ADVERTISEMENT

ವಿವಿಧ ಕೋರ್ಸ್‌ ವಿಪುಲ ಉದ್ಯೋಗ: ವನ್ಯಜೀವಿ ಸಂರಕ್ಷಣಾ ಕ್ಷೇತ್ರ

ವಿವಿಧ ಕೋರ್ಸ್‌ ವಿಪುಲ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 19:30 IST
Last Updated 10 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವನ್ಯ ಜೀವಿ ಸಂರಕ್ಷಣಾ ವಿಷಯಗಳ ಅಧ್ಯಯನಕ್ಕಾಗಿ ಡಿಪ್ಲೊಮಾ ,ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ವಿವಿಧ ವಿಷಯ ಮತ್ತು ಕೋರ್ಸ್ ಗಳಿವೆ. ಅವುಗಳ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

ಅದು 2004 -05ನೇ ವರ್ಷ. ರಾಜಸ್ಥಾನದ ಅಳ್ವಾರ್ ಜಿಲ್ಲೆಯ ಸರಿಸ್ಕಾ ಅರಣ್ಯದಲ್ಲಿ ಒಂದೇ ಒಂದು ಹುಲಿ ಇಲ್ಲ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಆಗ, ವಿಶ್ವದ ಎಲ್ಲಾ ಹುಲಿ ಸಂರಕ್ಷಣಾ ತಜ್ಞರು ಬೇರೆ ಒಂದು ಕಾಡಿನಿಂದ ಹುಲಿಯನ್ನು ಸ್ಥಳಾಂತರಿಸಲು (ಟ್ರಾನ್ಸ್ ಲೊಕೇಶನ್) ಸಲಹೆ ನೀಡಿದ್ದರು. ಅದರಂತೆ 2008ರಲ್ಲಿ ಪಕ್ಕದ ರಣಥಂಬೋರ್‌ನಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿಯನ್ನು ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮತ್ತು ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ ನೇತೃತ್ವದಲ್ಲಿ ಸರಿಸ್ಕಾಗೆ ಸ್ಥಳಾಂತರಿಸಲಾಯಿತು. ಈ ಯೋಜನೆ ಯಶಸ್ವಿಯಾಯಿತು. ಈಗ ಅಲ್ಲಿ 27 ಹುಲಿಗಳಿವೆ. ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲೇ ಅತ್ಯಂತ ವಿನೂತನ ಹಾಗೂ ಮೊದಲ ಪ್ರಯತ್ನ ಫಲ ನೀಡಿದೆ. ಸ್ಥಳಾಂತರ ಪ್ರಕ್ರಿಯೆ ಯಶಸ್ವಿಯಾದದ್ದನ್ನು ಕಂಡ ತಜ್ಞರು ಈ ಕ್ರಮದ ಕುರಿತು ಹೆಚ್ಚಿನ ಅಧ್ಯಯನ ಆಗಬೇಕು ಎಂದಿದ್ದಾರೆ.

ಇಂಥ ಪರಿಸರ ಸಮತೋಲನದ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ನಡೆಸಲು, ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ರೂಪಿಸಲು ಹಲವು ವಿಶ್ವವಿದ್ಯಾಲಯಗಳು, ವಿಜ್ಞಾನ ಕೇಂದ್ರ ಗಳು ವನ್ಯಜೀವಿ ಸಂರಕ್ಷಣೆ ಕುರಿತು ವಿವಿಧ ಕೋರ್ಸ್‌ ಗಳನ್ನು ನಡೆಸುತ್ತಿವೆ. ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್‌ನಿಂದ ಹಿಡಿದು ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್‌ವರೆಗೆ ಅಧ್ಯಯನಕ್ಕೆ ಅನುಕೂಲ ಕಲ್ಪಿಸಿವೆ. ಈ ಕೋರ್ಸ್‌ಗಳಲ್ಲಿ ಅಧ್ಯಯನ, ತರಬೇತಿ, ಸಂಶೋಧನೆ, ಕ್ಷೇತ್ರ ಕಾರ್ಯ ಎಲ್ಲಕ್ಕೂ ಆದ್ಯತೆ ನೀಡಲಾಗಿದೆ. ಕೋರ್ಸ್ ಪೂರೈಸಿದವರಿಗೆ ವಿವಿಧ ಕಡೆಗಳಲ್ಲಿ ಉದ್ಯೋಗಗಳು ಲಭ್ಯವಿವೆ.

ADVERTISEMENT

ಯಾವ ಯಾವ ಕೋರ್ಸ್

ವನ್ಯಜೀವಿ ಸಂರಕ್ಷಣೆಯನ್ನು ಶಾಸ್ತ್ರೀಯವಾಗಿ ಅಧ್ಯಯನ ನಡೆಸಲು ವಿಜ್ಞಾನ ವಿಷಯದಲ್ಲಿ ಪಿಯುಸಿ ಪಾಸಾಗಿರಬೇಕು. ಅದನ್ನು ಆಧರಿಸಿ ಜೀವಶಾಸ್ತ್ರ ವಿಷಯದ ಪದವಿ ಅಧ್ಯಯನದ ನಂತರ ವನ್ಯಜೀವಿ ಸಂರಕ್ಷಣೆಯ ಸ್ನಾತಕೋತ್ತರ ಪದವಿ ಪಡೆಯಬಹುದು. ಇಲ್ಲವೆ ಪಿಯುಸಿ ನಂತರ ಪಶುಸಂಗೋಪನೆ, ಬೇಸಾಯ, ಅರಣ್ಯ, ತೋಟಗಾರಿಕೆ, ಪರಿಸರ ವಿಜ್ಞಾನಗಳು, ಪ್ರಾಣಿ ವಿಜ್ಞಾನ , ಸಸ್ಯ ವಿಜ್ಞಾನ , ಪಿ ಜಿ ಡಿಪ್ಲೊಮಾ ಇನ್ ಅಡ್ವಾನ್ಸ್ಡ್‌ ವೈಲ್ಡ್‌ಲೈಫ್‌ ಮ್ಯಾನೇಜ್‌ಮೆಂಟ್, ಅರಣ್ಯ ಕುರಿತ ವಿಷಯಗಳಲ್ಲಿ ಪದವಿ ಪಡೆಯ ಬಹುದು. ಅಲ್ಲದೇ, ವೈಲ್ಡ್‌ಲೈಫ್ ಸೈನ್ಸ್‌, ಫಾರೆಸ್ಟ್ ಪ್ರಾಡಕ್ಟ್ ಅಂಡ್ ಯುಟಿಲೈಜೇಶನ್, ಡಿಪ್ಲೊಮಾ ಇನ್ ಲಾ ಅಂಡ್ ಅನಿಮಲ್ ಹೆಲ್ತ್, ಪಿಜಿ ಡಿಪ್ಲೊಮಾ ಇನ್ ವೈಲ್ಡ್ ಅನಿಮಲ್ ಡಿಸೀಸ್ ಮ್ಯಾನೇಜ್‌ಮೆಂಟ್, ಸರ್ಟಿಫಿಕೇಟ್ ಕೋರ್ಸ್ ಇನ್ ವೈಲ್ಡ್‌ಲೈಫ್‌ ಮ್ಯಾನೇಜ್‌ಮೆಂಟ್, ಸರ್ಟಿಫಿಕೇಟ್ ಇನ್ ಪಾರ್ಟಿಸಿಪೇಟರಿ ಫಾರೆಸ್ಟ್ ಮ್ಯಾನೇಜ್‌ಮೆಂಟ್, ಅರಣ್ಯ ಪರಿಸರ ನಿರ್ವಹಣೆಯಲ್ಲಿ ಎಂ.ಬಿ.ಎ, ಎಂ.ಎಸ್ಸಿಯಲ್ಲಿ ವೈಲ್ಡ್‌ಲೈಫ್‌ ಬಯಾಲಜಿ ಅಂಡ್ ಕನ್ಸರ್ವೇಶನ್‌, ಎಂ.ಎಸ್ಸಿಯಲ್ಲಿ ಫಾರೆಸ್ಟ್ರಿ, ವೈಲ್ಡ್ ಲೈಫ್ ಸೈನ್ಸಸ್, ವೈಲ್ಡ್‌ಲೈಫ್‌ ರಿಸೋರ್ಸ್ ಮ್ಯಾನೇಜ್‌ಮೆಂಟ್ ವಿಷಯಗಳಲ್ಲೂ ಪದವಿ ಪಡೆದು ಉದ್ಯೋಗಗಳಿಸಬಹುದು. ಹೆಚ್ಚಿನ ಅಧ್ಯಯನವಾಗಿ ಸಂಶೋಧನೆ ಮಾಡಿ ಪಿ.ಎಚ್‌ಡಿ ಪದವಿ ಪಡೆಯಬಹುದು. ನಂತರ ಹಲವು ಹಂತಗಳಲ್ಲಿ ಉನ್ನತಮಟ್ಟದ ಉದ್ಯೋಗ ಪಡೆಯಬಹುದು.

ಎಲ್ಲೆಲ್ಲಿವೆ ಕೋರ್ಸ್‌ಗಳು ?

ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್(ಎನ್‌ಸಿಬಿಎಸ್‌), ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ), ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಮೈಸೂರು ವಿವಿ, ರಾಜಸ್ಥಾನದ ನೀಮ್ರಾನಾ ಯೂನಿವರ್ಸಿಟಿ, ಅಸ್ಸಾಂನ ದಿಗ್ಬೋಯಿ ಕಾಲೇಜು , ತಮಿಳುನಾಡಿನ ಕೃಷಿ ವಿವಿ, ಕೇರಳದ ವೆಟರ್ನರಿ ಅಂಡ್ ಅನಿಮಲ್ ಸೈನ್ಸ್ ಯುನಿವರ್ಸಿಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ರಿಮೋಟ್ ಸೆನ್ಸಿಂಗ್, ಭಾರತೀದಾಸನ್ ವಿವಿ, ಡೆಹ್ರಾಡೂನ್‌ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆ, ಕೋಟಾದ ಯೂನಿವರ್ಸಿಟಿ ಆಫ್ ಕೋಟಾ, ಮುಂಬೈನ ಟಾಟಾ ಮೆಮೋರಿಯಲ್ ಹಾಸ್ಟಿಟಲ್, ಪುಣೆಯ ಫರ್ಗ್ಯುಸನ್ ಕಾಲೇಜು, ಜಾಧವ್‌ಪುರ ವಿವಿ, ಜೆಎನ್‌ಯು ಮತ್ತು ದೆಹಲಿ ವಿವಿಯ ಹಲವು ಪ್ರಮುಖ ಕಾಲೇಜುಗಳು ವನ್ಯಜೀವಿ ಸಂರಕ್ಷಣೆಯ ಕೋರ್ಸ್‌ ಅಧ್ಯಯನಕ್ಕೆ ಅವಕಾಶ ಕಲ್ಪಿಸಿವೆ. ಭಾರತವಷ್ಟೇ ಅಲ್ಲದೆ ಇಂಗ್ಲೆಂಡ್‌, ನ್ಯೂಜಿಲೆಂಡ್, ಅಮೆರಿಕದಂತಹ ದೇಶಗಳಲ್ಲೂ ವನ್ಯಜೀವಿಸಂರಕ್ಷಣೆಗೆ ಸಂಬಂಧಿಸಿದ ಹಲವು ಕೋರ್ಸ್‌ಗಳಿವೆ.

ಯಾವ ಯಾವ ಕೆಲಸ?

ವೈಲ್ಡ್‌ಲೈಫ್ ಮ್ಯಾನೇಜರ್‌, ವೈಲ್ಡ್‌ಲೈಫ್ ಬಯಾಲಜಿಸ್ಟ್( ವನ್ಯಜೀವಿ ಜೀವಶಾಸ್ತ್ರಜ್ಞ), ವೈಲ್ಡ್‌ಲೈಫ್‌ ಎಜುಕೇಟರ್, ಕನ್ಸರ್ವೇಷನ್ ಬಯಾಲಜಿಸ್ಟ್, ಪಬ್ಲಿಕ್ ಏಜುಕೇಟರ್ ಅಂಡ್ ಔಟ್‌ರೀಚ್ ಸ್ಪೆಷಲಿಸ್ಟ್, ವನ್ಯಜೀವಿ ಕಾನೂನು ಮತ್ತು ಜಾರಿ ಅಧಿಕಾರಿ(ಲಾ ಎನ್‌ಫೋರ್ಸ್ಮೆಂಟ್ ಆಫೀಸರ್), ವೈಲ್ಡ್‌ಲೈಫ್ ಟಿಕ್ನೀಶಿಯನ್, ವೈಲ್ಡ್‌ಲೈಫ್ ಇನ್‌ಸ್ಪೆಕ್ಟರ್ ಅಂಡ್ ಫೊರೆನ್ಸಿಕ್‌ ಸ್ಪೆಷಲಿಸ್ಟ್‌, ವನ್ಯಜೀವಿ ನೀತಿ ವಿಶ್ಲೇಷಕರು, ವೈಲ್ಡ್‌ಲೈಫ್ ಎಕಾನಾಮಿಸ್ಟ್, ವೈಲ್ಡ್‌ಲೈಫ್ ಅಡ್ಮಿನಿಸ್ಟ್ರೇಟರ್‌, ಜಿಐಎಸ್ ಸ್ಪೆಷಲಿಸ್ಟ್ ಸೇರಿದಂತೆ ಹತ್ತಾರು ಉದ್ಯೋಗಗಳಿಗೆ ಸೇರಬಹುದು.

ಆದರೆ ಬೇರೆ ಉದ್ಯೋಗಗಳಿಗೆ ಹೋಲಿಸಿದರೆ ಸಂರಕ್ಷಣೆಯ ಕೆಲಸ ತುಸು ಸವಾಲಿನದ್ದೇ. ಪ್ರಾಣಿಗಳ ಆವಾಸಕ್ಕೆ ಹತ್ತಿರವಿದ್ದೇ ಕೆಲಸ ಮಾಡಬೇಕಾದ ಅನಿವಾರ್ಯತೆಯ ಜೊತೆಗೆ ಹಗಲಿರುಳೆನ್ನದೆ ಕೆಲಸ ಮಾಡಬೇಕಾಗುತ್ತದೆ. ಕೆಲಸದ ನಡುವೆ ಪ್ರಾಣಿದಾಳಿ, ನೈಸರ್ಗಿಕ ವಿಕೋಪಗಳಿಗೂ ಈಡಾಗುವ ಸಂದರ್ಭಗಳಿರುತ್ತವೆ. ಪ್ರಾಣಿಗಳಿಂದ ಹಬ್ಬುವ ವೈರಸ್‌ಗಳಿಂದ ರಕ್ಷಣೆ ಪಡೆದು ಅವುಗಳನ್ನು ರಕ್ಷಿಸಬೇಕಾದ ಅಗತ್ಯವಿರುತ್ತದೆ. ಹಾಗೆಯೇ ವಿಸ್ತೃತ ಅಧ್ಯಯನ, ಕ್ಷೇತ್ರಕಾರ್ಯ, ನೀತಿನಿರೂಪಣೆ, ಅನುಷ್ಠಾನಗಳಿಂದ ಜಗತ್ತಿಗೇ ಮಾದರಿಯಾಗಿ ನಿಲ್ಲುವ ಮುಕ್ತ ಅವಕಾಶವಿರುತ್ತದೆ. ಕೋರ್ಸ್‌ ಕುರಿತ ಹೆಚ್ಚಿನ ಮಾಹಿತಿಗಾಗಿ
http://www.wii.gov.in

http://www.icfre.org/, http://www.ignou.ac.in, http://gbpihed.gov.in/ ಜಾಲತಾಣಗಳನ್ನು ನೋಡಬಹುದು.

ಪ್ರವೇಶಾವಕಾಶದ ವಿವರ

* ಎನ್‌ಸಿಬಿಎಸ್‌ನಲ್ಲಿ ಎಂಎಸ್ಸಿ ಇನ್ ವೈಲ್ಡ್‌ಲೈಫ್‌ ಕೋರ್ಸ್‌ ಸೇರುವವರು ಪ್ರವೇಶ ಪರೀಕ್ಷೆ ಎದುರಿಸಬೇಕಾಗುತ್ತದೆ. ಪದವಿಯಲ್ಲಿ ಶೇ 50ರಷ್ಟು ಅಂಕಗಳಿಸಿದವರು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರವೇಶ ಪರೀಕ್ಷೆಗೆ ಹಾಜರಾಗಬಹುದು.
* ಪಿಯುಸಿ ಹಂತದಲ್ಲಿ ಜೀವವಿಜ್ಞಾನ ವಿಷಯದೊಂದಿಗೆ ಶೇ 60 ಅಂಕ ಗಳಿಸಿದವರು ಪದವಿ ಕೋರ್ಸ್‌ಗೆ, ಪದವಿಯಲ್ಲಿ ಶೇ 50 ಅಂಕ ಪಡೆದವರು ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಗಳಿಗೆ ಅರ್ಹರಾಗುತ್ತಾರೆ. ಎಸ್‌.ಸಿ, ಎಸ್‌.ಟಿ ಅಭ್ಯರ್ಥಿಗಳಿಗೆ ಪದವಿಗೆ ಶೇ 50 ಮತ್ತು ಸ್ನಾತಕೋತ್ತರ ಪದವಿಗೆ ಶೇ 45ರಷ್ಟು ಅಂಕಗಳನ್ನು ನಿಗದಿಪಡಿಸಲಾಗಿದೆ.

*ಸ್ನಾತಕೋತ್ತರ ಶಿಕ್ಷಣ ನೀಡುವ ಬಹುತೇಕ ವಿವಿಗಳು ಪ್ರವೇಶ ಪರೀಕ್ಷೆ ನಡೆಸುತ್ತವೆ.

*ಕೆಲವು ವಿವಿಗಳು ಪದವಿಯಲ್ಲಿ ಪಡೆದ ಅಂಕ ಗಳನ್ನು ಆಧರಿಸಿ ಕೌನ್ಸಿಲಿಂಗ್ ಮೂಲಕ ಪ್ರವೇಶ ನೀಡುತ್ತವೆ.

* ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದವರು ಪದವಿ ಅಧ್ಯಯನಕ್ಕೆ ಮೆರಿಟ್ ಆಧರಿಸಿ ಪ್ರವೇಶ ನೀಡುತ್ತಾರೆ.

*ಈ ವರ್ಷ ಜುಲೈ – ಆಗಸ್ಟ್‌ನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.