ನವದೆಹಲಿ: ತರಬೇತಿ ಹೊಂದಿರುವ ಅಪ್ರೆಂಟಿಸ್‌ಗಳ ಸೇವೆಯನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಯನ್ನು ರೈಲ್ವೆ ತಿರಸ್ಕರಿಸಿದೆ.
ಅಪ್ರೆಂಟಿಸ್‌ಗಳು ಸಹ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು. ಇಂತಹ ಪರೀಕ್ಷೆ ಇಲ್ಲದೆಯೇ ನೇರ ನೇಮಕಾತಿ ಮಾಡಿಕೊಳ್ಳುವುದು ನಿಯಮಗಳಿಗೆ ವಿರುದ್ಧ ಎಂದೂ ಹೇಳಿದೆ.
ದೇಶದ ಎಲ್ಲ ಅರ್ಹ ನಾಗರಿಕರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು, ಕಾಯಂ ನೌಕರಿಗೆ ಅರ್ಜಿ ಹಾಕಲು ಅರ್ಹರು. ಆದರೆ, ಮುಕ್ತವಾದ ಸ್ಪರ್ಧಾತ್ಮಕ ಪರೀಕ್ಷೆಗಳು ಇಲ್ಲದೆಯೇ ನೇರ ನೇಮಕಾತಿ ಮಾಡಿಕೊಳ್ಳುವುದು ಸಂವಿಧಾನ ವಿರೋಧಿ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಅಪ್ರೆಂಟಿಸ್‌ಗಳ ಸೇವೆಯನ್ನು ಕಾಯಂಗೊಳಿಸುವ ಅಧಿಕಾರವನ್ನು ಈ ಮೊದಲು ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ನೀಡಲಾಗಿತ್ತು. 2017ರಲ್ಲಿ ಈ ಅಧಿಕಾರವನ್ನು ಹಿಂಪಡೆಯಲಾಗಿದೆ.
ಪ್ರಧಾನ ವ್ಯವಸ್ಥಾಪಕರಿಗೆ ಈ ಅಧಿಕಾರವನ್ನು ಪುನಃ ನೀಡಬೇಕು ಹಾಗೂ ತರಬೇತಿ ಪೂರೈಸಿರುವವರ ಸೇವೆಯನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಯನ್ನು ಅಪ್ರೆಂಟಿಸ್‌ಗಳು ಮುಂದಿಟ್ಟಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರೈಲ್ವೆ ಈ ಪ್ರಕಟಣೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.