ಬೆಂಗಳೂರು: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (CAPF) ವಿವಿಧ ವಿಭಾಗಗಳಲ್ಲಿ ಹಾಗೂ ದೆಹಲಿ ಪೊಲೀಸ್ ವಿಭಾಗದಲ್ಲಿ ಖಾಲಿ ಇರುವ ಒಟ್ಟು 4,187 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿಗೆ ಕೇಂದ್ರ 'ಸಿಬ್ಬಂದಿ ನೇಮಕಾತಿ ಆಯೋಗ’ (SSC) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
ಸಿಎಪಿಎಫ್‌ನಲ್ಲಿ 4001 ಸಬ್ ಇನ್‌ಸ್ಟೆಕ್ಟರ್ (ಎಸ್‌ಐ ಜನರಲ್ ಡ್ಯೂಟಿ–ಜಿಡಿ) ಇದ್ದು, ದೆಹಲಿ ಪೊಲೀಸ್ ವಿಭಾಗದಲ್ಲಿ 186 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಿವೆ. ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಿಎಪಿಎಫ್‌ನ 4,001 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಲ್ಲಿ ಮಹಿಳೆಯರಿಗೆ 308 ಹುದ್ದೆಗಳು ಮೀಸಲಿವೆ. ದೆಹಲಿ ಪೊಲೀಸ್ ವಿಭಾಗದಲ್ಲಿನ 186 ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳಲ್ಲಿ ಮಹಿಳೆಯರಿಗೆ 61 ಹುದ್ದೆಗಳು ಮೀಸಲಿವೆ.
ಮಾರ್ಚ್ 4ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಮಾರ್ಚ್ 28 ಅರ್ಜಿ ಸಲ್ಲಿಸಲು ಕಡೆಯ ದಿನ. ಅರ್ಜಿ ಶುಲ್ಕ ₹100 ಇದ್ದು, ಎಸ್‌ಸಿ, ಎಸ್‌ಟಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ.
ಕನಿಷ್ಠ 20 ವರ್ಷದಿಂದ ಗರಿಷ್ಠ 25ವರ್ಷದೊಳಗಿನ, ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ವೇತನ ಶ್ರೇಣಿ– ₹1.12 ಲಕ್ಷ.
ಮೊದಲಿಗೆ ಕಂಪ್ಯೂಟರ್ ಅಧಾರಿತ ಸ್ಪರ್ಧಾತ್ಮಕ ಪರೀಕ್ಷೆ (ಸಿಬಿಟಿ) ನಂತರ ದೈಹಿಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಮೇ ಮಧ್ಯದಲ್ಲಿ ಸಿಬಿಟಿ ಪರೀಕ್ಷೆಗಳು ನಡೆಯಲಿವೆ.
ದೈಹಿಕ ಪರೀಕ್ಷೆ ಮಾನದಂಡಗಳು, ಪರೀಕ್ಷಾ ವಿಧಾನ, ಹುದ್ದೆಗಳ ವರ್ಗೀಕರಣ ಇತರೆ ಹೆಚ್ಚಿನ ಮಾಹಿತಿಗಾಗಿ ssc.gov.in ಅಥವಾ ssckkr.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಸಿಎಪಿಎಫ್ ವಿಭಾಗಗಳು
ಸಿಎಪಿಎಫ್ ಅಡಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್ ಪಡೆ (CRPF), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF), ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ (SSB) ಯಲ್ಲಿ ಸಬ್ ಇನ್‌ಸ್ಟೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.