ಬೆಂಗಳೂರು: ತಮ್ಮ ಗ್ರಾಮ, ಪ್ರದೇಶಗಳ ವ್ಯಾಪ್ತಿಯಲ್ಲೇ ಕೇಂದ್ರ ಸರ್ಕಾರದ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಬೇಕೆಂಬ ಯುವಕರಿಗೆ ಸುವರ್ಣಾವಕಾಶ ಬಂದಿದೆ. ಹೌದು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆಯಲ್ಲಿ 44,228 'ಗ್ರಾಮೀಣ ಅಂಚೆ ಸೇವಕ' ಹಾಗೂ 'ಬ್ರ್ಯಾಂಚ್ ಪೋಸ್ಟ್ ಮಾಸ್ಟರ್' ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಗ್ರಾಮೀಣ ಅಂಚೆ ಸೇವಕ (ಜಿಡಿಎಸ್), ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ) ಮತ್ತು ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಇದೇ ಆಗಸ್ಟ್ 5 ಅರ್ಜಿ ಸಲ್ಲಿಸಲು ಕೊನೆಯ ದಿನ.
23 ಅಂಚೆ ವೃತ್ತಗಳ ವ್ಯಾಪ್ತಿಯಲ್ಲಿ ಈ ನೇಮಕಾತಿ ನಡೆಯುತ್ತಿದ್ದು ಕರ್ನಾಟಕ ಅಂಚೆ ವೃತ್ತಕ್ಕೆ 1,940 ಹುದ್ದೆಗಳಿವೆ. ಅಂಚೆ ಇಲಾಖೆಯಲ್ಲಿ ಕರ್ನಾಟಕ ವೃತ್ತದ ವ್ಯಾಪ್ತಿಯಲ್ಲಿ 37 ವಿಭಾಗಗಳಿವೆ.
ಕನಿಷ್ಠ 10 ನೇ ತರಗತಿ (ಎಸ್‌ಎಸ್‌ಎಲ್‌ಸಿ) ಅಥವಾ ತತ್ಸಮಾನವಾದ ವಿದ್ಯಾರ್ಹತೆ ಹೊಂದಿರುವ ಅರ್ಹ ಪುರುಷ, ಮಹಿಳೆ ಹಾಗೂ ತೃತಿಯ ಲಿಂಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ₹100 ಇದ್ದು,
ಎಸ್‌ಸಿ/ಎಸ್‌ಟಿ, ಮಹಿಳಾ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಇದೆ.
ರೆಗ್ಯುಲರ್ ನೌಕರರಾಗಿರುವುದಿಲ್ಲ
ಆಸಕ್ತರು ವೃತ್ತವಾರು ರಾಜ್ಯಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಯಾವುದಾದರೂ ಒಂದು ವಿಭಾಗಕ್ಕೆ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ ಕರ್ನಾಟಕ ವೃತ್ತದ ಅಭ್ಯರ್ಥಿಗಳು ಯಾವುದಾದರು ಒಂದು ತಮ್ಮಿಷ್ಟದ ವಿಭಾಗವನ್ನು ಆಯ್ಕೆ ಮಾಡಿಕೊಂಡು ಹುದ್ದೆಗಳನ್ನು ಗಮನಿಸಿ ಅರ್ಜಿ ಸಲ್ಲಿಸಬೇಕು. ವಿಭಾಗದಲ್ಲಿ ಬಹುತೇಕ ಅಂಚೆ ಸೇವಕ ಹುದ್ದೆಗಳೇ ಇವೆ. ಕೆಲವು ಕಡೆಗೆ ಮಾತ್ರ ಬಿಪಿಎಂ, ಎಬಿಪಿಎಂ ಇವೆ.
ಮುಖ್ಯವಾಗಿ ಗಮನಿಸಬೇಕಾದದ್ದು ಎಂದರೆ ಅಂಚೆ ಸೇವಕ ಹಾಗೂ ಬಿಪಿಎಂ, ಎಬಿಪಿಎಂ ಹುದ್ದೆಗಳಿಗೆ ನೇಮಕವಾಗುವವರು ಇಲಾಖೆಯ ರೆಗ್ಯುಲರ್ ನೌಕರರಾಗಿರುವುದಿಲ್ಲ. ಮಾಸಿಕ ನಿಗದಿತ ಸಂಭಾವನೆ ಮಾತ್ರ ಇರುತ್ತದೆ.
ಆಸಕ್ತರು ದಿನಕ್ಕೆ ನಾಲ್ಕೈದು ಗಂಟೆ ಕೆಲಸ ಮಾಡಲು ಸಿದ್ದರಾಗಿರಬೇಕು. ಕೆಲಸ ಮಾಡಲು ಇಚ್ಚಿಸುವ ವಿಭಾಗ ಹಾಗೂ ಆಯಾ ಗ್ರಾಮ, ಪ್ರದೇಶಗಳ ಬಗ್ಗೆ ಉತ್ತಮ ಜ್ಞಾನ, ಸಂಪರ್ಕ, ಸ್ಥಳೀಯ ಭಾಷೆ ಬಲ್ಲವರಾಗಿರಬೇಕು. ಸೈಕಲ್ ಅಥವಾ ದ್ವಿಚಕ್ರ ವಾಹನ ಚಲಾಯಿಸಲು ತಿಳಿದಿರಬೇಕು. ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಬಿಪಿಎಂ ಹುದ್ದೆಗಳಿಗೆ ನೇಮಕ ಆಗುವವರಿಗೆ ಮಾಸಿಕ ₹12,000ರಿಂದ ₹29,380 ಹಾಗೂ ಅಂಚೆ ಸೇವಕ/ಎಬಿಪಿಎಂ ಹುದ್ದೆಗಳಿಗೆ ನೇಮಕ ಆಗುವವರಿಗೆ ₹10,000 ರಿಂದ ₹24,470 ಸಂಭಾವನೆ ಸಿಗಲಿದೆ.
–––––
ನೇಮಕಾತಿ ವಿಧಾನ ಹೇಗಿದೆ?
ಮೊದಲು ಮೊಬೈಲ್ ನಂಬರ್ ನೋಂದಣಿ ಮಾಡಿಸುವ ಮೂಲಕ ಆಸಕ್ತ ಅಭ್ಯರ್ಥಿಗಳು ಯಶಸ್ವಿಯಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಯಶಸ್ವಿಯಾಗಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿ 10 ನೇ ತರಗತಿಯಲ್ಲಿ ಗಳಿಸಿದ ಶೇಕಡಾವಾರು ಅಂಕಗಳನ್ನು ಪರಿಗಣಿಸಿ ಮೆರಿಟ್ ಹಾಗೂ ಮೀಸಲಾತಿ ಅನುಸಾರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬಂದ ಅಭ್ಯರ್ಥಿಗಳು ಮೂಲ ದಾಖಲಾತಿ ಹಾಗೂ ಕನಿಷ್ಠ ವೈದ್ಯಕೀಯ ಪರೀಕ್ಷೆ ಪೂರೈಸಿದ ನಂತರ ವಿಭಾಗವಾರು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಇದು ನೇರ ನೇಮಕಾತಿಯಾಗಿದ್ದು ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ವಯೋಮಿತಿ
ಈ ಮೂರೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು. ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಒಬಿಸಿ ಅಭ್ಯರ್ಥಿಗಳಿ 3 ವರ್ಷ ಹಾಗೂ ಅಂಗವಿಕಲರಿಗೆ 13 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.