ADVERTISEMENT

ಸಿವಿಲ್ ಜಡ್ಜ್ ಹುದ್ದೆಗಳ ನೇಮಕಾತಿ - ಮೂರು ಹಂತಗಳ ಆಯ್ಕೆ ಪ್ರಕ್ರಿಯೆ

ಎ.ಎಂ.ಸುರೇಶ
Published 15 ಮಾರ್ಚ್ 2023, 21:45 IST
Last Updated 15 ಮಾರ್ಚ್ 2023, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೆಳಹಂತದ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲಾಗುತ್ತದೆ. ಆಯ್ಕೆ ವಿಧಾನ, ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 57 ಸಿವಿಲ್‌ ನ್ಯಾಯಾಧೀಶರ(ಸಿವಿಲ್‌ ಜಡ್ಜ್‌) ಹುದ್ದೆಗಳ ಭರ್ತಿಗೆ ಕರ್ನಾಟಕ ಹೈಕೋರ್ಟ್‌ ಚಾಲನೆ ನೀಡಿದ್ದು, ಕಾನೂನು ಪದವಿ ಹೊಂದಿದವರಿಗೆ ನ್ಯಾಯಾಧೀಶರಾಗುವ ಅವಕಾಶ ಒದಗಿಬಂದಿದೆ.

ನೇರ ನೇಮಕಾತಿ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಕಾನೂನು ಪದವಿ ಪಡೆದು ವಕೀಲರಾಗಿ ನೋಂದಣಿ ಮಾಡಿಸಿರುವವರು ಅರ್ಜಿ ಸಲ್ಲಿಸಬಹುದು. ಅಲ್ಲದೆ ಕಾನೂನು ಪದವಿ ಹೊಂದಿದ್ದು, ಹೈಕೋರ್ಟ್‌ ಅಥವಾ ಜಿಲ್ಲಾ ನ್ಯಾಯಾಲಯಗಳಲ್ಲಿ ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾನಿರತ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ADVERTISEMENT

ವಯೋಮಿತಿ: ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ (ಪರಿಶಿಷ್ಟ ಜಾತಿ ಮತ್ತು ಪಂಗಡ) ವಯೋಮಿತಿ 38 ವರ್ಷ ಮೀರಿರಬಾರದು. ಇತರ ಅಭ್ಯರ್ಥಿಗಳ ವಯೋಮಿತಿ 35 ವರ್ಷದ ಒಳಗೆ ಇರಬೇಕು. ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿ ಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರುತ್ತದೆ.
ಸೇವಾನಿರತ ಅಭ್ಯರ್ಥಿಗಳಾದರೆ (ಪರಿಶಿಷ್ಟ ಜಾತಿ ಮತ್ತು ಪಂಗಡ) 43 ಹಾಗೂ ಇತರ ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.

ಮೀಸಲಾತಿ: ರಾಜ್ಯ ಸರ್ಕಾರದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪರಿಶಿಷ್ಟರು, ಪ್ರವರ್ಗ-1, ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ, ಪ್ರವರ್ಗ 3ಬಿಗೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಅಂಗವಿಕಲರಿಗೆ ಶೇಕಡ ಒಂದರಷ್ಟು ಮೀಸಲಾತಿ ಇರುತ್ತದೆ. ಈ ಸೌಲಭ್ಯ ಪಡೆಯಲು ಬಯಸುವವರು ಸೂಕ್ತ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವಾಗಲೇ ಹೊಂದಿರಬೇಕು.

ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಇದೆ. ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಹೊಂದಿದ್ದು, ಆಯ್ಕೆ ಸಮಿತಿ ಕೇಳಿದಾಗ ಹಾಜರುಪಡಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು. https://Karnatakajudiciary.kar.nic.in/recruitment.php ವೆಬ್‌ಸೈಟ್‌ ಮೂಲಕ ಏಪ್ರಿಲ್ 10ರ ಒಳಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಹೊರತುಪಡಿಸಿ ಇತರ ಯಾವುದೇ ವಿಧಾನದ ಮೂಲಕ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

ಆನ್‌ಲೈನ್ ಮೂಲಕ ಅಥವಾ ಬ್ಯಾಂಕ್ ಚಲನ್ ಮೂಲಕ ಶುಲ್ಕ ಪಾವತಿಸಲು ಏಪ್ರಿಲ್ 13 ಕೊನೆಯ ದಿನವಾಗಿದೆ. ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು.

ನೇಮಕಾತಿ ವಿಧಾನ

ನೇರ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಮೂರು ಹಂತಗಳನ್ನು ಒಳಗೊಂಡಿರುತ್ತದೆ. 1.ಪೂರ್ವಭಾವಿ ಪರೀಕ್ಷೆ 2.ಮುಖ್ಯ ಪರೀಕ್ಷೆ 3.ಮೌಖಿಕ ಪರೀಕ್ಷೆ

ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಹೊಂದಲು ಪರಿಗಣಿಸಲಾಗುತ್ತದೆ. ಮುಖ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ: ಇದು 100 ಅಂಕಗಳ ವಸ್ತುನಿಷ್ಠ ಮಾದರಿಯ(ಆಬ್ಜೆಕ್ಟಿವ್‌) ಪ್ರಶ್ನೆ ಪತ್ರಿಕೆ ಆಗಿರುತ್ತದೆ. ಇದರಲ್ಲಿ ಇತರರು ಕನಿಷ್ಠ 60 ಅಂಕ ಹಾಗೂ ಪರಿಶಿಷ್ಟ ಅಭ್ಯರ್ಥಿಗಳು 50 ಅಂಕ ಪಡೆಯಲೇಬೇಕು. ಪಠ್ಯವನ್ನು ಅಧಿಸೂಚನೆಯಲ್ಲಿ ಗಮನಿಸಬಹುದು.

ಮುಖ್ಯ ಲಿಖಿತ ಪರೀಕ್ಷೆ: ಇದರಲ್ಲಿ ತಲಾ 100 ಅಂಕಗಳ ನಾಲ್ಕು ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಇದರಲ್ಲಿ ತೇರ್ಗಡೆ ಯಾಗಲು ಪ್ರತಿಯೊಂದು ಪತ್ರಿಕೆಯಲ್ಲಿ ಇತರರು ಕನಿಷ್ಠ 50 ಹಾಗೂ ಪರಿಶಿಷ್ಟರು 40 ಅಂಕಗಳನ್ನು ಪಡೆಯಬೇಕು.

ಮೌಖಿಕ ಪರೀಕ್ಷೆ: ಇದರಲ್ಲಿ 100 ಅಂಕಗಳ ಪೈಕಿ ಇತರರು ಕನಿಷ್ಠ 50 ಹಾಗೂ ಪರಿಶಿಷ್ಟರು 40 ಅಂಕಗಳನ್ನು ಪಡೆಯಬೇಕು.

ಇದಲ್ಲದೆ ಗರಿಷ್ಠ 25 ಅಂಕಗಳ ಕಂಪ್ಯೂಟರ್ ಜ್ಞಾನದ ಪರೀಕ್ಷೆ ಇರುತ್ತದೆ. ಆದರೆ ಇದರಲ್ಲಿ ಗಳಿಸಿದ ಅಂಕಗಳನ್ನು ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗೆ ಸೇರಿಸುವುದಿಲ್ಲ.

ಅಭ್ಯರ್ಥಿಗಳ ಅರ್ಹತೆ ತಿಳಿಯಲು ಮಾತ್ರ ಈ ಅಂಕಗಳನ್ನು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.