ಇತ್ತೀಚೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್. ಜೈಶಂಕರ್ ಅವರು ವಿಯೆಟ್ನಾಂಗೆ ಅಧಿಕೃತ ಭೇಟಿಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಯೆಟ್ನಾಮಿನ ಹೋ ಚಿ ಮಿನ್ ನಗರದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಇವರು ವಿವಿಧ ರಾಜತಾಂತ್ರಿಕ ಸಭೆಗಳಲ್ಲಿ ಭಾಗಿಯಾಗಿದ್ದು ವಿಯೆಟ್ನಾಮಿನ ಪ್ರಧಾನ ಮಂತ್ರಿಗಳಾದ ಪಾಮ್ ಮಿನ್ ಚಿನ್ ಅವರೊಂದಿಗೆ ಭೇಟಿ ನೀಡಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯನ್ನು ನಡೆಸಿದರು.
ಮಹಾತ್ಮ ಗಾಂಧಿಯವರ ಪುತ್ಥಳಿಯ ಅನಾವರಣದೊಂದಿಗೆ ಬಾಕ್ ನಿನ್ ಪ್ರಾಂತ್ಯದಲ್ಲಿ ರವೀಂದ್ರನಾಥ್ ಟಾಗೋರ್ ಅವರ ಪುತ್ಥಳಿಯನ್ನು ಕೂಡ ಅನಾವರಣಗೊಳಿಸಿದರು.
ಇತ್ತೀಚೆಗೆ ಹಮಾಸ್ ಉಗ್ರವಾದಿ ಸಂಘಟನೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಕಾರಣದಿಂದ ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಇದರ ದುಷ್ಪರಿಣಾಮಗಳ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳು ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿದ್ದರೂ ಕೂಡ ಕಳೆದ ದಶಕಗಳಿಂದ ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಮತ್ತು ಆರ್ಥಿಕ ಸಂಬಂಧಗಳು ಉನ್ನತ ಮಟ್ಟದಲ್ಲಿವೆ.
ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧಗಳು ಉನ್ನತ ಮಟ್ಟದಲ್ಲಿದ್ದು ವಿವಿಧ ಪ್ರಮುಖ ಉತ್ಪನ್ನಗಳನ್ನು ಭಾರತ ಇಸ್ರೇಲ್ ಗೆ ರಫ್ತು ಮಾಡುತ್ತಿದ್ದರೆ ಇಸ್ರೇಲ್ ನಿಂದ ಭಾರತಕ್ಕೆ ಕೆಲ ಪ್ರಮುಖ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಭಾರತದಿಂದ ಇಸ್ರೇಲ್ ಗೆ ರಫ್ತಾಗುತ್ತಿರುವ ಉತ್ಪನ್ನಗಳು - ಮುತ್ತು ಮತ್ತು ಅಮೂಲ್ಯ ರತ್ನಗಳು, ರಾಸಾಯನಿಕ ಮತ್ತು ಖನಿಜ ಉತ್ಪನ್ನಗಳು, ಯಂತ್ರೋಪಕರಣಗಳು ಮತ್ತು ವಿದ್ಯುತ್ ಉಪಕರಣಗಳು, ಜವಳಿ ಮತ್ತು ಸಿದ್ಧ ಉಡುಪುಗಳು, ಪ್ಲಾಸ್ಟಿಕ್ ಉತ್ಪನ್ನಗಳು.
ಇಸ್ರೇಲ್ ನಿಂದ ಭಾರತಕ್ಕೆ ಆಮದಾಗುತ್ತಿರುವ ಉತ್ಪನ್ನಗಳು - ಯಂತ್ರೋಪಕರಣ ಮತ್ತು ವಿದ್ಯುನ್ಮಾನ ಬಿಡಿಭಾಗಗಳು, ಲೋಹಗಳು, ರಕ್ಷಣಾ ವಲಯದ ಉತ್ಪನ್ನಗಳು, ಸಂಚಾರ ವಲಯದಲ್ಲಿ ಬಳಕೆಯಾಗುವ ಯಂತ್ರೋಪಕರಣ, ರಾಸಾಯನಿಕ ಮತ್ತು ಖನಿಜ ಪದಾರ್ಥಗಳು.
ಇಸ್ರೇಲ್ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಮಾಡುತ್ತಿದ್ದು, ಅವುಗಳಲ್ಲಿ ಪ್ರಮುಖವಾದ ವಲಯಗಳೆಂದರೆ ರಕ್ಷಣಾ ವಲಯ, ಕೃಷಿ ತಂತ್ರಜ್ಞಾನ ವಲಯ, ಆಹಾರ ಸಂಸ್ಕರಣ ವಲಯ ಮತ್ತು ವಿದ್ಯುನ್ಮಾನ ಉತ್ಪನ್ನಗಳ ವಲಯ.
ಅಕ್ಟೋಬರ್ 30 ರಿಂದ ನವಂಬರ್ 2 ನೇ ತಾರೀಖಿನವರೆಗೂ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಆರನೇ ಸಮಾವೇಶವನ್ನು ನವದೆಹಲಿಯಲ್ಲಿ ಆಯೋಜಿಸಲಾಗುತ್ತಿದೆ.
ಈ ಸಮಾವೇಶದ ಅಧ್ಯಕ್ಷತೆಯನ್ನು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರು ಮತ್ತು ಕೇಂದ್ರ ಇಂಧನ, ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ಆಗಿರುವ ಆರ್. ಕೆ. ಸಿಂಗ್ ಅವರು ವಹಿಸಲಿದ್ದಾರೆ.
ಸಮಾವೇಶದಲ್ಲಿ 116 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದು ಇದಲ್ಲದೆ ಸೌರ ಇಂಧನ ವಲಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೂಡ ಭಾಗವಹಿಸಲಿದ್ದಾರೆ.
ಸಾರ್ವತ್ರಿಕವಾಗಿ ಎಲ್ಲಾ ರಾಷ್ಟ್ರಗಳಲ್ಲಿ ಮತ್ತು ಸಮುದಾಯಗಳಲ್ಲಿ ಇಂಧನ ಸೌಲಭ್ಯವನ್ನು ಕಲ್ಪಿಸುವ ವಿಚಾರದಲ್ಲಿ ಚರ್ಚಿಸಲಾಗುತ್ತದೆ. ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ವಿವಿಧ ರಾಷ್ಟ್ರಗಳಲ್ಲಿ ಸ್ಥಾಪಿಸುವ ಮೂಲಕ ಮತ್ತು ಇವುಗಳ ನಡುವೆ ಗ್ರಿಡ್ ಸಂಪರ್ಕವನ್ನು ಕಲ್ಪಿಸುವ ಮೂಲಕ ವಿದ್ಯುತ್ ಶಕ್ತಿ ಸೌಲಭ್ಯ ಇಲ್ಲದ ಪ್ರದೇಶಗಳಿಗೆ ವಿದ್ಯುತ್ ಶಕ್ತಿಯನ್ನು ಪೂರೈಸಲು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
ಸೌರ ವಿದ್ಯುತ್ ಉತ್ಪಾದನಾ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಲು ಬೇಕಾಗುವ ಹಣಕಾಸು ಸಂಪನ್ಮೂಲಗಳು ಮತ್ತು ಹಣಕಾಸು ಸಂಪನ್ಮೂಲಗಳ ಕ್ರೂಡೀಕರಣಕ್ಕೆ ಸಂಬಂಧಿಸಿದಂತೆ ಚರ್ಚೆಯನ್ನು ಮಾಡಲಾಗುತ್ತದೆ.
ಸೌರ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಬೇಕಾಗುವ ಅವಶ್ಯಕ ಕಚ್ಚಾ ಸಾಮಗ್ರಿಗಳು ಮತ್ತು ಬಿಡಿಭಾಗಗಳ ಪೂರೈಕೆಗೆ ಯಾವುದೇ ರೀತಿಯ ಸಮಸ್ಯೆ ಆಗದ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಸಮಾವೇಶದಲ್ಲಿ ಆದ್ಯತೆ ನೀಡಲಾಗುತ್ತದೆ.
ಈ ಸಮಾವೇಶವನ್ನು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಭಾರತ ಸರ್ಕಾರ, ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಸೌರ ಇಂಧನ ಒಕ್ಕೂಟ ಜಂಟಿಯಾಗಿ ಆಯೋಜಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.