ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಇಂಡೊ ಟಿಬೆಟಿಯನ್ ಗಡಿ ಭದ್ರತಾ ಪಡೆಯಲ್ಲಿ (ಐಟಿಬಿಪಿ) ಕಾರ್ಯನಿರ್ವಹಿಸಬೇಕು ಎಂದು ಕನಸು ಕಂಡಿರುವ ಯುವಕರಿಗೆ ಇದೀಗ ಉದ್ಯೋಗವಕಾಶ ಒದಗಿ ಬಂದಿದೆ.
ಐಟಿಬಿಪಿಯಲ್ಲಿ ಖಾಲಿ ಇರುವ 458 ‘ಕಾನ್‌ಸ್ಟೆಬಲ್ ಡ್ರೈವರ್‘ ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಐಟಿಬಿಪಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ.
ಜೂನ್ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜುಲೈ 26ಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗೆ www.recruitment.itbppolice.nic.in ಜಾಲತಾಣಕ್ಕೆ ಭೇಟಿ ನೀಡಿ. ಇದು ಪುರುಷ ಅಭ್ಯರ್ಥಿಗಳಿಗಷ್ಟೇ ಮೀಸಲಾಗಿರುವ ಹುದ್ದೆಗಳಾಗಿವೆ.
ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿ
10 ನೇ ತರಗತಿ ಅಥವಾ ಮೆಟ್ರಿಕುಲೇಶನ್ ಪಾಸ್ ಆಗಿರುವ, ಕಡ್ಡಾಯವಾಗಿ ಹೆವಿ ವೆಹಿಕಲ್ ಡ್ರೈವಿಂಗ್ ಲೈಸನ್ಸ್ (ಬೃಹತ್ ವಾಹನ ಚಾಲನಾ ಪರವಾನಗಿ) ಹೊಂದಿರುವರು ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ – ಕನಿಷ್ಠ 21 ವರ್ಷ ಗರಿಷ್ಠ 27 ವರ್ಷ. ಎಸ್.ಸಿ, ಎಸ್.ಟಿ, ಒಬಿಸಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ, ವೇತನ ಶ್ರೇಣಿ
ಅರ್ಜಿ ಸಲ್ಲಿಸಲು ₹100 ಶುಲ್ಕ ನಿಗಧಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇದೆ. ವೇತನ ಶ್ರೇಣಿ ₹21,700–69,100ವರೆಗಿದೆ. ಇದರಲ್ಲಿ ಇಲಾಖೆ ಕಾಲಕಾಲಕ್ಕೆ ನಿಯಮಾನುಸಾರ ಹೆಚ್ಚಿಸುವ ವೇತನ ಇತರೆ ಭತ್ಯೆಗಳು ಸೇರುತ್ತವೆ.
ಈ ನೇಮಕಾತಿ ಹೇಗೆ ನಡೆಯುತ್ತದೆ?
ಈ ನೇಮಕಾತಿಯು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ), ದೈಹಿಕ ಸಾಮರ್ಥ್ಯ ಪರೀಕ್ಷೆ (ಇಟಿ, ಪಿಎಸ್‌ಟಿ), ಪ್ರಾಯೋಗಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಮೊದಲ ಹಂತದ ಸಿಬಿಟಿಯಲ್ಲಿ 100 ಅಂಕಗಳಿಗೆ ಬಹು ಆಯ್ಕೆಯ 100 ಪ್ರಶ್ನೆಗಳ ಒಂದು ಪತ್ರಿಕೆ ಮಾತ್ರ ಇರುತ್ತದೆ.
ಸಿಬಿಟಿ ಪರೀಕ್ಷೆ ಇಂಗ್ಲಿಷ್, ಹಿಂದಿ ಹಾಗೂ ಕನ್ನಡವೂ ಒಳಗೊಂಡಂತೆ ಇತರೆ 10 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ಇದು ಸಾಮಾನ್ಯ ಜ್ಞಾನ, ಸಾಮಾನ್ಯ ಗ್ರಹಿಕೆ, ಸಾಮಾನ್ಯ ಗಣಿತದ ಜೊತೆ ಎಸ್‌ಎಸ್‌ಎಲ್‌ಸಿ ಮಟ್ಟದ ಪಠ್ಯಕ್ರಮವನ್ನು ಹೊಂದಿರುತ್ತದೆ. ಇದಕ್ಕಾಗಿ ಆಸಕ್ತರು 5ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಪಠ್ಯಗಳನ್ನು ಓದಿಕೊಳ್ಳಬಹುದು. ಜೊತೆಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಬಹುದು. ಇದರೊಂದಿಗೆ ಪ್ರಚಲಿತ ಮಾಹಿತಿಗಾಗಿ ದಿನಪತ್ರಿಕೆಗಳನ್ನು ಓದಬೇಕಾಗುತ್ತದೆ.
ದೈಹಿಕ ಸಾಮರ್ಥ್ಯ ಪರೀಕ್ಷೆ, ಡ್ರೈವಿಂಗ್ ಲೈಸನ್ಸ್‌ನ ಪ್ರಾಯೋಗಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಅರ್ಹತಾ ಮಾನದಂಡಗಳಿಗಾಗಿ ಆಸಕ್ತ ಅಭ್ಯರ್ಥಿಗಳು ಐಟಿಬಿಪಿಯ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ನೋಡಬೇಕು.
ಕೆಇಎ: 670 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ ವಿವಿಧ ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ 670 ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (KEONICS) ನಲ್ಲಿ ವಿವಿಧ ಸ್ತರದ ಒಟ್ಟು 26 ಹುದ್ದೆಗಳು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ (KFCSC) ಖಾಲಿ ಇರುವ ವಿವಿಧ ಸ್ತರದ ಒಟ್ಟು 386 ಹುದ್ದೆಗಳು, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ (KARBWWB) ಖಾಲಿ ಇರುವ ವಿವಿಧ ಸ್ತರದ ಒಟ್ಟು 186 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗೆಯೇ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ನಲ್ಲಿ (MSIL) ಖಾಲಿ ಇರುವ ವಿವಿದ ಸ್ತರದ ಒಟ್ಟು 72 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜೂನ್ 23 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಜುಲೈ 22 ಕೊನೆ ದಿನ. ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.
ಈ ಹುದ್ದೆಗಳಿಗೆ ಅರ್ಹತೆ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಷರತ್ತು ಮತ್ತು ಹುದ್ದೆಗಳ ವರ್ಗವಾರು ವಿಂಗಡಣೆ. ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರತ್ಯೇಕವಾಗಿದ್ದು ಆಸಕ್ತ ಅಭ್ಯರ್ಥಿಗಳು https://cetonline.karnataka.gov.in/kea/karrec23 ವೆಬ್‌ಸೈಟ್‌ಗೆ ಭೇಟಿ ನೀಡಿ ಆಯಾ ಅಧಿಸೂಚನೆಗಳನ್ನು ನೋಡಿಕೊಂಡು ಅರ್ಜಿ ಸಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.