ಇತ್ತೀಚೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪ್ರಾಬಲ್ಯವಿರುವ ಯುಎಸ್ ನೇತೃತ್ವದ ಒಕ್ಕೂಟವಾದ ಖನಿಜ ಭದ್ರತಾ ಪಾಲುದಾರಿಕೆಗೆ ( ಮಿನರಲ್ಸ್ ಸೆಕ್ಯುರಿಟಿ ಪಾರ್ಟ್‌ನರ್‌ಶಿಪ್ –MSP) ಸೇರಿಕೊಂಡಿತು. ಆ ಮೂಲಕ ಭಾರತವು ಪಾಲುದಾರಿಕೆಯ ಭಾಗವಾಗುತ್ತಿರುವ ಏಕೈಕ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ.
*2022ರಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರಮುಖ ಪಾಲುದಾರ ರಾಷ್ಟ್ರಗಳು ಖನಿಜಗಳ ಭದ್ರತಾ ಪಾಲುದಾರಿಕೆಯನ್ನು (MSP) ಘೋಷಿಸಿದವು. ಇದು ಖನಿಜಗಳ ಪೂರೈಕೆಯನ್ನು ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ರೀತಿಯಲ್ಲಿ ಹೆಚ್ಚಿಸಲು ಕೈಗೊಂಡ ಒಂದು ಮಹತ್ವಾಕಾಂಕ್ಷೆಯ ಒಪ್ಪಂದವಾಗಿದೆ. ಟೊರೊಂಟೊದಲ್ಲಿ ನಡೆದ ಪ್ರಾಸ್ಪೆಕ್ಟರ್ಸ್ ಮತ್ತು ಡೆವಲಪರ್ಸ್ ಅಸೋಸಿಯೇಶನ್ ಆಫ್ ಕೆನಡಾ ಸಮಾವೇಶದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ಇದನ್ನು ವಿಶ್ವದ ಅತಿದೊಡ್ಡ ಗಣಿಗಾರಿಕೆಗೆ ಸಂಬಂಧಿಸಿದ ಬೆಳವಣಿಗೆ ಎಂದೂ ಪರಿಗಣಿಸಲಾಗಿದೆ.
ಪಾಲುದಾರರಲ್ಲಿ ಆಸ್ಟ್ರೇಲಿಯಾ, ಕೆನಡಾ, ಫಿನ್‌ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಸ್ವೀಡನ್, ಯುಕೆ, ಅಮೆರಿಕ, ದಿ ಯುರೋಪಿಯನ್ ಕಮಿಷನ್, ಇಟಲಿ ದೇಶಗಳಿವೆ. ಈಗ ಭಾರತವೂ ಸೇರಿದೆ.
ಗುರಿಯೇನು?
*ದೇಶಗಳು ನಿರ್ಣಾಯಕ ಪ್ರಮಾಣದಲ್ಲಿ ಖನಿಜಗಳನ್ನು ಉತ್ಪಾದಿಸುವುದು, ಸಂಸ್ಕರಿಸುವುದು ಮತ್ತು ಮರುಬಳಕೆ ಮಾಡುವುದನ್ನು ಉತ್ತೇಜಿಸುವುದು. ಆ ಮೂಲಕ ಖನಿಜ ನಿಧಿಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದುವಂತೆ ಬೆಂಬಲಿಸುವುದು.
*ಇದು ಖನಿಜ ಪೂರೈಕೆ ಸರಪಳಿಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಗುರಿ ಹೊಂದಿದೆ.
*ಖನಿಜಗಳ ಸಂಗ್ರಹಣೆಯ ವಿಚಾರದಲ್ಲಿ ಚೀನಾದ ಮೇಲೆ ಜಾಗತಿಕ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಪಾಲುದಾರಿಕೆಯ ಪ್ರಮುಖ ಗುರಿಯಾಗಿದೆ.
*ಈ ಒಪ್ಪಂದವು ಒತ್ತು ನೀಡುವ ಪ್ರಮುಖ ಖನಿಜಗಳಲ್ಲಿ ಕೋಬಾಲ್ಟ್, ನಿಕ್ಕಲ್ ಮತ್ತು ಲಿಥಿಯಂ ಸೇರಿವೆ. ಇವು ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳು ಹಾಗೂ ವಿಂಡ್ ಟರ್ಬೈನ್‌ಗಳಲ್ಲಿ ಬಳಕೆಯಾಗುತ್ತವೆ. ಹಾಗೆಯೇ ಈ ಒಪ್ಪಂದಗಳಲ್ಲಿ ಸೆಮಿಕಂಡಕ್ಟರ್‌ಗಳಲ್ಲಿ ಬಳಕೆಯಾಗುವ 17 ಅಪರೂಪದ ಭೂಮಿಯ ಖನಿಜಗಳು ಸೇರಿವೆ.
ಅಪರೂಪದ ಭೂಖನಿಜಗಳ ಬಳಕೆ
*ಏರೋಸ್ಪೇಸ್ ಉದ್ಯಮ, ರಕ್ಷಣಾ ಉದ್ಯಮ, ಎಲೆಕ್ಟ್ರಾನಿಕ್ಸ್ (ಮೊಬೈಲ್ ಫೋನ್‌ಗಳು, ಟಿ.ವಿ, ಲ್ಯಾಪ್‌ಟಾಪ್‌ಗಳು), ಎಲೆಕ್ಟ್ರಿಕ್ ವಾಹನಗಳು, ಸೌರ ಫಲಕಗಳು, ಸೆಮಿಕಂಡಕ್ಟರ್‌ಗಳು, ವಿಂಡ್ ಟರ್ಬೈನ್‌ಗಳು, ಹೈಟೆಕ್ ಕೈಗಾರಿಕೆಗಳು, ದೂರಸಂಪರ್ಕ, ಭದ್ರತಾ ತಂತ್ರಜ್ಞಾನಗಳು ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.
ಉದ್ದೇಶಗಳು
*ಪಾಲುದಾರ ರಾಷ್ಟ್ರಗಳ ನಡುವೆ ಉಪಯುಕ್ತ ಮಾಹಿತಿ ಹಂಚಿಕೆ
*ಸುರಕ್ಷಿತ ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳಲ್ಲಿ ಹೂಡಿಕೆ ಹೆಚ್ಚಳ ಮಾಡುವುದು.
*ಮರುಬಳಕೆ ತಂತ್ರಜ್ಞಾನಗಳ ಅಭಿವೃದ್ಧಿಪಡಿಸುವಿಕೆ
ಇದರ ಮಹತ್ವ
*ಅಪರೂಪದ ಭೂಮಿಯ ಖನಿಜಗಳ ಜಾಗತಿಕ ಉತ್ಪಾದನೆಯಲ್ಲಿ ಚೀನಾದ ಪ್ರಾಬಲ್ಯ ಶೇ 60ರಷ್ಟಿದೆ. ಖನಿಜ ಸಂಸ್ಕರಣಾ ಮೂಲಸೌಕರ್ಯವನ್ನು ಈ ದೇಶವು ಉತ್ತಮವಾಗಿ ಅಭಿವೃದ್ಧಿಪಡಿಸಿರುವುದರಿಂದ ಮತ್ತು ಆಫ್ರಿಕಾದ ಗಣಿಗಳಿಂದ ಕೋಬಾಲ್ಟ್ ಗಣಿಗಾರಿಕೆಯ ಹಕ್ಕುಗಳನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ದೇಶಗಳು ಅಪರೂಪದ ಭೂ ಖನಿಜಗಳಿಗಾಗಿ ( Rare Earth Elements)ಗಾಗಿ ಚೀನಾವನ್ನೆ ಅವಲಂಬಿಸಿವೆ.
*ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ಅಸಮಂಜಸ ದರ ಏರಿಕೆ, ಕೋವಿಡ್ 19ರಿಂದ ಉಂಟಾದ ತೊಂದರೆಗಳು, ರಷ್ಯಾ-ಉಕ್ರೇನ್ ಸಂಘರ್ಷಗಳು ಜಾಗತಿಕ ಖನಿಜ ಪೂರೈಕೆ ಸರಪಳಿಗೆ ಅಡ್ಡಿಯಾಗಿವೆ. ಪಾಲುದಾರಿಕೆಯು ಇಂಥ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತದೆ.
*ಶುದ್ಧ ಶಕ್ತಿ ಮತ್ತು ಇತರ ತಂತ್ರಜ್ಞಾನಗಳಿಗೆ ಅಗತ್ಯವಿರುವ ಖನಿಜಗಳಿಗಿರುವ ಬೇಡಿಕೆಯನ್ನು ಮುಂಬರುವ ದಶಕಗಳಲ್ಲಿ ಗಮನಾರ್ಹವಾಗಿ ವಿಸ್ತರಿಸುವ ನಿರೀಕ್ಷೆಯಿದೆ. ಪರಿಸರ, ಸಾಮಾಜಿಕ ಹಾಗೂ ಆಡಳಿತ ನಿಯಮಗಳಿಗೆ ಬದ್ಧವಾಗಿದ್ದುಕೊಂಡು, ಸರ್ಕಾರ ಹಾಗೂ ಖಾಸಗಿ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸಲು ಈ ಪಾಲುದಾರಿಕಾ ಒಪ್ಪಂದ ಸಹಾಯ ಮಾಡುತ್ತದೆ.
ನಿಮಗಿದು ಗೊತ್ತೆ ?
*2022 ರಲ್ಲಿ ಪ್ರಪಂಚದಾದ್ಯಂತ ಕೋಬಾಲ್ಟ್ ಗಣಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ದೇಶ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕೋಬಾಲ್ಟ್ ನಿಕ್ಷೇಪಗಳನ್ನು ಹೊಂದಿದೆ.
*2022 ರಲ್ಲಿ ಲಿಥಿಯಂ ಉತ್ಪಾದನೆಯ ವಿಷಯದಲ್ಲಿ ಆಸ್ಟ್ರೇಲಿಯಾವು ವಿಶ್ವದ ಮುಂಚೂಣಿಯಲ್ಲಿತ್ತು. ಚಿಲಿ ವಿಶ್ವದ ಅತಿದೊಡ್ಡ ಲಿಥಿಯಂ ನಿಕ್ಷೇಪಗಳನ್ನು ಹೊಂದಿದೆ ಮತ್ತು ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ.
*ವಿಶ್ವದಲ್ಲಿ ನಿಕಲ್ ಉತ್ಪಾದನೆಯಲ್ಲಿ ಇಂಡೋನೇಷ್ಯಾ ಪ್ರಮುಖ ದೇಶವಾಗಿದೆ. ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾವು 2022 ರಲ್ಲಿ ತಲಾ 21 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ನಿಕಲ್‌ನ ವಿಶ್ವದ ಅತಿದೊಡ್ಡ ನಿಕ್ಷೇಪಗಳನ್ನು ಹೊಂದಿದ್ದವು.
*2022 ರಲ್ಲಿ ಚೀನಾವು ವಿಶ್ವಾದ್ಯಂತ ಗ್ರ್ಯಾಫೈಟ್ ಉತ್ಪಾದಿಸುವ ಪ್ರಮುಖ ದೇಶವಾಗಿದೆ. ಟರ್ಕಿಯು 2022 ರಲ್ಲಿ ವಿಶ್ವದ ಅತಿದೊಡ್ಡ ನೈಸರ್ಗಿಕ ಗ್ರ್ಯಾಫೈಟ್ ಅನ್ನು ಹೊಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.