ADVERTISEMENT

‘ಉಜಾಲ’ಕ್ಕೆ ಸಪ್ತವರ್ಷ

ಆಯೆಷಾ ಟಿ ಫರ್ಜಾನ
Published 1 ಫೆಬ್ರುವರಿ 2023, 20:15 IST
Last Updated 1 ಫೆಬ್ರುವರಿ 2023, 20:15 IST
   

ಇಂ ಧನ ಉಳಿತಾಯದ ಹಿನ್ನೆಲೆಯಲ್ಲಿ ಕೇಂದ್ರ ಇಂಧನ ಸಚಿವಾಲಯವು (Central Ministry of Power) ಆರಂಭಿಸಿದ ‘ಉಜಾಲ’ (Unnat Jyoti by Affordable LEDs for ALL - UJALA) ಯೋಜನೆ ಯಶಸ್ವಿಯಾಗಿ 7 ವರ್ಷಗಳನ್ನು ಪೂರೈಸಿದೆ.

ದೇಶದಾದ್ಯಂತ ಎಲ್ಲ ವರ್ಗಗಳಿಗೂ ಕಡಿಮೆ ದರದಲ್ಲಿ‌ ಕಡಿಮೆ ವಿದ್ಯುತ್‌ನಿಂದ ಹೆಚ್ಚು ಬೆಳಕು ನೀಡುವ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸುವುದು ಈ ಯೋಜನೆಯ ಉದ್ದೇಶ. ಇದು ದೇಶದಲ್ಲಿ ಇಂಧನ ದಕ್ಷತೆಯ ಸಂದೇಶ ಸಾರಲು ಭಾರತ ಸರ್ಕಾರ ಹಮ್ಮಿಕೊಂಡಿರುವ ಒಂದು ಸಶಕ್ತ ಪ್ರಯತ್ನವಾಗಿದೆ.

ಜನವರಿ 5, 2015 ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆ ನೀಡಿದರು. ಇಂಧನ ಸಚಿವಾಲಯ ಈ ಯೋಜನೆಯ ಅನುಷ್ಠಾನಗೊಳಿಸುವ ‌ನೋಡಲ್ ಸಂಸ್ಥೆಯಾಗಿದೆ.

ADVERTISEMENT

ಜನವರಿ 5, 2023 ರವರೆಗೆ ‘ಉಜಾಲ’ ಯೋಜನೆಯಡಿ ದೇಶದಾದ್ಯಂತ 72.8 ಲಕ್ಷ ಟ್ಯೂಬ್‌ಲೈಟ್‌ಗಳು, 23.59 ಲಕ್ಷ ಫ್ಯಾನ್‌ ಮತ್ತು 36.86 ಕೋಟಿ ಎಲ್ಇಡಿ ದೀಪಗಳನ್ನು ವಿತರಿಸಲಾಗಿದೆ.

ಯೋಜನೆಯ ಗುರಿ

l ಇದು ಮನೆ ಮಟ್ಟದಲ್ಲಿ ಶಕ್ತಿಯ ಸಾಮರ್ಥ್ಯ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ಇಂಧನ ದಕ್ಷ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವುದು ಹಾಗೂ ಇವು ಗಳನ್ನು ಅಳವಡಿಸಲು ಆರಂಭಿಕ ವೆಚ್ಚಗಳನ್ನು ಕಡಿತಗೊಳಿಸುವ ಗುರಿ ಹೊಂದಿದೆ. ಹೀಗಾಗಿ ಹೆಚ್ಚಿನ ಗೃಹ ಬಳಕೆದಾರರಿಗೆ ಎಲ್ಇಡಿ ದೀಪಗಳನ್ನು ಖರೀದಿಸಲು ಅನುಕೂಲವಾಗುತ್ತದೆ.

l ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಸಾಂಪ್ರದಾಯಿಕ ಮತ್ತು ಅಸಮರ್ಪಕ ಉಪಕರಣಗಳಿಗೆ ಪರ್ಯಾಯವಾಗಿ ಎಲ್ಇಡಿ ಬಲ್ಪ್‌ಗಳು, ಎಲ್ಇಡಿ ಟ್ಯೂಬ್‌ಲೈಟ್‌ ಮತ್ತು ಇಂಧನ ದಕ್ಷತೆ ಹೆಚ್ಚಿರುವ ಫ್ಯಾನ್‌ಗಳನ್ನು ಒದಗಿಸಲಾಗುತ್ತದೆ.

ಈ ಯೋಜನೆಯ ಸಾಧನೆಗಳು :

l ಉಜಾಲ ಯೋಜನೆಯ ಮಾಹಿತಿಯ ಪ್ರಕಾರ(on Dash Board information) ಜುಲೈ 19, 2016 ಕ್ಕೆ 13,31,79,689 ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಈ ಸಂಖ್ಯೆ ಜನವರಿ 4ರ ವೇಳೆಗೆ ‌ 2023ಕ್ಕೆ 36,86,86,920 ಕ್ಕೆ ಏರಿಕೆಯಾಗಿದೆ.

l ದೇಶೀಯವಾಗಿ ಎಲ್ಇಡಿ ಬಲ್ಪ್‌ಗಳ ಉತ್ಪಾದನೆ ತಿಂಗಳಿಗೆ 1 ಲಕ್ಷದಿಂದ 4 ಕೋಟಿಗೆ ಹೆಚ್ಚಿದೆ. ಹೀಗಾಗಿ ಇದು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸುತ್ತಿದ್ದು, ದೇಶೀಯ ಬೆಳಕಿನ ಉದ್ಯಮಕ್ಕೆ ಇದು ಪ್ರೋತ್ಸಾಹ ನೀಡುತ್ತಿದೆ.

l 2014 ರಿಂದ 2017ರ ವೇಳೆಗೆ ಎಲ್ಇಡಿ ಬಲ್ಬ್‌ಗಳ ಖರೀದಿ ದರ ಶೇ 90 ರಷ್ಟು ಕಡಿಮೆ ಯಾಗಿದೆ.(ಅಂದರೆ ₹310ಯಿಂದ ₹38 ಕ್ಕೆ ಇಳಿದಿದೆ)

l ಭಾರತ, ಜಾಗತಿಕ ಮಟ್ಟದ ಎಲ್ಇಡಿ ಬೇಡಿಕೆ ಪೂರೈಸುವ ಅತಿ ದೊಡ್ಡ ರಾಷ್ಟ್ರವಾಗಿದೆ. ಜಾಗತಿಕ ಮಟ್ಟದ ಎಲ್‌ಇಡಿ ಬಲ್ಬ್‌ಗಳ ಬೇಡಿಕೆ ಪೂರೈಕೆಯಲ್ಲಿ 2013-14ರಲ್ಲಿ ಭಾರತದ ಪಾಲು ಶೇ 0.1ರಷ್ಟಿತ್ತು. ಅದು 2015-16ರಲ್ಲಿ ಶೇ 12 ಕ್ಕೆ ಏರಿಕೆಯಾಗಿದೆ.

l ಉಜಾಲ ಕಾರ್ಯಕ್ರಮವು ಜಾಗತಿಕ ರಾಷ್ಟ್ರಗಳ ಗಮನ ಸೆಳೆದಿದೆ. ಈ ಕುರಿತು ಅಂತರಾಷ್ಟ್ರೀಯ ಇಂಧನ ಸಂಸ್ಥೆಯು ಒಂದು ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಆ ವರದಿಯಲ್ಲಿ ಉಜಾಲ ಯೋಜನೆಯಿಂದ ಶೇ 5 ರಷ್ಟು ವಾರ್ಷಿಕ ಗೃಹ ಬಳಕೆಯ ವಿದ್ಯುತ್ ಬಿಲ್‌ ಕಡಿಮೆಯಾಗುತ್ತಿದೆ ಮತ್ತು ಪ್ರತಿ ವರ್ಷ ಗ್ರಾಹಕರಿಗೆ ₹ 1600 ಕೋಟಿ(₹16 ಬಿಲಿಯನ್) ಹಣ ಉಳಿತಾಯವಾಗುತ್ತಿದೆ ಎಂದು ಉಲ್ಲೇಖಿಸಿದೆ.

ಯೋಜನೆಯ ಅಗತ್ಯತೆ

l 7W ಎಲ್ಇಡಿ ಬಲ್ಬ್‌ಗಳು, 14W ಕಾಂಪ್ಯಾಕ್ಟ್ ಪ್ಲೊರೊಸೆಂಟ್ ಲ್ಯಾಂಪ್‌ಗಳಷ್ಟು (CFL) ಮತ್ತು 60W ಇನ್ಕ್ಯಾಂಡೆಸೆಂಟ್ ಲ್ಯಾಂಪ್ (Incandescent lights - ICLs) ಗಳಷ್ಟೇ ಪ್ರಮಾಣದ ಬೆಳಕನ್ನು ಒದಗಿಸುತ್ತವೆ. ಆ ಮೂಲಕ ಐಸಿಎಲ್‌ಎಸ್‌ ಬಲ್ಬ್‌ಗಳಿಗೆ ಹೋಲಿಸಿದರೆ ಸುಮಾರು ಶೇ 90 ರಷ್ಟು ಇಂಧನ‌ ಉಳಿತಾಯ ಮತ್ತು ಸಿಎಫ್‌ಎಲ್‌ ಬಲ್ಬ್‌ಗೆ ಹೋಲಿಸಿದರೆ ಶೇ 50 ರಷ್ಟು ಶಕ್ತಿಯನ್ನು ಉಳಿಸುತ್ತದೆ.

l ತುಲನಾತ್ಮಕವಾಗಿ ನೋಡುವುದಾದರೆ 140 ಗಂಟೆಗಳ ಕಾಲ ಬೆಳಕನ್ನು ನೀಡಲು ಎಲ್ಇಡಿ ಬಲ್ಬ್‌ಗಳು ಒಂದು ಯೂನಿಟ್ ವಿದ್ಯುತ್ ಬಳಸಿದರೆ, ಅದೇ ಸಿಎಫ್ಎಲ್‌ಗಳು ಎರಡು ಯೂನಿಟ್ ವಿದ್ಯುತ್ ಮತ್ತು ಐಸಿಎಲ್ ಬಲ್ಬ್ ಗಳು 9 ಯೂನಿಟ್‌ಗಳಷ್ಟು ವಿದ್ಯುತ್ ಬಳಸುತ್ತವೆ. ಇದು ಎಲ್ಇಡಿ ಬಲ್ಬ್‌ಗಳ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ.

ಅನುಷ್ಠಾನದಲ್ಲಿನ ಸವಾಲುಗಳು :‌

l ಐಸಿಎಲ್ ಮತ್ತು ಸಿಎಫ್ಎಲ್‌ಗಳಿಗೆ ಹೋಲಿಸಿದರೆ ಎಲ್ಇಡಿಗಳನ್ನು ಅಳವಡಿಸುವ ಆರಂಭಿಕ ವೆಚ್ಚ ಅಧಿಕವಾಗಿರುತ್ತದೆ ಹಾಗೂ ಎಲ್ಇಡಿ ಬಳಕೆಯಿಂದ ಆಗುವ ವಿದ್ಯುತ್ ಬಿಲ್ ಕಡಿತದ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆ ಇದೆ.

l ಎಲ್ಇಡಿ ಬಳಕೆಯಿಂದಾಗುವ ಪ್ರಯೋಜನಗಳು ಹಾಗೂ ಅದರ ಅಳವಡಿಸುವಿಕೆಯ ಅಗತ್ಯಗಳ ಬಗ್ಗೆ, ರಾಜ್ಯ ಮತ್ತು ಡಿಸ್ಕಾಂ (DISCOM) ಮಟ್ಟದಲ್ಲಿ ನೀತಿ ನಿರೂಪಕರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ ಎನ್ನುವ ಟೀಕೆಗಳು ಆಗಿಂದಾಗ್ಗೆ ಕೇಳಿಬರುತ್ತಿವೆ.

l ಇದನ್ನು ಬಳಸುವ ಗ್ರಾಹಕರಿಗೂ ಈ ಬಗ್ಗೆ ಯಾವುದೇ ಪ್ರೋತ್ಸಾಹಕಗಳನ್ನು ನೀಡಲಾಗುತ್ತಿಲ್ಲ. ಈ ಸವಾಲುಗಳನ್ನು ನಿವಾರಿಸಿ ಜನಸಾಮಾನ್ಯರಿಗೆ ಅರಿವು ನೀಡಿಸುವತ್ತ ಮತ್ತಷ್ಟು ಹಾದಿಯನ್ನು ಕ್ರಮಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.