ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಪ್ರವೇಶಕ್ಕಿರುವ ಅರ್ಹತಾ ಪರೀಕ್ಷೆ, ಪರೀಕ್ಷಾ ಸಮಯ ಮತ್ತು ಶುಲ್ಕ ಕುರಿತ ವಿವರ ಇಲ್ಲಿದೆ.
ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಕುರಿತು ಕಳೆದ ವಾರ ಪ್ರಕಟವಾದ ಲೇಖನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ಓದುಗರು, ಕೋರ್ಸ್ ಆಯ್ಕೆ, ಕಲಿಕೆಯ ವಿಧಾನ ಸೇರಿದಂತೆ ಕೆಲವು ವಿಷಯಗಳ ಕುರಿತು ಮಾಹಿತಿ ಕೇಳಿದ್ದಾರೆ. ಅಂಥ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಭಾರತದಲ್ಲಿ ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ವೈವಿಧ್ಯಮಯ ಸ್ವರೂಪಗಳಲ್ಲಿ ಲಭ್ಯವಿದೆ. ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ (ಪಿ.ಜಿ ಕೋರ್ಸ್), ವೃತ್ತಿಪರ ಕೋರ್ಸ್ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳು ಲಭ್ಯವಿವೆ.
ಅಭ್ಯರ್ಥಿಗಳು ಪೂರ್ಣ ಅವಧಿ ಅಥವಾ ದೂರಶಿಕ್ಷಣದ ಮೂಲಕ ‘ರಿಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್’ಗಳನ್ನು ಕಲಿಯಲು ಅವಕಾಶವಿದೆ. ಈ ಕೋರ್ಸ್ ಪ್ರವೇಶಕ್ಕೆ ಕನಿಷ್ಠ 10+2 ಅಥವಾ ತತ್ಸಮಾನ ವಿದ್ಯಾರ್ಹತೆ ಇರಬೇಕು. ಜೊತೆಗೆ ಕೆಲವು ಪ್ರಸಿದ್ಧ ಕಾಲೇಜು ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳು ಪ್ರವೇಶಕ್ಕಾಗಿ ಅರ್ಹತಾ ಪರೀಕ್ಷೆಯನ್ನು ಆಯೋಜಿಸುತ್ತವೆ.
ಪ್ರವೇಶ ಪರೀಕ್ಷೆ: ಈ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವಂತಹ ಸಿಎಟಿ(CAT), ಎಕ್ಸ್‌ಎಟಿ (XAT), ಎಂಎಟಿ(MAT), ಸಿಎಂಎಟಿ(CMAT)ನಂತಹ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದಲ್ಲದೇ, ಸರ್ಕಾರದ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನೂ ಸಹ ನಡೆಸುತ್ತವೆ. ಪ್ರವೇಶ ಪರೀಕ್ಷೆಗಳ ನಂತರ ಕೆಲವು ಕಾಲೇಜುಗಳು ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ (ಇದು ವಿಶ್ವವಿದ್ಯಾಲಯದ ಅಗತ್ಯವನ್ನು ಅವಲಂಬಿಸಿರುತ್ತದೆ).
ಪರೀಕ್ಷಾ ವಿಧಾನ: ಪರೀಕ್ಷಾ ವಿಧಾನವು ಪರೀಕ್ಷೆಯ ವಿಧಕ್ಕನುಗುಣವಾಗಿ ಬೇರೆ ಬೇರೆಯಾಗಿರುತ್ತದೆ. ಈ ಎಲ್ಲಾ ಪ್ರವೇಶ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿ ನಡೆಯುತ್ತವೆ. ಕೆಲವು ಆನ್‌ಲೈನ್ ಮತ್ತು ಕೆಲವು ಆಫ್‌ಲೈನ್ ಮೂಲಕ ನಡೆಯುತ್ತವೆ. ಪರೀಕ್ಷೆಯು 100 ರಿಂದ 150 ಅಂಕಗಳಿಗೆ ನಿಗದಿಯಾಗಿದ್ದು, 120 ರಿಂದ 150 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯುತ್ತದೆ.
ಪ್ರವೇಶ ಪರೀಕ್ಷಾ ಶುಲ್ಕ: ಪ್ರವೇಶ ಪರೀಕ್ಷೆಗಳಿಗೆ ₹1500 ರಿಂದ ₹2000 ದವರೆಗೆ ಶುಲ್ಕ ಇರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ.
ಪ್ರವೇಶ ಪರೀಕ್ಷಾ ಸಮಯ: ‘ಈ ಕೋರ್ಸ್‌ಗೆ ಪ್ರವೇಶ ಪರೀಕ್ಷೆಗಳು ಸಾಮಾನ್ಯವಾಗಿ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ನಡೆಯುತ್ತವೆ. ಕೆಲವು ಪ್ರವೇಶ ಪರೀಕ್ಷೆಗಳು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತವೆ. ಬಹುತೇಕ ಎಲ್ಲಾ ವಿಧದ ಪ್ರವೇಶ ಪರೀಕ್ಷೆಗಳು ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತವೆ.
ಕೋರ್ಸ್ ಶುಲ್ಕ: ಕೋರ್ಸ್ ಅನುಗುಣವಾಗಿ ಶುಲ್ಕದಲ್ಲಿ ವ್ಯತ್ಯಾಸ ಇರುತ್ತದೆ. ವಾರ್ಷಿಕವಾಗಿ ₹10ಸಾವಿರದಿಂದ ₹ 2ಲಕ್ಷಗಳವರೆಗೆ ಕೋರ್ಸ್ ಶುಲ್ಕ ಇರುತ್ತದೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ಅನುಗುಣವಾಗಿ ಕೋರ್ಸ್ ಶುಲ್ಕದಲ್ಲಿ ವ್ಯತ್ಯಾಸ ಇರುತ್ತದೆ.
ಬೆಂಗಳೂರಿನ ಐಐಎಂಬಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ರಿಟೇಲ್ ಮ್ಯಾನೇಜ್‌ಮೆಂಟ್ ಕುರಿತು ಎಲ್ಲ ರೀತಿಯ ಕೋರ್ಸ್‌ಗಳು ಲಭ್ಯವಿವೆ. ಹೆಚ್ಚಿನ ಮಾಹಿತಿಗೆhttps://onlinecourses.swayam2.ac.in ಈ ಲಿಂಕ್ ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.