ಮಿಲೇನಿಯಲ್ ತಲೆಮಾರು ಆರ್ಥಿಕ ಭದ್ರತೆಗಿಂತ ತಮ್ಮ ಆಸಕ್ತಿಗೆ ಅನುಗುಣವಾದ ವೃತ್ತಿಯನ್ನು ಸೇರಿಕೊಳ್ಳುವ ಟ್ರೆಂಡ್ ಶುರುವಾಗಿದೆ. ಪೋಷಕರು ಅನುಮಾನಿಸುವ ಬದಲು ವಿಶ್ಲೇಷಿಸಿ, ಉತ್ತೇಜನ ನೀಡುವುದು ಒಳಿತು.
ನಿಮ್ಮ ಮಕ್ಕಳು ಅಸಂಪ್ರದಾಯಕ ಶೈಕ್ಷಣಿಕ ಕೋರ್ಸ್ ಆಯ್ಕೆ ಮಾಡಿಕೊಂಡರೆ ಅನಗತ್ಯ ಆತಂಕಪಡುವ ಪರಿಸ್ಥಿತಿ ಈಗಿಲ್ಲ. ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಹಣಕಾಸು, ಮ್ಯಾನೇಜ್‌ಮೆಂಟ್ ಹಾಗೂ ಮಾಹಿತಿ ತಂತ್ರಜ್ಞಾನದಂತಹ ಸಾಂಪ್ರದಾಯಕ ಕೋರ್ಸ್‌ಗಳನ್ನು ಹೊರತುಪಡಿಸಿ ಬೇಕಾದಷ್ಟು ಆಯ್ಕೆಗಳು ಅವರ ಮುಂದಿವೆ. ಜಾಗತಿಕ ಮಟ್ಟದಲ್ಲಿ ಅವಕಾಶಗಳು ಹೆಚ್ಚಾಗುತ್ತಿದ್ದು, ಔದ್ಯೋಗಿಕ ಕ್ಷೇತ್ರದ ವ್ಯಾಪ್ತಿಯೂ ಜಾಸ್ತಿಯಾಗಿದೆ. ಆದರೆ ಪೋಷಕರು ತಮ್ಮ ಮಕ್ಕಳ ಆಸಕ್ತಿ ಮತ್ತು ಕೌಶಲವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಮತ್ತು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು.
ಅದರಲ್ಲೂ ಮಿಲೇನಿಯಲ್ ತಲೆಮಾರಿನವರು ತಮಗೆ ಆಸಕ್ತಿಯಿರುವ ಕ್ಷೇತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಸದ್ಯದ ಟ್ರೆಂಡ್. ಆರ್ಥಿಕ ಭದ್ರತೆಗಿಂತ ಹೆಚ್ಚಾಗಿ ಆತ್ಮತೃಪ್ತಿ ನೀಡುವಂತಹ ಉದ್ಯೋಗದ ಹುಡುಕಾಟದಲ್ಲಿ ತೊಡಗಿರುವುದಂತೂ ಸ್ಪಷ್ಟ. ಹೀಗಾಗಿ ಆಫ್‌ಬೀಟ್ ಉದ್ಯೋಗಗಳತ್ತ ಒಲವು ತೋರಿಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಈ ಅಸಂಪ್ರದಾಯಕ ಉದ್ಯೋಗದ ಪರಿಭಾಷೆಯೇ ಬದಲಾಗಿಬಿಟ್ಟಿದೆ. ರಂಗಕರ್ಮಿ, ಟಿವಿ ನಟ/ ನಟಿ, ಆಪ್ತ ಸಮಾಲೋಚಕ, ರೂಪದರ್ಶಿ, ಕಂಟೆಂಟ್ ಬರಹಗಾರ, ಬಾಣಸಿಗ, ಜಿಮ್ ತರಬೇತುದಾರ, ವಿಡಿಯೊ ಗೇಮ್ ವಿನ್ಯಾಸಗಾರ, ಸೈಬರ್ ಸೆಕ್ಯುರಿಟಿ ತಜ್ಞ, ಡಿಜೆ/ ಆರ್‌ಜೆ... ಹೀಗೆ ಹಲವಾರು ಉದ್ಯೋಗಾವಕಾಶಗಳ ಬಗ್ಗೆ ಅನುಮಾನದಿಂದ ನೋಡುವ ಪರಿಸ್ಥಿತಿ ಈಗಿಲ್ಲ. ಹಾಗಂತ ಸಾಂಪ್ರದಾಯಕ ಕೋರ್ಸ್ ಮಾಡಿದರೂ ಕೂಡ ನಿಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಹೋಗಬಹುದು. ವಿಜ್ಞಾನ– ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಓದಿದವರೂ ಕೂಡ ರೊಬಾಟಿಕ್ಸ್, ಕೃತಕ ಬುದ್ಧಿಮತ್ತೆ ಮೊದಲಾದ ವಿಭಾಗಗಳತ್ತ ಕಣ್ಣು ಹಾಯಿಸಬಹುದು.
ಇಂತಹ ಅಸಂಪ್ರದಾಯಕ ಉದ್ಯೋಗದ ಆಯ್ಕೆಯ ವಿಷಯದಲ್ಲಿ ಕೂಡ ಎಚ್ಚರಿಕೆ ಅವಶ್ಯಕ. ಇದರಲ್ಲಿ ತನಗೆ ನಿಜವಾಗಲೂ ಆಸಕ್ತಿ ಇದೆಯೇ, ವೃತ್ತಿಯಲ್ಲಿ ಎದುರಾಗಬಹುದಾದ ಸವಾಲುಗಳನ್ನು ಎದರಿಸುವ ಸಾಮರ್ಥ್ಯ ಇದೆಯೇ, ವೃತ್ತಿಗೆ ಬೇಕಾದ ಕೌಶಲ, ಜಾಣ್ಮೆ ತನ್ನಲ್ಲಿ ಇದೆಯೇ, ಅಂತಹ ವೃತ್ತಿಗೆ ಪೂರಕವಾದ ಜೀವನಶೈಲಿಗೆ ಹೊಂದಿಕೊಳ್ಳುವ ಛಾತಿ ಇದೆಯೇ ಎಂಬ ಅಂಶಗಳನ್ನು ವಿಶ್ಲೇಷಿಸಿಕೊಳ್ಳಬೇಕಾಗುತ್ತದೆ.
ಪೋಷಕರೂ ಕೂಡ ತಮ್ಮ ಮಕ್ಕಳಿಗೆ ವಿಭಿನ್ನವಾದ ಉದ್ಯೋಗದಲ್ಲಿ ಆಸಕ್ತಿ ಇದ್ದರೆ ಅದನ್ನು ಕಂಡುಕೊಳ್ಳಲು ಪ್ರೋತ್ಸಾಹ ನೀಡಬೇಕು. ಇಂತಹುದೇ ಉದ್ಯೋಗ, ಆರ್ಥಿಕ ಭದ್ರತೆ, ಸ್ಥಾನಮಾನ ಎಂಬ ವಿಷಯಕ್ಕೆ ಜೋತು ಬೀಳಬಾರದು.
ಪೋಷಕರು ಏನು ಮಾಡಬಹುದು?
ವಿಭಿನ್ನ ವೃತ್ತಿಯೆಂದು ಭಯ ಬೀಳಬೇಡಿ. ಮುಕ್ತ ಮನಸ್ಸಿನಿಂದ ಅದರ ಸಾಧಕ– ಬಾಧಕದ ಬಗ್ಗೆ ಚರ್ಚಿಸಿ. ವಿಷಯ ಸಂಗ್ರಹಿಸಿ. ಮಕ್ಕಳ ಜೊತೆ ನೇರವಾಗಿ ಮಾತನಾಡಿ ಅವರ ಗುರಿಗಳು ಹಾಗೂ ನಿಮ್ಮ ಉದ್ದೇಶಗಳನ್ನು ವಿವರವಾಗಿ ಮಾತನಾಡಿ. ಆಮೇಲೆ ಮಕ್ಕಳ ನಿರ್ಧಾರಗಳನ್ನು ಸ್ವಾಗತಿಸಿ ನೆರವು ನೀಡಿ.
ವೃತ್ತಿಯ ಆಯ್ಕೆ ವೈಯಕ್ತಿಕ. ಹೀಗಾಗಿ ನಿಮ್ಮ ಆಸೆ– ಆಕಾಂಕ್ಷೆಗಳನ್ನು ಅವರ ಮೇಲೆ ಹೇರಬೇಡಿ. ಮಕ್ಕಳು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಏರಿಳಿತಗಳಿದ್ದರೂ ಅದು ಸ್ವಾಭಾವಿಕ ಎಂದು ಗಟ್ಟಿ ಮನಸ್ಸು ಮಾಡಿ.
ಮಕ್ಕಳು ವೃತ್ತಿಯಲ್ಲಿನ ಗ್ಲಾಮರ್‌ನಿಂದಾಗಿ ಆಕರ್ಷಿತರಾಗಿದ್ದಾರೆಯೇ ಅಥವಾ ನಿಜವಾಗಲೂ ಆಸಕ್ತಿ ಇದೆಯೇ ಎಂದು ವಿಶ್ಲೇಷಣೆ ಮಾಡಿ. ಮಕ್ಕಳಿಗೆ ಪ್ರತಿಭೆ ಹಾಗೂ ಕೌಶಲವಿದ್ದು, ಯಶಸ್ವಿ ಎನಿಸಿಕೊಳ್ಳಬಹುದೇ ಎಂದು ಯೋಚಿಸಿ. ಪರಿಸ್ಥಿತಿಯನ್ನು ಅವಲೋಕಿಸಿ ಪ್ರೋತ್ಸಾಹ ನೀಡಿ.
ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಮಕ್ಕಳ ಗಮನ ಸೆಳೆದು ನಂತರದ ನಿರ್ಧಾರವನ್ನು ಅವರಿಗೆ ಬಿಡಿ.
ಮೂಲಭೂತ ಶಿಕ್ಷಣ ನೀಡಿ. ಒಳ್ಳೆಯ ಕೋರ್ಸ್‌ನಲ್ಲಿ ಮೊದಲು ಪದವಿ ಪಡೆಯಲಿ. ಹಾಡು, ನೃತ್ಯ, ಕಲೆ, ಮಾಡೆಲಿಂಗ್ ಮೊದಲಾದವುಗಳಲ್ಲಿ ಆಸಕ್ತಿ ಇದ್ದರೂ ಕೂಡ ಮೊದಲು ಯಾವುದಕ್ಕೂ ಒಂದು ಒಳ್ಳೆಯ ವಿಭಾಗದಲ್ಲಿ ಪದವಿ ಬೇಕೇ ಬೇಕು. ಆದರೆ ಅಂಕಗಳು ಜಾಸ್ತಿ ಬಂದಿವೆ ಎಂದು ಅವರಿಗೆ ಇಷ್ಟವಿಲ್ಲದಿದ್ದರೂ ನಿಮಗೆ ಬೇಕಾದ ಕೋರ್ಸ್‌ಗೆ ಸೇರಿಸಲು ಯತ್ನಿಸಬೇಡಿ. ಭಾಷೆ, ಸಂವಹನ ಸುಧಾರಿಸಿಕೊಳ್ಳಲು ಉತ್ತೇಜನ ನೀಡಿ. ನಂತರ ಬೇಕಿದ್ದರೆ ಅವರ ಆಯ್ಕೆಯ ವೃತ್ತಿಯಲ್ಲಿ ಮುಂದುವರಿಯಲಿ.
ಆಯ್ಕೆ ಮಾಡಿಕೊಂಡ ವೃತ್ತಿಗೆ ಅನುಕೂಲವಾಗುವ ಕೋರ್ಸ್‌ಗೆ ಸೇರಿಸಿ. ಉದಾಹರಣೆಗೆ ಫೋಟೊಗ್ರಫಿಯಲ್ಲಿ ಆಸಕ್ತಿ ಇದ್ದರೆ ಅದನ್ನು ವೃತ್ತಿಪರವಾಗಿ ಹೇಳಿಕೋಡುವ, ಸರ್ಟಿಫಿಕೇಟ್ ಕೊಡುವಂತಹ ಕೋರ್ಸ್‌ಗೆ ಸೇರಿಸಿ.
ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲು ವೃತ್ತಿ ಮಾರ್ಗದರ್ಶಕರ ಬಳಿ ಕರೆದುಕೊಂಡು ಹೋಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.