೇಕ ಕೆಲಸಗಳನ್ನು ತಂಡಗಳಲ್ಲಿ ನಿರ್ವಹಿಸಬೇಕಾಗುತ್ತದೆ. ಒಬ್ಬಂಟಿಯಾಗಿ ಮಾಡುವ ಕೆಲಸಗಳು ಅಪರೂಪ. ಕಾರ್ಪೊರೇಟ್ ಯುಗದಲ್ಲಂತೂ ಟೀಂವರ್ಕ್ ಒಂದು ಮಹಾಮಂತ್ರ. ನಾವು ಕೆಲಸ ಮಾಡುವ ಕಂಪೆನಿಗಳಲ್ಲಿ ವಿವಿಧ ವಯೋಮಾನದ, ಸಾಮಾಜಿಕ ಹಿನ್ನೆಲೆಯ, ಭಿನ್ನ ರಾಜಕೀಯ ನಿಲುವುಗಳ ಸಹೋದ್ಯೋಗಿಗಳಿರುತ್ತಾರೆ. ಉದ್ಯೋಗದ ವೇಳೆ ಇವು ಯಾವುವೂ ಅಡ್ಡಿಯಾಗದಂತೆ ನೋಡಿಕೊಳ್ಳುವುದೊಂದು ಪ್ರಮುಖ ಕೌಶಲ. ಸಣ್ಣಪುಟ್ಟ ಅಡಚಣೆಗಳನ್ನು ನಿರ್ಲಕ್ಷಿಸಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದೇ ಇಲ್ಲಿ ಮುಖ್ಯ. ಯೋಜನೆ ಮತ್ತು ಸಂಘಟನೆ ಉದ್ಯೋಗ ಜಗತ್ತು ಬಯಸುವ ಇನ್ನೊಂದು ವಿಶಿಷ್ಟ ಕೌಶಲ.
ಸಂಘಟನಾ ಕಲೆ ಎಲ್ಲರಿಗೂ ಒಲಿಯುವುದು ಕಷ್ಟವಾದರೂ, ಯಾವುದೇ ಉದ್ಯೋಗ ಕೈಗೊಂಡವರಿಗೆ ಅದರ ಪ್ರಾಥಮಿಕ ತಿಳುವಳಿಕೆಯಾದರೂ ಬೇಕಾಗುತ್ತದೆ. ಆಗಬೇಕಿರುವ ಕೆಲಸಗಳನ್ನು ಹೇಗೆ ವಿಭಾಗಿಸಿಕೊಳ್ಳಬೇಕು, ಯಾರಿಗೆ ಯಾವ ಹೊಣೆಗಾರಿಕೆಗಳನ್ನು ಹಂಚಬೇಕು, ಎಷ್ಟು ಸಮಯದೊಳಗೆ ಅವುಗಳನ್ನು ಪೂರೈಸುವಂತೆ ನೋಡಿಕೊಳ್ಳಬೇಕು, ಸಂಪನ್ಮೂಲಗಳನ್ನು ಹೇಗೆ ಒಟ್ಟು ಮಾಡಬೇಕು- ಇತ್ಯಾದಿಗಳನ್ನು ಅರಿತವರು ಉತ್ತಮ ಸಂಘಟಕರಾಗುತ್ತಾರೆ.
ಸಮಯ ನಿರ್ವಹಣೆ
ಎಲ್ಲರೂ ರೂಢಿಸಿಕೊಳ್ಳಬೇಕೆಂದು ಬಯಸುವ ಆದರೆ ಬಹುತೇಕರು ವಿಫಲವಾಗುವ ಒಂದು ವಿಚಾರವೆಂದರೆ ಸಮಯ ನಿರ್ವಹಣೆ.
ಯಾವುದೇ ವೃತ್ತಿಯ ಯಶಸ್ಸಿನಲ್ಲಿ ಸಮಯ ನಿರ್ವಹಣೆಯ ಪಾತ್ರ ಬಲು ಪ್ರಮುಖ. ನಿರ್ದಿಷ್ಟ ಕೆಲಸವೊಂದು ನಿಗದಿತ ಸಮಯದಲ್ಲಿ ಆಗದೇಹೋದರೆ ಕಂಪನಿಯ ನಿರ್ಣಾಯಕ ಯೋಜನೆಯೊಂದು ಕೈತಪ್ಪಿಹೋಗಬಹುದು. ನಾವು ಹತ್ತಬೇಕಾದ ಬಸ್ಸೋ ರೈಲೋ ತಪ್ಪಿಹೋದರೆ ಎಷ್ಟೊಂದು ಸಮಸ್ಯೆಯಾಗುತ್ತದೆ; ಇನ್ನು ಯೋಜನೆಯೇ ತಪ್ಪಿಹೋದರೆ ಆಗುವ ನಷ್ಟ ಎಷ್ಟು ದೊಡ್ಡದು
ಸಮಯ ನಿರ್ವಹಣೆಯಲ್ಲಿ ನಾವು ಯಶಸ್ವಿಯಾದರೆ ಅರ್ಧ ಉದ್ಯೋಗಜೀವನವೇ ಯಶಸ್ವಿಯಾದಂತೆ. ಹೊಸತನ್ನು ಕಲಿಯುವುದು, ಅಗತ್ಯ ಮಾಹಿತಿಯನ್ನು ಕಲೆಹಾಕುವುದು, ಲಭ್ಯವಿರುವ ಮಾಹಿತಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು, ತಂತ್ರಜ್ಞಾನವನ್ನು ಬಳಸುವ ಪ್ರಾಥಮಿಕ ತಿಳಿವಳಿಕೆ ಹೊಂದಿರುವುದು ಇಂದು ಯಾವುದೇ ಉದ್ಯೋಗಕ್ಕೆ ಅಗತ್ಯ. ಕೆಲವು ವರ್ಷಗಳ ಹಿಂದೆ ಕಂಪ್ಯೂ ಟರ್ ಜ್ಞಾನ ಅನಿವಾರ್ಯವೇನೂ ಇರಲಿಲ್ಲ. ಇಂದು ಸಾಮಾನ್ಯ ವೃತ್ತಿಯೊಂದನ್ನು ನಿಭಾಯಿ ಸಬೇಕೆಂದರೂ ತಂತ್ರಜ್ಞಾನದ ಪ್ರಾಥಮಿಕ ತಿಳುವಳಿಕೆ ಅನಿವಾರ್ಯ. ಆಯ್ದುಕೊಂಡ ವೃತ್ತಿಯಲ್ಲಿ ದಿನೇದಿನೇ ಪರಿಣತಿಯನ್ನು ಸಾಧಿಸುವುದು, ಆತ್ಮವಿಶ್ವಾಸ ಬತ್ತದಂತೆ ನೋಡಿಕೊಳ್ಳುವುದು, ಸೃಜನಶೀಲತೆಯನ್ನು ರೂಢಿಸಿಕೊಳ್ಳುವುದು ಕೂಡ ಉದ್ಯೋಗಾರ್ಹತೆಯ ಕೌಶಲವೆನಿಸಿದೆ. ಇವೆಲ್ಲಕ್ಕೂ ಕಿರೀಟಪ್ರಾಯವಾಗಿರುವುದು ಹೊಸತನಕ್ಕೆ ಉಪಕ್ರಮಿಸುವ ಮನೋಭಾವ ಮತ್ತು ನಾಯಕತ್ವದ ಗುಣ. ಇನ್ನೊಬ್ಬರನ್ನು ಮುನ್ನಡೆಸುವ ಗುಣ ಹೊಂದಿರುವವನು ತನ್ನ ಹುದ್ದೆಯಲ್ಲಿ ಉನ್ನತಿಗೇರುತ್ತಾನೆ.
ಇವೆಲ್ಲ ಆಧುನಿಕ ಉದ್ಯೋಗ ಜಗತ್ತು ಅಭ್ಯರ್ಥಿಗಳಿಂದ ಬಯಸುವ ಪ್ರಮುಖ ಕೌಶಲಗಳು. ನಮ್ಮ ಶೈಕ್ಷಣಿಕ ಅರ್ಹತೆಯ ಹಿಂದೆ ವರ್ಷಗಳ ಶ್ರಮ, ಸಾವಿರಾರು ರುಪಾಯಿಗಳ ಖರ್ಚು ಇರುತ್ತದೆ. ಅಚ್ಚರಿಯೆಂದರೆ ಇದರಾಚೆಗಿರುವ ಉದ್ಯೋಗ ಕೌಶಲಗಳಲ್ಲಿ ಹೆಚ್ಚಿನವೂ ಯಾವುದೇ ಖರ್ಚಿಲ್ಲದೆ ನಮ್ಮಷ್ಟಕ್ಕೆ ನಾವೇ ರೂಢಿಸಿಕೊಳ್ಳುವಂಥವು. ಅಂದಮೇಲೆ ಶಿಕ್ಷಣದ ಜತೆಜತೆಗೇ ಅವುಗಳನ್ನು ಪಡೆಯುವಲ್ಲಿ ಉದಾಸೀನ ಸಲ್ಲದು. ನೂರಕ್ಕೆ ನೂರು ಅಂಕ ಗಳಿಸಿದ ಅಭ್ಯರ್ಥಿ ತಾನೇ ಮಾರುಕಟ್ಟೆಗೆ ಹೋಗಿ ಆ ದಿನಕ್ಕೆ ಬೇಕಾದ ದಿನಸಿ ಸಾಮಗ್ರಿ ತಾರದೇ ಹೋದರೆ ಮನೆಮಂದಿಯೇ ಆತನನ್ನು/ಆಕೆಯನ್ನು ಜಾಣ/ಜಾಣೆ ಎಂದು ಒಪ್ಪುವುದಿಲ್ಲ. ಇನ್ನು ಪ್ರತಿ ತಿಂಗಳೂ ಸಂಬಳ ಕೊಡುವ ಉದ್ಯೋಗದಾತ ಅಂಕಪಟ್ಟಿ ತೋರಿಸುವ ಪರ್ಸೆಂಟೇಜಿಗಿಂತ ಹೊರತಾದ ಅಗತ್ಯ ಕೌಶಲಗಳನ್ನು ಬಯಸುವುದರಲ್ಲಿ ಏನು ಅತಿಶಯ ಅಲ್ಲವೇ?
(ಲೇಖಕರು ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ತುಮಕೂರು ವಿಶ್ವವಿದ್ಯಾಲಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.