ADVERTISEMENT

‘ಎಸ್‌ಎಸ್‌ಸಿ’ ಪರೀಕ್ಷೆಯಲ್ಲಿ ಕನ್ನಡಿಗರು ಹೆಚ್ಚಲಿ

ಶ್ರೀನಿವಾಸ್ ಪಿ.ಸಿ
Published 5 ಅಕ್ಟೋಬರ್ 2022, 20:45 IST
Last Updated 5 ಅಕ್ಟೋಬರ್ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇದೇ ಮೊದಲ ಬಾರಿಗೆ ಎಸ್‌ಎಸ್‌ಸಿ 20 ಸಾವಿರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಕನ್ನಡಿಗರಿಗೊಂದು ಸುವರ್ಣಾವಕಾಶ.

ಸಿಬ್ಬಂದಿ ನೇಮಕಾತಿ ಆಯೋಗ(ಸ್ಟಾಫ್ ಸೆಲೆಕ್ಷನ್‌ ಕಮಿಷನ್‌) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕೇಂದ್ರ ಸರ್ಕಾರದ ಸಚಿವಾಲಯ ಸೇರಿದಂತೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಬಹುದು. ಮಾತ್ರವಲ್ಲ, ಉನ್ನತ ಹುದ್ದೆಗಳವರೆಗೂ ತಲುಪಬಹದು. ಇಂಥದ್ದೊಂದು ಅಪೂರ್ವ ಅವಕಾಶವಿದ್ದರೂ, ಕರ್ನಾಟಕದಿಂದ ಎಸ್‌ಎಸ್‌ಸಿ ಪರೀಕ್ಷೆ ಬರೆಯುವವರ ಸಂಖ್ಯೆ ಶೇ 1ಕ್ಕಿಂತ ಕಡಿಮೆ ಇದೆ !

ಯಾಕೆ ಹೀಗೆ ?

ADVERTISEMENT

ಇದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ ಭಾಷೆಯ ತೊಡಕು(ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲದ್ದೂ ಸೇರಿದಂತೆ). ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಣೆ ಕಷ್ಟ ಎಂಬುದು ಮತ್ತೊಂದು ಕಾರಣ. ಜೊತೆಗೆ, ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಯಾಗುತ್ತೇನೆಂದು ವರ್ಷಗಟ್ಟಲೆ ಕಾಯು ವುದು. ಎಂಜಿನಿಯರ್‌, ವೈದ್ಯರೇ ಆಗಬೇಕೆಂದು ಸಂಬಂಧಿಸಿದ ಪದವಿಗಳನ್ನು ಓದಿ ಕೆಲಸವನ್ನು ಅರಸುವುದು.

ನೋಡಿ, ಈ ಹೊಸ ತಲೆಮಾರಿನವರಿಗೆ ಬೇರೆ ಭಾಷೆಗಳನ್ನು ಕಲಿಯುವುದು ಕಷ್ಟವೇನಲ್ಲ. ಅಷ್ಟರಮಟ್ಟಿಗೆ ಅವರಲ್ಲಿ ಬುದ್ಧಿವಂತಿಕೆ, ತಂತ್ರಜ್ಞಾನದ ಜ್ಞಾನ ಮತ್ತು ಚಾತುರ್ಯವಿರುತ್ತದೆ. ಈಹಿನ್ನೆಲೆಯಲ್ಲಿ, ಭಾಷೆ ತೊಡಕು, ಕಾರ್ಯನಿರ್ವಹಣೆ ಬಗ್ಗೆ ಅಷ್ಟಾಗಿ ಯೋಚಿಸುವ ಅಗತ್ಯವೇ ಇಲ್ಲ.

ಉದ್ಯೋಗದ ಪ್ರಮಾಣ ಎಷ್ಟು?

ಒಮ್ಮೆ ಯೋಚಿಸಿ ನೋಡಿ. ನಮ್ಮಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಉದ್ಯೋಗ ಪಡೆದಿದ್ದಾರೆ. ಉದಾಹರಣೆಗೆ; ಎಂಜಿನಿಯರಿಂಗ್‌ ಪದವಿ ಪಡೆದವರಲ್ಲಿ ಶೇ 25 ರಿಂದ 30 ಮಂದಿಗೆ ಕ್ಯಾಂಪಸ್ ಸೆಲೆಕ್ಷನ್ ಆಗಬಹುದು. ಇನ್ನೂ ಕೆಲವರಿಗೆ ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗವೂ ಸಿಗಬಹುದು. ಆದರೂ ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆಯೇ? ಇಲ್ಲ ಅಲ್ಲವೇ ? ಈ ಹಿನ್ನೆಲೆಯಲ್ಲಿ ಯೋಚಿಸುವುದಾದರೆ, ಯಾವುದೇ ಪದವಿ ಪ್ರಮಾಣ ಪತ್ರಗಳಿಂದ ಉನ್ನತ ಹುದ್ದೆಗಳು ದೊರೆಯುವುದಿಲ್ಲ. ಆದರೆ, ಎಸ್‌ಎಸ್‌ಸಿ ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗುವುದರಿಂದ ಉನ್ನತ ಹುದ್ದೆಗಳು ಲಭಿಸುತ್ತವೆ. ಇದು ಮಕ್ಕಳಿಗೆ ಮತ್ತು ಪೋಷಕರಿಗೆ ಸ್ಪಷ್ಟವಾಗಿ ಮನವರಿಕೆಯಾಗಬೇಕಿದೆ.

ಮತ್ತೊಂದು ವಿಷಯ ತಿಳಿದಿರಲಿ; ಉತ್ತರ ಭಾರತದ ರಾಜ್ಯಗಳಲ್ಲಿ ಪಿಯುಸಿ ಮುಗಿಸಿದ ಮೇಲೆ ಪದವಿ ಓದುತ್ತಿರುವಾಗಲೇ ವಿದ್ಯಾರ್ಥಿಗಳು ಇಂಥ ಹುದ್ದೆಗಳನ್ನು ಪಡೆಯಲು ತರಬೇತಿ ತೆಗೆದುಕೊಳ್ಳುತ್ತಾರೆ. ಪದವಿಗಿಂತ ಹೆಚ್ಚಾಗಿ, ಉದ್ಯೋಗ ನೀಡುವ ವಿಷಯಗಳ ತರಬೇತಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಇದಕ್ಕೆ ತದ್ವಿರದ್ಧ ವಾತಾವರಣವಿದೆ. ಹೀಗಾಗಿ ನಮ್ಮ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಗಳಿಗೆ ತರಬೇತಿ ಪಡೆಯುವುದರಲ್ಲಿ ಹಾಗೂ ಉದ್ಯೋಗಗಳಿಸುವುದರಲ್ಲಿ ಹಿಂದೆ ಬೀಳಲು ಇದೂ ಒಂದು ಕಾರಣ..

ಹಾಗಾಗಿಯೇ, ಆದಾಯ ತೆರಿಗೆ ಇಲಾಖೆ, ಸಿ ಬಿ ಐ, ವಿದೇಶಾಂಗ ಇಲಾಖೆ, ಪಾಸ್ ಪೋರ್ಟ್ ಸೇವಾ ಕೇಂದ್ರ, ರಾಷ್ಟ್ರೀಯ ಬ್ಯಾಂಕ್‌ಗಳು, ಕೇಂದ್ರದ ಹಣಕಾಸು ಸಚಿವಾಲಯ ಇಸ್ರೊ ಸೇರಿದಂತೆ ಹತ್ತು ಹಲವು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಬೇರೆ ರಾಜ್ಯದವರು ಹೆಚ್ಚಿರುತ್ತಾರೆ.

ಇನ್ನು,ಐಎಎಸ್‌/ ಐಪಿಎಸ್‌ ಹುದ್ದೆಗಾಗಿಯೇ 5-6 ವರ್ಷಗಳಿಂದ ಅಭ್ಯಾಸ ನಡೆಸುವವರ ಸಂಖ್ಯೆಯೂ ಹೆಚ್ಚಿದೆ. ಇದರಲ್ಲಿ ಈ ಹುದ್ದೆಗಳು ಲಭಿಸದೆ ಹತಾಶರಾದವರು ಅನೇಕರಿದ್ದಾರೆ. ಪ್ರತಿ ವರ್ಷ 10 ಲಕ್ಷ ಮಂದಿ ಯುಪಿಎಸ್‌ಸಿ / ಕೆಪಿಎಸ್‌ಸಿ ಪರೀಕ್ಷೆಬರೆಯುತ್ತಾರೆ. ಆಯ್ಕೆಯಾಗುವವರ ಸಂಖ್ಯೆ ಶೇ 0.01ರಷ್ಟು ಇದೆ.ಈ ಪರಿಸ್ಥಿತಿ ಮುಂದುವರಿದರೆ
ಭವಿಷ್ಯದಲ್ಲಿ ಎಲ್ಲ ರೀತಿಯಿಂದಲೂ ಕನ್ನಡದ ಧ್ವನಿ ಕ್ಷೀಣಿಸುವ ಅಪಾಯವಿದೆ.

ಈಗ ಏನು ಮಾಡಬಹುದು ?

*ವಿದ್ಯಾಭ್ಯಾಸ ಮತ್ತು ಉದ್ಯೋಗದ ವಿಚಾರದಲ್ಲಿ ರಾಜ್ಯದ ವಿದ್ಯಾರ್ಥಿಗಳು, ಪೋಷಕರು ತಮಗಿರುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು.

*ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.

*ಯುಪಿಎಸ್‌ಸಿ ಪರೀಕ್ಷೆಗೆ ಪ್ರಯತ್ನಿಸುತ್ತಿರುವವರು (ಈಗಾಗಲೇ ಹಲವು ಬಾರಿ ಪ್ರಯತ್ನಿಸಿರುವವರು), ಇಲ್ಲಿವರೆಗೂ ಪಡೆದಿರುವ ಜ್ಞಾನವನ್ನೇ ಎಸ್‌ಎಸ್‌ಸಿ / ಬ್ಯಾಂಕ್ ಪರೀಕ್ಷೆ ಬರೆಯಲು ಉಪಯೋಗಿಸಿದರೆ, ಯಶಸ್ವಿಯಾಗುವ ಸಾಧ್ಯತೆ ಹೆಚ್ಚು.

*ಯಾವುದೇ ಪದವಿ ಓದಿರುವವರು, ಬೇರೆ ಉದ್ಯೋಗಗಳನ್ನು ಅರಸುವ ಜೊತೆ ಜೊತೆಗೆ ಇಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

ಒಂದೊಮ್ಮೆ, ನಮ್ಮ ರಾಜ್ಯದಲ್ಲಿರುವ ಎಂಜಿನಿಯರ್‌ /ಬಿಬಿಎ /ಬಿ.ಎಸ್‌ಸಿ ಪದವಿ ಪಡೆದ ವಿದ್ಯಾರ್ಥಿಗಳು ಈ ವರ್ಷವೇ ಗಂಭೀರ ಅಭ್ಯಾಸದೊಂದಿಗೆ ಎಸ್‌ಎಸ್‌ಸಿ ಪರೀಕ್ಷೆ ಬರೆದರೆ, 20 ಸಾವಿರ ಹುದ್ದೆಗಳಲ್ಲಿ ಕಾಲು ಭಾಗದಷ್ಟು ಹುದ್ದೆಗಳನ್ನು ಕನ್ನಡಿಗರೇ ಪಡೆದುಕೊಳ್ಳಬಹುದು.

ಈ ಸಾಲಿನ ಪರೀಕ್ಷೆ ವಿವರ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಸ್‌ಎಸ್‌ಸಿ 20 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಕ್ಟೋಬರ್ 8, 2022 ಕೊನೆ ದಿನ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ https://ssc.nic.in/SSCFileServer/PortalManagement/UploadedFiles/notice_CGLE_17092022.pdf ಈ ಜಾಲ ತಾಣಕ್ಕೆ ಭೇಟಿ ನೀಡಿ.

ವಿದ್ಯಾರ್ಹತೆ:
ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರುವ ಹಾಗೂ ಅಂತಿಮ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೆಲ್ಲ ಪರೀಕ್ಷೆ ಬರೆಯಬಹುದು.

ತಯಾರಿ ಹೇಗೆ?:
ಇದು ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ. ಆ ಕಾರಣ, ತುಸು ಹೆಚ್ಚಾಗಿ ತರಬೇತಿ ನಡೆಸಬೇಕು. ಜೊತೆಗೆ, ಪುನಾವರ್ತಿತ ಅಭ್ಯಾಸದ ಅವಶ್ಯಕತೆಯೂ ಇದೆ. ಈ ಬಾರಿ ಡಿಸೆಂಬರ್‌ ತಿಂಗಳಲ್ಲಿ ಪರೀಕ್ಷೆ ನಿಗದಿಯಾಗಬಹುದು. ಸಮಯ ಕಡಿಮೆ ಇದೆ. ಪರೀಕ್ಷಾರ್ಥಿಗಳು ಕನಿಷ್ಠ 60 ದಿನಗಳ ಕಾಲ ಕರಾರುವಕ್ಕಾಗಿ ಸತತ ಅಭ್ಯಾಸ ಮಾಡಬೇಕು.

ತರಬೇತಿ–ಮಾರ್ಗದರ್ಶನ

*ಅಭ್ಯರ್ಥಿಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

*ಬಹುತೇಕ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿರುತ್ತವೆ. ಆದರೆ ವೇಗವಾಗಿ ಹೇಗೆಉತ್ತರಿಸಬೇಕು ಎಂಬುದನ್ನು ಕಲಿಯಲು ತರಬೇತಿ ಹಾಗೂ ಸತತ ಅಭ್ಯಾಸದ ಅವಶ್ಯಕತೆ ಇದೆ.

*ಎಸ್‌ಎಸ್‌ಸಿ/ ಬ್ಯಾಂಕಿಂಗ್ ನೇಮಕಾತಿ ಈ ಎರಡು ಪರೀಕ್ಷೆಗಳಿಗೂ ಬಹುತೇಕ ಒಂದೇ ರೀತಿಯ ಅಧ್ಯಯನ ವಿಷಯ ವಸ್ತುಗಳು ಇರುತ್ತವೆ.

ಇನ್ನಷ್ಟು ಪ್ರತಿಭೆಗಳಿಗೆ ಉತ್ತೇಜನ

ಈಗ ಎಸ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತವೆ. ಅಭ್ಯರ್ಥಿಗಳು ಆ ಎರಡು ಭಾಷೆಗಳಲ್ಲೇ ಉತ್ತರಿಸಬೇಕು. ಪ್ರಶ್ನೆಗಳು ಕನ್ನಡದಲ್ಲಿದ್ದು, ಕನ್ನಡದಲ್ಲೇ ಉತ್ತರ ಬರೆಯಲು ಅವಕಾಶವಿದ್ದರೆ, ರಾಜ್ಯದಲ್ಲಿ ಪರೀಕ್ಷೆ ಬರೆಯುವವರ ಸಂಖ್ಯೆಯೂ ಹೆಚ್ಚಾಗುತ್ತದೆ.

ವಿಶೇಷವಾಗಿ ಗ್ರಾಮೀಣ ಭಾಗದವರಿಗೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಸರ್ಕಾರ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ ರಾಜ್ಯದ ಇನ್ನಷ್ಟು ಪ್ರತಿಭೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ

ಇಷ್ಟೆಲ್ಲ ತಿಳಿದ ಮೇಲೆ ಅನೇಕರಲ್ಲಿ ಈ ವರ್ಷ ಎಸ್‌ಎಸ್‌ಸಿ ಪರೀಕ್ಷೆ ಬರೆಯುವ ಆಸಕ್ತಿ ಬಂದಿರಬೇಕಲ್ಲವಾ ?ಹಾಗಿದ್ದರೆ, ಇನ್ನೇಕೆ ತಡ. ಈಗಲೇ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆಯಲು ಸಿದ್ಧರಾಗಿ. ವಿವರಗಳಿಗಾಗಿ ಬಾಕ್ಸ್‌ನಲ್ಲಿರುವ ಮಾಹಿತಿ ನೋಡಿ.

(ಲೇಖಕರು : ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ,
ಇಂಡಿಯಾ ಫಾರ್ ಐಎಎಸ್ ಅಕಾಡೆಮಿ, ಬೆಂಗಳೂರು)
ceo@india4ias.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.