ADVERTISEMENT

ಯುಪಿಎಸ್‌ಸಿ ಪರೀಕ್ಷೆ: ವೀಳ್ಯದೆಲೆ ವ್ಯಾಪಾರಿ ಪುತ್ರನ ಯಶಸ್ಸಿನ ಯಾನ

ಬೀರೂರಿನ ಸಂತೋಷಗೆ 753ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:15 IST
Last Updated 26 ಏಪ್ರಿಲ್ 2019, 20:15 IST
ಎಚ್‌.ಸಂತೋಷ
ಎಚ್‌.ಸಂತೋಷ   

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಬೀರೂರಿನ ಎಚ್‌.ಸಂತೋಷಅವರು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ 753ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ವೀಳ್ಯದೆಲೆ ವ್ಯಾಪಾರಿ ಎಂ.ಹನುಮಂತಪ್ಪ ಮತ್ತು ಟಿ.ಗೀತಾ ದಂಪತಿ ಪುತ್ರ ಸಂತೋಷ್‌ ಅ‍ಪ್ಪಟ ಗ್ರಾಮೀಣ ಪ್ರತಿಭೆ. ಯಶೋಗಾಥೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದ್ದಾರೆ.

* ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಲು ಪ್ರೇರಣೆ ಏನು?

ಕೇಂದ್ರ ನಾಗರಿಕ ಸೇವೆ ಹುದ್ದೆಗೆ ಸೇರಬೇಕು ಎಂಬ ಕನಸು ಹೈಸ್ಕೂಲು ಓದುವಾಗಲೇ ಇತ್ತು. ಹೈಸ್ಕೂಲು ವಿದ್ಯಾಭ್ಯಾಸ ಹಂತದಲ್ಲಿ ಅಜ್ಜಂಪುರದಲ್ಲಿ ಹಾಸ್ಟೆಲ್‌ನಲ್ಲಿದ್ದೆ. ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೆ. ಕುಡಿಯುವ ನೀರಿನ ಸಮಸ್ಯೆಯಾಗಿದ್ದ ಸಂದರ್ಭದಲ್ಲಿ ಆಗಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಅಜ್ಜಂಪುರಕ್ಕೆ ಬಂದಿದ್ದರು. ಅವರ ಕಾರ್ಯನಿರ್ವಹಣೆ ಪ್ರೇರಣೆ ನೀಡಿತು. ಐಎಎಸ್‌ ಅಧಿಕಾರಿಯಾದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅವಕಾಶ ಸಿಗುತ್ತದೆ. ಹೀಗಾಗಿ, ಯುಪಿಎಸ್‌ಸಿ ಪರೀಕ್ಷೆ ಗುರಿ ಇಟ್ಟುಕೊಂಡು ಸಾಧಿಸಿದೆ.

ADVERTISEMENT

*ಪರೀಕ್ಷಾ ಸಿದ್ಧತೆ ಬಗ್ಗೆ ತಿಳಿಸಿ...

ಎರಡೂವರೆ ವರ್ಷ ಅಧ್ಯಯನ ಮಾಡಿದ್ದೆ. ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುತ್ತಿದ್ದೆ. ಟಿಪ್ಪಣಿ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದೆ. ಕೋಚಿಂಗ್‌ಗೆ ಹೋಗಿರಲಿಲ್ಲ. ಬೆಂಗಳೂರಿನ ವಿಜಯನಗರದ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ವಿನಯ್‌ಕುಮಾರ್ ಮಾರ್ಗದರ್ಶನ ನೀಡಿದ್ದರು. 6ರಿಂದ 12ನೇ ತರಗತಿವರೆಗಿನ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನೆ ತರಬೇತಿ ಮಂಡಳಿ) ಪಠ್ಯಪುಸ್ತಕಗಳನ್ನು ಓದಿದ್ದೆ. www.insightsonindia.com ವೆಬ್‌ಸೈಟಿನ ಪರೀಕ್ಷಾ ಸರಣಿಗೆ ನಿಯಮಿತವಾಗಿ ಹಾಜರಾಗುತ್ತಿದ್ದೆ. ಮೌಲ್ಯಂಕನ ಮಾಡಿಕೊಂಡು ವೈಫಲ್ಯ, ತಪ್ಪುಗಳನ್ನು ಸರಿಪಡಸಿಕೊಂಡು ಮುಂದುವರಿಯುತ್ತಿದ್ದೆ. ಈ ಪರೀಕ್ಷೆಗಾಗಿಯೇ ನಿರ್ದಿಷ್ಟ ಪುಸ್ತಕಗಳು ಇವೆ, ಅವುಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದೆ.

* ಎಷ್ಟನೇ ಪ್ರಯತ್ನದಲ್ಲಿ ಸಫಲರಾದಿರಿ? ಐಚ್ಛಿಕ ವಿಷಯವಾಗಿ ಯಾವುದನ್ನು ಆಯ್ಕೆ ಮಾಡಿಕೊಂಡಿದ್ದೀರಿ?

ಮೊದಲ ಪ್ರಯತ್ನದಲ್ಲಿ ಪೂರ್ವಸಿದ್ಧತಾ (ಪ್ರಿಲಿಮಿನರಿ) ಪರೀಕ್ಷೆಯಲ್ಲಿ ವಿಫಲನಾಗಿದ್ದೆ. ಎರಡನೇ ಬಾರಿಗೆ ಸಫಲನಾದೆ. ಐಚ್ಛಿಕ ವಿಷಯವಾಗಿ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಿದ್ದೆ. ಸಾಹಿತ್ಯ ಓದುವ ಗೀಳು ಪ್ರೌಢಶಾಲಾ ಹಂತದಿಂದ ಇತ್ತು. ಕತೆ, ಕಾದಂಬರಿಗಳನ್ನು ತುಂಬಾ ಓದುತ್ತಿದ್ದೆ.

*ಕುಟುಂಬದವರ ಪ್ರೋತ್ಸಾಹ ಹೇಗಿತ್ತು?

ಅಜ್ಜಂಪುರ ತಾಲ್ಲೂಕಿನ ಮುದಿಗೆರೆ ನಮ್ಮ ತಾಯಿ ತವರೂರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲಿ ಮುಗಿಸಿದೆ. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಕನ್ನಡ ಮಾಧ್ಯಮದಲ್ಲಿ ಮಾಡಿದೆ. ನಮ್ಮ ಸಂಬಂಧಿ, ಕಡೂರು ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಿ.ಅಶೋಕ್‌ಕುಮಾರ್‌, ಶೋಭಾರಾಣಿ ಅವರು ಈ ಪರೀಕ್ಷೆಗೆ ಅಣಿಯಾಗಲು ಬೆನ್ನೆಲುಬಾಗಿದ್ದರು. ಯಾವಾಗಲೂ ಮಾರ್ಗದರ್ಶನ ನೀಡುತ್ತಿದ್ದರು. ಅಪ್ಪ, ಅಮ್ಮ, ಅಕ್ಕ ಚೇತನಾಕುಮಾರಿ ಎಲ್ಲರೂ ಪ್ರೋತ್ಸಾಹ ನೀಡಿದ್ದರು.

*ಯುಪಿಎಸ್‌ಸಿ ಸ್ಪರ್ಧಾರ್ಥಿಗಳಿಗೆ ನಿಮ್ಮ ಕಿವಿಮಾತು…

ಯುಪಿಎಸ್‌ಸಿ ಪರೀಕ್ಷೆ ಕಬ್ಬಿಣದ ಕಡೆಲೆಯಲ್ಲ. ಸತತ ಅಧ್ಯಯನ, ಛಲ, ಶ್ರದ್ಧೆ ಇದ್ದರೆ ಯಶಸ್ಸು ಸಾಧಿಸಬಹುದು. ಹೀಯಾಳಿಕೆಗಳಿಗೆ ಕಿವಿಗೊಡಬಾರದು. ಸಾಮರ್ಥ್ಯ ಬಗ್ಗೆ ಅನುಮಾನ ಇರಬಾರದು. ‘ನಿನ್ನ ಬಾಳಿನ ಶಿಲ್ಪಿ ನೀನೇ’ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ, ಅಡೆತಡೆಗಳನ್ನು ಎದುರಿಸಿ ಮುನ್ನುಗ್ಗಿದರೆ ಯಶಸ್ಸು ನಿಶ್ಚಿತ.

ಶೈಕ್ಷಣಿಕ ಹಾದಿ...

ಸಂತೋಷ್‌ ಅವರು ಅಜ್ಜಂಪುರ ತಾಲ್ಲೂಕಿನ ಮುದಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ಅಜ್ಜಂಪುರದ ಶೆಟ್ರುಸಿದ್ದಪ್ಪ ಸರ್ಕಾರಿ ವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದ್ದಾರೆ. ಚಿಕ್ಕಮಗಳೂರಿನ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 2010ರಲ್ಲಿ ಡಿಪ್ಲೊಮಾ (ಮೆಕ್ಯಾನಿಕಲ್‌) ಮಾಡಿದ್ದಾರೆ. ಬೆಂಗಳೂರ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ 2017ರಲ್ಲಿ ಬಿ.ಎ (ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ) ಪದವಿ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 66.56, ಡಿಪ್ಲೊಮಾದಲ್ಲಿ ಶೇ 60 ಹಾಗೂ ಪದವಿಯಲ್ಲಿ ಶೇ 60 ಅಂಕ ಗಳಿಸಿದ್ದಾರೆ.

ಎಸ್‌ಬಿಎಂನಲ್ಲಿ(ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು) ಕರ್ಕ್‌ ಆಗಿ 2011ರ ಡಿಸೆಂಬರ್‌ನಲ್ಲಿ ನೇಮಕವಾಗಿ, ಮೈಸೂರಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ತಾಂತ್ರಿಕ ಹುದ್ದೆಗೆ 2014ರ ಅಕ್ಟೋಬರ್‌ನಲ್ಲಿ ನೇಮಕವಾಗಿದ್ದರು. ಹಿರಿಯ ತಾಂತ್ರಿಕ ಸಹಾಯಕರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.