ಮಲ್ಟಿಮೀಡಿಯಾ ಅಥವಾ ಬಹು ಮಾಧ್ಯಮದ ಕೋರ್ಸ್‌ಗೆ ಸದ್ಯಕ್ಕಂತೂ ಅತ್ಯಂತ ಹೆಚ್ಚು ಬೇಡಿಕೆಯಿದೆ. ಚೆನ್ನಾಗಿ ಸಂಪಾದನೆ ಮಾಡುವಂತಹ ವೃತ್ತಿ ಅವಕಾಶಗಳು ವಿಪುಲವಾಗಿದ್ದು ವಿದ್ಯಾರ್ಥಿಗಳು ಇದರತ್ತ ಆಕರ್ಷಿತರಾಗುತ್ತಿದ್ದಾರೆ.
ಸಂದೇಶಗಳನ್ನು ಸೃಷ್ಟಿಸಲು ಬಳಸುವ ಧ್ವನಿ, ಚಿತ್ರ, ಬರಹ, ಗ್ರಾಫಿಕ್ಸ್, ಅನಿಮೇಶನ್ ಮೊದಲಾದ ವಿವಿಧ ರೂಪಗಳ ಮಾಧ್ಯಮ
ಗಳನ್ನೊಳಗೊಂಡಿರುವ ಮಲ್ಟಿಮೀಡಿಯಾಗೆ ವಿವಿಧ ಸೇವಾ ವಲಯಗಳಲ್ಲಿ ಬಹು ಬೇಡಿಕೆಯಿದೆ. ವಿಷಯದ ಸೃಷ್ಟಿಗೆ ಹಾಗೂ ಸಂವಹನಕ್ಕೆ ಬಹಳಷ್ಟು ಉದ್ಯಮಗಳ ಆಯ್ಕೆ ಈ ಮಲ್ಟಿಮೀಡಿಯಾ. ಅದರಲ್ಲೂ ಮಾಧ್ಯಮ ಮತ್ತು ಸಂವಹನ ಉದ್ಯಮಗಳು ಹೆಚ್ಚಾಗಿ ಇದರ ಮೇಲೆ ನಡೆಯುತ್ತಿರುವುದರಿಂದ ಮಲ್ಟಿಮೀಡಿಯಾ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ ಎನ್ನಬಹುದು. ಹೀಗಾಗಿ ಗ್ರಾಫಿಕ್ ವಿನ್ಯಾಸಕರು, ವೆಬ್ ವಿನ್ಯಾಸಕರು, ಗೇಮ್, ಅನಿಮೇಶನ್ ಮೊದಲಾದ ತಜ್ಞರಿಗೆ ಅವಕಾಶಗಳ ಬಾಗಿಲನ್ನು ತೆರೆದಿದೆ. ಮಕ್ಕಳು ಈ ಕ್ಷೇತ್ರದಲ್ಲಿ ಅವ
ಕಾಶ ಹುಡುಕಿಕೊಳ್ಳಲು ಬಯಸಿದರೆ ಪೋಷಕರು ಅವರ ಕನಸಿಗೆ ನೀರೆರೆಯಲು ಹಿಂಜರಿಯಬೇಡಿ.
ಹಾಗಾದರೆ ಸಮಗ್ರವಾದ ಮಲ್ಟಿಮೀಡಿಯಾ ಕೋರ್ಸ್‌ನಿಂದ ಏನು ಪ್ರಯೋಜನವಿದೆ ಎಂಬುದನ್ನು ನೋಡೋಣ.
ಮಾಹಿತಿಯ ವಿಶ್ಲೇಷಣೆ: ಇಂದಿನ ಮಾಹಿತಿ ಯುಗದಲ್ಲಿ ಸಂದೇಶವನ್ನು ಶೀಘ್ರವಾಗಿ ಹಾಗೂ ಪರಿಣಾಮಕಾರಿಯಾಗಿ ನೀಡಲು ವಿವಿಧ ಮಾಧ್ಯಮಗಳ ಸಮರ್ಪಕ ಮಿಶ್ರಣದಿಂದ ಮಾತ್ರ ಸಾಧ್ಯ. ಇದರಿಂದ ಯಾರಿಗೆ ಸಂದೇಶ ತಲುಪುವುದೋ ಅಂಥವರು ಇದನ್ನು ಚೆನ್ನಾಗಿ ಅರ್ಥೈಸಿಕೊಂಡು ಬಹುಕಾಲ ಅದನ್ನು ಉಳಿಸಿಕೊಳ್ಳಲು ಸಮರ್ಥರಾಗುತ್ತಾರೆ.
ಸಮರ್ಪಕ ಬಳಕೆ: ಮಲ್ಟಿಮೀಡಿಯಾ ಬಳಕೆಯಿಂದ ವಿಸ್ತಾರವಾದ ಕ್ಷೇತ್ರಕ್ಕೆ ನಿಮ್ಮನ್ನು ನೀವು ತೆರೆದುಕೊಳ್ಳಬಹುದು. ಉದಾಹರಣೆಗೆ ವಿಡಿಯೊ ಗೇಮ್, ಮೊಬೈಲ್ ಆ್ಯಪ್, ಅನಿಮೇಟೆಡ್ ವಿಡಿಯೊದಂತಹ ಶೈಕ್ಷಣಿಕ ಮೂಲಗಳು, ಪವರ್ ಪಾಯಿಂಟ್ ಪ್ರೆಸೆಂಟೇಶನ್, ಕ್ವಿಜ್, ವಿಡಿಯೊ ಅಥವಾ ಡಾಕ್ಯುಮೆಂಟರಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ, ವೆಬ್‌ಸೈಟ್ ಮತ್ತು ಆನ್‌ಲೈನ್ ಜಾಹೀರಾತುಗಳು.
ವೀಕ್ಷಕರಿಗೆ ದೃಶ್ಯ ಮತ್ತು ಶ್ರಾವ್ಯದ ಮೂಲಕ ವಿವಿಧ ಮಾಹಿತಿಗಳನ್ನು ನೀಡಿ ಅವರು ಅದರಲ್ಲೇ ತಲ್ಲೀನರಾಗಿರುವಂತೆ ಮಾಡುವ ಸಾಮರ್ಥ್ಯ ಮಲ್ಟಿಮೀಡಿಯಾಗೆ ಇದೆ. ಮಲ್ಟಿಮೀಡಿಯಾ ಬಳಕೆಯಿಂದ ವಿಷಯವನ್ನು ವೇಗವಾಗಿ ಅರ್ಥ ಮಾಡಿಕೊಳ್ಳಬಹುದು.
ಮಲ್ಟಿಮೀಡಿಯಾ ಹಿನ್ನೆಲೆ ಇರುವವರು ವಿಡಿಯೊ, ಇನ್ಫೋಗ್ರಾಫಿಕ್ಸ್, ಪಾಡ್‌ಕಾಸ್ಟ್, ವಿವಿಧ ವೇದಿಕೆಗಳಿಗೆ ಫ್ಲಾಷ್ ಬ್ಯಾನರ್ ಮೊದಲಾದ ವಿಷಯಗಳನ್ನು ಉತ್ತಮವಾಗಿ ರೂಪಿಸಬಹುದು. ಈ ವೇದಿಕೆಗಳು ವಿವಿಧ ಕಂಪನಿಗಳಿಗೆ ಸೇರಿದ ವೆಬ್‌ಸೈಟ್, ಅದರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಾದ ಯೂಟ್ಯೂಬ್ ಚಾನೆಲ್, ಫೇಸ್‌ಬುಕ್ ಪೇಜ್, ಟ್ವಿಟರ್ ಖಾತೆಯನ್ನು ಒಳಗೊಂಡಿರುತ್ತವೆ. ನಿಗದಿತ ಗುರಿಯನ್ನು ತಲುಪಲು, ವೀಕ್ಷಕರು ಅಥವಾ ಓದುಗರ ಸಂಖ್ಯೆಯನ್ನು ಜಾಸ್ತಿ ಮಾಡಲು ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಮಲ್ಟಿಮೀಡಿಯಾ ತಜ್ಞರು ನೆರವಿಗೆ ಬರುತ್ತಾರೆ.
ಅವಕಾಶಗಳು
ಮಲ್ಟಿಮೀಡಿಯಾ ಉದ್ಯಮಗಳಾದ ಸಿನಿಮಾ ತಯಾರಿಕೆ ಸಂಸ್ಥೆಗಳು, ವೆಬ್‌ಸೈಟ್‌ಗಳು, ಸುದ್ದಿ ಸಂಸ್ಥೆಗಳು, ಟಿವಿ ಚಾನೆಲ್‌ಗಳು, ಜಾಹೀರಾತು ಕಂಪನಿಗಳು, ಗೇಮಿಂಗ್ ಉದ್ಯಮ, ಟೆಲಿಕಾಂ ಉದ್ಯಮ ಮೊದಲಾದ ಕಡೆ ಮಲ್ಟಿಮೀಡಿಯಾ ತಜ್ಞರಿಗೆ ವಿಪುಲ ಅವಕಾಶಗಳಿವೆ. ಹಾಗೆಯೇ ಸಾಫ್ಟ್‌ವೇರ್ ಕಂಪನಿಗಳಲ್ಲೂ ಸಾಕಷ್ಟು ಉತ್ತಮ ಅವಕಾಶಗಳಿವೆ.
ಇವಲ್ಲದೇ ಶೈಕ್ಷಣಿಕ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಕ್ಷೇತ್ರಗಳಲ್ಲಿ ಕೂಡ ಅವರ ಸೇವೆಗಳ ಬಗ್ಗೆ ಪ್ರಚಾರ ನೀಡಲು ಬಳಸಿಕೊಳ್ಳಲಾಗುತ್ತದೆ. ದೊಡ್ಡ ಕಂಪನಿಗಳ ರೀತಿಯಲ್ಲೇ ನವೋದ್ಯಮಗಳು ಕೂಡ ವೆಬ್‌ಸೈಟ್‌ಗಳ ಮೂಲಕ ಪ್ರಚಾರ ಪಡೆಯುತ್ತವೆ. ಈ ವೆಬ್‌ಸೈಟ್ ವಿನ್ಯಾಸ ಮತ್ತು ಅಭಿವೃದ್ಧಿಗೆ ಮಲ್ಟಿಮೀಡಿಯಾ ಕೌಶಲ ಅಗತ್ಯ.
ವಿವಿಧ ಬಗೆಯ ಮಾಧ್ಯಮಗಳ ಒಟ್ಟುಗೂಡುವಿಕೆಯಿಂದಾಗಿ ಹಾಗೂ ಜನರಲ್ಲಿ ಇದರ ಬಳಕೆ ಮತ್ತು ಹಂಚಿಕೆ ಹೆಚ್ಚಾಗಿರುವುದರಿಂದ ಮಲ್ಟಿಮೀಡಿಯಾ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಹೊಂದುವ ಎಲ್ಲಾ ಸಾಧ್ಯತೆಗಳಿವೆ. →ಗೇಮಿಂಗ್ →ತಂತ್ರಜ್ಞಾನ ಮತ್ತು →ರಿಯಾಲಿಟಿ ಆ್ಯಪ್‌ಗಳಂತಹ ಕ್ಷೇತ್ರಗಳಲ್ಲಿ ಸಂಶೋಧನೆಗಳಿಂದಾಗಿ ವಿನ್ಯಾಸಕರು ತಮ್ಮ ಕೌಶಲವನ್ನು ಸುಧಾರಿಸಿಕೊಳ್ಳುವ ಅವಶ್ಯಕತೆಯೂ ಇದೆ. ಬಳಕೆದಾರರಿಗೆ ಹೊಸ ಬಗೆಯ ಅನುಭವ ನೀಡಲು ಇದು ಅಗತ್ಯ. ವೈದ್ಯಕೀಯ, ಔಷಧ ಮತ್ತು ರಕ್ಷಣಾ ಕ್ಷೇತ್ರಗಳು ಕೂಡ ತರಬೇತಿಯ ಅಂಗವಾಗಿ ಈಗ ವಿಷುವಲ್ ರಿಯಾಲಿಟಿಯತ್ತ ಮುಖ ಮಾಡಿವೆ. ಹೀಗಾಗಿ, ಅವಕಾಶಗಳು ಇನ್ನೂ ಜಾಸ್ತಿ ಆಗಲಿವೆ.
ಕೌಶಲಗಳು: ವಿವಿಧ ಬಗೆಯ ಸಾಫ್ಟ್‌ವೇರ್‌ಗಳ ಬಗ್ಗೆ ತಿಳಿವಳಿಕೆಯಲ್ಲದೇ ಸೃಜನಶೀಲತೆಯೂ ಈ ಕ್ಷೇತ್ರದಲ್ಲಿ ಅಗತ್ಯ. ಜೊತೆಗೆ ವಿನ್ಯಾಸದಲ್ಲಿ ಸೌಂದರ್ಯಪ್ರಜ್ಞೆ, ವರ್ಣಗಳ ಸಂಯೋಜನೆಯ ಅರಿವು, ಸಂವಹನ ಕೌಶಲ ಕೂಡ ಬೇಕಾಗುತ್ತದೆ.
ವಿದ್ಯಾರ್ಥಿಗಳಿಗೆ ಪ್ರಯೋಜನ
ವಿದ್ಯಾರ್ಥಿಗಳು ವಿವಿಧ ಕೌಶಲಗಳನ್ನು ಕಲಿಯಬಹುದು. ಮಲ್ಟಿಮೀಡಿಯಾ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಗ್ರಾಫಿಕ್ ವಿನ್ಯಾಸ, ವಿಡಿಯೊ ಮತ್ತು ಆಡಿಯೊ ಎಡಿಟಿಂಗ್, ವೆಬ್ ವಿನ್ಯಾಸ, ವಿಎಫ್‌ಎಕ್ಸ್ ಸೃಷ್ಟಿ, 2ಡಿ ಮತ್ತು 3ಡಿ ಅನಿಮೇಶನ್ ಮತ್ತು ಮಲ್ಟಿಮೀಡಿಯಾ ಪ್ರೋಗ್ರಾಮಿಂಗ್ ಕಲಿಯಬಹುದು. ಫೋಟೊಶಾಪ್, ಕೋರಲ್ ಡ್ರಾ, ಫ್ಲಾಷ್, ಡ್ರೀಂವೀವರ್, ಇಲ್ಲಸ್ಟ್ರೇಟರ್, ಇನ್‌ಡಿಸೈನ್, ಪೇಜ್‌ಮೇಕರ್ ಮೊದಲಾದ ಸಾಫ್ಟ್‌ವೇರ್ ಬಳಕೆಯನ್ನು ಕಲಿಯಬಹುದು.
ಕೋರ್ಸ್‌ಗಳು
ವಿಷುವಲ್ ಕಮ್ಯೂನಿಕೇಶನ್ ಅಥವಾ ಮಲ್ಟಿಮೀಡಿಯಾದಲ್ಲಿ ಮೂರು ವರ್ಷಗಳ ಪದವಿ ಕೋರ್ಸ್ ಮಾಡಿಕೊಂಡು ನೇರವಾಗಿ ಉದ್ಯೋಗಕ್ಕೆ ಸೇರಬಹುದು. ಹಾಗೆಯೇ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಕೂಡ ಮಾಡಬಹುದು. ಅಲ್ಪಾವಧಿ ಡಿಪ್ಲೊಮಾ ಅಥವಾ ಸರ್ಟಿಫಿಕೇಟ್ ಕೋರ್ಸ್‌ಗಳು ಕೂಡಾ ಲಭ್ಯ. ಜೊತೆಗೆ ವಿವಿಧ ಟೂಲ್‌ಗಳು ಹಾಗೂ ತಂತ್ರಜ್ಞಾನದಲ್ಲಿ ಅನುಭವ ಪಡೆಯಲು ಕನಿಷ್ಠ ಒಂದು ವರ್ಷದ ತರಬೇತಿ ಕೂಡ ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.