ಬೆಂಗಳೂರು: ಸಿಬ್ಬಂದಿ ನೇಮಕಾತಿ ಅಯೋಗದ ವತಿಯಿಂದ ಕೇಂದ್ರ ಸಚಿವಾಲಯಗಳಲ್ಲಿ ಖಾಲಿ ಇರುವ ‘ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ’ (ಎಂಟಿಎಸ್) ಮತ್ತು ‘ಸಿಬಿಐಸಿ–ಸಿಬಿಎನ್’ನಲ್ಲಿ ಖಾಲಿಯಿರುವ ಹವಾಲ್ದಾರ್ ಒಟ್ಟು 8,326 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆನ್‌ಲೈನ್ ಅರ್ಜಿ ಮೂಲಕ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಸಚಿವಾಲಯಗಳಲ್ಲಿ ಒಟ್ಟು 4,887 ಎಂಟಿಎಸ್ ಹುದ್ದೆಗಳಿವೆ. ಸಿಬಿಐಸಿ–ಸಿಬಿಎನ್‌ನಲ್ಲಿ ಒಟ್ಟು 3,439 ಹವಾಲ್ದಾರ್ ಹುದ್ದೆಗಳಿವೆ. ಈ ಹುದ್ದೆಗಳು ಗ್ರೂಪ್- ‘ಸಿ’ ವಿಭಾಗದ ಹುದ್ದೆಗಳಾಗಿವೆ.
ಇದರಲ್ಲಿ ಎಸ್‌ಎಸ್‌ಸಿ ಕರ್ನಾಟಕ–ಕೇರಳ ಸರ್ಕಲ್‌ನ ಒಟ್ಟು 399 ಹುದ್ದೆಗಳೂ ಸೇರಿವೆ.
ಕೇಂದ್ರ ಹಣಕಾಸು ಸಚಿವಾಲಯದಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಹಾಗೂ ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ (ಸಿಬಿಎನ್) ವಿಭಾಗಕ್ಕೆ ಹವಾಲ್ದಾರ್ ಹುದ್ದೆಗಳು ಸಂಬಂಧಿಸಿವೆ.
ಅರ್ಜಿ ಸಲ್ಲಿಸಲು ಇದೇ ಜುಲೈ 31 ಕಡೆಯ ದಿನ. ಅರ್ಜಿ ಶುಲ್ಕ ₹100 ಇರಲಿದೆ. (ಎಸ್.ಎಸಿ, ಎಸ್.ಟಿ, ಮಾಜಿ ಸೈನಿಕರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ).
ಎಂಟಿಎಸ್ ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 25 ಇದ್ದು, ಹವಾಲ್ದಾರ್ ಹುದ್ದೆಗಳಿಗೆ ಕನಿಷ್ಠ 18 ರಿಂದ ಗರಿಷ್ಠ 27 ಇದೆ. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಎರಡೂ ಹುದ್ದೆಗಳಿಗೂ ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ 10 ನೇ ತರಗತಿ ಪಾಸಾಗಿರಬೇಕು.
ಪರೀಕ್ಷೆ ಹೇಗಿದೆ?
ಈ ಎರಡೂ ವಿಭಾಗದ ಹುದ್ದೆಗಳಿಗೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ) ನಡೆಯಲಿವೆ. ಎಂಟಿಎಸ್ ಹುದ್ದೆಗಳಿಗೆ ಸಿಬಿಟಿ ಮಾತ್ರ ಇರುತ್ತದೆ. ಹವಾಲ್ದಾರ್ ಹುದ್ದೆಗಳಿಗೆ ಸಿಬಿಟಿ ಜೊತೆಗೆ ದೈಹಿಕ ಸಹಿಷ್ಣುತೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ಇರಲಿದೆ.
ಮೊದಲು ನಡೆಯುವ ಸಿಬಿಟಿಯಲ್ಲಿ ಎರಡು ಪಶ್ನೆ ಪತ್ರಿಕೆಗಳಿರುತ್ತವೆ. ಸೆಷನ್ 1ರ ಪತ್ರಿಕೆಯಲ್ಲಿ ಎರಡು ವಿಭಾಗಗಳಿರುತ್ತವೆ (ನ್ಯೂಮೆರಿಕಲ್ ಆ್ಯಂಡ್ ಮ್ಯಾಥಮೆಟಿಕ್ ಎಬಿಲಿಟಿ, ರಿಸನಿಂಗ್ ಎಬಿಲಿಟಿ ಆ್ಯಂಡ್ ಪ್ರಾಬ್ಲಮ್ ಸಾಲ್ವಿಂಗ್) ಇದಕ್ಕೆ 120 ಅಂಕಗಳಿರುತ್ತವೆ. 45 ನಿಮಿಷ ಅವಧಿ. ಎರಡೂ ಭಾಗಗಳಲ್ಲಿ ತಲಾ 20 ಪ್ರಶ್ನೆಗಳಿರುತ್ತವೆ.
ಸೆಷನ್ 2ನೇ ಪತ್ರಿಕೆಯ ಎರಡು ವಿಭಾಗಗಳಿಗೆ (ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷಾ ಸಾಮರ್ಥ್ಯ) 150 ಅಂಕಗಳಿದ್ದು, ಇದರಲ್ಲಿ ತಲಾ 25 ಪ್ರಶ್ನೆಗಳಿರುತ್ತವೆ. 45 ನಿಮಿಷ ಅವಧಿ.
ಮುಂದಿನ ಹಂತಕ್ಕೆ ಪ್ರವೇಶಿಸಬೇಕಾದರೆ ಎರಡರಲ್ಲೂ ಕನಿಷ್ಠ ಶೇ 30 ರಷ್ಟು ಅಂಕಗಳನ್ನು ಗಳಿಸಲೇಬೇಕು. ಸೆಷನ್ 1ರ ಪತ್ರಿಕೆಗೆ ನಕಾರಾತ್ಮಕ ಅಂಕಗಳಿರುವುದಿಲ್ಲ. ಸೆಷನ್ 2ನೇ ಪತ್ರಿಕೆಗೆ ನಕಾರಾತ್ಮಕ ಅಂಕಗಳು ಇರುತ್ತವೆ. ಅಂದರೆ ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ.
ಎಂಟಿಎಸ್ ಹುದ್ದೆ ಆಯ್ಕೆ ಮಾಡಿಕೊಳ್ಳುವವರಿಗೆ ಸಿಬಿಟಿ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಮೂಲ ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಹವಾಲ್ದಾರ್ ಹುದ್ದೆಗಳಿಗೆ ಸಿಬಿಟಿ ಮೆರಿಟ್ ಹಾಗೂ ದೈಹಿಕ ಪರೀಕ್ಷೆಯ ಫಲಿತಾಂಶವನ್ನು ಅನುಸರಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಉಡುಪಿ ಹಾಗೂ ಶಿವಮೊಗ್ಗ ಪರೀಕ್ಷಾ ಕೇಂದ್ರಗಳಾಗಿವೆ.
ಹುದ್ದೆಗಳ ವಿಂಗಡಣೆ, ಹವಾಲ್ದಾರ್ ಹುದ್ದೆಗಳ ದೈಹಿಕ ಸಹಿಷ್ಣುತೆ, ಸಾಮರ್ಥ್ಯ ಪರೀಕ್ಷೆಯ ಮಾನದಂಡಗಳು, ಅರ್ಜಿ ಸಲ್ಲಿಸಲು ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಆಸಕ್ತರು ಆಯೋಗದ ಅಧಿಕೃತ ವೆಬ್‌ಸೈಟ್ https://ssc.gov.in/ ವೀಕ್ಷಿಸಬೇಕು.
***
ಎಂಟಿಎಸ್ ಹುದ್ದೆಗಳು ಯಾವವು?
ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಗ್ರೂಪ್ ಸಿ ಅಡಿಯಿರುವ ನಾನ್ ಟೆಕ್ನಿಕಲ್ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಎಂಟಿಎಸ್ ಹುದ್ದೆಗಳು ಎನ್ನುತ್ತಾರೆ. ಪಿಓನ್ ಡ್ರಾಫ್ಟಿ ಚೌಕಿದಾರ್ ಸಫಾಯಿವಾಲಾ ಇತರೆ ಹುದ್ದೆಗಳು ಇದರ ಅಡಿ ಬರುತ್ತವೆ.
ಹವಾಲ್ದಾರ್ ಹುದ್ದೆಗಳು ಎಲ್ಲೆಲ್ಲಿ?
ಸಿಬಿಐಸಿ ಹಾಗೂ ಸಿಬಿಎನ್ ಕೇಂದ್ರ ಹಣಕಾಸು ಸಚಿವಾಲಯದ ರೆವಿನ್ಯೂ ಡಿಪಾರ್ಟ್‌ಮೆಂಟ್ ಅಡಿ ಬರುವ ಸಂಸ್ಥೆಗಳಾಗಿವೆ. ಇದರಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ರೀತಿ ಕೆಲಸ ಮಾಡುವ ಹುದ್ದೆಗಳಿಗೆ ಹವಾಲ್ದಾರ್ ಹುದ್ದೆಗಳು ಎನ್ನುತ್ತಾರೆ.
ಪದವಿ ಪಾಸಾದವರಿಗೆ 17727 ಹುದ್ದೆಗಳು
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಹಾಗೂ ಸಂಸ್ಥೆಗಳಲ್ಲಿನ ಗ್ರೂಪ್ ಎ ಬಿ ಹಂತದ ಮತ್ತು ಇನ್‌ಸ್ಪೆಕ್ಟರ್ ಹಿರಿಯ ಸಹಾಯಕ ಹಂತದ ಒಟ್ಟು 17727 ಹುದ್ದೆಗಳ ಭರ್ತಿಗೆ ಎಸ್‌ಎಸ್‌ಸಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಜುಲೈ 24 ಅರ್ಜಿ ಸಲ್ಲಿಸಲು ಕಡೆಯ ದಿನ. ಯಾವುದೇ ಪದವಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಸಂಯೋಜಿತ ಪದವಿ ಮಟ್ಟದ ಪರೀಕ್ಷೆ ಮೂಲಕ ನೇಮಕಾತಿ ನಡೆಯುತ್ತದೆ. ವಿವರವಾದ ಅಧಿಸೂಚನೆಗೆ https://ssc.gov.in/ ವೆಬ್‌ಸೈಟ್ ಪರಿಶೀಲಿಸಬಹುದು.
****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.