ADVERTISEMENT

ಪಿಯುಸಿ ನಂತರ: ಬಿಎ– ಮಾನವಿಕ ವಿಭಾಗದಲ್ಲಿ ಹೊಸನೀರು

ಅನ್ನಪೂರ್ಣ ಮೂರ್ತಿ
Published 26 ಏಪ್ರಿಲ್ 2019, 12:40 IST
Last Updated 26 ಏಪ್ರಿಲ್ 2019, 12:40 IST
ಬೆಂಗಳೂರಿನ ಐತಿಹಾಸಿಕ ಮಹತ್ವದ ಸರ್ಕಾರಿ ಕಲಾ ಕಾಲೇಜು
ಬೆಂಗಳೂರಿನ ಐತಿಹಾಸಿಕ ಮಹತ್ವದ ಸರ್ಕಾರಿ ಕಲಾ ಕಾಲೇಜು   

ಆರ್ಟ್ಸ್‌ – ಎಂದ ಕೂಡಲೇ ತಾತ್ಸಾರದ ಭಾವ; ‘ಎಲ್ಲೂ ಸಲ್ಲದವರು ಇಲ್ಲಷ್ಟೆ ಸಲ್ಲುವರು’ ಎಂಬ ವ್ಯಂಗ್ಯ. ‘ಇದು ಹೆಣ್ಣುಮಕ್ಕಳ ಓದು’ – ಎಂಬ ಅಪಹಾಸ್ಯ. ವಾಸ್ತವದಲ್ಲಿ ಬಿ. ಎ. ಆರ್ಟ್ಸ್‌ನಲ್ಲಿ ತುಂಬ ಅವಕಾಶಗಳಿವೆ. ಒಂದು ಕಾಲದಲ್ಲಿ ತುಂಬ ಆದರವನ್ನು ಪಡೆದುಕೊಂಡಿದ್ದ ಬಿ. ಎ. ಕೋರ್ಸ್‌ಗಳು ಕಾಲಕ್ರಮೇಣ ವರ್ಚಸ್ಸನ್ನು ಕಳೆದುಕೊಂಡವು. ಆದರೆ ಇದೀಗ ಪುನಃ ತನ್ನ ವೈಭವವನ್ನು ಪಡೆಯುವ ಸೂಚನೆಗಳು ಕಂಡುಬರುತ್ತಿವೆ.

ಆರ್ಟ್ಸ್‌ ವಿಭಾಗ ಇಂದು ಮಾನವಿಕ ವಿಭಾಗ (Humanities) ಎಂಬ ವಿಶಾಲ ಹರವನ್ನು ಪಡೆದುಕೊಂಡಿದೆ. ನಾವು ಬದುಕಿರುವ ಪರಿಸರದ ಎಲ್ಲ ಆಯಾಮಗಳ ಬಗ್ಗೆ ತಿಳಿವಳಿಕೆಯನ್ನು ನೀಡುವಂಥವೆಲ್ಲವೂ ಈ ವಿಷಯದ ವ್ಯಾಪ್ತಿಗೆ ಬರುತ್ತವೆ. ಸಾಂಪ್ರದಾಯಿಕ ಕಾಂಬಿನೇಷನ್‌ಗಳಲ್ಲಿ ಮಾತ್ರವೇ ಕೋರ್ಸ್‌ಗಳನ್ನು ಒದಗಿಸುವ ಹಳೆಯ ಪದ್ಧತಿಗೇ ಅಂಟಿಕೊಂಡದ್ದರಿಂದ ಈ ವಿಷಯಗಳ ಬಗ್ಗೆ ಆಕರ್ಷಣೆ–ಮನ್ನಣೆಗಳು ಕಡಿಮೆಯಾಗುತ್ತ ಬಂದಿತು. ಆದರೆ ಇದೀಗ ಕೆಲವು ಕಾಲೇಜುಗಳು ಮತ್ತು ಸ್ವಾಯತ್ತ ವಿಶ್ವವಿದ್ಯಾಲಯಗಳು ವಿಭಿನ್ನ ಕಾಂಬಿನೇಷನ್‌ಗಳಲ್ಲಿ ಬಿ.ಎ. ಕೋರ್ಸ್‌ಗಳನ್ನು ಆರಂಭಿಸಿವೆ. ಹೀಗಾಗಿ ವಿದ್ಯಾರ್ಥಿಗಳಲ್ಲೂ ಆಸಕ್ತಿ ಹುಟ್ಟುತ್ತಿದೆ.

ಇನ್ನು ಹಳೆಯ ಪದ್ಧತಿಗೇ ಜೋತು ಬಿದ್ದಿರುವ ಸರ್ಕಾರಿ ಕಾಲೇಜುಗಳಲ್ಲಿಯೂ ನಮ್ಮ ಕಾಲಕ್ಕೆ ಅಗತ್ಯವಾಗಿ ಬೇಕಾಗಿರುವ ಕೋರ್ಸ್‌ಗಳನ್ನು ಆರಂಭಿಸುವುದರಿಂದ ಬಿ. ಎ. ಕೋರ್ಸ್‌ಗಳನ್ನು ಮತ್ತಷ್ಟು ಪ್ರಯೋಜನಕಾರಿಯಾಗಿ ಮಾಡಬಹುದು. ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳ ಅಧ್ಯಯನಕ್ಕೆ ತುಂಬ ಮನ್ನಣೆಯಿದೆ. ನಮ್ಮಲ್ಲೂ ಕೋರ್ಸ್‌ಗಳ ವೈವಿಧ್ಯವನ್ನೂ ಸ್ವರೂಪವನ್ನೂ ಬದಲಾಯಿಸುವ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ಬಿ.ಎ. ಮಾಡಿದವರಿಗೆ ಉನ್ನತ ಶಿಕ್ಷಣದಲ್ಲೂ ಉದ್ಯೋಗಾವಕಾಶದಲ್ಲೂ ಹೆಚ್ಚಿನ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ.

ADVERTISEMENT

ಸಾಹಿತ್ಯ, ಇತಿಹಾಸ, ಪತ್ರಿಕೋದ್ಯಮ, ಸಿನಿಮಾ, ತತ್ತ್ವಶಾಸ್ತ್ರ, ಮನೋವಿಜ್ಞಾನ, ಭಾಷೆ, ಸಂಗೀತ, ಅರ್ಥಶಾಸ್ತ್ರ – ಹೀಗೆ ಹಲವು ವಿಷಯಗಳಲ್ಲಿ ವೈವಿಧ್ಯಮಯ ಕಾಂಬಿನೇಷನ್‌ಗಳಲ್ಲಿ ಇಂದು ಬಿ.ಎ. ಪದವಿಯನ್ನು ಪಡೆಯಬಹುದು. ಆದುದರಿಂದ ವಿಜ್ಞಾನ ಅಥವಾ ವಾಣಿಜ್ಯ ವಿಷಯಗಳು ಮಾತ್ರವೇ ವಿದ್ಯಾಭ್ಯಾಸ; ಆ ವಿಷಯಗಳ ಪದವಿ ಮಾತ್ರವೇ ಉನ್ನತ ವ್ಯಾಸಂಗಕ್ಕೂ ಉದ್ಯೋಗಾವಕಾಶಕ್ಕೂ ಇರುವ ದಾರಿಗಳು – ಎಂಬ ತಪ್ಪು ತಿಳಿವಳಿಕೆಯಿಂದ ಹೊರಬಂದು ಬಿ. ಎ. ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಬಿ. ಎ.ಯಲ್ಲಿರುವ ಕೆಲವು ಸಾಂಪ್ರದಾಯಿಕ ಕಾಂಬಿನೇಷನ್‌ಗಳು:

* ಐಚ್ಛಿಕ ಕನ್ನಡ, ಇತಿಹಾಸ, ಅರ್ಥಶಾಸ್ತ್ರ

* ಇಂಗ್ಲಿಷ್‌, ರಾಜ್ಯಶಾಸ್ತ್ರ, ಪತ್ರಿಕೋದ್ಯಮ
* ಇತಿಹಾಸ, ಅರ್ಥಶಾಸ್ತ್ರ, ಭೂಗೋಳ
* ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ

* ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ
* ಇತಿಹಾಸ, ಭೂಗೋಳ, ಪ್ರವಾಸೋದ್ಯಮ
* ರಾಜ್ಯಶಾಸ್ತ್ರ, ಮನೋವಿಜ್ಞಾನ, ಪತ್ರಿಕೋದ್ಯಮ

* ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ
* ಇತಿಹಾಸ, ಅರ್ಥಶಾಸ್ತ್ರ, ಐಚ್ಛಿಕ ಇಂಗ್ಲಿಷ್‌

* ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳ
* ಇತಿಹಾಸ, ಸಮಾಜಶಾಸ್ತ್ರ, ಭೂಗೋಳ


ಖಾಸಗಿ ಮತ್ತು ಸ್ವಾಯತ್ವ ಕಾಲೇಜುಗಳಲ್ಲಿರುವ ಕೆಲವು ಬಿ. ಎ. ಕೋರ್ಸ್‌ಗಳು:

* ಇಂಗ್ಲಿಷ್‌ ಸಾಹಿತ್ಯ ಮತ್ತು ರಂಗಭೂಮಿ ಅಧ್ಯಯನ

* ಇಂಗ್ಲಿಷ್‌

* ಇತಿಹಾಸ

* ಪತ್ರಿಕೋದ್ಯಮ

* ತತ್ತ್ವಶಾಸ್ತ್ರ

* ಮನೋವಿಜ್ಞಾನ

* ಸಮಾಜಶಾಸ್ತ್ರ

* ಮಾಧ್ಯಮ ಮತ್ತು ಸಂವಹನ

* ಪ್ರಾಯೋಗಿಕ ಕಲೆಗಳು

* ಮಾಧ್ಯಮ ಅಧ್ಯಯನ

* ಸಂಗೀತ

* ಫಾರಿನ್‌ ಲಾಂಗ್ವೇಜಸ್‌

* ಪುರಾತತ್ವಶಾಸ್ತ್ರ (ಅರ್ಕಿಯಾಲಜಿ)

* ಪ್ರಾಕ್ತನಶಾಸ್ತ್ರ (ಅಂತ್ರೋಪಾಲಜಿ)

* ಜಾಹೀರಾತು

* ಸೈಕೋ–ಸೋಷಿಯಲ್‌ ರಿಹ್ಯಾಬಿಲಿಟೇಷನ್‌

**

ಕಡಿಮೆಯಾದ ಅಸಡ್ಡೆ

ಮಾನವಿಕ ವಿಭಾಗದ ಅಧ್ಯಯನದ ಬಗ್ಗೆ ಮೂಡಿದ್ದ ಅಸಡ್ಡೆ ಈಗ ಕಡಿಮೆಯಾಗಿದೆ. ಇತ್ತೀಚೆಗೆ ಈ ವಿಭಾಗದಲ್ಲಿ ಹೊಸ ಕೋರ್ಸುಗಳು ಆರಂಭವಾಗಿವೆ. ಸಾಂಪ್ರದಾಯಿಕ ಕೋರ್ಸುಗಳಲ್ಲಿಯೂ ಹೊಸತನ ಸೇರಿಕೊಂಡಿರುವುದರಿಂದ, ವಿದ್ಯಾರ್ಥಿಗಳು ಈ ಕೋರ್ಸುಗಳತ್ತ ಗಮನ ಹರಿಸುತ್ತಿದ್ದಾರೆ. ವ್ಯಕ್ತಿಯ ಬುದ್ಧಿಮತ್ತೆ ಮಾತ್ರವಲ್ಲ, ಭಾವನಾತ್ಮಕ ಸಾಮರ್ಥ್ಯ ಕೂಡ ವೃತ್ತಿ ಕ್ಷೇತ್ರದಲ್ಲಿ ಮುಖ್ಯ ಎಂಬುದನ್ನು ಹೊಸ ತಲೆಮಾರು ಅರ್ಥಮಾಡಿಕೊಂಡಿದೆ. ಆಡಳಿತ ಸೇವೆ, ಕಾನೂನು, ವ್ಯವಹಾರ ಕ್ಷೇತ್ರದಲ್ಲಿ ಅಗತ್ಯ ಜಾಣ್ಮೆಯನ್ನು ಗಳಿಸಲು ಮಾನವಿಕ ವಿಭಾಗದ ಕೋರ್ಸುಗಳು ನೆರವಾಗುತ್ತವೆ.

ಕಲಾ ವಿಭಾಗದ ಕೋರ್ಸ್‍ಗಳೂ ಮಾನವಿಕ ವಿಭಾಗದಡಿಯೇ ಬರುತ್ತವೆ. ಆಳ್ವಾಸ್‍ ಕಾಲೇಜಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯದ ಪದವಿ ತರಗತಿಗಳಿವೆ. ಸಮಾಜಕಾರ್ಯ ಕ್ಷೇತ್ರದ ಅಧ್ಯಯನಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಒಟ್ಟಿನಲ್ಲಿ ‘ಆರ್ಟ್ಸ್‌’ ಎಂದರೆ ಹಿಂದೆ ಇದ್ದ ನಿರ್ಲಕ್ಷ್ಯ ಈಗ ಮಾಯವಾಗಿದೆ. ಸಮಾಜದಲ್ಲಿ ಮಾನವಿಕ ವಿಭಾಗದ ಬಗ್ಗೆ ತಪ್ಪು ತಿಳಿವಳಿಕೆ, ಕೀಳರಿಮೆ ಹಾಗೂ ಮಾಹಿತಿಯ ಕೊರತೆ ಇತ್ತು. ಪರಿಸ್ಥಿತಿ ಈಗ ಬದಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ವಿಶಾಲವಾದ ಅವಕಾಶಗಳಿರುವ ಈ ಕ್ಷೇತ್ರದಲ್ಲಿ ಆಸಕ್ತಿ ಇದ್ದವರಿಗೆ ವೈವಿಧ್ಯಮಯ ಅವಕಾಶಗಳಿವೆ.
- ಸಂಧ್ಯಾ ಕೆ.ಎಸ್‌. ಮಾನವಿಕ ವಿಭಾಗದ ಡೀನ್‌, ಆಳ್ವಾಸ್‌ ಕಾಲೇಜು, ಮೂಡುಬಿದಿರೆ

**

ಬಿ. ಎ. ಪದವಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದು:

ಸರ್ಕಾರಿ ಕಲಾ ಕಾಲೇಜು, ಬೆಂಗಳೂರು (gfgc.kar.nic.in)

ಎನ್‌. ಎಂ. ಕೆ. ಆರ್‌. ವಿ. ಕಾಲೇಜು, ಬೆಂಗಳೂರು (nmkrvcollege.net)

ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ (kacd.ac.in)

ಮಹಾರಾಜಾಸ್‌ ಕಾಲೇಜು, ಮೈಸೂರು (maharajas.uni-mysore.ac.in)

ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜು, ಶಿವಮೊಗ್ಗ (dvsdegreecollege.org)

ಎನ್.ಡಿ.ಆರ್.ಕೆ. ಪ್ರಥಮ ದರ್ಜೆ ಕಾಲೇಜು, ಹಾಸನ (www.ndrkfgc.com)

ಅಂಜುಮಾನ್ ಕಲೆ ಮತ್ತು ವಾಣಿಜ್ಯ ಕಾಲೇಜು, ಬೆಳಗಾವಿ (anjumancolbgm.com)

ಎಂ. ಎಸ್‌. ರಾಮಯ್ಯ ಕಾಲೇಜ್‌, ಬೆಂಗಳೂರು (msrcasc.edu.in)

ಆಳ್ವಾಸ್‌ ಕಾಲೇಜು, ಮೂಡುಬಿದಿರೆ (alvascollege.com)

ಮೌಂಟ್‌ ಕಾರ್ಮೆಲ್‌ ಕಾಲೇಜ್‌, ಬೆಂಗಳೂರು (mountcarmelcollege.co.in)

ಜೈನ್‌ ಯೂನಿವರ್ಸಿಟಿ, ಬೆಂಗಳೂರು (jainuniversity.ac.in)

ಗಾರ್ಡನ್‌ ಸಿಟಿ ಯುನಿವರ್ಸಿಟಿ, ಬೆಂಗಳೂರು (gardencity.university)

ಕ್ರೈಸ್ಟ್‌ ಯುನಿವರ್ಸಿಟಿ, ಬೆಂಗಳೂರು (christuniversity.ac.in)

ಎಸ್‌.ಜೆ.ವಿ.ಪಿ. ಕಾಲೇಜು, ಹರಿಹರ (sjvpac.org)

**

ನಿಮಗಿದು ತಿಳಿದಿರಲಿ:

1. ಬಿ. ಎ. ಪದವಿಯ ಅವಧಿ 3 ವರ್ಷಗಳು.

2. ಬಿ. ಎ. ಬಳಿಕ ಎಂ. ಎ. ಸ್ನಾತಕೋತ್ತರ ಪದವಿಯನ್ನು ಮುಂದುವರೆಸಬಹುದು. ಬಳಿಕ ಸಂಶೋಧನೆಯನ್ನೂ ಮಾಡಬಹುದು.

3. ಬಿ. ಎ. ಬಳಿಕ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯಬಹುದು.

4. ಬಿ. ಎ. ಮಾಡಿದವರಿಗೆ ಉದ್ಯೋಗಾವಕಾಶಗಳು ಸಾಕಷ್ಟಿವೆ. ಬಹುರಾಷ್ಟ್ರೀಯ ಕಂಪನಿಗಳಲ್ಲೂ ಉದ್ಯೋಗಾವಕಾಶಗಳಿವೆ.

5. ಬಿ. ಎ. ಎಕನಾಮಿಕ್ಸ್‌ (ಅರ್ಥಶಾಸ್ತ್ರ) ಮಾಡಿದವರು ಎಂ. ಎ. ಎಕನಾಮಿಕ್ಸ್‌ ಮಾಡಿ, ಬಳಿಕ ‘ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌’ನಂಥ ಪ್ರತಿಷ್ಠಿತ ಸಂಸ್ಥೆಗಳಲ್ಲೂ ಉನ್ನತ ವ್ಯಾಸಂಗವನ್ನೂ ಉದ್ಯೋಗವನ್ನೂ ಪಡೆಯಬಹುದು. (ವಿವರಗಳಿಗೆ ನೋಡಿ: lse.ac.uk)

6. ಬಿ. ಎ. ಇಂಗ್ಲಿಷ್‌ ಮಾಡಿದವರಿಗೆ ಉದ್ಯೋಗವಾಕಾಶಗಳೂ ವಿಪುಲವಾಗಿವೆ. ಉನ್ನತ ವ್ಯಾಸಂಗ ಮಾಡಿ ಬೋಧಕವೃತ್ತಿಯಲ್ಲಿ ತೊಡಗಬಹುದು. ಮಾಧ್ಯಮ ಸಂಸ್ಥೆಗಳು, ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು, ಜಾಹೀರಾತು ಸಂಸ್ಥೆಗಳಲ್ಲೂ ಉದ್ಯೋಗ ಸಿಗುವುದು.

7. ಭಾಷೆಗಳ ಕಲಿಕೆಯಲ್ಲಿ ಆಸಕ್ತಿ ಮತ್ತು ಕುಶಲತೆಗಳಿರುವವರಿಗೆ ಫಾರಿನ್‌ ಲಾಗ್ವೇಂಜಸ್‌ ವಿಭಾಗದಲ್ಲಿ ಹಲವಾರು ಕೋರ್ಸ್‌ಗಳಿವೆ. ಫ್ರೆಂಚ್‌, ಜರ್ಮನ್‌, ಚೈನೀಸ್‌, ರಷ್ಯನ್‌, ಅರೇಬಿಕ್‌, ಜಪಾನಿ – ಮುಂತಾದ ಹಲವು ಭಾಷೆಗಳ ಪದವಿಗಳಿವೆ. ಹೀಗೆ ಯಾವುದಾದರೊಂದು ಭಾಷೆಯಲ್ಲಿ ಪದವಿಯನ್ನು ಗಳಿಸಿದವರಿಗೆ ದೇಶದಲ್ಲೂ ವಿದೇಶದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ.

8. ಕಾನೂನು, ಆಡಳಿತ, ನಾಗರಿಕ ಸೇವೆ ಮುಂತಾದ ವಿಷಯಗಳಲ್ಲಿ ಉನ್ನತ ಅಧ್ಯಯನ ಮಾಡಲು ಬಯಸುವವರು ಮೊದಲಿಗೆ ಬಿ. ಎ. ಪದವಿಯನ್ನು ಪಡೆಯುವುದು ಅನುಕೂಲಕರ.

9. ಎನ್‌ಜಿಓಗಳಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿವೆ.

10. ಬಿ.ಎ. ಕೋರ್ಸ್‌ಗಳ ಬಗ್ಗೆ ಹಿಂದೆ ಇದ್ದಂಥ ಮಾನಸಿಕತೆ ಮತ್ತು ಅವಕಾಶಗಳಲ್ಲಿ ತುಂಬ ಬದಲಾವಣೆಗಳಾಗಿವೆ. ಇದನ್ನು ವಿದ್ಯಾರ್ಥಿಗಳಿಗೂ ಪೋಷಕರೂ ಗಮನಿಸಬೇಕು. ಉದಾಹರಣೆಗೆ ಈ ಮೊದಲು ನೀವು ಯಾವ ವಿಷಯದಲ್ಲಿ ಬಿ.ಎ. ಮಾಡಿರುತ್ತೀರೋ ಅದೇ ವಿಷಯದಲ್ಲಿಯೇ ಸ್ನಾತಕೋತ್ತರ ಪದವಿಯನ್ನು ಮಾಡಬೇಕಾಗುತ್ತಿತ್ತು. ಆದರೆ ಈಗ ಬಹುಶಿಸ್ತೀಯ ಮತ್ತು ಅಂತರಶಿಸ್ತೀಯ ಅಧ್ಯಯನಕ್ಕೂ ಅವಕಾಶಗಳು ಇರುವುದರಿಂದ ಬೇರೆ ಬೇರೆ ಕಾಂಬಿನೇಷನ್‌ಗಳಲ್ಲಿ ಉನ್ನತ ವ್ಯಾಸಂಗವನ್ನು ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.