‘ಅವು ಲಾಕ್‌ಡೌನ್ ದಿನಗಳು. ಆ ಊರಿಗೆ ಒಂದು ವರ್ಷದ ಹಳಬ ನಾನು. ಕೆಲಸ ಮಾಡುತ್ತಿದ್ದ ಕಂಪನಿ ಬಾಗಿಲು ಮುಚ್ಚಿತು. ಮನೆಯಲ್ಲಿ ನನ್ನನ್ನೇ ಅವಲಂಬಿಸಿದ ಅಪ್ಪ–ಅಮ್ಮ, ಹೆಂಡತಿ ಹಾಗೂ ಚಿಕ್ಕ ಮಗಳು. ಮಂದೇನು? ಹಗಲು–ರಾತ್ರಿ ಚಿಂತೆಗೆ ಬಿದ್ದೆ; ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ. ಹುಟ್ಟೂರು ಸೇರಿಕೊಳ್ಳಬೇಕು. ಅಲ್ಲೇ ಸ್ವಂತ ಉದ್ಯೋಗ ಮಾಡಬೇಕು’
‘ಆದರೆ, ಆಲೋಚಿಸಿದ್ದಷ್ಟು ಅದು ಸುಲಭ ಇರಲಿಲ್ಲ. ಲಾಕ್‌ಡೌನ್ ಸಮಯ, ಮನೆಯಿಂದ ಹೊರಗೆ ಹೋಗಲು ಸಾಧ್ಯವಿರಲಿಲ್ಲ; ಅದೂ ಕುಟುಂಬ ಪೂರ್ತಿ. ಪಾಸಿಗಾಗಿ ಪ್ರತಿ ನಿತ್ಯ ಆ ಕಚೇರಿ, ಈ ಕಚೇರಿ ಅಲೆದಾಡಿದೆ. ಕೊನೆಗೆ ಹೇಗೊ ಪಾಸ್ ಪಡೆದೆ. ಬರೀ ಪಾಸ್ ಇದ್ದರೆ ಸಾಕೇ? ವಾಹನ ವ್ಯವಸ್ಥೆ ಆಗಬೇಕಲ್ಲ; ಮನೆಯ ಅಷ್ಟೂ ಲಗೇಜ್ ಸಹಿತ ಊರು ಬಿಡಬೇಕಲ್ಲ. ಒಬ್ಬ ಪುಣ್ಯಾತ್ಮ ಲಾರಿಯವನೊಬ್ಬ ಸಿಕ್ಕ. ಹಾದಿಯುದ್ದಕ್ಕೂ ನೂರೆಂಟು ಅಡೆ–ತಡೆ. ಅಂತೂ ಹರಸಾಹಸ ಪಟ್ಟು ಊರು ಸೇರಿಕೊಂಡೆವು’
–ಇದು ಮಂಗಳೂರಿನ ಮನೋಜ್ ಕುಮಾರ್ ಭಂಡಾರಿ ದಾವಣಗೆರೆಯಿಂದ ಲಾಕ್‌ಡೌನ್ ಸಮಯದಲ್ಲಿ ಹುಟ್ಟೂರಿಗೆ ಹಿಂದಕ್ಕೆ ಬಂದ ಕಥೆ. ಇವರು ಅಲ್ಲಿ ಕೀಟ ನಿಯಂತ್ರಣ ಕೆಲಸ ಮಾಡುವ ಕಂಪನಿಯೊಂದರ ಶಾಖಾ ವ್ಯವಸ್ಥಾಪಕರಾಗಿದ್ದರು. ಇವರ ಅಮ್ಮ–ಮಗಳಿಗೆ ದಾವಣಗೆರೆಯ ಹವಾಗುಣ ಹೊಂದಾಣಿಕೆಯಾಗಲಿಲ್ಲ. ಪದೇ, ಪದೇ ಥಂಡಿ–ಜ್ವರ ಕಾಣಿಸಿಕೊಳ್ಳುತ್ತಿತ್ತು. ಇದೇ ಸಮಯದಲ್ಲಿ ಕೊರೊನಾದ ಲಾಕ್‌ಡೌನ್‌ನಿಂದ ಕೆಲಸವೂ ಇಲ್ಲದಾಯಿತು. ಮುಂದಿನ ದಾರಿ ಕಾಣದೆ ತಮ್ಮೂರು ಕಡಲಿನ ಒಡಲು ಸೇರಿಕೊಂಡರು.
ಮನೋಜ್ ಕುಮಾರ್ ತಮ್ಮ ಬದಲಾದ ವೃತ್ತಿ ಬದುಕನ್ನು ತಮ್ಮದೇ ಮಾತುಗಳಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
‘ಮಂಗಳೂರು ನಗರದ ಉರ್ವದ ಮಾರಿಗುಡಿ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿದರೂ 14 ದಿವಸ ಕ್ವಾರಂಟೈನ್ ಆಗಲೇಬೇಕಾಯಿತು. ಮನೆ ಒಳಗೆ ಅಷ್ಟೂ ಜನ ಬಂಧಿ. ಆದರೆ ಊಟಕ್ಕೇನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ಸಂಬಂಧಿಕರು ಸಹಾಯಕ್ಕೆ ಬಂದರು. ಕಿಟಕಿಯಿಂದಲೇ ದವಸ–ದಿನಸಿ ನೀಡಿದರು.
ಕ್ವಾರಂಟೈನ್‌ನಲ್ಲಿ ಅರಳಿತು ಕನಸು
ಫೆಸ್ಟ್ ಕಂಟ್ರೋಲ್ ಕಂಪನಿಯಲ್ಲಿ 14 ವರ್ಷದ ಅನುಭವ. ಇದನ್ನೇ ಬಳಸಿಕೊಂಡು ಏನಾದರೂ ಮಾಡಬಹುದಾ ಎಂದು ಆಲೋಚಿಸುತ್ತಿದ್ದಾಗ ಹೊಳೆದಿದ್ದು ಸ್ಯಾನಿಟೈಸರ್ ಸಿಂಪಡಿಸುವ ಕೆಲಸ. ಸರಿ ಅದನ್ನಾದರೂ ಹೇಗೆ ಮಾಡುವುದು? ಮನೆಯಿಂದ ಹೊರಗೆ ಹೋಗುವಂತಿಲ್ಲ; ಗ್ರಾಹಕರನ್ನು ಹೇಗೆ ಸಂಪರ್ಕಿಸುವುದು? ನನ್ನಲ್ಲೇ ಚಿಂತನ–ಮಂಥನ ನಡೆಯಿತು. ಮೊದಲಿಗೆ ನಾನು ಮಾಡಬೇಕಾದ ಕೆಲಸದ ಸಂಪೂರ್ಣ ಮಾಹಿತಿಯ ಕೈಪಿಡಿ ಸಿದ್ಧಪಡಿಸಿಟ್ಟುಕೊಳ್ಳಲು ತೀರ್ಮಾನಿಸಿದೆ. ನನ್ನ ಸಂಬಂಧಿಕರ ಸ್ನೇಹಿತರೊಬ್ಬರನ್ನು ಫೋನ್‌ನಲ್ಲೇ ಸಂಪರ್ಕಿಸಿ, ನನ್ನ ಆಲೋಚನೆಗಳನ್ನೆಲ್ಲ ಹಂಚಿಕೊಂಡೆ. ಅವರು ಕಂಪನಿ ಲೋಗೊ, ಕರಪತ್ರ ಎಲ್ಲವನ್ನೂ ಉಚಿತವಾಗಿ ಮಾಡಿಕೊಟ್ಟರು.
ನನ್ನ ಹಳೆಯ ಸಂಪರ್ಕಗಳನ್ನೆಲ್ಲಾ ಮತ್ತೊಮ್ಮೆ ಜಾಲಾಡಿದೆ. ಅವರಿಗೆಲ್ಲ ವಾಟ್ಸ್ ಆ್ಯಪ್‌ನಲ್ಲಿ ನನ್ನ ಹೊಸ ಕೆಲಸದ ಮಾಹಿತಿಯ ಕರಪತ್ರ, ಲೋಗೊ ಎಲ್ಲವನ್ನೂ ಶೇರ್ ಮಾಡಿದೆ. ಕೆಲವರಿಗೆ ಫೋನ್ ಮಾಡಿ ತಿಳಿಸಿದೆ. ಹಲವರು ಒಳ್ಳೆಯ ಕೆಲಸ, ಮುಂದುವರಿಸು ಎಂದರು. ಸ್ವಲ್ಪ ಧೈರ್ಯ ಬಂತು. ಕೆಲವರು ಆರ್ಡರ್ ಕೊಡಲು ಆರಂಭಿಸಿದರು. ಆದರೆ, ನನ್ನ ಕ್ವಾರಂಟೈನ್ ಅವಧಿ ಮುಗಿದಿರಲಿಲ್ಲ. ಹಾಗಾಗಿ, ನಾನೇ ಖುದ್ದು ಹೋಗಲು ಆಗುತ್ತಿರಲಿಲ್ಲ. ಅದಕ್ಕೆ ಒಂದು ಆಲೋಚನೆ ಮಾಡಿದೆ. ಹೆಂಡತಿಯ ಸಹೋದರನಿಂದ ಸ್ಯಾನಿಟೈಸ್ ಮಾಡುವ ಮಿಷನ್ ತರಿಸಿಕೊಂಡೆ. ಸ್ಯಾನಿಟೈಸ್ ಮಾಡುವ ವಿಧಾನವನ್ನು ವಿಡಿಯೊ ಮಾಡಿ ಅವನಿಗೆ ತೋರಿಸಿದೆ. ಅದನ್ನೇ ಅಭ್ಯಾಸ ಮಾಡಲು ತಿಳಿಸಿದೆ.
ಮೊದಲ ಆರ್ಡರ್ ಕ್ಲಿನಿಕ್‌ದ್ದು. ಅವರಿಗೆ ನಮ್ಮ ಕೆಲಸ ಮೆಚ್ಚುಗೆ ಆಯಿತು. ಅವರೇ ಮುಂದೆ ಹಲವು ಆಸ್ಪತ್ರೆಗಳ ಆರ್ಡರ್ ಕೊಡಿಸಿದರು. ನನ್ನ ಕ್ವಾರಂಟೈನ್ ಅವಧಿಯೂ ಮುಗಿಯಿತು. ಪೂರ್ಣಪ್ರಮಾಣದಲ್ಲಿ ನಾನೂ ಸೇರಿಕೊಂಡೆ.
ಕಾಡಿದ ಕೊರತೆ
ಎಲ್ಲೆಡೆ ಬೇಡಿಕೆ ಹೆಚ್ಚಿದ್ದರಿಂದ ನನಗೆ ಆರಂಭದಲ್ಲಿ ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್‌ಗಳ ಕೊರತೆ ಕಾಣಿಸಿತು. ನಮಗೆ ಉತ್ಕೃಷ್ಟ ಮಟ್ಟದ ಫುಡ್ ಗ್ರೇಡ್ ಸ್ಯಾನಿಟೈಸರ್ ಬೇಕಾಗಿತ್ತು. ದೆಹಲಿಯ ಸ್ನೇಹಿತರೊಬ್ಬರು ಅಲ್ಲಿಂದ ನನಗೆ ಕಳಿಸಿಕೊಟ್ಟರು. ಬೆಂಗಳೂರಿನ ಸ್ನೇಹಿತರೊಬ್ಬರು ಪಿಪಿಇ ಕಿಟ್‌ಗಳನ್ನು ಕಳಿಸಿದರು.
ಈಗ ಕೊರೊನಾದ ಬಗ್ಗೆ ಜನರಲ್ಲಿ ಅಂತಹ ಭಯ ಇಲ್ಲ. ಆದರೆ, ಎರಡು ತಿಂಗಳ ಹಿಂದೆ ದಿನವಿಡಿ ಬಿಡುವಿಲ್ಲದ ಕೆಲಸ ನಮಗಿತ್ತು. ನನಗೆ ಇಬ್ಬರು ಸಹಾಯಕರಿದ್ದರೂ ಕೆಲಸ ಪೂರೈಸಲು ಆಗುತ್ತಿರಲಿಲ್ಲ. ಮನೆ, ಆಸ್ಪತ್ರೆ, ಲ್ಯಾಬ್, ಕಚೇರಿ, ದೇವಸ್ಥಾನಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಸ್ಯಾನಿಟೈಸ್ ಮಾಡಿದ್ದೇವೆ. ಪರೀಕ್ಷಾ ವೇಳೆಯಲ್ಲಿ ನಗರದಲ್ಲಿ ಪ್ರತಿ ದಿವಸ ಶಾಲಾ ಕೊಠಡಿಗಳನ್ನು ಸ್ಯಾನಿಟೈಸರ್ ಮಾಡುತ್ತಿದ್ದದ್ದೇ ನಾವು.
ನಮಗೂ ಅಪಾಯದ ಅರಿವು ಇದೆ. ಸ್ಯಾನಿಟೈಸ್ ಮಾಡುವಾಗ ನಾವು ಸಾಕಷ್ಟು ಮುಂಜಾಗ್ರತೆ ವಹಿಸುತ್ತೇವೆ. ಪಿಪಿಇ ಕಿಟ್ ಧರಿಸುತ್ತೇವೆ. ಮಾಸ್ಕ್, ಗ್ಲೌಸ್, ಹಾಕಿಕೊಳ್ಳುತ್ತೇವೆ. ನಾವು ಒಂದು ರೀತಿಯಲ್ಲಿ ಕೊರೊನಾ ವಾರಿಯರ್ಸ್. ಮನೆಯಲ್ಲಿ ವಯಸ್ಸಾದ ಅಪ್ಪ–ಅಮ್ಮ, ಚಿಕ್ಕ ಮಗಳು ಇದ್ದಾರೆ. ಸ್ವಯಂ ಸ್ಯಾನಿಟೈಸ್ ಮಾಡಿಕೊಳ್ಳುತ್ತೇವೆ. ಆಯುಷ್ ಇಲಾಖೆಯ ಕಷಾಯ ಹುಡಿ, ಮಾತ್ರೆ ಎಲ್ಲವನ್ನೂ ಕಾಲ–ಕಾಲಕ್ಕೆ ತೆಗೆದುಕೊಳ್ಳುತ್ತೇವೆ.
ಸ್ಯಾನಿಟೈಸ್ ಮಾಡುವುದು ತಾತ್ಕಾಲಿಕ ಕೆಲಸ ಎಂದು ಗೊತ್ತಿದೆ. ಗೆದ್ದಲು, ಜಿರಳೆ, ಇರುವೆ ನಿಯಂತ್ರಣ ಮಾಡುವುದೇ ನಮ್ಮ ಶಾಶ್ವತ ಕೆಲಸ. ಆದಷ್ಟು ಬೇಗ ಕೊರೊನಾ ನಿವಾರಣೆಯಾಗಲಿ ಎಂಬುದೇ ನಮ್ಮೆಲ್ಲರ ಬಯಕೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.