ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ತೋಟಗಾರಿಕಾ ಮಂಡಳಿ (NHB) ತನ್ನ ಅಧಿಕಾರಿ ವರ್ಗದ ‘ಗ್ರೂಪ್ ಎ’ ಮತ್ತು ‘ಗ್ರೂಪ್ ಬಿ’ ಹುದ್ದೆಗಳಿಗೆ ಡಿಸೆಂಬರ್ 16ರಿಂದ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಈ ನೇಮಕಾತಿ ಪ್ರಕ್ರಿಯೆಯ ವಿವರಗಳನ್ನು ಇಲ್ಲಿ ತಿಳಿಯೋಣ.
‘ಗ್ರೂಪ್ ಎ’ ನಲ್ಲಿ ಮಂಡಳಿ ‘ಉಪ ನಿರ್ದೇಶಕ’ (DD) 19 ಹುದ್ದೆಗಳು ಹಾಗೂ ಮಂಡಳಿಯ ‘ಹಿರಿಯ ತೋಟಗಾರಿಕಾ ಅಧಿಕಾರಿ’ (SHO) ಎಂಬ 25 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದ್ದು ಮುಂದಿನ ತಿಂಗಳು ಜನವರಿ 5 ಅರ್ಜಿ ಸಲ್ಲಿಸಲು ಕಡೆಯ ದಿನ.
ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ₹500 ಹಾಗೂ ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹1,000 ಹಾಗೂ ಯೋಜನಾ ನಿರ್ವಸತಿ ಅಭ್ಯರ್ಥಿಗಳಿಗೆ (PWD) ಯಾವುದೇ ಶುಲ್ಕವಿಲ್ಲ.
ಉಪ ನಿರ್ದೇಶಕ –19 ಹುದ್ದೆಗಳು (ಗ್ರೂಪ್ ಎ)
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ತೋಟಗಾರಿಕೆ/ಕೃಷಿ/ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿ/ಅಗ್ರಿಕಲ್ಚರ್ ಎಕನಾಮಿಕ್ಸ್/ಅಗ್ರಿಕಲ್ಚರ್ ಎಂಜಿನಿಯರಿಂಗ್/ಪೋಸ್ಟ್ ಹಾರ್ವೆಸ್ಟ್ ಮ್ಯಾನೇಜ್‌ಮೆಂಟ್/ಫುಡ್ ಟೆಕ್ನಾಲಜಿ/ಫುಡ್ ಸೈನ್ಸ್ ಈ ಯಾವುದಾರೂ ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಜೊತೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ 5 ವರ್ಷದ ಸೇವಾನುಭವ ಹೊಂದಿರಬೇಕು.
ವಯೋಮಿತಿ: ಸಾಮಾನ್ಯ ವರ್ಗದವರು ಗರಿಷ್ಠ 40 ವರ್ಷ ವಯಸ್ಸು ದಾಟಿರಬಾರದು. ಎಸ್‌ಸಿ/ಎಸ್‌ಟಿ 45, ಒಬಿಸಿ 43.
ವೇತನ ಶ್ರೇಣಿ: ₹56,100–1,77,500
ಆಯ್ಕೆ ವಿಧಾನ: ಉಪ ನಿರ್ದೇಶಕ ಹುದ್ದೆಗಳು ಗ್ರೂಪ್ ‘ಎ’ ವಿಭಾಗದ ಅಧಿಕಾರಿ ಹುದ್ದೆಗಳಾಗಿದ್ದು ಇದಕ್ಕೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲು 150 ಅಂಕಗಳಿಗೆ 150 ಪ್ರಶ್ನೆಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಇದ್ದು, ಪರೀಕ್ಷಾ ಅವಧಿ 2 ಗಂಟೆ. ನಕಾರಾತ್ಮಕ ಅಂಕಗಳು ಇರುವುದಿಲ್ಲ. ಈ ಪರೀಕ್ಷೆಯಲ್ಲಿ ಪಾಸಾದವರು ಎರಡನೇ ಹಂತದ ಪರೀಕ್ಷೆಗೆ ಅರ್ಹ. ಎರಡನೇ ಹಂತದಲ್ಲಿ 100 ಅಂಕದ ವಿವರಣಾತ್ಮಕ ಪರೀಕ್ಷೆ ಇರುತ್ತದೆ. ಈ ಪರೀಕ್ಷಾ ಅವಧಿ 2 ಗಂಟೆ. ಎರಡನೇ ಹಂತದಲ್ಲಿ ಪಾಸಾದವರಿಗೆ ಸಂದರ್ಶನ ಇರುತ್ತದೆ. ಸಂದರ್ಶನಕ್ಕೆ 25 ಅಂಕಗಳನ್ನು ನಿಗದಿಪಡಿಸಲಾಗಿದೆ. ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
–––
ಹಿರಿಯ ತೋಟಗಾರಿಕಾ ಅಧಿಕಾರಿ –25 ಹುದ್ದೆಗಳು (ಗ್ರೂಪ್ ಬಿ)
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಕೃಷಿ/ತೋಟಗಾರಿಕೆ/ಫುಡ್ ಟೆಕ್ನಾಲಜಿ/ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿ/ಅಗ್ರಿಕಲ್ಚರ್ ಎಕನಾಮಿಕ್ಸ್/ಅಗ್ರಿಕಲ್ಚರ್ ಎಂಜಿನಿಯರಿಂಗ್/ಫುಡ್ ಸೈನ್ಸ್ ಈ ಯಾವುದಾರೂ ಒಂದು ವಿಷಯದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ವಯೋಮಿತಿ: ಸಾಮಾನ್ಯ ವರ್ಗದವರು ಗರಿಷ್ಠ 30 ವರ್ಷ ವಯಸ್ಸು ದಾಟಿರಬಾರದು. ಎಸ್‌ಸಿ/ಎಸ್‌ಟಿ 35, ಒಬಿಸಿ 33.
ವೇತನ ಶ್ರೇಣಿ: ₹35,400–1,12,400
ಆಯ್ಕೆ ವಿಧಾನ: ಹಿರಿಯ ತೋಟಗಾರಿಕಾ ಅಧಿಕಾರಿ ಹುದ್ದೆಗಳು ‘ಗ್ರೂಪ್ ಬಿ’ ವಿಭಾಗದ ಅಧಿಕಾರಿ ವರ್ಗದ ಹುದ್ದೆಗಳಾಗಿದ್ದು ಇದಕ್ಕೆ 2 ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಹಂತದಲ್ಲಿ 150 ಅಂಕಗಳಿಗೆ 150 ಪ್ರಶ್ನೆಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಇರುತ್ತದೆ. ಪರೀಕ್ಷಾ ಅವಧಿ 2 ಗಂಟೆ. ನಕಾರಾತ್ಮಕ ಅಂಕಗಳು ಇರುವುದಿಲ್ಲ. ಈ ಪರೀಕ್ಷೆಯಲ್ಲಿ ಪಾಸಾದವರು 1 ಅನುಪಾತ 10ರಲ್ಲಿ ಎರಡನೇ ಹಂತದ ಪರೀಕ್ಷೆಗೆ ಅರ್ಹ. ಎರಡನೇ ಹಂತದಲ್ಲಿ 100 ಅಂಕಕ್ಕೆ ವಿವರಣಾತ್ಮಕ ಪರೀಕ್ಷೆ ಇರುತ್ತದೆ. ಪರೀಕ್ಷಾ ಅವಧಿ 2 ಗಂಟೆ. ಈ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ. ಮೆರಿಟ್ ಆಧಾರದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
–––
ಎನ್‌ಟಿಎ ವತಿಯಿಂದ ಪರೀಕ್ಷೆಗಳು
ಈ ಎರಡೂ ಹುದ್ದೆಗಳಿಗೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಪರೀಕ್ಷೆಗಳನ್ನು ನಡೆಸಲಿದೆ. ಪರೀಕ್ಷಾ ದಿನಾಂಕಗಳು ಇನ್ನೂ ಘೋಷಣೆ ಆಗಿಲ್ಲ. ಪರೀಕ್ಷಾ ವಿಷಯಗಳು, ಪಠ್ಯಕ್ರಮ, ಹುದ್ದೆಗಳ ವರ್ಗೀಕರಣ ಹಾಗು ಇತರೆ ಹೆಚ್ಚಿನ ಮಾಹಿತಿಗೆ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಅಧಿಕೃತ ವೆಬ್‌ಸೈಟ್ www.nhb.gov.in ಪರಿಶೀಲಿಸಬೇಕು. ಸಂಪರ್ಕಕ್ಕೆ 9625622301.
NHB ಬಗ್ಗೆ
ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು 1984 ರಲ್ಲಿ ಸ್ಥಾಪನೆಯಾಗಿದ್ದು ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಒಂದು ಸ್ವತಂತ್ರ ಸಂಸ್ಥೆಯಾಗಿದೆ. ಇದರ ಕೇಂದ್ರ ಕಚೇರಿಯು ಹರಿಯಾಣದ ಗುರುಗ್ರಾಮದಲ್ಲಿದೆ. ದೇಶದಾದ್ಯಂತ 29 ಕ್ಷೇತ್ರಿಯ ಕಾರ್ಯಾಲಯಗಳಿವೆ.
*****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.