1. ನಾನು ಬಿ.ಫಾರ್ಮಾ ಮುಗಿಸಿ ಎಂ.ಫಾರ್ಮಾ ಮಾಡಬೇಕೆಂದಿದ್ದೇನೆ. ಯಾವ ವಿಷಯಕ್ಕೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೆಚ್ಚಿನ ಬೇಡಿಕೆಯಿದೆ? ಹಾಗೂ, ಸೌದಿ ಅರೇಬಿಯ ದೇಶದಲ್ಲಿ ಯಾವ ವಿಷಯಕ್ಕೆ ಬೇಡಿಕೆಯಿದೆ?
–ಹೆಸರು, ಊರು ತಿಳಿಸಿಲ್ಲ.
ಉತ್ತರ: ಎಂ.ಫಾರ್ಮಾ ಕೋರ್ಸ್ ಅನ್ನು ಬಯೋಟೆಕ್ನಾಲಜಿ, ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ, ಫಾರ್ಮಾಸ್ಯೂಟಿಕ್ಸ್, ಫಾರ್ಮಾಕಾಲಜಿ, ಫಾರ್ಮಾಸ್ಯೂಟಿಕಲ್ ಪ್ರಾಕ್ಟೀಸ್, ಫಾರ್ಮಾಸ್ಯೂಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್, ರೆಗ್ಯುಲೇಟರಿ ಅಫೇರ್ಸ್ ಮುಂತಾದ ವಿಷಯಗಳಲ್ಲಿ ಮಾಡಬಹುದು. ಈ ಎಲ್ಲಾ ಕ್ಷೇತ್ರಗಳಿಗೂ ಬೇಡಿಕೆಯಿದೆ; ಹಾಗಾಗಿ, ಎಂಫಾರ್ಮಾ ಕೋರ್ಸ್ ನಂತರದ ನಿಮ್ಮ ವೃತ್ತಿಯೋಜನೆಯಂತೆ ನಿರ್ಧರಿಸಿ.
ನಮಗಿರುವ ಮಾಹಿತಿಯಂತೆ, ಸೌದಿ ಅರೇಬಿಯ ಸೇರಿದಂತೆ ಅನೇಕ ಮಧ್ಯಪ್ರಾಚ್ಯ ದೇಶಗಳಲ್ಲಿ ವೃತ್ತಿಯನ್ನು ಅರಸಲು ಪ್ರಾಯೋಗಿಕ ಅನುಭವದ ಜೊತೆಗೆ ಸ್ಥಳೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ವೃತ್ತಿಯೋಜನೆ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU
2. ನನ್ನ ಮಗ ಎಂ.ಎಸ್ಸಿ (ಗಣಿತ) ಓದುತ್ತಿದ್ದಾನೆ. ಇದಾದ ನಂತರ ಎಂಬಿಎ ಅಥವಾ ಡೇಟಾ ಅನಾಲಿಸಿಸ್ ಕಲಿಯಬೇಕೆಂದಿದ್ದಾನೆ. ಡೇಟಾ ಅನಾಲಿಸಿಸ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ.
–ಹೆಸರು, ಊರು ತಿಳಿಸಿಲ್ಲ.
ಉತ್ತರ: ಸಂಸ್ಥೆಗಳ ಕಾರ್ಯಾಚರಣೆ, ಹಣಕಾಸು ಮಾರುಕಟ್ಟೆ, ಸರ್ಕಾರಿ ಇಲಾಖೆಗಳ ವ್ಯವಹಾರಗಳು, ಗ್ರಾಹಕರ ಆದ್ಯತೆಗಳು ಮತ್ತು ನಡವಳಿಕೆಗಳು, ಉದ್ಯೋಗಿಗಳ ಕಾರ್ಯಕ್ಷಮತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಂಗ್ರಹವಾಗುವ ದತ್ತಾಂಶವನ್ನು, ಒಂದು ಚೌಕಟ್ಟಿನಲ್ಲಿ ಅರ್ಥೈಸಲು, ದತ್ತಾಂಶದ ವಿಶ್ಲೇಷಣೆ (ಡೇಟಾ ಅನಾಲಿಸಿಸ್) ಅತ್ಯವಶ್ಯಕವಾಗಿದೆ. ಹಾಗಾಗಿ, ದತ್ತಾಂಶ ವಿಶ್ಲೇಷಣೆ ಉದ್ಯೋಗ ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಕ್ಷೇತ್ರ. ಎಂ.ಎಸ್ಸಿ ನಂತರ ಪೂರ್ಣಾವಧಿ/ಅಲ್ಪಾವಧಿ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಮತ್ತು ನಿರ್ವಹಣೆ ಕುರಿತಾದ ಕೋರ್ಸ್ಗಳನ್ನು ಕ್ಯಾಂಪಸ್ ನೇರ ನೇಮಕಾತಿಯಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಮಾಡಬಹುದು. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ದತ್ತಾಂಶ ದೃಶ್ಯೀಕರಣ, ವಿಶ್ಲೇಷಣಾ ಕೌಶಲ, ವಿವರಗಳಿಗೆ ಗಮನ, ಸಂಖ್ಯಾಶಾಸ್ತçದ ತಜ್ಞತೆ, ಕ್ರಮಾವಳಿ, ಯೋಜನೆಯ ನಿರ್ವಹಣೆ ಮುಂತಾದ ವೃತ್ತಿಪರ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು.
3. ದಯವಿಟ್ಟು ಪಿಯುಸಿ ನಂತರದ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿ.
–ಹೆಸರು, ಊರು ತಿಳಿಸಿಲ್ಲ.
ಉತ್ತರ: ಪಿಯುಸಿ ನಂತರ, ನಿಮ್ಮ ವಿಭಾಗದ ಪ್ರಕಾರ (ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ) ವೈವಿಧ್ಯಮಯ ಕೋರ್ಸ್ ಆಯ್ಕೆಗಳಿವೆ. ಮೊದಲು, ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಕೌಶಲಗಳನ್ನು ವಿಶ್ಲೇಷಿಸಿ, ವೃತ್ತಿಯ ಆಯ್ಕೆಯನ್ನು ಮಾಡಿ, ಅದರಂತೆ ಕೋರ್ಸ್ ಆಯ್ಕೆಯಿರಲಿ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ChvTG9rg33A
4. ನನಗೆ ಎಂಬಿಬಿಎಸ್ ಮಾಡುವ ಆಸೆ ಇದೆ. ಆದರೆ, ಅಷ್ಟೊಂದು ಹಣ ಕೊಟ್ಟು ಓದುವ ಶಕ್ತಿಯಿಲ್ಲ. ನಾನು ಏನು ಮಾಡಬಹುದು?
–ಹೆಸರು, ಊರು ತಿಳಿಸಿಲ್ಲ.
ಉತ್ತರ: ಎಂಬಿಬಿಎಸ್ ಪ್ರವೇಶಕ್ಕೆ ಆಯೋಜಿಸುವ ನೀಟ್ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆ. ಆದ್ದರಿಂದ, ನೀಟ್ ಪರೀಕ್ಷೆಯ ಮೂಲಕ ಸರ್ಕಾರಿ ಕೋಟಾದಲ್ಲಿ ಸೀಟ್ ಪಡೆಯುವುದೇ ಮೊದಲ ಗುರಿಯಾಗಿರಲಿ. ಕಳೆದ ವರ್ಷಗಳ ಕಟ್ ಆಫ್ ಮಾಹಿತಿ ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಿದೆ. ಈ ಮಾಹಿತಿಯನ್ನು ಆಧರಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರಚಿಸಿ, ಏಕಾಗ್ರತೆ ಮತ್ತು ಪರಿಶ್ರಮದಿಂದ ಅನುಷ್ಠಾನಗೊಳಿಸಿ.
ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಹೆಚ್ಚಿನ ವಿವರಗಳಿಗಾಗಿ ಈ ಜಾಲತಾಣವನ್ನು ಗಮನಿಸಿ: https://scholarships.gov.in/
ಇದಲ್ಲದೆ, ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲಿ,್ಲ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷ್ಮಿ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/
5. ನನ್ನ ಮಗಳು ಕಳೆದ ವರ್ಷ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಕೋರ್ಸ್ಗೆ ಕೆಎಸ್‌ಐಟಿ ಕಾಲೇಜಿಗೆ ಸೇರಿದ್ದಳು. ಈ ವರ್ಷ, ಬಿಎಂಎಸ್ ಕಾಲೇಜಿಗೆ ವರ್ಗಾವಣೆ ಮಾಡಬೇಕಾದರೆ ಏನು ಮಾಡಬೇಕು?
–ಮಾನವಿ, ಊರು ತಿಳಿಸಿಲ್ಲ.
ಉತ್ತರ: ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ವಿದ್ಯಾರ್ಥಿಗಳು ಒಂದು ವರ್ಷದ ನಂತರ ಕಾಲೇಜಿನ/ವಿಭಾಗದ ಬದಲಾವಣೆಗೆ ಅವಕಾಶವಿರುತ್ತದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿಯೂ (ವಿಟಿಯು) ಈ ಅವಕಾಶವಿದ್ದು ನಿಯಮಾವಳಿಗಳು, ಶುಲ್ಕಗಳು ಅನುದಾನಿತ/ಅನುದಾನರಹಿತ ಕಾಲೇಜುಗಳಿಗೆ ಪ್ರತ್ಯೇಕವಾಗಿ ಅನ್ವಯಿಸುತ್ತದೆ. ಹಾಗಾಗಿ, ಕಾಲೇಜು/ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಕಳೆದ ವರ್ಷದ ವಿಟಿಯು ವಿಶ್ವವಿದ್ಯಾಲಯದ ಸುತ್ತೋಲೆಯನ್ನು ಗಮನಿಸಿ: https://vtu.ac.in/wp-content/uploads/2022/11/NOTIFICATION-4170-11162022183808.pdf
6. ಬಿ.ಇಡಿ ಕೋರ್ಸ್ ದಾಖಲಾತಿಗೆ ವ್ಯಾಸಂಗ ಪ್ರಮಾಣಪತ್ರ ಮತ್ತು ಗ್ರಾಮೀಣ ಪ್ರಮಾಣಪತ್ರ ಕಡ್ಡಾಯವೇ?
–ಹೆಸರು, ಊರು ತಿಳಿಸಿಲ್ಲ.
ಉತ್ತರ: ನೀವು ಯಾವ ಪ್ರವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತೀರಿ ಎಂದು ತಿಳಿಸಿಲ್ಲ. ನಮಗಿರುವ ಮಾಹಿತಿಯಂತೆ, ಕರ್ನಾಟಕದ ಅಭ್ಯರ್ಥಿ ಎಂದು ಪರಿಗಣಿಸಲು ಕನಿಷ್ಠ 7 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಸಲ್ಲಿಸಬೇಕು. ಹಾಗೂ, ಗ್ರಾಮೀಣ ಮೀಸಲಾತಿ ಇಲ್ಲದಿರುವುದರಿಂದ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ, ಬಿ.ಇಡಿ ಕೋರ್ಸ್ಗೆ, ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಮತ್ತು ಹಂಚಿಕೆ ಕುರಿತ ಈ ಸುತ್ತೋಲೆಯನ್ನು ಗಮನಿಸಿ: https://www.schooleducation.kar.nic.in/cacellpdfs/Bed-2021-22/2_BEdnotification2021_22_Final.pdf
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.