ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯ ವೇಳಾಪಟ್ಟಿಯಲ್ಲಿ ನಿದ್ರೆಗಾಗಿ ಮೀಸಲಿಟ್ಟ ಅವಧಿ ಹೆಚ್ಚಾಯಿತು ಎಂಬ ಕಾರಣದಿಂದ ಹಿಡಿದು ಪರೀಕ್ಷೆಯಲ್ಲಿ ಉತ್ತರ ತಿಳಿದಿದ್ದರೂ ಸಹ ಸಮಯದ ಅಭಾವದಿಂದ ಕೊನೆಯ ಎರಡು ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ ಎಂಬುದರವರೆಗೂ ವೈಫಲ್ಯಕ್ಕೆ ಅನೇಕ ಕಾರಣಗಳು ದೊರಕುತ್ತವೆ. ಇದಕ್ಕೆಲ್ಲ ಉತ್ತಮ ಸಮಯ ನಿರ್ವಹಣಾ ತಂತ್ರದ ಕೊರತೆಯೇ ಕಾರಣ. ಉದಾಹರಣೆಗೆ ಮೊದಲ ಬಾರಿಗೆ ಪರೀಕ್ಷೆಯನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಆರೋಗ್ಯದ ದೃಷ್ಟಿಯಿಂದ ನಿದ್ರೆಗಾಗಿ ಎಂಟು ಗಂಟೆಗಳನ್ನು ಮೀಸಲಿಡುವ ನೆಪ ಇಟ್ಟುಕೊಳ್ಳುವ ಬದಲು ಹಂತ ಹಂತವಾಗಿ ಕಡಿಮೆಗೊಳಿಸಿ ನಿತ್ಯ ಆರು ಗಂಟೆಗಳ ಕಾಲ ನಿದ್ರೆ ಮಾಡಿದರೂ ಸಾಕು, ಪ್ರತಿನಿತ್ಯ ದೊರೆತ ಎರಡು ಗಂಟೆಗಳ ಕಾಲವನ್ನು ಹೆಚ್ಚಿನ ಪರೀಕ್ಷಾ ತಯಾರಿಗಾಗಿ ವಿನಿಯೋಗಿಸಿ ಇದೇ ವರ್ಷ ಪರೀಕ್ಷೆಯಲ್ಲಿ ಅರ್ಹರಾಗಬೇಕೇ ಹೊರತು ಮುಂದಿನ ವರ್ಷದವರೆಗೂ ನೀವು ಮತ್ತೆ ಓದಿಕೊಳ್ಳಬೇಕಾದ ಅನಿವಾರ್ಯತೆ ತಂದುಕೊಳ್ಳಬಾರದು.
ವಿಷಯಾಧಾರಿತ ಅಧ್ಯಯನಕ್ಕೆ ಒತ್ತು ನೀಡಿ
ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ವಿಷಯದಲ್ಲಿ ಒಂದೊಂದು ವಿಧದ ನೈಪುಣ್ಯದ ಮಟ್ಟ ಹೊಂದಿರುತ್ತಾನೆ. ಉದಾಹರಣೆಗೆ ಕೆಲವರು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಕೆಲವರು ರೀಸನಿಂಗ್, ಕೆಲವರು ಇಂಗ್ಲಿಷ್, ಇನ್ನು ಕೆಲವರು ಜನರಲ್ ನಾಲೆಜ್/ ಜನರಲ್ ಸೈನ್ಸ್ ವಿಷಯದಲ್ಲಿ ಪ್ರಾವೀಣ್ಯ ಹೊಂದಿರುತ್ತಾರೆ. ಆಗ ಅವರು ತಾವು ನೈಪುಣ್ಯ ಹೊಂದಿರುವ ವಿಷಯ ಬಿಟ್ಟು ದೌರ್ಬಲ್ಯ ಇರುವ ವಿಷಯಗಳತ್ತ ಹೆಚ್ಚು ಒತ್ತು ಕೊಡುತ್ತಾರೆ. ಹೀಗೆ ಅಧ್ಯಯನ ನಡೆಸಿದಾಗ ದೌರ್ಬಲ್ಯ ಇರುವ ವಿಷಯದಲ್ಲಿ ಸರಾಸರಿ ಹಾಗೂ ಬಹಳ ದಿನಗಳ ಕಾಲ ಅಭ್ಯಾಸದ ಅಂತರ ಕಾಯ್ದುಕೊಂಡ ಕಾರಣ ನೈಪುಣ್ಯ ಇರುವ ವಿಷಯಗಳಲ್ಲಿ ಕೂಡ ಸರಾಸರಿ ಅಂಕ ಗಳಿಸಲು ಆರಂಭಿಸುತ್ತಾರೆ. ಇದರಿಂದಾಗಿ ಯಾವುದಾದರೂ ಒಂದು ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಒಟ್ಟಾರೆ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಇದಲ್ಲದೆ ನೀವು ಹೆಚ್ಚು ಜ್ಞಾನ ಇರುವ ವಿಷಯದಲ್ಲಿ ಅಧ್ಯಯನ ಕಡಿಮೆಗೊಳಿಸಿದಾಗ ಅಥವಾ ತ್ಯಜಿಸಿದಾಗ ಹೊಸ ಮಾದರಿಯ ಪ್ರಶ್ನೆಗಳು ಆ ವಿಷಯದಲ್ಲಿ ಕಂಡು ಬಂದಲ್ಲಿ ಖಂಡಿತ ಉತ್ತರಿಸಲು ಸಾಧ್ಯವಿಲ್ಲ. ಹಾಗಾಗಿ ಮೊದಲು ಹೆಚ್ಚು ಪರಿಣತಿ ಇರುವ ವಿಷಯಗಳನ್ನು ಪ್ರತಿನಿತ್ಯ ಅಭ್ಯಾಸಿಸಿ ಹಾಗೂ ಹೊಸ ಮಾದರಿಯ ಪ್ರಶ್ನೆಗಳನ್ನು ಬಿಡಿಸಿ. ಅಲ್ಲಿ ಕಷ್ಟಕರ ಪ್ರಶ್ನೆಗಳು ಬಂದಲ್ಲಿ ಉತ್ತರಿಸುತ್ತೇನೆ ಹಾಗೂ ಸುಲಭ ಪ್ರಶ್ನೆಗಳು ಬಂದಲ್ಲಿ ಅತಿ ಕಡಿಮೆ ಸಮಯದಲ್ಲಿ ಉತ್ತರಿಸುತ್ತೇನೆ ಎಂಬ ಆತ್ಮವಿಶ್ವಾಸವನ್ನು ಹೆಚ್ಚುಹೆಚ್ಚು ಪ್ರಶ್ನೆಗಳನ್ನು ಬಿಡಿಸುವುದರ ಮುಖಾಂತರ ತಂದುಕೊಳ್ಳಿ.
ಪ್ರಚಲಿತ ವಿದ್ಯಮಾನದಂತಹ (ಕರೆಂಟ್ ಅಫೇರ್ಸ್) ವಿಷಯಗಳ ಅಭ್ಯಾಸಕ್ಕಾಗಿ ನಿತ್ಯ ಕಡಿಮೆ ಸಮಯ ಮೀಸಲಿಡಿ
ಪ್ರಚಲಿತ ವಿದ್ಯಮಾನದಂತಹ ಪ್ರಶ್ನೆಗಳು ಮೇನ್ಸ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಹಾಗೂ ನಿಖರತೆ ಇದ್ದರೆ ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಬಹುದು. ಇಂತಹ ಪ್ರಶ್ನೆಗಳನ್ನು ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಅರ್ಹರಾದ ನಂತರ ಕಡಿಮೆ ಸಮಯದಲ್ಲಿ ಹೆಚ್ಚು ಸಮಯ ಮೀಸಲಿಟ್ಟು ಅಭ್ಯಾಸಿಸುತ್ತೇನೆ ಎಂದರೆ ಅದು ಖಂಡಿತ ವ್ಯರ್ಥ ಪ್ರಯತ್ನ. ಈ ವಿಭಾಗಕ್ಕೆ ಅವಶ್ಯಕವಿರುವ ಅಂದರೆ ಅವು ಕಳೆದ ಆರು ತಿಂಗಳುಗಳ ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳು. ಹಾಗಾಗಿ ಇವುಗಳನ್ನು ಈಗಿನಿಂದಲೇ ಪ್ರತಿನಿತ್ಯ ದಿನದಲ್ಲಿ ಗರಿಷ್ಠ ಒಂದು ಗಂಟೆಯ ಕಾಲ ಅಭ್ಯಾಸ ಮಾಡಿದರೆ ಸಾಕು, ಆ ದಿನದ ಎಲ್ಲಾ ಅಂದಾಜು ಹದಿನೈದರಿಂದ ಇಪ್ಪತ್ತು ಪ್ರಶ್ನೆಗಳನ್ನು ವಿಶ್ಲೇಷಿಸಿ ಅಂಕಿ-ಅಂಶಗಳ ಸಮೇತ ನೆನಪಿನಲ್ಲಿಟ್ಟುಕೊಳ್ಳಬಹುದು. ಹಾಗಾಗಿ ಇಂತಹ ವಿಷಯಗಳನ್ನು ಪ್ರತಿನಿತ್ಯ ಎರಡರಿಂದ ಮೂರು ಗಂಟೆಗಳ ಕಾಲ ಕೊನೆಯಲ್ಲಿ ಅಭ್ಯಾಸಿಸುವುದು ಸೂಕ್ತವಲ್ಲ ಹಾಗೂ ಈ ರೀತಿ ಅಧ್ಯಯನ ತಂತ್ರ ರೂಪಿಸಿದಲ್ಲಿ ವರ್ಷಗಳು ಮತ್ತು ಅಂಕಿ–ಅಂಶಗಳು ನಿಖರವಾಗಿ ತಿಳಿಯದಿರುವುದು ಹಾಗೂ ಗೊಂದಲವಾಗುವ ಸಾಧ್ಯತೆಯೇ ಹೆಚ್ಚು.
ಅಧ್ಯಯನ ಸಾಮಗ್ರಿ ಹಾಗೂ ಕಾಲಮಿತಿಯನ್ನು ನಿಗದಿಪಡಿಸಿಕೊಳ್ಳಿ
ಆಫ್‌ಲೈನ್ ಮುಖಾಂತರ ಅಭ್ಯಾಸಿಸುತ್ತಿರುವ ಪುನರಾವರ್ತಿತ ಅಭ್ಯರ್ಥಿಗಳು ನವೀಕರಿಸಿದ ಆಫ್‌ಲೈನ್ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಿ ಅಥವಾ ಆನ್‌ಲೈನ್ ಮುಖಾಂತರ ಅಧ್ಯಯನ ನಡೆಸಿ. ಇನ್ನು ಆನ್‌ಲೈನ್ ಮುಖಾಂತರ ಅಭ್ಯಾಸ ನಡೆಸುತ್ತಿರುವ ಅಭ್ಯರ್ಥಿಗಳಿಗೆ ನವೀಕರಿಸಿದ ಅಧ್ಯಯನ ಸಾಮಗ್ರಿಗಳೇ ದೊರೆಯುತ್ತವೆ. ಹಾಗಾಗಿ ದಿನನಿತ್ಯದ ವೇಳಾಪಟ್ಟಿಯಂತೆ ಅಭ್ಯಾಸ ನಡೆಸಿ. ಇದಲ್ಲದೆ ವಿಷಯಕ್ಕೆ ಅನುಸಾರವಾಗಿ ಅಧ್ಯಯನದ ಕಾಲಮಿತಿಯನ್ನು ನಿಗದಿಪಡಿಸಿಕೊಳ್ಳಿ. ಜನರಲ್ ನಾಲೆಜ್/ ಕರೆಂಟ್ ಅಫೇರ್ಸ್ ಮತ್ತು ಇಂಗ್ಲಿಷ್ ವಿಷಯಗಳ ಅಭ್ಯಾಸಕ್ಕಾಗಿ ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಸಮಯ ನಿಗದಿ ಮಾಡಿಕೊಂಡರೆ ಒಳ್ಳೆಯದು.
ಓದುವ ಕೌಶಲದ ಮುಖಾಂತರ ಇಂಗ್ಲಿಷ್ ವಿಷಯದ ನೈಪುಣ್ಯ ಹೆಚ್ಚಿಸಿಕೊಳ್ಳಿ
ಆರಂಭದಲ್ಲಿ ಗರಿಷ್ಠ ಒಂದು ವಾರದವರೆಗೂ ಇಂಗ್ಲಿಷ್ ವಿಷಯದ ವ್ಯಾಕರಣ ಮತ್ತು ನಿಯಮಗಳನ್ನು ಅಭ್ಯಾಸಿಸಿ. ನಂತರ ಪ್ರತಿದಿನ ಗರಿಷ್ಠ ಒಂದು ಗಂಟೆ ಸಂಪಾದಕೀಯ ಒಳಗೊಂಡಂತೆ ದಿನಪತ್ರಿಕೆಯನ್ನು ಓದುವುದಕ್ಕಾಗಿ ಮೀಸಲಿಡಿ. ಇದೊಂದು ಭಾಷೆಯಾಗಿರುವ ಕಾರಣ ನೀವು ಹೆಚ್ಚು ಹೆಚ್ಚು ಓದಿದಷ್ಟೂ ನಿಪುಣರಾಗುತ್ತೀರೇ ಹೊರತು ವ್ಯಾಕರಣ ನಿಯಮಗಳು ನಿರೀಕ್ಷಿತ ಫಲಿತಾಂಶ ನೀಡಲಾರವು ಹಾಗೂ ಸಮಯ ವ್ಯರ್ಥವಾಗುವುದು. ಹೀಗಾಗಿ ದಿನನಿತ್ಯ ಈ ಒಂದು ಗಂಟೆಯಲ್ಲಿ ಸಂಪಾದಕೀಯವನ್ನು ಓದಿ ಹಾಗೂ ಹೊಸ ಶಬ್ದಗಳನ್ನು ಪಟ್ಟಿಮಾಡಿ. ವಾರಕ್ಕೊಮ್ಮೆ ಪುನರ್‌ಮನನ ಮಾಡಿ.
ಸಮಯ ನಿರ್ವಹಣೆಯೊಂದಿಗೆ ತಯಾರಿ ನಡೆಸಿ
ಪರೀಕ್ಷಾ ತಯಾರಿ ನಡೆಸುತ್ತಿರುವ ಗರಿಷ್ಠ ಆರು ಗಂಟೆಗಳ ಕಾಲ ನಿದ್ರೆ, ಬೆಳಿಗ್ಗೆ ಪ್ರಚಲಿತ ವಿದ್ಯಮಾನ ಹಾಗೂ ಇಂಗ್ಲಿಷ್ ವಿಷಯಗಳಿಗಾಗಿ ತಲಾ ಒಂದು ಗಂಟೆಯ ಕಾಲ ಹಾಗೂ ಇತರೆ ಕೆಲಸಗಳಿಗೆ ನಾಲ್ಕು ಗಂಟೆಗಳ ಕಾಲ ಸಮಯ ಮೀಸಲಿಟ್ಟರೆ ಪ್ರತಿನಿತ್ಯ ಸುಲಭವಾಗಿ ನಿಮಗೆ 12 ಗಂಟೆಗಳು ಅಭ್ಯಾಸಕ್ಕಾಗಿ ದೊರೆಯುತ್ತವೆ. ಇದರಲ್ಲಿ ನೀವು ಪ್ರಾವೀಣ್ಯ ಹೊಂದಿದ ವಿಷಯಕ್ಕೆ 7 ಗಂಟೆಗಳ ಕಾಲ ಹಾಗೂ ಉಳಿದ ವಿಷಯಗಳಿಗೆ 5 ಗಂಟೆಗಳ ಕಾಲ ಅಭ್ಯಾಸಕ್ಕೆ ಮೀಸಲಿಟ್ಟು ನಿಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಿ ಹಾಗೂ ಪರೀಕ್ಷೆಯಲ್ಲಿ ಯಶಸ್ವಿಯಾಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.