ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ(ಆರ್‌ಆರ್‌ಬಿ) ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ (ದೇಶದಲ್ಲಿ ಒಟ್ಟು 8602 ಹುದ್ದೆಗಳು. ಅದರಲ್ಲಿ ಕರ್ನಾಟಕದ ಎರಡು ಬ್ಯಾಂಕ್‌ಗಳಲ್ಲಿ 806 ಹುದ್ದೆಗಳು) ಅರ್ಜಿ ಆಹ್ವಾನ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಕಳೆದ ಎರಡು ಸಂಚಿಕೆಗಳಲ್ಲಿ ವಿವರವಾಗಿ ಪ್ರಕಟಿಸಲಾಗಿತ್ತು. ಈ ಲೇಖನಗಳಲ್ಲಿ ಆಯ್ಕೆ ಪ್ರಕ್ರಿಯೆ ಹಂತಗಳು, ಪರೀಕ್ಷೆಗಳ ಸ್ವರೂಪ, ಅಂಕಗಳು, ಪರೀಕ್ಷೆಗೆ ನಿಗದಿಪಡಿಸಿದ ಸಮಯ ಕುರಿತು ಮಾಹಿತಿ ನೀಡಲಾಗಿತ್ತು.
ಈ ಸಂಚಿಕೆಯಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ. ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯಕ್ರಮ ಹಾಗೂ ಆ ಪಠ್ಯಗಳನ್ನು ಹೇಗೆ ಓದಬೇಕು – ಈ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.
ಪರೀಕ್ಷಾ ತಯಾರಿ ಹೇಗಿರಬೇಕು ?
ಅಭ್ಯರ್ಥಿಯು ಮೊದಲಿಗೆ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯಕ್ರಮ ಮತ್ತು ಮಾದರಿಯ ಕುರಿತು ಅರಿತಿರಬೇಕು. ಪರಿಣತರ /ತಜ್ಞರ ಸಹಾಯದೊಂದಿಗೆ ಅಧ್ಯಯನ ಸಾಮಗ್ರಿ /ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಿ. ದಿನಕ್ಕೆ ಮೂರ್ನಾಲ್ಕು ಗಂಟೆಗಳ ಅಭ್ಯಾಸ ಕಡ್ಡಾಯ. ಹೆಚ್ಚೆಚ್ಚು ಅಣಕು ಪರೀಕ್ಷೆಗಳನ್ನು ಎದುರಿಸುವುದು ಕಡ್ಡಾಯವಾಗಲಿ.
ಕಂಪ್ಯೂಟರ್‌ನಲ್ಲಿ ಎಂ.ಎಸ್ ಆಫೀಸ್ ತಂತ್ರಾಂಶ ಬಳಕೆ ಹಾಗೂ ಶಾರ್ಟ್‌ಕಟ್‌ಗಳು, ಟೈಪಿಂಗ್ ಮತ್ತಿತರ ಕಂಪ್ಯೂಟರ್ ಸಂಬಂಧಿತ ಮೂಲಭೂತ ಜ್ಞಾನವನ್ನು ಹೊಂದಿರುವುದು ಅಗತ್ಯವಾಗಿದೆ. ಈಗೊಮ್ಮೆ ಅವುಗಳನ್ನು ಓದಿ ಪುನರಾವರ್ತಿಸಲು ಸಮಯ ಮಿಸಲಿಡಿ.
ತಾರ್ಕಿಕತೆ (ಲಾಜಿಕಲ್ ರೀಸನಿಂಗ್), ದತ್ತಾಂಶ ವಿಶ್ಲೇಷಣೆ ಮತ್ತು ವ್ಯಾಖ್ಯಾನ (ಡೇಟಾ ಅನಾಲಿಸಿಸ್-ಇಂಟರ್ ಪ್ರಿಟೇಶನ್) ವಿಷಯಗಳನ್ನು ಹೊಸದಾಗಿ ಕಲಿಯುತ್ತಿರುವುದರಿಂದ ಆರಂಭದಲ್ಲಿ ಕಷ್ಟವೆನಿಸಬಹುದು. ಈ ಮೂರು ವಿಭಾಗಗಳಲ್ಲಿ ಕೇಳುವ ಹೆಚ್ಚಿನ ಪ್ರಶ್ನೆಗಳು ಕ್ಲಿಷ್ಟವಾಗಿರುತ್ತವೆ. ಅಭ್ಯರ್ಥಿಗಳು ಸರಳ ಸೂತ್ರಗಳು ಮತ್ತು ತಂತ್ರಗಳನ್ನು ಅನ್ವಯಿಸುವ ಮೂಲಕ ಪರಿಹರಿಸಬೇಕು.
ತಾರ್ಕಿಕತೆ (ಲಾಜಿಕಲ್ ರೀಸನಿಂಗ್): ತಾರ್ಕಿಕ ಪರೀಕ್ಷೆಯಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ಮೊದಲನೆ ಯದು ಶಾಬ್ದಿಕ (ವರ್ಬಲ್) ಇನ್ನೊಂದು ಅಶಾಬ್ದಿಕ (ನಾನ್ ವರ್ಬಲ್).
ವರ್ಬಲ್ ರೀಸನಿಂಗ್ ಪ್ರಶ್ನೆಗಳಲ್ಲಿ ಪರಿಕಲ್ಪನೆಗಳು ಮತ್ತು ಸಮಸ್ಯೆಗಳನ್ನು ಪದಗಳಲ್ಲಿ ಪ್ರಶ್ನೆಗಳ ರೂಪದಲ್ಲಿ ರುತ್ತವೆ. ಪ್ರಶ್ನೆ ಪತ್ರಿಕೆಯಲ್ಲಿರುವ ಪಠ್ಯ ಅಥವಾ ಪ್ಯಾರಾಗ್ರಾಫ್ ಪ್ರಶ್ನೆಗಳನ್ನು ಅಭ್ಯರ್ಥಿಗಳು ಓದಿ, ಅರ್ಥೈಸಿ ಕೊಂಡು, ಆ ಪ್ರಶ್ನೆಗಳಿಗೆ ಉತ್ತರವಾಗಿ ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿಕೊಳ್ಳಬೇಕು.
ನಾನ್ ವರ್ಬಲ್ ರೀಸನಿಂಗ್ ಪ್ರಶ್ನೆಗಳಲ್ಲಿ, ಪರಿಕಲ್ಪನೆಗಳು ಮತ್ತು ಸಮಸ್ಯೆಗಳನ್ನು ಅಂಕಿ ಅಂಶಗಳು, ಚಿತ್ರಗಳು ಅಥವಾ ರೇಖಾಚಿತ್ರಗಳ ರೂಪದಲ್ಲಿ ನೀಡಲಾಗುತ್ತದೆ. ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸುವ ಮೊದಲು ಅಭ್ಯರ್ಥಿಗಳು ಅವುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.
ವರ್ಬಲ್ ರೀಸನಿಂಗ್‌ನಲ್ಲಿರುವ ಪಠ್ಯಗಳು: ಸಂಖ್ಯಾ ಸರಣಿ (Number Series), ಅಕ್ಷರ ಸರಣಿ(Letter Series), ಸಾದೃಶ್ಯಗಳು(Analogies), ಕಾರಣ ಮತ್ತು ಪರಿಣಾಮ (Cause & Effect), ಮೌಖಿಕ ವರ್ಗೀಕರಣ(Verbal Classification) ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಅಧ್ಯಾಯಗಳಿವೆ.
ನಾನ್ ವರ್ಬಲ್ ರೀಸನಿಂಗ್: ಚಿತ್ರ ಸರಣಿ (Image Series), ಆಕಾರಗಳ ನಿರ್ಮಾಣ(Construction of Shapes), ವರ್ಗೀಕರಣ(Classification), ಚಿತ್ರ ಸಾದೃಶ್ಯಗಳು(Picture Analogies) ನಿಯಮ ಪತ್ತೆ(Rule Detection)– ಇಂಥ ವಿಷಯಗಳಿರುತ್ತವೆ.
ಕೆಲವೊಂದು ಪ್ರಶ್ನೆಗಳ ಉದಾಹರಣೆ:
1) ಸಂಖ್ಯಾ ಸರಣಿ:
1)ಈ ಸಂಖ್ಯಾ ಸರಣಿಯಲ್ಲಿ ಖಾಲಿ ಸ್ಥಾನಕ್ಕೆ ಬರಬೇಕಾಗಿರುವ ಸಂಖ್ಯೆ ಯಾವುದು?,
48, 24, 12, ......?
ಆಯ್ಕೆಗಳು :
a) 8 b) 6 c) 4 d) 2
→⇒ಉತ್ತರ: B
ವಿವರಣೆ: ಇದು ಸರಳವಾದ ಸರಣಿ. ಇದರಲ್ಲಿ ಪ್ರತಿ ಸಂಖ್ಯೆಯು ಹಿಂದಿನ ಸಂಖ್ಯೆಯ ಅರ್ಧದಷ್ಟು ಇದೆ. ಮುಂದಿನ ಸಂಖ್ಯೆಯನ್ನು ಕಂಡು ಹಿಡಿಯಲು ಪ್ರತಿ ಸಂಖ್ಯೆಯನ್ನು 2 ರಿಂದ ಭಾಗಿಸಬೇಕಿದೆ.
48 ಅನ್ನು 2 ರಿಂದ ಭಾಗಿಸಿದಾಗ, 24 ನ್ನು 24 ನ್ನು 2 ರಿಂದ ಭಾಗಿಸಿದಾಗ, 12 ಅನ್ನು ಪಡೆಯುತ್ತೇವೆ. ಆದ್ದರಿಂದ, 12 ನ್ನು 2 ರಿಂದ ಭಾಗಿಸಿದಾಗ, ನಾವು 6 ಅನ್ನು ಪಡೆಯುತ್ತೇವೆ ಅದ್ದರಿಂದ ಸರಿ ಉತ್ತರದ ಆಯ್ಕೆ B.
2) ಅಕ್ಷರ ಸರಣಿ
1) RQP, ONM, ……, IHG, FED, ಕಬಿಟ್ಟ ಸ್ಥಳದಲ್ಲಿ ಇರಬೇಕಾದ ಅಕ್ಷರಗಳನ್ನು ಹುಡುಕಿ.?
a) CDE b) LKI c) LKJ d) BAC
⇒ಉತ್ತರ: C
ವಿವರಣೆ: ಇಂಗ್ಲಿಷ್ ವರ್ಣಮಾಲೆ(Alpabhet) ಸರಣಿ ಎಡದಿಂದ ಬಲಕ್ಕೆ ಬರೆದಾಗ….
ABC DEF GHI JKL MNO PQR STUVWXYZ. ಈಗ ಇದೇ ಸರಣಿಯನ್ನು ಬಲದಿಂದ ಎಡಕ್ಕೆ ಬರೆದಾಗ (ಹಿಮ್ಮುಖವಾಗಿ) ZYXWVUTS RQP ONM LKJ IHG FED CBA
ಸರಣಿಯು ವರ್ಣಮಾಲೆಯ ಹಿಮ್ಮುಖ ಕ್ರಮದಲ್ಲಿ ಅಕ್ಷರಗಳನ್ನು ಒಳಗೊಂಡಿದೆ. ಆದ್ದರಿಂದ ಸರಣಿಯ ಮಧ್ಯದಲ್ಲಿ ಬರಬೇಕಾದ ಅಕ್ಷರಗಳು ಎಲ್.ಕೆ.ಜೆ.(LKJ)
––
ಆಯ್ಕೆ ಪ್ರಕ್ರಿಯೆ ಹೇಗೆ ?
ಮೂರು ಹಂತದ ಹುದ್ದೆಗಳಿಗೆ ಆಯ್ಕೆ ಮಾಡುವಾಗ ಮುಖ್ಯ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು. ಪ್ರತಿ ರಾಜ್ಯದಲ್ಲಿರುವ ಖಾಲಿ ಹುದ್ದೆಗಳನ್ನು ಆಧರಿಸಿ, ಅಭ್ಯರ್ಥಿಗಳ ತಾತ್ಕಾಲಿಕಪಟ್ಟಿ ತಯಾರಿಸಲಾಗುತ್ತದೆ.
lಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್): ಮುಖ್ಯ ಪರೀಕ್ಷೆಯಲ್ಲಿ ಮಾತ್ರ ಪಡೆದ ಅಂಕಗಳನ್ನು ಅಂತಿಮ ಮೆರಿಟ್ ಪಟ್ಟಿಗಾಗಿ ಪರಿಗಣಿಸಲಾಗುತ್ತದೆ.
lಸ್ಕೇಲ್ I – ಅಧಿಕಾರಿ: ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಸಂದರ್ಶನ ಮತ್ತು ಅಂತಿಮ ಮೆರಿಟ್ ಪಟ್ಟಿಗಾಗಿ ಶಾರ್ಟ್‌ಲಿಸ್ಟ್‌ಗಾಗಿ ಪರಿಗಣಿಸಲಾಗುತ್ತದೆ.
lಸ್ಕೇಲ್ II ಮತ್ತು ಸ್ಕೇಲ್ III ಅಧಿಕಾರಿ: ಏಕ ಹಂತದ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸಂದರ್ಶನ ಮತ್ತು ಅಂತಿಮ ಮೆರಿಟ್ ಪಟ್ಟಿಗೆ ಆಯ್ಕೆ ಮಾಡಲು ಪರಿಗಣಿಸಲಾಗುತ್ತದೆ.
lಸಂದರ್ಶನ: ಅಧಿಕಾರಿಗಳ ಹುದ್ದೆಗೆ ಮಾತ್ರ ಇದು ಅನ್ವಯಿಸುತ್ತದೆ (ಸ್ಕೇಲ್ I, II ಮತ್ತು III)
ಆಫೀಸರ್ಸ್ ಸ್ಕೇಲ್ I ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮತ್ತು ಸಿಆರ್‌ಪಿ-ಆರ್‌ಆರ್‌ಬಿ- XII ಅಡಿಯಲ್ಲಿ ಆಫೀಸರ್ಸ್ ಸ್ಕೇಲ್ II ಮತ್ತು III ಹುದ್ದೆಗೆ ಏಕ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
ಸಂದರ್ಶನಕ್ಕೆ ನಿಗದಿಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು ಸಾಮಾನ್ಯ ವರ್ಗಕ್ಕೆ ಶೇ 40. ಎಸ್.ಸಿ/ಎಸ್.ಟಿ/ಒಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 35. ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಸಂಯೋಜಿತ ಅಂತಿಮ ಸ್ಕೋರ್ ಅನ್ನು ತಯಾರಿಸಲಾಗುತ್ತದೆ.
(ಮುಂದಿನವಾರ ಇನ್ನಷ್ಟು ಮಾದರಿ ಪ್ರಶ್ನೋತ್ತರಗಳು)
––
(ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.