ಸಂಶೋಧನೆಯಿಂದ ಹಿಡಿದು ಎಲ್ಲಾ ಮುಖ್ಯ ಪರೀಕ್ಷೆಗಳ ಕೊನೆಗೆ ಸಂದರ್ಶನಕ್ಕೆ ಕರೆಬರುತ್ತದೆ. ಸಂದರ್ಶನ ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಅವಿಭಾಜ್ಯ ಅಂಗವಾಗಿದೆ. ಯಾವುದೇ ಕೆಲಸಕ್ಕೆ ಸೇರುವುದಿದ್ದರೂ ಸಂದರ್ಶನ ಅಧಿಕೃತವಾಗಿಯೋ ಅನಧಿಕೃತವಾಗಿಯೋ ನಡೆಯುತ್ತದೆ. ಬರವಣಿಗೆಯ ಪರಿಕ್ಷೆಯಲ್ಲಿ ಪಾಸಾಯ್ತು, ಸಂದರ್ಶನದಲ್ಲಿ ಫೇಲಾಯ್ತು ಎಂಬುದು ಬಹಳ ಅಭ್ಯಥಿಗಳ ಕೊರಗು. ಅದಕ್ಕೆ ಬಾಹ್ಯ ಕಾರಣಗಳಿದ್ದರೆ ನಾವು ಹೊಣೆಯಲ್ಲ. ಆದರೆ ಸಂದರ್ಶನಕ್ಕೆ ನಾವು ತಯಾರಾಗುವುದು ಹಾಗೂ ಸಂದರ್ಶನವು ನಮ್ಮತನದ ನಿಜದರ್ಶನವಾಗುವಂತೆ ನೋಡಿಕೊಳ್ಳುವುದು ಸಂದರ್ಶನಕ್ಕೆ ಹಾಜರಾಗುವವರ ಜವಾಬ್ದಾರಿ. ಹೀಗಾಗಿ ಸಂದರ್ಶನದ ಸೋಲು ಗೆಲುವು ಬಹುಪಾಲು ನಮ್ಮ ಸಂವಹನದ ಚಾಕಚಕ್ಯತೆಯ ಮೇಲೆ ನಿಂತಿದೆ ಎಂಬುದನ್ನು ಅಲ್ಲಗಳೆಯಲಾಗದು.
ಸಂದರ್ಶನ ನಿರ್ಣಾಯಕ ಹಂತ
ಪರೀಕ್ಷಾ ಉತ್ತರಗಳ ಬರವಣಿಗೆಯಲ್ಲಿ ನಮ್ಮ ಸಂವಹನ ಸಾಧ್ಯತೆಗಳು ಮುಖ್ಯವಾಗುವ ಹಾಗೆ ಸಂದರ್ಶನದಲ್ಲೂ ನಮ್ಮ ಸಂವಹನವು ನಿರ್ಣಾಯಕವಾಗುತ್ತದೆ. ಪರೀಕ್ಷೆಯಲ್ಲಿ ಗೊತ್ತಿಲ್ಲದ ಪರೀಕ್ಷಕನ ಜೊತೆ ಸಂವಹನ ಮಾಡಬೇಕಿದೆ. ಸಂದರ್ಶನದಲ್ಲಿ ಎದುರು ಕುಳಿತ ವ್ಯಕ್ತಿಗೆ ಸಂವಹನ ಮಾಡಿ ಸೈ ಅನಿಸಿಕೊಳ್ಳಬೇಕು. ಎರಡೂ ಕಷ್ಟವೇ. ಒಂದರಲ್ಲಿ ಫಲಿತಾಂಶ ತಡವಾದರೆ ಇನ್ನೊಂದರಲ್ಲಿ ಫಲಿತಾಂಶ ನೇರಾ ನೇರ. ಸಂದರ್ಶನ ಮುಗಿಸಿ ಹೊರಬರುವಾಗಲೇ ಸಂದರ್ಶಿತ ವ್ಯಕ್ತಿಗೆ ಒಂದು ಸಂಜ್ಞೆ ಸಿಕ್ಕಿರುತ್ತದೆ! ತನ್ನ ಸಂದರ್ಶನದ ಫಲದ ಕಲ್ಪನೆ ಅವನಿಗೆ ದೊರಕುತ್ತದೆ!
‘ಸಂದರ್ಶನ’ - ಹೆಸರೇ ಸೂಚಿಸುವ ಹಾಗೆ ಅಭ್ಯರ್ಥಿಯನ್ನು ಮುಖತಃ ನೋಡುವ ಅವನ(ಳ)ನ್ನು ಮಾತನಾಡಿಸುವ ವ್ಯವಸ್ಥೆ. ಇಲ್ಲಿ ಸಂದರ್ಶಿಸಲ್ಪಡುವ ಅಭ್ಯರ್ಥಿ ಒಬ್ಬ, ಆದರೆ ಸಂದರ್ಶಕರು ಹಲವರಿರಬಹುದು. ಒಬ್ಬೊಬ್ಬರಾಗಿ ಪ್ರಶ್ನೆ ಕೇಳಬಹುದು ಅಥವಾ ಒಬ್ಬರು ಕೇಳುವಾಗಲೇ ಇನ್ನೊಬ್ಬರು ಮೂಗುತೂರಿಸಿ ತಬ್ಬಿಬ್ಬು ಮಾಡಬಹುದು. ಏಕೆಂದರೆ, ಸಂದರ್ಶನ ಹೀಗೇ ಇರಬೇಕು, ಈ ರೀತಿಯ ಪ್ರಶ್ನೆಗಳನ್ನೇ ಕೇಳಬೇಕು ಎಂಬ ಷರತ್ತೇನೂ ಇಲ್ಲ. ಹೀಗಾಗಿ ’ಸಂದರ್ಶನದಲ್ಲಿ ಏನು ಕೇಳಬಹುದು ಎಂಬ ಪ್ರಶ್ನೆಗೆ ಏನು ಬೇಕಾದರೂ ಕೇಳಬಹುದು‘ ಎಂಬುದೇ ಸಮಂಜಸ ಉತ್ತರವಾದೀತು. ಕೆಲವು ಬಾರಿ ನಿರೀಕ್ಷಿತ ಪ್ರಶ್ನೆಗಳು ಇದ್ದರೆ ಇನ್ನು ಕೆಲವೊಮ್ಮೆ ಅಸಂಬದ್ಧ ಪ್ರಶ್ನೆಗಳೂ ಇರಬಹುದು. ಪ್ರಶ್ನೆ ಕೇಳುವವರಲ್ಲಿ ಅಪ್ರಸ್ತುತ ಪ್ರಸಂಗಿಗಳೂ ಇರಬಹುದು. ಬೇಕಂತಲೇ ತಲೆಹರಟೆ ಮಾಡುವವರು, ತಾನೊಬ್ಬನೇ ಬುದ್ಧಿವಂತ ಎಂದು ತಿಳಿದಿರುವವರೂ ಇರಬಹುದು, ಆದರೆ ಅಭ್ಯರ್ಥಿ ಪಡೆಯುವ ಕೊನೆ (receiving end)ಯಲ್ಲಿರುವುದರಿಂದ ಅವೆಲ್ಲವನ್ನೂ ಸಹಿಸಿಕೊಳ್ಳಬೇಕು.
ಅಭ್ಯರ್ಥಿಯ ನಡತೆ ಪರೀಕ್ಷೆ
ಸಂದರ್ಶನದಲ್ಲಿ ಅಭ್ಯರ್ಥಿಯ ಉತ್ತರಗಳಿಗಿಂತ ಅವನ(ಳ) ನಡತೆ ಪರೀಕ್ಷೆಗೊಳಪಡುತ್ತದೆ. ಎಂಥಾ ಪರಿಸ್ಥಿತಿ ಯಲ್ಲೂ ತಾಳ್ಮೆಗೆಡದೆ ನಗುಮುಖದಿಂದ, ಸೌಜನ್ಯದಿಂದ ಉತ್ತರಿಸುವುದು ಸಕಾರಾತ್ಮಕ ಅಂಶ. ಒಂದು ಕ್ಷಣದ ಸಿಟ್ಟು ಈವರೆಗಿನ ಎಲ್ಲಾ ಸಾಧನೆಗಳನ್ನೂ ಅಳಿಸಿಹಾಕಿಬಿಡಬಹುದು. ಸಂದರ್ಶನದ ಸಮಯದಲ್ಲಿ ನಮ್ಮ ನಡತೆಯೇ ನಿರ್ಣಾಯಕ. ಸಂದರ್ಶಕರು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಗೊತ್ತಿರುವುದು ಸಾಧ್ಯವಿಲ್ಲ. ಯಾಕೆಂದರೆ ಉತ್ತರಿಸುವವರೂ ಮನುಷ್ಯರು, ಕಪ್ಯೂಟರ್ ಅಲ್ಲ. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ತಪ್ಪು ಉತ್ತರ ಕೊಟ್ಟು ನಗೆಪಾಟಲಿಗೆ ಈಡಾಗುವುದಕ್ಕಿಂತ ‘ಗೊತ್ತಿಲ್ಲ’ ಎಂದು ಒಪ್ಪಿಕೊಳ್ಳುವುದು ಒಳಿತು. ಅದರಲ್ಲಿ ಅವಮಾನ ವೇನೂ ಇಲ್ಲ. ಬದಲು ತಪ್ಪನ್ನೇ ಸಾಧಿಸಹೊರಟರೆ, ಖಂಡಿತಾ ಕೈಕೊಡುತ್ತದೆ. ಯಾವಕಾರಣಕ್ಕೂ ಸಂದರ್ಶಕರ ಜೊತೆ ಜಗಳಕ್ಕೆ ಇಳಿಯಬಾರದು. ಅನಗತ್ಯ ವಾದ-ವಿವಾದಕ್ಕೆ ಆಸ್ಪದ ಕೊಡಬಾರದು.
ವಾಸ್ತವತೆಯಿರಲಿ...
ಸಂದರ್ಶನದ ಸಮಯದಲ್ಲಿ ನಾವು ನಾವಾಗಿರುವುದು ಕ್ಷೇಮಕರ. ನಾವಲ್ಲದ ನಾವನ್ನು ತೋರಿಸಹೊರಟರೆ ಕೋಗಿಲೆಯನ್ನು ಅನುಕರಿಸಲು ಹೊರಟ ಕಾಗೆಯಂತಾದೀತು. ಸಾಮಾನ್ಯವಾಗಿ ಮೊದಲಿಗೆ ನಿಮ್ಮನ್ನು ಪರಿಚಯಿಸಿಕೊಳ್ಳಿ ಅನ್ನುತ್ತಾರೆ. ಆಗ ನಿಮ್ಮನ್ನು ಪ್ರಾಮಾಣಿಕವಾಗಿ ಪರಿಚಯಿಸಿಕೊಳ್ಳಿ. ನಿಮ್ಮ ಈವರೆಗಿನ ಸಾಧನೆಗಳನ್ನೂ ಸೋಲುಗಳನ್ನೂ ಹೇಳುವುದರಲ್ಲಿ ವಾಸ್ತವತೆಯಿರಲಿ. ಯಾಕೆಂದರೆ ನಿಮ್ಮ ಸ್ವ-ವಿವರ ಆಗಲೇ ಅವರ ಬಳಿ ಇರುತ್ತದೆ. ಅದಕ್ಕಿಂತ ಹೆಚ್ಚಿನದನ್ನೇನಾದರೂ ಹೇಳುವುದಿದ್ದರೆ ಸೇರಿಸಿ. ಎಲ್ಲಿಯೂ ಅತಿಯಾಗಿ ಅಭ್ಯರ್ಥಿಯು ತನ್ನನ್ನು ತಾನು ಹೊಗಳಿಕೊಳ್ಳುತ್ತಿದ್ದಾನೆ ಎಂದು ಸಂದರ್ಶಕರಿಗೆ ಅನಿಸಬಾರದು. ಹಾಗಂತ ಅದು ನಿಮ್ಮನ್ನು ಇರುವುದಕ್ಕಿಂತ ಕಡಿಮೆಯಾಗಿಯೂ ಕಲ್ಪಿಸಲು ಅವಕಾಶವಾಗಬಾರದು. ಒಟ್ಟಾರೆ ಸ್ವಯಂ ಪರಿಚಯ ನಿಮ್ಮನ್ನು ಸಂದರ್ಶಿಸುವ ಮಂಡಳಿಗೆ ಒಳ್ಳೆಯ ಅಭಿಪ್ರಾಯ ಮೂಡಲು ಕಾರಣವಾಗಬೇಕು. ಒಂದು ‘ಸಕಾರಾತ್ಮಕ ಇಮೇಜ್’ ಸೃಷ್ಟಿಸಬೇಕು.
ಸಂದರ್ಶನದ ವೇಳೆ ಪುಂಖಾನುಪುಂಖವಾಗಿ ನಿಮ್ಮತ್ತ ಪ್ರಶ್ನೆಗಳ ಸುರಿಮಳೆಯಾದರೆ ಅಧೀರರಾಗಬೇಕಿಲ್ಲ. ಅವರು ಕುಳಿತಿರುವುದೇ ಪ್ರಶ್ನೆಕೇಳುವುದಕ್ಕೆ ಹಾಗೂ ಉತ್ತರಿಸಬೇಕಾದ್ದು ಅಭ್ಯರ್ಥಿಯ ಧರ್ಮ. ಎಚ್ಚರಿಕೆ ಇರಬೇಕಾದ್ದು ನಾವು ಕೊಡುವ ಉತ್ತರಗಳಲ್ಲಿ. ಅದು ಒಂದು ಚಿಂತನಾ ಎಳೆಯನ್ನು ಹೊಂದಿರಬೇಕು. ಎಲ್ಲಿಯೂ ಪರಸ್ಪರ ವೈರುಧ್ಯವಿರುವಂತೆ ಕಾಣಬಾರದು. ನಮ್ಮ ಉತ್ತರಗಳು ನಿಜವಾದ ನಮ್ಮನ್ನು ತೋರಿಸಬೇಕೇ ವಿನಾ ನಮ್ಮ ಬಗ್ಗೆ ಸಂಶಯಗಳು ಉಕ್ಕುವುದಕ್ಕೆ ಕಾರಣವಾಗಬಾರದು. ಹೇಳಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು ಅಂತ ಮಂಡಳಿಗೆ ಅನಿಸಿದರೆ ಸಂದರ್ಶನ ನಮ್ಮ ಪರವಾಗಿ ಫಲಗೂಡುವುದು ಕಷ್ಟ.
ಸಂದರ್ಶನಗಳ ಬಗ್ಗೆ ಹೇಳಬೇಕಾದ ಇನ್ನೊಂದು ಸತ್ಯವೆಂದರೆ ನೀವು ಸಂದರ್ಶನದಲ್ಲಿ ಏನು ಹೇಳುತ್ತೀರಿ ಎಂಬುದು ಮುಖ್ಯ. ಆದರೆ ಹೇಗೆ ಹೇಳುತ್ತೀರಿ ಎಂಬುದು ಅದಕ್ಕಿಂತ ಮುಖ್ಯ. ಅದೇ ನಿಮ್ಮ ಸಂವಹನ ಕೌಶಲ.
(ಲೇಖಕರು: ಸಂವಹನ ಪ್ರಾಧ್ಯಾಪಕರು ಮತ್ತು ಕುಲಪತಿ,
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.