ಕಳೆದ ಸಂಚಿಕೆಯಲ್ಲಿ ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ (ಸ್ಟಾಫ್ ಸಲೆಕ್ಷನ್ ಕಮಿಷನ್– ಎಸ್ಎಸ್‌ಸಿ) ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತದ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗಿತ್ತು.
ಈ ವಾರದ ಸರಣಿಯಲ್ಲಿ ಪರೀಕ್ಷೆಗೆ ಬೇಕಾದ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸುವುದು ಹೇಗೆ? ಯಾವ ಪ್ರಕಟಣೆಯ ಯಾವ ಪುಸ್ತಕಗಳನ್ನು ಓದಬಹುದು. ಅವುಗಳನ್ನು ಸಂಗ್ರಹಿಸುವುದು ಹೇಗೆ ? ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳು ಯಾವುವು ಎಂಬದರ ಕುರಿತು ಮಾಹಿತಿ ನೀಡಲಾಗುತ್ತಿದೆ.
ಅಧ್ಯಯನ ಸಾಮಗ್ರಿ
ಅಧ್ಯಯನ ಸಾಮಗ್ರಿಯ ಸಂಗ್ರಹಣೆ ಒಂದು ಕಲೆಯಿದ್ದಂತೆ. ಮುಖ ಪುಟವನ್ನು ನೋಡಿ ಪುಸ್ತಕದೊಳಗಿನ ಹೂರಣವನ್ನು ನಿರ್ಧಾರ ಮಾಡಿ, ಖರೀದಿಸುವ ಬದಲು, ಪುಸ್ತಕದ ಒಳಗಿರುವ ವಸ್ತು ವಿಷಯವನ್ನು ಅವಲೋಕಿಸಬೇಕು. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ಒಂದಿಬ್ಬರು ಅಭ್ಯರ್ಥಿಗಳನ್ನು ಮಾತನಾಡಿಸಿ, ಅಭಿಪ್ರಾಯ ಸಂಗ್ರಹಿಸಬೇಕು. ಅವರು ಯಾವ ಪುಸ್ತಕಗಳನ್ನು ಓದಿದ್ದಾರೆ ಎಂಬುದನ್ನು ತಿಳಿಯಬೇಕು. ನಂತರ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಬೇಕು.
ಪ್ರಸ್ತುತ ಮಾರುಕಟ್ಟೆಯಲ್ಲಿ ಜಿ.ಕೆ ಪ್ರಕಾಶನ, ದಿಶಾ ಪ್ರಕಾಶನ, ಅರಿಹಂತ್ ಪ್ರಕಾಶನ, ಅಡ್ಡಾ 24 x 7, ಎಜುರೈಸ್ ಪ್ರಕಾಶನ, ಎಜುಗೊರಿಲ್ಲಾ ಪ್ರಕಾಶನ, ಅಗರ್ ವಾಲ್ , ಎಕ್ಸಾಂ ಕಾರ್ಟ್ ಪ್ರಕಾಶನ ಪುಸ್ತಕಗಳಲ್ಲದೆ. ಸ್ಥಳೀಯ ಪ್ರಕಾಶನದ ಪುಸ್ತಕಗಳು ಲಭ್ಯವಿದೆ. ಅಭ್ಯರ್ಥಿಗಳು ತಮ್ಮ ಮನಸ್ಥಿತಿ ಹಾಗೂ ಬೌದ್ಧಿಕತೆ ಹೊಂದುವ ಅಧ್ಯಯನ ಸಾಮಾಗ್ರಿ ಸಂಗ್ರಹಿಸಬೇಕು.
ತರಬೇತಿ ಕೇಂದ್ರಗಳು
ಸಂಯೋಜಿತ ಪದವಿ ಮಟ್ಟದ ಪರೀಕ್ಷೆ (ಸಿ.ಜಿ.ಎಲ್) ಗೆ ಆನ್-ಲೈನ್ ಹಾಗೂ ಆಫ್-ಲೈನ್ ತರಬೇತಿ ನೀಡುವ ಅನೇಕ ಪ್ರತಿಷ್ಠಿತ ಖಾಸಗಿ ತರಬೇತಿ ಸಂಸ್ಥೆಗಳಿವೆ. ಪ್ರಮುಖವಾಗಿ ಮಹೇಂದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಟ್ರೈನಿಂಗ್, ಕರಿಯರ್ ಪವರ್, ಕರಿಯರ್ ಲಾಂಚರ್, ಪ್ಯಾರಾಮೌಂಟ್ ಕೋಚಿಂಗ್ ಸೆಂಟರ್, ಬಿ.ಎಸ್.ಸಿ. ಅಕಾಡೆಮಿ ಸೇರಿದಂತೆ ಅನೇಕ ಸ್ಥಳೀಯವಾಗಿ ತರಬೇತಿ ನೀಡುವ ತರಬೇತಿ ಸಂಸ್ಥೆಗಳಿವೆ.
ತರಬೇತಿ ಸಂಸ್ಥೆಗಳಲ್ಲಿ ಪ್ರಿಲೋಡೆಡ್ ಅನಿಮೇಟೆಡ್ ವಿಡಿಯೊಗಳು, ಡಿಜಿಟಲ್ ಕಂಟೆಂಟ್, ಲಭ್ಯವಿರುತ್ತದೆ. ಪ್ರಮುಖವಾಗಿ ಸರಣಿಯಾಗಿಪರೀಕ್ಷೆಗಳನ್ನು ಬರೆದು ಅಭ್ಯಾಸ ಮಾಡುವುದರಿಂದ ಪರೀಕ್ಷಾ ಕೇಂದ್ರದಲ್ಲಿ ಉಂಟಾಗಬಹುದಾದ ಒತ್ತಡ ಕಡಿಮೆಯಾಗುತ್ತದೆ. ಜೊತೆಗೆ ನೈಜ ಸಾಮರ್ಥ್ಯದ ವಾಸ್ತವಿಕತೆ ಅರಿವಾಗುತ್ತದೆ. ತರಬೇತಿ ಪಡೆಯುವುದನ್ನು ಪರೀಕ್ಷಾರ್ಥಿಗಳು ಸ್ವಸಾಮರ್ಥ್ಯದ ಮೇಲೆ ನಿರ್ಧಾರ ಮಾಡಬೇಕು.
ಮಾನಸಿಕ ಸಿದ್ಧತೆ ಅಗತ್ಯ
ಅಭ್ಯರ್ಥಿಗಳು ಅಧ್ಯಯನ ಸಾಮಗ್ರಿ ಸಂಗ್ರಹಿಸುವುದು ಮತ್ತು ತರಬೇತಿ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುವಷ್ಟೇ ಆದ್ಯತೆಯನ್ನು ಮಾನಸಿಕ ಸಿದ್ಧತೆಗೂ ನೀಡಬೇಕು.
ಸ್ಪರ್ಧಾತ್ಮಕ ಪರೀಕ್ಷೆ ಎಂಬುದು ಒಂದು ರೀತಿಯಮಾನಸಿಕ ಆಟ (ಸೈಕಾಲಾಜಿಕಲ್ ಗೇಮ್)ವಿದ್ದಂತೆ. ಕಣ್ಮುಂದೆ ಪ್ರಶ್ನೆ ಉತ್ತರಗಳೆರಡೂ ಇದ್ದರೂ ಸರಿ ಉತ್ತರ ನಿರ್ಧರಿಸಲಾಗದಂತಹ ಪರಿಸ್ಥಿತಿ ಇರುತ್ತದೆ. ಅಭ್ಯಾಸದಲ್ಲಿನ ಲೋಪ, ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ವ್ಯವಧಾನವಿಲ್ಲದಿರುವುದು ಹಾಗೂ ವಿವೇಚನೆಯ ಕೊರತೆಯಿಂದಾಗಿ ಮನಸ್ಸಿನಲ್ಲಿ ಗೊಂದಲವೇರ್ಪಡುವುದೇ ಇಂಥ ಪರಿಸ್ಥಿತಿಗೆ ಕಾರಣ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸಬೇಕಾದರೆ ವಿಷಯವನ್ನು ಶಬ್ದ ಹಾಗೂ ಅಕ್ಷರ ರೂಪಕ್ಕೆ ಬದಲಾಗಿ ವಸ್ತು ರೂಪದಲ್ಲಿ ಕೂಡಿಡಬೇಕು. ಕಂಠಪಾಠ ಅಥವಾ ಮೇಲುಸ್ತರದ ಓದು ಕೆಲ ಸಮಯದ ಮಟ್ಟಿಗೆ ನೆನಪಿನಲ್ಲಿ ಉಳಿಯುತ್ತದೆ. ಕೃತಕವಾದ ಜ್ಞಾನವನ್ನು ತಂದು ಕೊಡುತ್ತದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸಬೇಕಾದರೆ ಸಹಜ ಮತ್ತು ವಸ್ತು ಆಧಾರಿತ ಕಲಿಕೆಯಿಂದ ಮಾತ್ರ ಸಾಧ್ಯ.
(ಮುಂದಿನ ವಾರ: ಎರಡು ಮತ್ತು ಮೂರನೇ ಹಂತಗಳ ಪರೀಕ್ಷಾ ಸಿದ್ಧತೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.