ADVERTISEMENT

ಐಎಎಸ್ ಸಿದ್ಧತೆಗೆ ಯಾವ ಕೋಚಿಂಗ್ ಸೂಕ್ತ?

ಆರ್.ಬಿ.ಗುರುಬಸವರಾಜ
Published 1 ಸೆಪ್ಟೆಂಬರ್ 2021, 19:31 IST
Last Updated 1 ಸೆಪ್ಟೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಐಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಬಹುದೊಡ್ಡ ಸವಾಲಿನ ಕೆಲಸ. ಪಾರಂಪರಿಕ ಸಿದ್ಧತೆಗಿಂತ ತಾಂತ್ರಿಕ ನೆರವಿನ ಸಿದ್ಧತೆ ಇಂದು ಹೆಚ್ಚು ಪರಿಣಾಮಕಾರಿಯಾಗಿದೆ. ಮಾಹಿತಿ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ ಬೆರಳ ತುದಿಯಲ್ಲಿಯೇ ಸಾಕಷ್ಟು ಸಂಪನ್ಮೂಲ ದೊರೆಯುತ್ತಿದೆ. ಇಂಟರ್‌ನೆಟ್‌ನ ಅನ್ವಯಿಕದೊಂದಿಗೆ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ನಂತಹ ಗ್ಯಾಜೆಟ್ ಬಳಕೆಯೊಂದಿಗೆ ಐಎಎಸ್ ತಯಾರಿ ಸುಲಭವಾಗಿದೆ. ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಿರುವಾಗ ಐಎಎಸ್ ಕೋಚಿಂಗ್ ಅವಕಾಶವನ್ನು ಆನ್‌ಲೈನ್ ಮೂಲಕವೂ ಪಡೆಯಬಹುದಾಗಿದೆ.

ಕೋಚಿಂಗ್ ಅಗತ್ಯವೇ?

ಐಎಎಸ್ ಸಿದ್ಧತೆಗೆ ಸಂಪನ್ಮೂಲಗಳ ಅಗತ್ಯವಿದೆ. ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಸಾಕಷ್ಟು ಸಂಪನ್ಮೂಲ ಲಭ್ಯವಿರುವಾಗ ಕೋಚಿಂಗ್ ಅಗತ್ಯವೇ ಎಂಬ ಪ್ರಶ್ನೆ ಮೂಡದಿರದು. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಯಾವ ಮಾಹಿತಿಯನ್ನು ಓದಬೇಕು? ಹೇಗೆ ಓದಬೇಕು? ಯಾವುದಕ್ಕೆ ಎಷ್ಟು ಪ್ರಾಶಸ್ತ್ಯ ಕೊಡಬೇಕು? ಸಂಪನ್ಮೂಲಗಳ ನಿರ್ವಹಣೆ ಹೇಗಿರಬೇಕು? ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಮಾರ್ಗಗಳಾವುವು? ಎಂಬಿತ್ಯಾದಿ ಅಂಶಗಳತ್ತ ಗಮನ ಹರಿಸಲು ಕೋಚಿಂಗ್ ಅನಿವಾರ್ಯ.

ADVERTISEMENT

ಆನ್‌ಲೈನ್ ಕೋಚಿಂಗ್: ಕೋವಿಡ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ಆನ್‌ಲೈನ್ ಕೋಚಿಂಗ್ ಅನಿವಾರ್ಯವಾಗುತ್ತಿದೆ. ಐಎಎಸ್ ಸಿದ್ಧತೆಗೂ ಆನ್‌ಲೈನ್ ಮಾದರಿಗಳು ಲಭ್ಯವಿದ್ದು, ಉತ್ತಮ ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತದೆ. ಆಡಿಯೊ-ವಿಡಿಯೊ ರೂಪದಲ್ಲಿರುವ ಸಾಮಗ್ರಿಗಳು ಹೆಚ್ಚು ಪರಿಣಾಮಕಾರಿ ಕಲಿಕೆಗೆ ನಿರ್ಣಾಯಕ ಪಾತ್ರ ವಹಿಸಿವೆ. ಮನೆಯಲ್ಲಿಯೇ ಸುರಕ್ಷಿತವಾಗಿದ್ದು ಕಲಿಯಲು ಆಸಕ್ತಿ ಇರುವ ಆಕಾಂಕ್ಷಿಗಳಿಗೆ ಆನ್‌ಲೈನ್ ತರಬೇತಿ ಉತ್ತಮ ವೇದಿಕೆ.

ಅನುಕೂಲಗಳು

ಐಎಎಸ್ ಸಿದ್ಧತೆಗೆ ಆನ್‌ಲೈನ್ ಕೋಚಿಂಗ್ ವಿಭಿನ್ನ ಅನುಕೂಲತೆಗಳನ್ನು ಒದಗಿಸುತ್ತದೆ. ಆಕಾಂಕ್ಷಿಗಳಲ್ಲಿ ಸ್ವ-ಅಧ್ಯಯನ ತಂತ್ರಗಾರಿಕೆಯನ್ನು ವೃದ್ಧಿಸುತ್ತದೆ. ಸ್ವ-ಅಧ್ಯಯನವು ಪರಿಣಾಮಕಾರಿ ಕಲಿಕಾ ತಂತ್ರವಾಗಿದ್ದು, ಕಲಿಕಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಲು ಆನ್‌ಲೈನ್ ಕೋಚಿಂಗ್ ನೆರವಾಗುತ್ತದೆ. ಆನ್‌ಲೈನ್ ಕೋಚಿಂಗ್‌ನಲ್ಲಿ ದೌರ್ಬಲ್ಯಗಳಿಗೆ ಸೂಕ್ತ ಮಾರ್ಗೋಪಾಯ ಸೂಚಿಸುವ ಮೂಲಕ ವೇಗವರ್ಧಕಗಳನ್ನಾಗಿ ಮಾಡಲಾಗುತ್ತದೆ.

ಆನ್‌ಲೈನ್ ಕೋಚಿಂಗ್‌ನಿಂದ ಅಧ್ಯಯನ ಸಾಮಗ್ರಿಗಳ ಕೊರತೆ ಬಾಧಿಸುವುದಿಲ್ಲ. ತಜ್ಞರಿಂದ ರೂಪಿಸಲ್ಪಟ್ಟ ಗುಣಮಟ್ಟದ ಅಧ್ಯಯನ ಸಾಮಗ್ರಿಗಳನ್ನು ಕೋಚಿಂಗ್ ಸಂಸ್ಥೆಗಳು ಸಾಕಷ್ಟು ಮುಂಚಿತವಾಗಿ ನೀಡುವ ಮೂಲಕ ಸಾಮಗ್ರಿ ಕೊರತೆ ನೀಗಿಸುತ್ತವೆ.

ಅನುಕೂಲಕರ ಸಮಯದಲ್ಲಿ ಕಲಿಯಲು ಅವಕಾಶ ಹೆಚ್ಚಿರುತ್ತದೆ. ಆನ್‌ಲೈನ್ ಕೋಚಿಂಗ್ ಮೂಲಕ ನೀಡುವ ಬಹುತೇಕ ಪಾಠಗಳು ಪ್ರಿ-ರೆಕಾರ್ಡೆಡ್ ವಿಡಿಯೊಗಳಾದ್ದರಿಂದ ಕಲಿಕಾರ್ಥಿಯು ತನಗೆ ಅನುಕೂಲವಾದ ಸಮಯದಲ್ಲಿ, ಅನುಕೂಲವಾದ ಸ್ಥಳದಲ್ಲಿ ಕುಳಿತು ಕಲಿಯಲು ಸ್ವಾತಂತ್ರ್ಯ ಇರುತ್ತದೆ.

ಕೋಚಿಂಗ್ ಸೆಂಟರ್ ಮತ್ತು ಮೆಸ್‌ಗಳಿಗಾಗಿ ಪರದಾಡಬೇಕಾದ ಅಗತ್ಯ ಇರುವುದಿಲ್ಲ. ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ಮನೆ ಆಹಾರದ ಸವಿಯೊಂದಿಗೆ ಕೋಚಿಂಗ್ ಪಡೆಯುವ ಅವಕಾಶ. ದಿವ್ಯಾಂಗ ಚೇತನರಿಗೆ ಆನ್‌ಲೈನ್ ಕೋಚಿಂಗ್ ಅತ್ಯುಪಯುಕ್ತವಾದುದು.

ಸಂಕೀರ್ಣ ಪರಿಕಲ್ಪನೆಗಳನ್ನು ಸುಲಭವಾಗಿ ಪರಿಹರಿಸುವ ತಂತ್ರಗಾರಿಕೆ ಇರುತ್ತದೆ. ಅನುಭವಿ ಬೋಧಕರ ವಿಷಯ ನಿರೂಪಣೆ ಜೊತೆಗೆ ಅನುಮಾನ ಮತ್ತು ಪ್ರಶ್ನೆಗಳನ್ನು ತಜ್ಞರೊಂದಿಗೆ ಕೇಳಿ ಪರಿಹರಿಸಿಕೊಳ್ಳುವ ಅವಕಾಶ ಇರುತ್ತದೆ. ಅಗತ್ಯ ಎನಿಸಿದರೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತರಬೇತುದಾರರಿಂದ ಕೋಚಿಂಗ್ ನೀಡಲಾಗುತ್ತದೆ.

ನಿಗದಿತ ಹಾಗೂ ನಿರ್ದಿಷ್ಟವಾದ ಅಧ್ಯಯನ ಸಾಮಗ್ರಿಗಳು ಲಭ್ಯವಾಗುವುದರಿಂದ ಅಧ್ಯಯನ ಸಾಮಗ್ರಿಗಳಿಗಾಗಿ ಹುಡುಕಾಡುವ ಶ್ರಮ ತಪ್ಪುತ್ತದೆ. ಐಎಎಸ್ ಸಿದ್ಧತೆಗೆ ಸಾಕಷ್ಟು ಮಾಹಿತಿ ದೊರೆಯುತ್ತಿದೆ. ಆದರೆ ಆನ್‌ಲೈನ್ ಕೋಚಿಂಗ್‌ನಲ್ಲಿ ಪರೀಕ್ಷಾ ಪಠ್ಯಕ್ರಮ ಕೇಂದ್ರಿತ ಅಧ್ಯಯನ ಸಾಮಗ್ರಿಗಳನ್ನು ಮಾತ್ರ ಒದಗಿಸುವುದರಿಂದ ಅಧ್ಯಯನದ ದಿಕ್ಕು ಗುರಿಯತ್ತ ಸಾಗುತ್ತದೆ.

ಪಠ್ಯಕ್ರಮ ಬದಲಾದಂತೆಲ್ಲಾ ಆನ್‌ಲೈನ್ ತರಬೇತಿಯೂ ಸಹ ನವೀಕೃತಗೊಳ್ಳುತ್ತದೆ. ನೀವು ಬಳಸುವ ಗ್ಯಾಜೆಟ್‌ಗಳಲ್ಲೇ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ. ಹಾಗಾಗಿ ಅಪ್‌ಡೇಟ್ ಮಾಹಿತಿಗಾಗಿ ಹುಡುಕುವ ಶ್ರಮ ತಪ್ಪುತ್ತದೆ.

ಆನ್‌ಲೈನ್ ಕೋಚಿಂಗ್‌ನಲ್ಲಿ ನಿಮ್ಮ ಬರಹ ಶೈಲಿಯನ್ನು ತೀಕ್ಷ್ಣಗೊಳಿಸಲಾಗುತ್ತದೆ. ಕಾಲಕಾಲಕ್ಕೆ ನಿಮ್ಮ ಬರವಣಿಗೆ ಶೈಲಿಯನ್ನು ಗಮನಿಸಿ, ವಿಶ್ಲೇಷಿಸಿ, ಸೂಕ್ತ ಮಾರ್ಗದರ್ಶನದೊಂದಿಗೆ ಬರವಣಿಗೆಯನ್ನು ತಿದ್ದಲಾಗುತ್ತದೆ. ಪರೀಕ್ಷಾ ದೃಷ್ಟಿಯಿಂದ ಬರವಣಿಗೆಯಲ್ಲಿ ಆಗಬೇಕಾದ ಮಾರ್ಪಾಡುಗಳ ಬಗ್ಗೆ ಸಲಹೆ ನೀಡಲಾಗುತ್ತದೆ.

ಆನ್‌ಲೈನ್ ಕೋಚಿಂಗ್‌ನ ಪ್ರಮುಖ ಲಾಭವೆಂದರೆ ಇನ್ನಿತರೇ ಕೆಲಸ ಅಥವಾ ಇನ್ನಿತರೇ ಕೋರ್ಸ್‌ಗಳ ಅಧ್ಯಯನದ ಜೊತೆಜೊತೆಗೆ ಐಎಎಸ್‌ಗೆ ಕೋಚಿಂಗ್ ಪಡೆಯಬಹುದು.

ಯಾವುದು ಸೂಕ್ತ?

ಆನ್‌ಲೈನ್ ಕೋಚಿಂಗ್ ನೀಡಲು ಹಲವಾರು ಸಂಸ್ಥೆಗಳಿವೆ. ಅದರಲ್ಲಿ ಯಾವುದು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರತಿಯೊಂದು ಸಂಸ್ಥೆಯು ವಿಭಿನ್ನವಾದ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿರುತ್ತದೆ. ಅಲ್ಲದೇ ಪ್ರತಿ ಸಂಸ್ಥೆಯ ಅಧ್ಯಯನ ಸಾಮಗ್ರಿ ವಿಭಿನ್ನವಾಗಿರುತ್ತದೆ. ಆಯ್ಕೆ ವಿಷಯಕ್ಕೆ ಬಂದಾಗ ನಿಮಗೆ ಅನುಕೂಲವಾಗುವ ಸಂಸ್ಥೆಯ ಡೆಮೋ ಕ್ಲಾಸ್ ಮತ್ತು ಅಧ್ಯಯನ ಸಾಮಗ್ರಿಗಳನ್ನು ವೀಕ್ಷಿಸಿ. ಸಾಧ್ಯವಾದರೆ ಹಿರಿಯ ಪರೀಕ್ಷಾರ್ಥಿಗಳ ಸಲಹೆ ಪಡೆಯಿರಿ. ಪೂರ್ವಗ್ರಹಗಳಿಗೆ ಒಳಗಾಗದೇ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಹೊಣೆಗಾರಿಕೆ ನಿಮ್ಮದು. ನಿಮ್ಮ ಆದ್ಯತೆಗೆ ಅನುಕೂಲವಾಗುವ ಕೋಚಿಂಗ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.