ದೇಶದಲ್ಲಿ ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಜಾರಿಗೆ ಬಂದು ಇದೇ 23ಕ್ಕೆ ನೂರು ವರ್ಷ ತುಂಬಲಿದೆ. ಇಂಥದ್ದೊಂದು ಪರಿಪಾಟಕ್ಕೆ ನಾಂದಿ ಹಾಡಿದ್ದು ಮೈಸೂರು ಸಂಸ್ಥಾನ ಎನ್ನುವುದು ನಮ್ಮ ಹೆಮ್ಮೆ. ಅಂದಹಾಗೆ, ಈ ಚಾರಿತ್ರಿಕ ಮೈಲಿಗಲ್ಲಿನ ಮಹತ್ವವನ್ನು ಸಮಾಜ, ಸರ್ಕಾರ ಒಟ್ಟಾಗಿ ಮರೆತಿದ್ದು ಏಕೋ?
ಶತಮಾನಗಳಿಂದ ವಿದ್ಯೆ- ಆತ್ಮಗೌರವದಿಂದ ವಂಚಿತವಾಗಿದ್ದ ಶೋಷಿತ ಜನರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಸಮಾಜದ ಇತರ ಸಮುದಾಯಗಳ ಜತೆ ಅವರೂ ಸರಿಸಮಾನವಾಗಿ ನಿಲ್ಲಲು ಅನುಕೂಲವಾಗುವಂತಹ ನೀತಿಯನ್ನು ರೂಪಿಸಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸಲ್ಲುತ್ತದೆ. ದೇಶದಲ್ಲಿ ಮೀಸಲಾತಿ ಪರಿಕಲ್ಪನೆಯೇ ಇಲ್ಲದ ಕಾಲದಲ್ಲಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ದಲಿತರನ್ನೊಳಗೊಂಡು ಎಲ್ಲ ಹಿಂದುಳಿದ ವರ್ಗಗಳಿಗೆ ಶೇಕಡ 50ರಷ್ಟು ಉದ್ಯೋಗ ಮೀಸಲಾತಿಯನ್ನು ಕಲ್ಪಿಸಲು ಕೈಗೊಂಡ ನಿರ್ಧಾರಕ್ಕೆ ಚಾರಿತ್ರಿಕ ಮಹತ್ವವಿದೆ.
ಸಮಾಜದಲ್ಲಿ ಶೇಕಡ 96ರಷ್ಟಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ದಿಗೆ ಆದ್ಯತೆ ನೀಡಿದ ಪ್ರಗತಿಪರ ದೊರೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ದೂರದೃಷ್ಟಿ ಮತ್ತು ವಿಕಾಸ ಮನೋಭಾವವನ್ನು ಶ್ಲಾಘಿಸಲೇಬೇಕು. ಜೊತೆಯಲ್ಲೇ ದಿವಾನ್ ವಿಶ್ವೇಶ್ವರಯ್ಯನವರ ವಿರೋಧ ಕಟ್ಟಿಕೊಂಡು ಪಡಬಾರದ ಕಷ್ಟಪಟ್ಟರೂ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಕ್ಕೆ ಉದ್ಯೋಗ ಮೀಸಲಾತಿ ಜಾರಿಗೆ ಬರಲೇಬೇಕೆಂದು ಬ್ರಿಟಿಷ್ ರಾಜತಾಂತ್ರಿಕ ಮಟ್ಟದಲ್ಲಿ ಹೋರಾಟ ನಡೆಸಿ ಗೆದ್ದು, ಬೀಗಿದ ‘ಹಿಂದುಳಿದ ವರ್ಗಗಳ ಜಾಗೃತಿ ಮಹಾಂದೋಲನ’ದ ವಿಶೇಷಾಧಿಕಾರಿ ಕೆ.ಎಚ್.ರಾಮಯ್ಯ ಮತ್ತು ರಾಜ್ಯದ ಮೊದಲ ಪ್ರಾದೇಶಿಕ ಪಕ್ಷ ‘ಪ್ರಜಾಮಿತ್ರ ಮಂಡಳಿ’ ಸಂಸ್ಥಾಪಕ ಅಧ್ಯಕ್ಷ ಎಚ್.ಚನ್ನಯ್ಯ ಅವರ ಜಾಣತನವನ್ನೂ ಸ್ಮರಿಸಲೇಬೇಕು. ಈ ಇಬ್ಬರೂ ನೇತಾರರಿಗೆ ಬೆಂಬಲವಾಗಿ ನಿಂತ ಆಂಧ್ರ ವಿಶ್ವವಿದ್ಯಾಲಯದ ಸಂಸ್ಥಾಪಕ ಪ್ರೊ.ಕಟ್ಟಾಮಂಚಿ ರಾಮಲಿಂಗಾರೆಡ್ಡಿ ಮತ್ತು ಧರ್ಮಪ್ರಕಾಶ ಡಿ.ಬನುಮಯ್ಯ ಅವರ ಸಹಕಾರವನ್ನು ಮೀಸಲಾತಿ ಉಪ್ಪುಂಡ ಜನರೆಲ್ಲಾ ಎಂದಿಗೂ ಮರೆಯುವಂತಿಲ್ಲ.
1947ರ ಆಗಸ್ಟ್ 29ರಂದು ಅಸ್ತಿತ್ವಕ್ಕೆ ಬಂದ ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್. ಅಂಬೇಡ್ಕರ್, ಶೋಷಿತ ವರ್ಗದ ಜನರಿಗೆ ಮೀಸಲಾತಿ ನೀಡಲು ಯೋಚಿಸಿದಾಗ ಅವರ ಮುಂದೆ ಇದ್ದದ್ದು ಮೈಸೂರು ಸಂಸ್ಥಾನದಲ್ಲಿ 1919ರಲ್ಲೇ ಜಾರಿಗೆ ಬಂದಿದ್ದ ಮೀಸಲಾತಿಯ ಕರಡು ಪ್ರತಿ. ಮೈಸೂರು ಸಂಸ್ಥಾನದ ಸಾಮಾಜಿಕ ನ್ಯಾಯದ ತಕ್ಕಡಿಯಂತಿದ್ದ ಮೀಸಲಾತಿ ಕರಡನ್ನು ಉದಾಹರಿಸಿಯೇ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದಲ್ಲಿ ಮೀಸಲಾತಿಯ ನೀತಿ ರೂಪಿಸಿದ್ದರು. ಸಮಾನತೆಯ ಆಶಯಹೊತ್ತ ಭಾರತೀಯ ಸಂವಿಧಾನವನ್ನು 1950ರಲ್ಲಿ ಜಾರಿಗೊಳಿಸಲಾಯಿತು. ಇದರ ಮೂಲ ಸ್ವರೂಪದ ಅಸ್ಥಿಭಾರವೇ ಮೈಸೂರು ಸಂಸ್ಥಾನದಲ್ಲಿ ಜಾರಿಗೆ ಬಂದ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ. ಅಲ್ಲವೆ ಮತ್ತೆ, ಇದನ್ನು ಪರಿಶೀಲಿಸಿಯೇ ಮೀಸಲಾತಿ ರೂಪುರೇಷೆ ನಿರ್ಮಿಸಿದ್ದಾಗಿ ಅಂಬೇಡ್ಕರ್ ಅವರು ಸ್ಪಷ್ಟ ಉಕ್ತಿಗಳಲ್ಲಿಯೇ ಸಂವಿಧಾನದ ಕರಡಿನಲ್ಲಿ ಹೇಳಿದ್ದಾರಲ್ಲ?
ಮೈಸೂರು ರಾಜ ಸಂಸ್ಥಾನದಲ್ಲಿ ಮೀಸಲಾತಿ ಪರಿಕಲ್ಪನೆಯಾಗಲಿ, ಇದರ ಅನುಷ್ಠಾನವಾಗಲಿ ಸುಖಾಸುಮ್ಮನೆ ಹುಟ್ಟಿದ್ದಲ್ಲ. ಇದರ ಹಿಂದೆ ಒಂದೂವರೆ ದಶಕದ ಹೋರಾಟದ ಶ್ರಮ ಉಂಟು. ಆದರೆ ಇದ್ಯಾವ ಅರಿವೂ ಇಲ್ಲದೆ ಮೀಸಲಾತಿ ಸುಖವುಂಡವರಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ದಲಿತರನ್ನೂ ಒಳಗೊಂಡಂತೆ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 50ರಷ್ಟು ಮೀಸಲಾತಿ ನೀಡುವ ಪದ್ಧತಿ ಜಾರಿಗೆ ತಂದ ಮೈಸೂರು ಅರಸ ರಾಜರ್ಷಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಹಾಗೂ ಮೈಸೂರು ರಾಜ್ಯದಲ್ಲಿ ಶೇಕಡ 96ರಷ್ಟು ಬ್ರಾಹ್ಮಣೇತರ ಜನ ತೀರಾ ಹಿಂದುಳಿದಿದ್ದಾರೆಂದು ಮಹಾರಾಜರು ಮತ್ತು ಬ್ರಿಟಿಷ್ ಅಧಿಕಾರಿಗಳಿಗೆ ಮನದಟ್ಟು ಮಾಡಿಸಿದ ಬ್ಯಾರಿಸ್ಟರ್ ಕೆ.ಎಚ್. ರಾಮಯ್ಯ ಮತ್ತು ಜಸ್ಟಿಸ್ ಎಚ್. ಚನ್ನಯ್ಯ ಅವರ ಹೋರಾಟವನ್ನು ಅವರೆಲ್ಲ ಮರೆತುಬಿಟ್ಟಿದ್ದಾರೆ. ಮೈಸೂರು ಸಂಸ್ಥಾನದ ಹಿಂದುಳಿದ ವರ್ಗದ ಹೋರಾಟವನ್ನು ಗುರುತಿಸುವಲ್ಲಿ ಇತಿಹಾಸಕಾರರು ಸಹ ಆಸ್ಥೆ ವಹಿಸಿಲ್ಲ. ಇದೆಲ್ಲಕ್ಕಿಂತ ದುರಂತ ಎಂದರೆ, ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಯಂಥ ಐತಿಹಾಸಿಕ ಸಾಮಾಜಿಕ ನ್ಯಾಯ ಜಾರಿಗೆ ಬಂದು ಈಗ ನೂರು ವರ್ಷಗಳು ಪೂರ್ಣಗೊಂಡಿರುವುದನ್ನು ಸರ್ಕಾರದ ಸಂಬಂಧಿತ ಇಲಾಖೆಗಳು ಮತ್ತು ಸಂಘಟನೆಗಳು ಎರಡೂ ಮರೆತುಬಿಟ್ಟಿರುವುದು.
ಭಾರತವಿರಲಿ, ಪ್ರಪಂಚದ ಯಾವುದೇ ದೇಶ, ತನ್ನ ಶೋಷಿತ ವರ್ಗದ ಕಲ್ಯಾಣ ಕಾರ್ಯಕ್ರಮ ರೂಪಿಸುವಾಗ ಮೊದಲಿಗೆ ಪರಿಶೀಲಿಸುವುದೇ ಮೈಸೂರು ಸಂಸ್ಥಾನದಲ್ಲಿ ಜಾರಿಗೆ ಬಂದ ಮೀಸಲಾತಿ ಕರಡನ್ನು. ಇಲ್ಲಿನ ಮೀಸಲಾತಿ ನೀತಿ ಅನುಷ್ಠಾನದ ಯಶಸ್ಸನ್ನು ಉದಾಹರಿಸಿಯೇ ಯುರೋಪ್, ಆಫ್ರಿಕಾ ಖಂಡದ ಹಲವು ದೇಶಗಳು ತಮ್ಮ ಶೋಷಿತ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿವೆ. ಹೌದು, ಇಡೀ ಜಗತ್ತು ಮೈಸೂರು ಸಂಸ್ಥಾನದ ಸಾಮಾಜಿಕ ನ್ಯಾಯದ ದೃಷ್ಟಿಕೋನವನ್ನು ಕೊಂಡಾಡುತ್ತಿದೆ.
ಮೀಸಲಾತಿ ನೀತಿಯ ಇತ್ತೀಚೆಗೆ ಪರ ಮತ್ತು ವಿರುದ್ಧ ದನಿಗಳು ಏಳುತ್ತಿವೆ. ಎರಡು ವರ್ಷಗಳ ಹಿಂದೆ ದೆಹಲಿಯ ಜಂತರ್-ಮಂಥರ್‌ನಲ್ಲಿ ಸಂವಿಧಾನದ ಮೀಸಲಾತಿ ಕರಡನ್ನೇ ಸುಟ್ಟ ತಿಳಿಗೇಡಿತನದ ಘಟನೆ ನಡೆದಿದೆ. ಇದಕ್ಕೆ ಪ್ರತೀಕಾರವಾಗಿ ಮೈಸೂರಿನಲ್ಲಿ ಯುವಕನೊಬ್ಬ ಭಗವದ್ಗೀತೆಯನ್ನೇ ಸುಡುವ ಮತಿಗೇಡಿತನ ತೋರಿಸಿದ್ದ. ಸಾಮಾಜಿಕ ನ್ಯಾಯದ ತಕ್ಕಡಿಯಂತಿರುವ ಮೀಸಲಾತಿ ಬಗ್ಗೆ ಪರವಾಗಿರುವವರಿಗಾಗಲಿ- ವಿರೋಧಿಸುವವರಿಗಾಗಲಿ ಪೂರ್ಣ ಪ್ರಮಾಣದ ಅರಿವಿಲ್ಲ. ಕೆ.ಎಚ್.ರಾಮಯ್ಯನವರ ಮೀಸಲಾತಿ ಎಂದರೆ ‘ಕೆಳ ಬಿದ್ದ ಅಶಕ್ತರನ್ನು ಮೇಲೆತ್ತುವುದು ಮನುಷ್ಯತನ. ಕೆಳ ಬಿದ್ದವರನ್ನು ಮೇಲೆತ್ತಲು ಸಹಾಯ ಮಾಡದೆ ಇರುವುದು ರಾಕ್ಷಸತನ’ ಅನ್ನುವ ಸರಳ ನೀತಿ. ಅವರೇ ಒಂದು ಕಡೆ, ಮೇಲೆದ್ದವರು ಮತ್ತೊಬ್ಬ ತುಳಿತಕ್ಕೊಳಗಾದವರನ್ನು ಮೇಲೆತ್ತಿ ಮುನ್ನಡೆಯಬೇಕು. ಹೀಗೆ ಅಶಕ್ತರನ್ನು ಮೇಲೆತ್ತುವ ಕೆಲಸ ನಿರಂತರವಾಗಿ ಸಶಕ್ತರು ಮಾಡುತ್ತಲೇ ಇರಬೇಕು. ಇದಕ್ಕೆ ಯಾವುದೇ ಜಾತಿ- ಧರ್ಮದ ಲೇಪನ ಬೇಡ ಎಂದಿದ್ದರು. ಅವರ ದೃಷ್ಟಿಯಲ್ಲಿ ಮೀಸಲಾತಿ ಎಂಬುದು ಶೋಷಣೆ ನಿವಾರಣಾ ಸಾಧನ. ಆದರೆ ಅದು ವಂಶ ಪಾರಂಪರ್ಯದ ಸವಲತ್ತಲ್ಲ. ಒಮ್ಮೆ ಮೀಸಲಾತಿ ಸೌಲಭ್ಯ ಪಡೆದು ಮುಂದುವರೆದವರ ಸಂತತಿಗೆ ಮತ್ತೊಮ್ಮೆ ಮೀಸಲಾತಿ ಸೌಲಭ್ಯ ಕೊಡಬಾರದು.
ಈ ಸೌಲಭ್ಯ ಮತ್ತೊಬ್ಬ ಶೋಷಿತ ವಂಶಸ್ಥರಿಗೆ ಮೀಸಲಿರಬೇಕು. ಹೀಗಾಗದಿದ್ದರೆ, ಮೀಸಲಾತಿ ಎಂಬ ಮಾನವತೆಯ ಸಹಾಯಹಸ್ತ ಎಲ್ಲಾ ಶೋಷಿತರಿಗೂ ಸಿಗುವುದಿಲ್ಲ. ಈ ಅಂಶವನ್ನು ಮೀಸಲಾತಿ ವಿರೋಧಿಸುತ್ತಿದ್ದ ದಿವಾನ್ ವಿಶ್ವೇಶ್ವರಯ್ಯನವರ ಮುಂದೆ ಸ್ಪಷ್ಟಪಡಿಸಿದ್ದರು.
ಒಕ್ಕಲಿಗರ ಸಂಘ ಸಂಸ್ಥಾಪಕರೂ ಆದ ಕೆ.ಎಚ್.ರಾಮಯ್ಯನವರು ಬೆಂಗಳೂರಿನಲ್ಲಿದ್ದ ಬ್ರಿಟಿಷ್ ರೆಸಿಡೆಂಟ್ ಫ್ರೇಜರ್ ಅವರಿಗೆ, ಕಲ್ಕತ್ತಾದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ ಅವರಿಗೆ ಕೊಡಗಿನ ಸಬ್ ಜಡ್ಜ್ ಆಗಿದ್ದ ಎಚ್.ಚನ್ನಯ್ಯ ಮತ್ತಿತರ ಮುಖಂಡರ ಮೂಲಕ ಪತ್ರ ಬರೆಸುತ್ತಿದ್ದರು. ಬ್ರಿಟಿಷ್ ಅಧಿಕಾರಿ ಫ್ರೇಜರ್, ಮೈಸೂರು ಮಹಾರಾಜರಿಗೆ ಈ ಬಗ್ಗೆ ಪರಿಶೀಲಿಸುವಂತೆ ಹಿಂಬರಹದ ಪತ್ರ ಬರೆಯುತ್ತಿದ್ದರು. ಬ್ರಿಟಿಷ್ ರೆಸಿಡೆಂಟರ ಪತ್ರಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್, ಅದನ್ನು ದಿವಾನ್ ವಿಶ್ವೇಶ್ವರಯ್ಯನವರ ಗಮನಕ್ಕೆ ತರುತ್ತಿದ್ದರು. ಇವೆಲ್ಲ ಪತ್ರ ವ್ಯವಹಾರಗಳ ಹಿಂದೆ ಹಿಂದುಳಿದ ವರ್ಗಗಳ ಜಾಗೃತಿ ಮಹಾಂದೋಲನದ ವಿಶೇಷಾಧಿಕಾರಿ ರಾಮಯ್ಯನವರ ಕೈವಾಡವಿದೆ ಎಂಬುದು ವಿಶ್ವೇಶ್ವರಯ್ಯನವರಿಗೆ ತಿಳಿದಿತ್ತು.ಹೀಗಾಗಿ ರಾಮಯ್ಯ ಅವರನ್ನು ಅಧಿಕಾರದಿಂದ ದೂರ ಇಡಬೇಕೆಂದು ನಾಲ್ಕು ವರ್ಷದ ಬಾರ್-ಅಟ್-ಲಾ ಪರೀಕ್ಷೆ ಮಾಡಲು ಲಂಡನ್ನಿಗೆ ಕಳುಹಿಸಿದರು.
ದೆಹಲಿಯ ಐತಿಹಾಸಿಕ ದರ್ಬಾರ್ ಹಾಲ್‍ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ (1911) ಉತ್ತಮ ಸಾರ್ವಜನಿಕ ಸೇವೆಗಾಗಿ ಬ್ರಿಟಿಷ್ ದೊರೆ 5ನೇ ಜಾರ್ಜ್‌ರಿಂದ ‘ರಾವ್ ಸಾಹೇಬ್’ ಎಂಬ ಪ್ರಶಸ್ತಿ ಪಡೆದಿದ್ದ ಕೊಡಗಿನ ಸಬ್ ಜಡ್ಜ್ ಚನ್ನಯ್ಯನವರು ನಿವೃತ್ತರಾದ ನಂತರ ಬೆಂಗಳೂರಿಗೆ ಬಂದು ನೆಲೆಸಿದರು. ಕೊಡಗಿನ ಸಬ್ ಜಡ್ಜ್ ಹುದ್ದೆಯಿಂದ ನಿವೃತ್ತರಾದ ಚನ್ನಯ್ಯನವರು ರಾಮಯ್ಯ ಅವರ ಸಲಹೆಯಂತೆ ನೇರವಾಗಿ ಹಿಂದುಳಿದ ವರ್ಗಗಳ ಚಳುವಳಿಗೆ ಧುಮುಕಿದರು. ಇದಕ್ಕಾಗಿ 1916ರ ಡಿಸೆಂಬರ್ 20ರಂದು ‘ಪ್ರಜಾಮಿತ್ರ ಮಂಡಳಿ’ ಎಂಬ ರಾಜಕೀಯ ಪಕ್ಷ ಕಟ್ಟಿದರು. ಆಗಿನ್ನೂ ಕಾಂಗ್ರೆಸ್ ಪಕ್ಷ ಮೈಸೂರು ರಾಜ್ಯದಲ್ಲಿ ಕಾಲಿಟ್ಟಿರಲಿಲ್ಲ. ‘ಪ್ರಜಾಮಿತ್ರ ಮಂಡಳಿ’ ಪಕ್ಷಕ್ಕೆ ಚನ್ನಯ್ಯ ಸಂಸ್ಥಾಪಕ ಅಧ್ಯಕ್ಷರಾದರೆ, ಕಾರ್ಯದರ್ಶಿಯಾಗಿ ಧರ್ಮಪ್ರಕಾಶ ಡಿ.ಬನುಮಯ್ಯ ನೇಮಕವಾದರು.
ಪ್ರಜಾಮಿತ್ರ ಮಂಡಳಿ ಪಕ್ಷ ಬೆಂಗಳೂರಿನಲ್ಲಿ 1917ರ ಫೆಬ್ರುವರಿಯಲ್ಲಿ ಮೊದಲ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಂಡಿತು. ಮೈಸೂರು ಸಂಸ್ಥಾನದಾದ್ಯಂತ ಮೀಸಲಾತಿ ಚಳುವಳಿ ತೀವ್ರ ಸ್ವರೂಪ ಪಡೆಯುವಂತೆ ಪ್ರಜಾಮಿತ್ರ ಮಂಡಳಿ ಧರಣಿ-ಸತ್ಯಾಗ್ರಹ ನಡೆಸುತ್ತಿತ್ತು. ನಿತ್ಯ ಅಲ್ಲಲ್ಲಿ ಸಭೆ ಸಮಾರಂಭಗಳಾಗುತ್ತಿದ್ದವು. ರಾಮಯ್ಯನವರು ಬ್ಯಾರಿಸ್ಟರ್ ಪದವಿ ಪಡೆದು ಲಂಡನ್‍ನಿಂದ ಹಿಂದಿರುಗಿ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾಗುವ ಹೊತ್ತಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪರವಾದ ಹೋರಾಟ ಪರಾಕಾಷ್ಟೆ ಮುಟ್ಟಿತ್ತು.
ಪ್ರಜಾ ಮಿತ್ರ ಮಂಡಳಿಯ ನಿರಂತರ ಹೋರಾಟದ ಫಲ ಪಕ್ವವಾಗಿ 1917ರ ಮೇ 8ರಂದು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ (ಆದೇಶ ಸಂಖ್ಯೆ:89-10-90 ಈಡಿಎನ್ 90-1-1) ಅವರು ಹಿಂದುಳಿದ ವರ್ಗಗಳ ಸಮಿತಿ ರಚಿಸುವ ಆದೇಶ ಹೊರಡಿಸಿದರು. ಬೆಂಗಳೂರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ಜಸ್ಟಿಸ್ ಡಾ. ಲೆಸ್ಲಿ ಸಿ. ಮಿಲ್ಲರ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಒಕ್ಕಲಿಗರಾದ ಪ್ರಜಾಮಿತ್ರ ಮಂಡಳಿ ಅಧ್ಯಕ್ಷ ‘ರಾವ್ ಸಾಹೇಬ್’
ಎಚ್. ಚನ್ನಯ್ಯ, ಬ್ರಾಹ್ಮಣ ಜನಾಂಗದ ‘ರಾಜಭೂಷಣ’, ‘ದಿವಾನ್ ಬಹದ್ದೂರ್’ ಸಿ.ಶ್ರೀಕಂಠೇಶ್ವರ ಅಯ್ಯರ್, ‘ರಾವ್ ಬಹದ್ದೂರ್’ ಎಂ.ಸಿ.ರಂಗ ಅಯ್ಯಂಗಾರ್, ಲಿಂಗಾಯತರ ಪರವಾಗಿ ಎಂ.ಬಸವಯ್ಯ, ಕೊಡಗಿನ ಎ.ಮುತ್ತಣ್ಣ ಮತ್ತು ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಗುಲಾಮ್ ಅಹ್ಮದ್ ಕಲಾಮಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. 1918ರ ಆಗಸ್ಟ್ 23ರಂದು ಈ ಸಮಿತಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ಎರಡು ತಿಂಗಳ ಒಳಗೆ ವರದಿ ನೀಡಬೇಕೆಂದು ಸಮಿತಿಗೆ ಸೂಚಿಸಲಾಗಿತ್ತು. ಆದರೆ ವರದಿ ಕುರಿತು ಚರ್ಚೆಗೆ ಅವಕಾಶ ಕೊಟ್ಟಿದ್ದರಿಂದ ಇದರ ಅನುಷ್ಠಾನಕ್ಕೆ ಒಂದು ವರ್ಷದಷ್ಟು ಕಾಲಾವಕಾಶ ಬೇಕಾಯಿತು.
ಈ ಮಧ್ಯೆ ದಿವಾನ್ ವಿಶ್ವೇಶ್ವರಯ್ಯನವರು 19 ಮಂದಿ ಅಸಿಸ್ಟಂಟ್ ಕಮಿಷನರ್‌ಗಳ ನೇಮಕಾತಿಯಲ್ಲಿ ಎಲ್ಲಾ ಹುದ್ದೆಗಳನ್ನು ಬ್ರಾಹ್ಮಣ ಅಭ್ಯರ್ಥಿಗಳಿಗೆ ನೀಡಿದಾಗ ಪ್ರಜಾಮಿತ್ರ ಮಂಡಳಿ ಪಕ್ಷ ಈ ವಿಷಯವನ್ನು ಬ್ರಿಟಿಷ್ ಅಧಿಕಾರಿಗಳ ಗಮನಕ್ಕೆ ತಂದು ಮಹಾರಾಜರ ಮೇಲೆ ಒತ್ತಡ ಹಾಕಿಸಿತು. ಅಂತಿಮವಾಗಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಸರ್ಕಾರಿ ಉದ್ಯೋಗದಲ್ಲಿ 10 ಹುದ್ದೆಯನ್ನಾದರೂ ಹಿಂದುಳಿದ ವರ್ಗದವರಿಗೆ ನೀಡುವಂತೆ ಸೂಚಿಸಿದರು. ಇದಕ್ಕೆ ದಿವಾನ್ ವಿಶ್ವೇಶ್ವರಯ್ಯನವರು ವಿರೋಧಿಸಿ, ಹಿಂದುಳಿದ ವರ್ಗದವರನ್ನು ವಿಶೇಷವಾಗಿ ಓಲೈಸುತ್ತಿದ್ದೀರಾ ಎಂದು ಕೇಳಿದರು. ಅದಕ್ಕೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮಾರ್ಮಿಕವಾಗಿ ‘ಹಿಂದುಳಿದ ವರ್ಗದ ಜನ ಸಹ ನನ್ನ ಪ್ರಜೆಗಳೇ. ಅವರನ್ನು ನಾನು ಕಡೆಗಣಿಸುವುದಿಲ್ಲ’ ಎಂದು ಖಡಕ್ ಆಗಿ ಉತ್ತರಿಸಿದರು.
ಮಹಾರಾಜರು ತಮ್ಮ ಆದೇಶ ಪಾಲನೆಗೆ ಬದ್ಧರಾಗುವಂತೆ ದಿವಾನರಿಗೆ ಅಂತಿಮ ಆದೇಶ ನೀಡಿದಾಗ, ಅಸಮಾಧಾನಗೊಂಡ ವಿಶ್ವೇಶ್ವರಯ್ಯನವರು 1918ರ ಡಿಸೆಂಬರ್ 8ರಂದು ದಿವಾನ್ ಪದವಿಗೆ ರಾಜೀನಾಮೆ ನೀಡಿ ಹೊರಹೋದರು. ಮುಂದೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ತಂಗಿ ಜಯಲಕ್ಷ್ಮಮ್ಮಣ್ಣಿಯವರ ಪತಿ ಕಾಂತರಾಜ ಅರಸ್ ದಿವಾನರಾದರು.
ಮಿಲ್ಲರ್ ಸಮಿತಿಯು ಎರಡು ಹಾಗೂ ಮೂರನೇ ಸುತ್ತಿನ ಸಭೆಗಳನ್ನು ನಡೆಸಿ ಸದಸ್ಯರ ಅಂತಿಮ ಅಭಿಪ್ರಾಯವನ್ನು ಕೇಳಿತು. ಸಮಿತಿಯಲ್ಲಿದ್ದ ಬ್ರಾಹ್ಮಣ ಸದಸ್ಯರಾದ ಎಂ.ಸಿ.ರಂಗ ಅಯ್ಯಂಗಾರ್ ಮತ್ತು ಸಿ.ಶ್ರೀಕಂಠೇಶ್ವರ ಅಯ್ಯರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸುದೀರ್ಘ ಪತ್ರ ಬರೆದಿದ್ದರು. ಇದರಲ್ಲಿ ಉದ್ಯೋಗ ಮೀಸಲಾತಿ ನೀಡುವುದನ್ನು ಅವೈಜ್ಞಾನಿಕ ಎಂದು ವಿರೋಧಿಸಿದ್ದರು. ಈ ಅಭಿಪ್ರಾಯಕ್ಕೆ ಕೊಡಗಿನ ಮುತ್ತಣ್ಣ ಸಹ ಸಹಮತ ಸೂಚಿಸಿದ್ದರು.
ವಿ.ಪಿ.ಮಾಧವರಾವ್ ಅವರು ದಿವಾನರಾಗಿದ್ದ ಅವಧಿಯಲ್ಲಿ ಬ್ರಾಹ್ಮಣರಿಗೆ ಪೋಲೀಸ್ ಇಲಾಖೆಯ ಇನ್‍ಸ್ಪೆಕ್ಟರ್, ಸಬ್ ಇನ್‍ಸ್ಪೆಕ್ಟರ್ ಮತ್ತು ಹೆಡ್ ಕಾನ್‍ಸ್ಟೇಬಲ್ ನೇಮಕಾತಿಯಲ್ಲಿ ಬ್ರಾಹ್ಮಣ ಜನಾಂಗಕ್ಕೆ ಮೀಸಲಾತಿ ಆದೇಶ (ಸಂಖ್ಯೆ:2138/21–1–1895) ಆಗಿತ್ತು. 1918ರಲ್ಲಿ ಪೋಲೀಸ್ ಇಲಾಖೆಗೆ ನೇಮಕವಾದ 361 ಉದ್ಯೋಗಿಗಳಲ್ಲಿ 191 ಮಂದಿ ಬ್ರಾಹ್ಮಣರು ನೇಮಕವಾಗಿದ್ದರು. ಹೀಗಾಗಿ ಈ ಮೂವರ ವಾದವನ್ನು ಬದಿಗಿಕ್ಕಿದ ಸಮಿತಿ ಅಧ್ಯಕ್ಷ ಜಸ್ಟಿಸ್ ಮಿಲ್ಲರ್, 1911ರಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಮಹಾಂದೋಲನದ ವಿಶೇಷಾಧಿಕಾರಿಯಾಗಿ ಕೆ.ಎಚ್.ರಾಮಯ್ಯ ಪ್ರಕಟಿಸಿದ ಜನಗಣತಿ, ಜಾತಿವಾರು ಇಂಗ್ಲಿಷ್ ಸಾಕ್ಷರತಾ ಗಣತಿ, ಸರ್ಕಾರಿ ಉದ್ಯೋಗ ಗಣತಿ ಮತ್ತು ಸಂಬಳದ ಗಣತಿಯನ್ನು ಅನುಸರಿಸಿ, ತಮ್ಮ ವರದಿಯಲ್ಲಿ ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಅವರ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡುವ ವಿವಿಧ ಸವಲತ್ತುಗಳನ್ನು ನೀಡಬೇಕೆಂದು ಶಿಫಾರಸು ಮಾಡಿತ್ತು. ಹಾಗೆಯೇ, ಸರ್ಕಾರಿ ಉದ್ಯೋಗದಲ್ಲಿ ಶೇ 50ರಷ್ಟು ಮೀಸಲಾತಿ ನೀಡುವಂತೆ ಮತ್ತು ಹಿಂದುಳಿದ ವರ್ಗಗಳ ಸುಧಾರಣೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಳ್ಳುವಂತೆ ಸೂಚಿಸಿತು.
ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮತ್ತು ದಿವಾನ್ ಕಾಂತರಾಜ ಅರಸ್ ಸತತವಾಗಿ ಚರ್ಚೆ ನಡೆಸಿದ ನಂತರ, ಅಂತಿಮವಾಗಿ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 50ರಷ್ಟು ಮೀಸಲಾತಿ ನೀಡುವ ವರದಿಯನ್ನು ಶಾಸನ ಬದ್ಧಗೊಳಿಸುವ ಆದೇಶ ಹೊರಡಿಸಿದರು. ಆ ಮೂಲಕ ದೇಶದಲ್ಲೇ ಮೊದಲ ಬಾರಿ ಮೀಸಲಾತಿ ಪದ್ಧತಿ ಜಾರಿಗೊಳಿಸಿದ ರಾಜ್ಯವೆಂಬ ಹೆಗ್ಗಳಿಕೆಗೆ ಮೈಸೂರು ಸಂಸ್ಥಾನ ಪಾತ್ರವಾಯಿತು. ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ್ದು, ದೇಶದಲ್ಲಿ ದೊಡ್ಡ ಚರ್ಚೆಯಾಗಿ ಮಹಾತ್ಮ ಗಾಂಧೀಜಿ, ಡಾ.ಅಂಬೇಡ್ಕರ್ ಸಹಿತ ಎಲ್ಲಾ ರಾಜಕೀಯ ನಾಯಕರು ಮಹಾರಾಜರ ಸಾಮಾಜಿಕ ನೀತಿಯನ್ನು ಪ್ರಶಂಸಿಸಿದರು. ಅಂತಹ ಐತಿಹಾಸಿಕ ನಿರ್ಧಾರಕ್ಕೆ ಈಗ ನೂರು ತುಂಬಿರುವಾಗ ಏಕೆ ಈ ಮೌನ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.