ಕರ್ನಾಟಕ ಲೋಕ ಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸದ್ಯದಲ್ಲಿಯೇ ಅಂದರೆ ಬರುವ ಸೆಪ್ಟೆಂಬರ್ 18 ರಂದು ನಡೆಸಲಿದೆ. ಎಸ್‌ಡಿಎ ಪರೀಕ್ಷೆಯಲ್ಲಿ ಸಾಮಾನ್ಯ ಕನ್ನಡವು ಮಹತ್ವದ ಪತ್ರಿಕೆಯಾಗಿದ್ದು ನೀವೆಲ್ಲಾ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಪ್ರಯತ್ನ ಹಾಕಿದರೆ ಉತ್ತಮ. ಸಾಮಾನ್ಯಜ್ಞಾನಕ್ಕೆ ಹೋಲಿಸಿದರೆ ಈ ಪತ್ರಿಕೆ ಸುಲಭವಾಗಿರುತ್ತದೆ. ಹೀಗಾಗಿ ಉತ್ತಮ ಅಂಕಗಳನ್ನು ಗಳಿಸಬಹುದಾಗಿದೆ.
ಸಾಮಾನ್ಯ ಕನ್ನಡ ಪತ್ರಿಕೆಯಲ್ಲಿ ಒಂದು ವೇಳೆ ನೀವು ಒಂದಿಷ್ಟು ಪ್ರಯತ್ನಿಸಿ 100 ಅಂಕಗಳಿಗೆ 90 ರಿಂದ 95ರ ತನಕ ಪಡೆದಿದ್ದೀರಿ ಎಂದುಕೊಳ್ಳೋಣ. ಆದರೆ ಇದೇ ಪ್ರಮಾಣದ ಪ್ರಯತ್ನವನ್ನು ಹಾಕಿ ಅಷ್ಟೇ ಅಂಕಗಳನ್ನು ಸಾಮಾನ್ಯ ಅಧ್ಯಯನದಲ್ಲಿ ಗಳಿಸುವುದು ತುಂಬಾ ಕಷ್ಟದ ಮಾತು. ಆದ್ದರಿಂದ ಕನ್ನಡವನ್ನು ಗಮನವಿಟ್ಟು ಓದಿ.
ಬಹುತೇಕ ವಿದ್ಯಾರ್ಥಿಗಳು ಸಾಮಾನ್ಯ ಕನ್ನಡವೆಂದರೆ ಕೇವಲ ಕನ್ನಡ ವ್ಯಾಕರಣ ಎಂದು ಭಾವಿಸುತ್ತಾರೆ. ಆದರೆ ಈ ಪತ್ರಿಕೆಯಲ್ಲಿ ಕೇವಲ ವ್ಯಾಕರಣ ಮಾತ್ರ ಇರುವುದಿಲ್ಲ. ಕನ್ನಡ ವ್ಯಾಕರಣದ ಜೊತೆಗೆ ಅದರಾಚೆಯ ವಿಷಯ ಇರುತ್ತವೆ. ಅವು ಯಾವುವು ಎಂಬುದನ್ನು ನೋಡೋಣ.
ನೀವು ಹಳೆಯ ಪ್ರಶ್ನೆಪತ್ರಿಕೆಯನ್ನು ಗಮನಿಸಿದರೆ ಈ ಕೆಳಗಿನ ವಿಭಾಗಗಳಿಂದ ಪ್ರಶ್ನೆಗಳನ್ನು ಕೇಳಿರುವುದನ್ನು ನೋಡಬಹುದಾಗಿದೆ.
1) ಕನ್ನಡ ಭಾಷೆ ಮತ್ತು ಸಾಹಿತ್ಯ. 2) ಪದಗಳ ಸುಧಾರಣೆ. 3) ಸಮಾನಾರ್ಥಕ ಪದಗಳು.4) ವಿರುದ್ಧಾರ್ಥಕ ಪದಗಳು 5) ನುಡಿಗಟ್ಟುಗಳ ಅರ್ಥವನ್ನು ಗ್ರಹಿಸುವುದು. 6) ತಪ್ಪಿರುವ ಭಾಗವನ್ನು ಸರಿಪಡಿಸಿ. 7) ಬಿಟ್ಟಸ್ಥಳ ತುಂಬಿ
8) ಪ್ಯಾರಾಓದಿ: ಪ್ರಶ್ನೆ ಉತ್ತರಿಸಿ. 9) ಪದ ಬಳಸಿ ವಾಕ್ಯ ರಚಿಸಿ. 10) ವಾಕ್ಯಗಳನ್ನು ಬಳಸಿ: ಸಾಹಿತ್ಯ ಖಂಡ ರಚಿಸಿ. 11) ವ್ಯಾಕರಣ 12) ಭಿನ್ನ ಪದ ಗುರುತಿಸಿ.
ಈ ಕೆಳಗಿನ ಕೆಲವು ಪ್ರಶ್ನೆಗಳನ್ನು ಅಭ್ಯಾಸ ಮಾಡಬಹುದು.
1) ಕರ್ನಾಟಕದ ಹಲವು ಭಾಗಗಳಲ್ಲಿ ಬ್ರಿಟಿಷರ 1. ಸಶಸ್ತ್ರಬಂಡಾಯಗಳು ಸಂಭವಿಸಿದವು. ಅಂತಹ ಬಂಡಾಯಗಳಲ್ಲಿ ದಾವಣಗೆರೆ ಜಿಲ್ಲೆಯ ಧೋಂಡಿಯಾ ವಾಘನದು 2. ಚೆನ್ನಗಿರಿಯ ಮರಾಠಿ ಕುಟುಂಬದಲ್ಲಿ 3. ಧೋಂಡಿಜ, ಧೋಂಡಿಯಾ ವಾಘನೆಂದೇ ಪ್ರಸಿದ್ಧ. ಕೊಲ್ಲಾಪುರದ ಛತ್ರಪತಿಯ ನಂತರ ಮೈಸೂರಿನ ಟಿಪ್ಪುವಿನ ಸೇನೆಯಲ್ಲಿ 4. ನಂತರ ಮಲೆನಾಡಿನಲ್ಲಿ ಬ್ರಿಟಿಷರ ವಿರುದ್ಧ 5. ಈತನನ್ನು ಕರ್ನಾಟಕದ ಮೊದಲ ಕ್ರಾಂತಿಕಾರಿ ಎನ್ನುತ್ತಾರೆ.
1) ಎ) ವಿರುದ್ಧ ಬಿ) ಪರ
ಸಿ) ತಟಸ್ಥ ಡಿ) ಯಾವುದೂ ಅಲ್ಲ
2) ಎ) ಕುಪ್ರಸಿದ್ಧವಾದುದು ಬಿ) ಗಮಾನಾರ್ಹವಾದುದು
ಸಿ) ಸಹನಾಶೀಲವಾದುದು ಡಿ) ಗಮಾನಾರ್ಹವಾಗಿರದೇ ಇರುವುದು
3) ಎ) ಜನಿಸಿದ ಬಿ) ಸತ್ತ
ಸಿ) ಉದ್ಭವಿಸಿದ ಡಿ) ಉದ್ಧಾರ ಮಾಡಿದ
4) ಎ) ಸೇವೆ ಸಲ್ಲಿಸಿದ ಬಿ) ಜೀತ ಮಾಡಿದ
ಸಿ) ಪ್ರತಿಭಟಿಸಿದ ಡಿ) ವಿನಯನಾಗಿದ್ದ
5) ಎ) ಚೀರಾಡಿದ ಬಿ) ಹಾರಾಡಿದ
ಸಿ) ಹೋರಾಡಿದ ಡಿ) ಕೂಗಾಡಿದ
2) ವಿಜ್ಞಾನವು ಭೂಮಿಯ 1 ನಿಜ ಸಂಗತಿಯನ್ನು ಕಂಡು ಹಿಡಿದಿದೆ. ಭೂಮಿ ಗುಂಡಾಗಿದೆ. ಯಾವುದೂ ಅದನ್ನು 2 ನಿಂತಿಲ್ಲ. ಸೂರ್ಯನಿಗೆ ಇರುವ 3 ಭೂಮಿಯು ಸೂರ್ಯನನ್ನು ಸುತ್ತು ಹಾಕುತ್ತಿದೆ ಎಂದು 4 ಮಾಡಿದೆ. ಒಟ್ಟಿನಲ್ಲಿ ವಿಜ್ಞಾನವು ಭೂಮಿಯ ಬಗ್ಗೆ ತಿಳಿಯದೇ ಇದ್ದ ಅನೇಕ ಸಂಗತಿಗಳನ್ನು ತಿಳಿಸಿ ತಪ್ಪಾಗಿ ತಿಳಿದಿದ್ದ ವಿಷಯಗಳನ್ನು 5
(1) ಎ) ಮೇಲ್ಮೈ ಲಕ್ಷಣ ಬಿ) ಅವಿವೇಕತೆಯ
ಸಿ) ಹುಟ್ಟು ಬೆಳವಣಿಗೆಯ ಡಿ) ಧಾರಾಳತೆಯ
(2) ಎ) ಓಡಿಸಿಕೊಂಡು ಬಿ) ಹೊತ್ತುಕೊಂಡು
ಸಿ) ಹಾರಿಸಿಕೊಂಡು ಡಿ) ಮಾರಿಕೊಂಡು
(3) ಎ) ತೇಜಸ್ ಶಕ್ತಿಯಿಂದ ಬಿ) ಕ್ಷುದ್ರಶಕ್ತಿಯಿಂದ
ಸಿ) ಪ್ರತಾಪ ಶಕ್ತಿಯಿಂದ ಡಿ) ಆಕರ್ಷಣ ಶಕ್ತಿಯಿಂದ
(4) ಎ) ಮನದಟ್ಟು ಬಿ) ಮನಮುಟ್ಟು
ಸಿ) ಹದಗೆಟ್ಟು ಡಿ) ಹುಡಿಗಟ್ಟು
(5) ಎ) ಕಾಡುತ್ತದೆ ಬಿ) ತಿದ್ದಿದೆ
ಸಿ) ನೋಡುತ್ತದೆ ಡಿ) ಮಾಡುತ್ತದೆ
ಉತ್ತರ:- 1) 1-ಎ, 2-ಬಿ, 3-ಎ, 4-ಎ, 5-ಸಿ 2) 1-ಎ, 2-ಬಿ, 3-ಡಿ, 4-ಎ, 5-ಬಿ
ಸಾಮಾನ್ಯವಾಗಿ ಮೇಲೆ ನೀಡಲಾದ ವರ್ಬಲ್ ರೀಸನಿಂಗ್ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಅಂದರೆ ಒಂದು ಸಣ್ಣ ಪ್ಯಾರಾ ನೀಡಿ ಅದರಲ್ಲಿ ಬಿಟ್ಟಸ್ಥಳ ಕೊಟ್ಟಿರುತ್ತಾರೆ ಹಾಗೂ ಉತ್ತರ ಸಂಕೇತಗಳಲ್ಲಿ ನಾಲ್ಕು ಆಯ್ಕೆಗಳಿರುತ್ತದೆ. ನೀಡಲಾದ ಆ ನಾಲ್ಕು ಉತ್ತರಗಳಿಂದಲೇ ಸರಿಯಾದ ಉತ್ತರವನ್ನು ಆರಿಸಬೇಕು. ಈ ತರಹದ ಪ್ರಶ್ನೆಗಳನ್ನು ಯಾವುದೇ ಪುಸ್ತಕದಿಂದ ನೇರವಾಗಿ ತೆಗೆದಿರುವುದಿಲ್ಲ. ಹೀಗಾಗಿ ಪುಸ್ತಕ ಓದಿ ಕಂಠಪಾಠವನ್ನು ಮಾಡಿಕೊಂಡು ಹೋದರೆ ಪ್ರಯೋಜನ ಬರುವುದಿಲ್ಲ. ಬದಲಾಗಿ ಸಾಮಾನ್ಯ ಜ್ಞಾನ ಬಳಸಿ ಉತ್ತರ ಬರೆಯಬೇಕಾಗುತ್ತದೆ.
ವಿರುದ್ಧಾರ್ಥಕ ಪದಗಳು
ಸೂಚನೆ: ಈ ಕೆಳಗೆ ನೀಡಲಾದ ಪದಗಳಿಗೆ ಸಮನಾದ ಅಥವಾ ಹತ್ತಿರವಿರುವ ವಿರುದ್ಧಾರ್ಥಕ ಪದವನ್ನು ತಿಳಿಸಿ
1)‘ಗೊರವ’ ಶಬ್ದದ ವಿರುದ್ಧಾರ್ಥಕ ಪದ…
ಎ) ಗೊರಲೆ ಬಿ) ಗೊರಟೆ
ಸಿ) ನಾಸ್ತಿಕ ಡಿ) ಆಸ್ತಿಕ
2) ‘ಪಾಂಬ’ ಶಬ್ದದ ವಿರುದ್ಧಾರ್ಥಕ ಪದ……
ಎ) ಪಾಪ ಬಿ) ಸಭ್ಯಸ್ಥ
ಸಿ) ಪಾರುಮಾಡು ಡಿ) ಪಕ್ಕಾ
3) ‘ಕೂನ’ ಶಬ್ದದ ವಿರುದ್ಧಾರ್ಥಕ ಪದ……… ಎ) ಎತ್ತರವಾಗಿರುವವ
ಬಿ) ಕುಳ್ಳಗಿರುವವ ಸಿ) ಜೊರಾಗಿರುವವ
ಡಿ) ಬುದ್ಧಿವಂತ
4) ‘ತಟ್ಟೈಸು’ ಶಬ್ದದ ವಿರುದ್ಧಾರ್ಥಕ ಪದ……
ಎ) ತಡವಾಗಿ ಬರುವುದು ಬಿ) ಬೇಗ ಬರುವುದು
ಸಿ) ಗುಂಪಾಗಿರುವುದು ಡಿ) ಏಕಾಂಗಿಯಾಗಿರುವುದು.
5) ‘ಪಾಡುಗಾ’ ಶಬ್ದದ ವಿರುದ್ಧಾರ್ಥಕ ಪದ…
ಎ) ರಕ್ಷಿಸು ಬಿ) ಪ್ರೇಮಿಸು
ಸಿ) ಹಿಂಸಿಸು ಡಿ) ಸಹಕರಿಸು
6) ‘ಮುಮ್ಮೊನೆ’ ಶಬ್ದದ ವಿರುದ್ಧಾರ್ಥಕ ಪದ…
ಎ) ಹಿಂಭಾಗ ಬಿ) ಮುಂಭಾಗ
ಸಿ) ಮುನ್ನೋಟ ಡಿ) ಕಿರಿಕಿರಿ
7)‘ಪುಸುಕಲು’ ಶಬ್ದದ ವಿರುದ್ಧಾರ್ಥಕ ಪದ …
ಎ) ದುರ್ಬಲ ವ್ಯಕ್ತಿ ಬಿ) ಸಶಕ್ತ(ಸಬಲ) ವ್ಯಕ್ತಿ
ಸಿ) ಅಶಕ್ತ(ಅಬಲ) ಪ್ರಾಣಿ ಡಿ) ವಿಶೇಷ ವ್ಯಕ್ತಿ
8) ‘ಬಂಡಾಟ’ ಶಬ್ದದ ವಿರುದ್ಧಾರ್ಥಕ ಪದ……
ಎ) ಅವಮಾನ ಬಿ) ಸಮ್ಮಾನ
ಸಿ) ನಿಷ್ಫಲ ಡಿ) ವಿಶೇಷ ಫಲ
9) ‘ಬಂಡಣ’ ಶಬ್ದದ ವಿರುದ್ಧಾರ್ಥಕ ಪದ…
ಎ) ಅಸಹನೆ ಬಿ) ಕ್ರಾಂತಿ
ಸಿ) ಯುದ್ಧ ಡಿ) ಶಾಂತಿ
ಹೇಗೆ ರೀಸನಿಂಗ್ ವಿಭಾಗದಲ್ಲಿ ನಿಘಂಟಿನ ವಿಭಾಗದಿಂದ ಕಠಿಣ ಶಬ್ದಗಳನ್ನು ಕೇಳಿ ಆ ಶಬ್ದದ ಸಮನಾದ ಅರ್ಥಕ್ಕೆ ವಿರುದ್ಧವಾದ ಪದಗಳನ್ನು ಸೂಚಿಸಲು ಕೇಳುತ್ತಾರೋ ಅದೇ ಮಾದರಿಯಲ್ಲಿ ಎಸ್‌ಡಿಎ ಪರೀಕ್ಷೆಯಲ್ಲಿಯೂ ಸಹಾ ಪ್ರಶ್ನೆಗಳನ್ನು ಕೇಳಿರುವುದನ್ನು ನೋಡುತ್ತೇವೆ. ಆ ಪ್ರಶ್ನೆಗಳು ನಾವು ಸಾಮಾನ್ಯವಾಗಿ ಕೇಳದೇ ಇರುವ ಆದರೆ ಸಾಹಿತ್ಯಿಕ ಭಾಷೆಯಲ್ಲಿ, ಉತ್ತಮ ಗ್ರಂಥಗಳಲ್ಲಿ ಬಳಕೆಯಾದ ಕೆಲವು ಪದಗಳನ್ನು ನೀಡಿ ಆ ಪದಗಳಿಗೆ ಇರುವ ಅರ್ಥಕ್ಕೆ ವಿರುದ್ಧಾರ್ಥಕ ಪದಗಳನ್ನು ಹುಡುಕಿ ಉತ್ತರ ಬರೆಯಲು ಪ್ರಶ್ನೆಪತ್ರಿಕೆಯಲ್ಲಿ ಕೇಳಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಈ ವಿಭಾಗದಲ್ಲಿಯೂ ನೀವು ತಕ್ಕ ತಯಾರಿ ಮಾಡಿಕೊಂಡಿರಬೇಕು.
ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ನೋಡೋಣ
1) ಸಿ (ವಿವರಣೆ- ಗೊರವ ಎಂದರೆ ಶಿವಭಕ್ತ ಎಂದರ್ಥ. ಆದ್ದರಿಂದ ಹತ್ತಿರವಾದ ವಿರುದ್ಧಾರ್ಥಕ ಶಬ್ದವೆಂದರೆ ನಾಸ್ತಿಕ)
2) ಬಿ (ವಿವರಣೆ- ಪಾಂಬ ಎಂದರೆ ವ್ಯಭಿಚಾರಿ ಎಂದರ್ಥ. ಇದಕ್ಕೆ ವಿರುದ್ಧಾರ್ಥಕ ಪದವೆಂದರೆ ಸಭ್ಯಸ್ಥ)
3) ಎ (ವಿವರಣೆ- ಕೂನ ಎಂದರೆ ಕುಬ್ಜ ಎಂದರ್ಥ. ಆದ್ದರಿಂದ ಎತ್ತರವಾಗಿರುವ ಎಂಬುದು ಸರಿಯಾದ ಉತ್ತರವಾಗಿದೆ.)
4) ಡಿ (ವಿವರಣೆ- ತಟೈಸು ಎಂದರೆ ಗುಂಪಾಗಿರುವುದು ಎಂದರ್ಥ. ಆದ್ದರಿಂದ ಇದಕ್ಕೆ ಸರಿಯಾದ ವಿರುದ್ಧ ಪದವೆಂದರೆ ಏಕಾಂಗಿಯಾಗಿರುವುದು ಎಂಬುದಾಗಿದೆ.)
5) ಸಿ (ವಿವರಣೆ- ಪಾಡುಗಾ ಎಂದರೆ ಕ್ಷೇಮವನ್ನು ಕಾಪಾಡು ಅಥವಾ ರಕ್ಷಿಸು ಎಂದರ್ಥ. ಆದ್ದರಿಂದ ಇದಕ್ಕೆ ಸರಿಯಾದ ಅಥವಾ ಹತ್ತಿರವಿರುವ ವಿರುದ್ಧ ಪದವೆಂದರೆ ಹಿಂಸಿಸುವುದು ಎಂಬುದಾಗಿದೆ.)
6) ಎ (ವಿವರಣೆ- ಮುಮ್ಮೊನೆ ಎಂದರೆ ಎದುರು/ಅಭಿಮುಖ ಎಂದರ್ಥ. ಆದ್ದರಿಂದ ಇದಕ್ಕೆ ಸರಿಯಾದ ವಿರುದ್ಧ ಪದವೆಂದರೆ ಹಿಂಭಾಗ ಎಂಬುದಾಗಿದೆ.)
7) ಬಿ(ವಿವರಣೆ- ಪುಸುಕಲು ಎಂದರೆ ಅಶಕ್ತ ವ್ಯಕ್ತಿ ಎಂದರ್ಥ. ಆದ್ದರಿಂದ ಇದಕ್ಕೆ ಸರಿಯಾದ ವಿರುದ್ಧ ಪದವೆಂದರೆ ಸಶಕ್ತವ್ಯಕ್ತಿ ಎಂಬುದಾಗಿದೆ)
8) ಬಿ (ವಿವರಣೆ- ಬಂಡಾಟ ಎಂದರೆ ಅವಮಾನ ಎಂದರ್ಥ. ಆದ್ದರಿಂದ ಇದಕ್ಕೆ ಸರಿಯಾದ ವಿರುದ್ಧ ಪದವೆಂದರೆ ಸಮ್ಮಾನ ಎಂಬುದಾಗಿದೆ)
9) ಡಿ (ವಿವರಣೆ- ಬಂಡಣ ಎಂದರೆ ಯುದ್ಧ ಎಂದರ್ಥ. ಆದ್ದರಿಂದ ಇದಕ್ಕೆ ಸರಿಯಾದ ವಿರುದ್ಧ ಪದವೆಂದರೆ ಶಾಂತಿ ಎಂಬುದಾಗಿದೆ)
ಉತ್ತರಕ್ಕೆ ಆಧಾರ: ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿತ ‘ಸಂಕ್ಷಿಪ್ತ ಕನ್ನಡ ನಿಘಂಟು’
(ಸಂಯೋಜನೆ: Spardha Bharati UPSCಯೂಟ್ಯೂಬ್ ಚಾನೆಲ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.