ನಿಮ್ಮ ಮಗ/ ಮಗಳಲ್ಲಿ ಶಬ್ದ ಭಂಡಾರ ಸಾಕಷ್ಟಿದೆಯೇ? ಭಾಷೆ ಹಾಗೂ ಬರವಣಿಗೆ ಶೈಲಿ ಚೆನ್ನಾಗಿದೆಯೇ? ಇವೆಲ್ಲವೂ ಇದ್ದರೆ ಆನ್‌ಲೈನ್‌ನಲ್ಲಿ ವೃತ್ತಿಪರ ಬ್ಲಾಗರ್ ಆಗಬಹುದಲ್ಲವೇ?
ಹೌದು, ಬ್ಲಾಗ್ ಬರವಣಿಗೆ ಈ ಹಿಂದೆ ಕೇವಲ ಹವ್ಯಾಸವಾಗಿತ್ತು. ಆದರೆ ಅದರ ಓದುಗರು, ಅದಕ್ಕೆ ಬರುವ ಜಾಹೀರಾತುಗಳ ಸಂಖ್ಯೆ ಹೆಚ್ಚಾದಂತೆ, ಜನಪ್ರಿಯತೆಯ ರುಚಿ ಗೊತ್ತಾಗುತ್ತಿದ್ದಂತೆ ಅದರ ವೃತ್ತಿಪರ ಮಹತ್ವವೂ ಅರಿವಾಗತೊಡಗಿತು. ಹೀಗಾಗಿ ಇತ್ತೀಚೆಗೆ ಅದೊಂದು ಒಳ್ಳೆಯ ವೃತ್ತಿಯಾಗಿ ಹೊರಹೊಮ್ಮಿದೆ.
ಬ್ಲಾಗರ್ ಆಗಲು ಭಾಷೆಯ ಮೇಲೆ ಹಿಡಿತ ಇದ್ದರೆ ಸಾಕು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪರಿಣತಿ ಇದ್ದರೆ ಜೊತೆಗೆ ಸೃಜನಶೀಲ ಬರವಣಿಗೆ ಯಿದ್ದರೆ ಬ್ಲಾಗಿಂಗ್‌ನಲ್ಲಿ ಕೋರ್ಸ್ ಮಾಡಿಕೊಳ್ಳಬಹುದು. ಈಗೇನಿದ್ದರೂ ಆನ್‌ಲೈನ್‌ನಲ್ಲಿ ಈ ಕುರಿತು ಬೇಕಾದಷ್ಟು ಕೋರ್ಸ್‌ಗಳಿವೆ.
ಬ್ಲಾಗ್ ಬರವಣಿಗೆಯಲ್ಲಿ ಬೇಕಾದಷ್ಟು ವಿಷಯಗಳಿದ್ದರೂ ಜನಪ್ರಿಯವಾಗಿರುವುದು ಫ್ಯಾಷನ್, ಆಹಾರ ಹಾಗೂ ಪ್ರವಾಸದ ಬ್ಲಾಗ್‌ಗಳು. ಅಂದರೆ ಜೀವನಶೈಲಿ ಕುರಿತ ವಿಷಯಗಳು.
ವೃತ್ತಿ– ಪ್ರವೃತ್ತಿ
ಮೊದಲಿಗೆ ನಿಮಗೆ ಬರವಣಿಗೆಯ ಜೊತೆ ಒಳ್ಳೆಯ ಅಡುಗೆ ಮಾಡಿ ಸವಿಯುವ, ವಿವಿಧ ಹೋಟೆಲ್‌ಗಳಿಗೆ ಹೋಗಿ ಹೊಸ ಖಾದ್ಯಗಳ ರುಚಿ ನೋಡುವ ಹವ್ಯಾಸವಿದ್ದರೆ ಆಹಾರ, ಅಡುಗೆ, ಖಾದ್ಯ... ಹೀಗೆ ಸಮಗ್ರವಾಗಿ ಒಳಗೊಳ್ಳುವ ಫುಡ್ ಬ್ಲಾಗರ್ ಆಗಬಹುದು. ಈಗಂತೂ ಸಾಮಾಜಿಕ ಜಾಲತಾಣ ಹಾಗೂ ತಂತ್ರಜ್ಞಾನದಿಂದಾಗಿ ಇದೊಂದು ಜನಪ್ರಿಯ ವೃತ್ತಿಯಾಗಿ ಪ್ರವರ್ಧಮಾನಕ್ಕೆ ಬಂದಿದೆ. ಈ ವೃತ್ತಿ ಎನ್ನುವುದು ನಿಮ್ಮ ಹವ್ಯಾಸ ಮತ್ತು ಪ್ರವೃತ್ತಿಗೆ ಒಂದು ಬಗೆಯ ಮೌಲ್ಯವನ್ನು ಒದಗಿಸಿ ತೃಪ್ತಿ ತಂದುಕೊಡುವುದರಲ್ಲಿ ಸಂಶಯವಿಲ್ಲ. ಓದುಗರು ನಿಮ್ಮ ಬಗ್ಗೆ, ನೀವು ಅಡುಗೆಯ ವಿಷಯದಲ್ಲಿ ಮಾಡುವ ಪ್ರಯೋಗಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗುತ್ತದೆ.
ಈ ವೃತ್ತಿಯಲ್ಲಿ ಗ್ಲಾಮರ್ ಇದೆ ಎಂದ ಮಾತ್ರಕ್ಕೆ ಫುಡ್ ಬ್ಲಾಗರ್ ಆಗುವುದು ಸುಲಭವೇನಲ್ಲ. ಸಾಕಷ್ಟು ಸವಾಲುಗಳು ಇದರಲ್ಲೂ ಇರುವುದರಿಂದ ಒಂದಿಷ್ಟು ತರಬೇತಿ, ಇನ್ನೊಂದಿಷ್ಟು ಕೋರ್ಸ್‌ಗಳ ನೆರವನ್ನು ಪಡೆಯಲೇಬೇಕು.
ಫುಡ್ ಬ್ಲಾಗರ್ ಆಗಲು ಅಂತಹ ಅರ್ಹತೆಯೇನೂ ಬೇಕಿಲ್ಲ. ಖಾದ್ಯ ತಯಾರಿಕೆ, ಅದನ್ನು ತಿಂದು ರುಚಿ ನೋಡುವುದು ಮಾತ್ರವಲ್ಲ, ವಿಶ್ಲೇಷಿಸಿ ಬರಹದ ರೂಪದಲ್ಲಿ, ಅದೂ ಆಕರ್ಷಕವಾಗಿ ಇಳಿಸುವ ಕಲೆಯಲ್ಲಿ ಪಾರಂಗತರಾಗಬೇಕು. ವಿವಿಧ ಬಗೆಯ, ದೇಶ– ವಿದೇಶಗಳ ಆಹಾರ ವೈವಿಧ್ಯಗಳ ಬಗ್ಗೆ ಒಂದಿಷ್ಟು ತಿಳಿವಳಿಕೆಯೂ ಅಗತ್ಯ.
ಯಾವುದೇ ಬ್ಲಾಗ್ ಬರಹವಿರಲಿ, ಕಂಪ್ಯೂಟರ್ ಮತ್ತು ಅಂತರ್‌ಜಾಲದಲ್ಲಿ ಮೂಲಭೂತ ಜ್ಞಾನ ಅವಶ್ಯಕ. ನೀವು ತಯಾರಿಸಿದ ಖಾದ್ಯಗಳ ಆಕರ್ಷಕ ಛಾಯಾಚಿತ್ರಗಳನ್ನು ತೆಗೆಯುವುದನ್ನು ರೂಢಿ ಮಾಡಿಕೊಳ್ಳಿ. ಸ್ಪಷ್ಟವಾದ, ರಂಗುರಂಗಿನ ಚಿತ್ರಗಳು ನಿಮ್ಮ ಬರಹಗಳಿಗೆ ಖಂಡಿತ ಸಾಥ್ ನೀಡುತ್ತವೆ.
ಯಾವುದಾದರೂ ವಿಶೇಷ ವಿಭಾಗದಲ್ಲಿ ಉದಾಹರಣೆಗೆ ಕಾಂಟಿನೆಂಟಲ್ ಆಹಾರ ಅಥವಾ ದೇಸಿ ಆಹಾರ, ಸೀಫುಡ್.. ಹೀಗೆ ಯಾವುದಾದರೂ ಒಂದರಲ್ಲಿ ವಿಶೇಷ ಪರಿಣತಿ ಇರಲಿ. ಸಾಮಾನ್ಯ ಖಾದ್ಯವನ್ನೂ ವಿಶೇಷ ರೀತಿಯಲ್ಲಿ ಮಾಡುವ ಕಲೆ ಬೆಳೆಸಿಕೊಳ್ಳಿ.
ನಿಮ್ಮ ಬ್ಲಾಗ್ ವಿನ್ಯಾಸ ಆಕರ್ಷಕವಾಗಿರಲಿ. ಪ್ರತಿಯೊಂದು ಪಟ್ಟಿಯ ಬಗ್ಗೆ ಗಮನ ನೀಡಿ.
ಬೇರೆ ಬ್ಲಾಗರ್‌ಗಳ ಸಖ್ಯ ಬೆಳೆಸಿಕೊಂಡು ಅವರ ವೆಬ್‌ಸೈಟ್‌ನಲ್ಲೂ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ನಿಮ್ಮದಾಗಿಸಿಕೊಳ್ಳಿ.
ಫೇಸ್‌ಬುಕ್‌ನಂತಹ ಜಾಲತಾಣಗಳ ಮೂಲಕ ನಿಮ್ಮ ಬ್ಲಾಗ್ ಬಗ್ಗೆ ಪ್ರಚಾರ ಮಾಡಿ. ಇದರಿಂದ ಹೆಚ್ಚು ಜನ ಓದುಗರನ್ನು ತಲುಪಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.