ADVERTISEMENT

ಪಿ.ಯು.ಸಿ. ನಂತರ ಮುಂದೇನು? ಓದಬಲ್ಲವರಿಗೆ ಅನಂತ ಅವಕಾಶ!

ಪರಮೇಶ್ವರಯ್ಯ ಸೊಪ್ಪಿಮಠ
Published 26 ಏಪ್ರಿಲ್ 2019, 12:43 IST
Last Updated 26 ಏಪ್ರಿಲ್ 2019, 12:43 IST
ಪಿ.ಯು.ಸಿ. ನಂತರ ಮುಂದೇನು? ಓದಬಲ್ಲವರಿಗೆ ಅನಂತ ಅವಕಾಶ!
ಪಿ.ಯು.ಸಿ. ನಂತರ ಮುಂದೇನು? ಓದಬಲ್ಲವರಿಗೆ ಅನಂತ ಅವಕಾಶ!   

ಪಿಯುಸಿ ಫಲಿತಾಂಶ ಎನ್ನುವುದು ಶೈಕ್ಷಣಿಕ ಜೀವನದ ಒಂದು ಘಟ್ಟ ಮುಗಿಯುವುದನ್ನು ಸೂಚಿಸುವುದರ ಜೊತೆಗೆ, ಮುಂದೇನು ಎನ್ನುವ ಪ್ರಶ್ನೆಯನ್ನೂ ಹುಟ್ಟಿಸುತ್ತದೆ. ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಆಯ್ಕೆ ಮಾಡಿಕೊಳ್ಳಬೇಕಾದ ಸರಿಯಾದ ಕೋರ್ಸ್, ಕಾಲೇಜಿಗಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅಲೆದಾಡಿ–ಪರದಾಡಿ ಸುಸ್ತಾಗುತ್ತಾರೆ. ಸರಿಯಾದ ಮಾಹಿತಿ ಸಿಗದಿರುವುದೇ ದೊಡ್ಡ ಸಮಸ್ಯೆ.

ಹಿಂದಿನ ದಿನಗಳಲ್ಲಿ ಈಗಿನಷ್ಟು ವೈವಿಧ್ಯಮಯ ಅವಕಾಶಗಳು ಇರಲಿಲ್ಲ. ಹತ್ತನೇ ತರಗತಿ ನಂತರ – ಪಿ.ಯು.ಸಿ, ಪದವಿ, ಡಿ.ಇಡಿ. ಅಥವಾ ಬಿ.ಇ.ಡಿ., ಎಂ.ಎ., ಹೀಗೆ ಸೀಮಿತ ಅವಕಾಶಗಳಷ್ಟೇ ಇದ್ದವು. ಕಾನೂನು, ತಾಂತ್ರಿಕ ಪದವಿ, ವೈದ್ಯಕೀಯ ಕೋರ್ಸುಗಳು ಉಳಿದ ಆಯ್ಕೆಗಳಾಗಿದ್ದವು. ಪ್ರಸ್ತುತ ಪರಿಸ್ಥಿತಿ ಬದಲಾಗಿದೆ. ಇಂದು ಹೆಜ್ಜೆಹೆಜ್ಜೆಗೂ ಅವಕಾಶಗಳ ಮಹಾಪೂರವೇ ಇದೆ. ಈ ಅವಕಾಶಗಳ ಮಾಯಾಮೃಗದಲ್ಲಿ ಯಾವುದರ ಬೆನ್ನು ಹತ್ತಬೇಕು ಎಂಬುದನ್ನು ನಿರ್ಣಯಿಸುವುದೇ ಸವಾಲು.

ರಾಜ್ಯದಾದ್ಯಂತ ಇರುವ, ವಿವಿಧ ಶಾಲಾ–ಕಾಲೇಜುಗಳ ಬಗ್ಗೆ, ವೈವಿಧ್ಯಮಯ ಕೋರ್ಸಗಳ ಕುರಿತು ರಾಜ್ಯ ಶಿಕ್ಷಣ ಇಲಾಖೆ, ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆಗಳು ವಿವರವಾದ ಮಾಹಿತಿಯನ್ನು ತಮ್ಮ ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಿವೆ. ವಿದ್ಯಾರ್ಥಿಗಳು ಈ ಜಾಲತಾಣಗಳನ್ನು ನಿಯಮಿತವಾಗಿ ಗಮನಿಸುತ್ತಿದ್ದರೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ದೊರೆಯುತ್ತದೆ.

ADVERTISEMENT

ಎಷ್ಟೊಂದು ಅವಕಾಶ!
ದ್ವಿತೀಯ ಪಿ.ಯು.ಸಿ.ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಯಾವ ಕೋರ್ಸ್‌ಗೆ ಸೇರಬೇಕು ಎನ್ನುವುದನ್ನು ನಿರ್ಧರಿಸಬಹುದು. ಅಂತೆಯೇ ನಮಗೆ ಯಾವ ಕೋರ್ಸ್‌ ಇಷ್ಟ ಎನ್ನುವುದರ ಮೇಲೂ ಹುಡುಕಾಟ ನಡೆಸಬಹುದು. ವೈದ್ಯಕೀಯ ಅಥವಾ ತಾಂತ್ರಿಕ ವಿಜ್ಞಾನಗಳಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ವಿಷಯಗಳ ಕೋರ್ಸ್‌ಗಳು ಆಯ್ಕೆಗೆ ಲಭ್ಯವಿರುತ್ತವೆ.

ಪ್ರತಿಷ್ಠಿತ ಕಾಲೇಜುಗಳಿಗೆ ‘ಸಿ.ಇ.ಟಿ.’, ‘ಕಾಮೆಡ್–ಕೆ’, ‘ಐಐಟಿ’, ‘ಜೆಇಇ’, ‘ಎಐಇಇಇ’, ‘ಬಿಟ್‌ಸ್ಯಾಟ್’, ‘ನಾಟಾ’, ‘ಜೆಸ್ಟ್’, ‘ಸಿಪೆಟ್’, ‘ಸೀಡ್’, ‘ಸಿಫ್‌ನೆಟ್’ ಮೊದಲಾದ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರ ಕುರಿತ ಮಾಹಿತಿಗಾಗಿ cet.kar.nic.in, dte.kar.nic.in, admissions.org.in, karnatakaeducation.gov.in ಜಾಲತಾಣಗಳನ್ನು ನೋಡಬಹುದು.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಲಲಿತಕಲೆ, ದಶ್ಯಕಲೆ, ಮುದ್ರಣ, ಮಾಹಿತಿ ತಂತ್ರಜ್ಞಾನ, ಆನ್ವಯಿಕ ವಿಷಯಗಳ ಕುರಿತು ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ, ಸಂಶೋಧನೆ, ಡಾಕ್ಟರೇಟ್ ಸೇರಿದಂತೆ ವಿವಿಧ ವಿಷಯಗಳ ಅಧ್ಯಯನಕ್ಕೆ ಅವಕಾಶಗಳನ್ನು ಕಲ್ಪಿಸಿವೆ. ಸಾಮಾನ್ಯ ವಿಜ್ಞಾನದ ಆಯ್ಕೆಯಲ್ಲಿಯೂ ಸುಮಾರು 90 ವಿವಿಧ ವಿಷಯಗಳಿದ್ದು – 3 ವರ್ಷದ (6 ಸೆಮಿಸ್ಟರ್) ಪದವಿ, ಇಲ್ಲವೇ 5 ವರ್ಷಗಳ ‘ಇಂಟಿಗ್ರೇಟೆಡ್ ಪಿ.ಜಿ.’ ಕೋರ್ಸ್ ಸೇರಲು ಅವಕಾಶಗಳಿವೆ.

ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಬಿ.ಕಾಂ., ಬಿ.ಬಿ.ಎಂ., ಎಂಬಿ.ಎ., ಸಿ.ಎ., ಸಿ.ಎಫ್.ಎ., ಸಿ.ಡಬ್ಲ್ಯು.ಎ., ಸಿ.ಎಸ್., ಮೊದಲಾದ ಪದವಿ ವಿಭಾಗಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಲೆಯ ವಿಷಯಕ್ಕೆ ಸಂಬಂಧಿಸಿದಂತೆ – ಭಾಷೆ ಮತ್ತು ಇತರೆ ಐಚ್ಛಿಕ ವಿಷಯಗಳ ಕಲಾ ಪದವಿ, ಸ್ನಾತಕೋತ್ತರ ಪದವಿಗಳಿಗೆ ಈಗ ಹೊಸ ವಿಷಯಗಳೂ ಸೇರಿವೆ.

ವೈವಿಧ್ಯಮಯ ಕಲಿಕೆ
ಪತ್ರಿಕೋದ್ಯಮ, ಫೋಟೋ ಜರ್ನಲಿಸಂ, ಫ್ಯಾಶನ್ ಡಿಸೈನಿಂಗ್, ಕ್ರಿಮಿನಾಲಜಿ ಮತ್ತು ನ್ಯಾಯಿಕ ವೈದ್ಯಶಾಸ್ತ್ರ, ಮಾಧ್ಯಮ ಅಧ್ಯಯನ, ದೂರಶಿಕ್ಷಣ, ಆಹಾರ ಸಂಸ್ಕರಣೆ, ಮತ್ಸ್ಯೋದ್ಯಮ, ಹರಳು ಮತ್ತು ಆಭರಣಗಳ ವಿನ್ಯಾಸ – ಹೀಗೆ ವೈವಿಧ್ಯಮಯ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೆರಳಿಸಿವೆ. ಕಂಪ್ಯೂಟರ್ ಎಂಬ ಮಾಯಾಲೋಕ ತಂತ್ರಾಂಶ ಮತ್ತು ಯಂತ್ರಾಂಶಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದು, ಖಾಸಗಿಯಾಗಿಯೂ ನೂರಾರು ಕೋರ್ಸ್‌ಗಳನ್ನು ಕಲಿತು–ಕಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅವಕಾಶಗಳನ್ನು ಒದಗಿಸಿದೆ.

ದೃಶ್ಯ ಮಾಧ್ಯಮಗಳಲ್ಲಿ ದೊರೆಯುತ್ತಿರುವ ವಿಪುಲ ಅವಕಾಶಗಳಿಂದಾಗಿ ಚಿತ್ರಕಲೆ, ಗ್ರಾಫಿಕ್ಸ್, ವೆಬ್ ಡಿಸೈನಿಂಗ್, ಆ್ಯನಿಮೇಶನ್ ಮೊದಲಾದ ಕಲೆಯ ಮಾಧ್ಯಮಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಪ್ರತಿಷ್ಠಿತ ಗ್ಯಾಲರಿಗಳಲ್ಲಿ ಇತ್ತೀಚೆಗೆ ವಾರಾಂತ್ಯದ ತರಬೇತಿ ತರಗತಿಗಳೂ, ಕ್ರಾಷ್ ಕೋರ್ಸ್‌ಗಳು ಏರ್ಪಾಡಾಗುತ್ತಿವೆ. ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್‌ ಮತ್ತು ಕಲಾ ಇತಿಹಾಸ ವಿಭಾಗಗಳಿದ್ದು, ಸ್ನಾತಕೋತ್ತರ ಡಿಪ್ಲೊಮ ಕೋರ್ಸಗಳನ್ನು ನಡೆಸಲಾಗುತ್ತಿದೆ (chitrakalaparishath.org). ಆ್ಯನಿಮೇಶನ್ ಮತ್ತು ಗ್ರಾಫಿಕ್ ಡಿಸೈನಿಂಗ್ ಕಲಿತವರು ಕೈತುಂಬಾ ಸಂಬಳ ಪಡೆಯುತ್ತಿರುವುದು ಆ ಕ್ಷೇತ್ರದ ಕಡೆಗೆ ಒಲವು ಹೆಚ್ಚಾಗಿದೆ.

ತಾಂತ್ರಿಕ ಶಿಕ್ಷಣಕ್ಕೆ ಒತ್ತು ದೊರೆಯುತ್ತಿರುವುದರಿಂದ ಎಂಜಿನಿಯರಿಂಗ್‌ನಲ್ಲಿ ‘ಮೆರೀನ್ ಜಿಯಾಲಜಿ’ಯಿಂದ ‘ಆಸ್ಟ್ರೋ ಫಿಸಿಕ್ಸ್‌’ವರೆಗೆ ಹಲವು ಕೋರ್ಸ್‌ಗಳಿವೆ. ಪ್ರತಿಷ್ಠಿತ ಕಾಲೇಜುಗಳಿಗೆ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ಅರಣ್ಯಶಾಸ್ತ್ರ ವಿಷಯಗಳೂ ಕೂಡ ಈಗ ತಾಂತ್ರಿಕ ತರಬೇತಿಗೆ ಸೇರಿರುವುದರಿಂದ ಅಲ್ಲಿಯೂ ಪ್ರವೇಶಕ್ಕೆ ಹೆಚ್ಚು ಜನರು ಆಸಕ್ತಿ ತೋರಿಸುತ್ತಿದ್ದಾರೆ.

ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರ ಹಾಗೂ ಖಾಸಗಿ ವಲಯದ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯ ಅನ್ವಯ, ಬೃಹತ್ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿವೆ. ಅವುಗಳಲ್ಲಿ ಪ್ರವೇಶ ಪಡೆಯಲು ವಿವಿಧ ರೀತಿಯ ಪ್ರವೇಶ ಪರೀಕ್ಷೆ, ಸಂದರ್ಶನಗಳನ್ನು ಎದುರಿಸಬೇಕಾದ ಅಗತ್ಯವಿದೆ. ಕೆಲವು ಸಂಶೋಧನಾಲಯಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ನೌಕರಿಯನ್ನು ಕೂಡ ನೀಡಲಾಗುತ್ತದೆ. ದ್ವಿತೀಯ ಪಿ.ಯು.ಸಿ. ಅಥವಾ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಲೇ ಸೇವೆಸಲ್ಲಿಸಬಹುದು.

ಭಾರತದಲ್ಲಿರುವ ಕೆಲವು ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳು ಹೀಗಿವೆ: ಆಲ್ ಇಂಡಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ – ನವದೆಹಲಿ (aiims.edu), ಆರ್ಮಡ್ ಫೋರ್ಸಸ್ ಮೆಡಿಕಲ್ ಕಾಲೇಜ್ – ಪುಣೆ (afmc.nic.in), ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ – ಕಾರೈಕುಡಿ (cecri.res.in), ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ನಾಟಿಕಲ್ & ಇಂಜಿನಿಯರಿಂಗ್ ಟ್ರೈನಿಂಗ್ – ಕೊಚ್ಚಿ (cifnet.nic.in), ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ & ಟೆಕ್ನಾಲಜಿ – ಚೆನ್ನೈ (cipet.gov.in), ಚೆನ್ನೈ ಮ್ಯಾಥಮೆಟಿಕಲ್ ಇನ್‌ಸ್ಟಿಟ್ಯೂಟ್ – ಸಿರುಸೆರಿ (cmi.ac.in), ಇಂಗ್ಲಿಷ್ & ಫಾರಿನ್ ಲಾಂಗ್ವೇಜಸ್ ಯೂನಿವರ್ಸಿಟಿ – ಹೈದರಾಬಾದ್ (ciefl.ac.in), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ – ಅಹಮದಾಬಾದ್ (iimahd.ernet.in), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ & ಟೆಕ್ನಾಲಜಿ – ತಿರುವನಂತಪುರಂ (iist.ac.in), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೂರಿಸಂ & ಟ್ರಾವೆಲ್ ಮ್ಯಾನೇಜ್‌ಮೆಂಟ್ – ನವದೆಹಲಿ (iittm.org), ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ – ನೊಯ್ಡಾ (nchmct.org), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್ – ಬೆಂಗಳೂರು (nimhans.kar.nic.in), ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ & ಎನರ್ಜಿ ಸ್ಟಡೀಸ್ – ಡೆಹ್ರಾಡೂನ್ (upesindia.org).

ಫೇಲ್ ಆದವರಿಗೂ ಅವಕಾಶ!
ಇರುವ ಅವಕಾಶಗಳೆಲ್ಲ ಉತ್ತೀರ್ಣರಾದವರಿಗೆ ಮಾತ್ರ; ಪಿಯುಸಿಯಲ್ಲಿ ಅನುತ್ತೀರ್ಣರಾದವರು ಏನು ಮಾಡಬೇಕು ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಅಗತ್ಯವಿಲ್ಲ. ಫೇಲಾದವರು ಕೂಡ, ಕೇಂದ್ರ ಸರ್ಕಾರದ ‘ವೃತ್ತಿಪರ ಕೌಶಲ್ಯ ವಿಭಾಗ’ವು ರೂಪಿಸಿರುವ ಸುಮಾರು 1600ಕ್ಕೂ ಹೆಚ್ಚು ವಿಭಾಗಗಳಲ್ಲಿ ತರಬೇತಿ ಪಡೆದು, ‘ಎನ್.ಸಿ.ಟಿ.ವಿ. ಪ್ರಮಾಣ ಪತ್ರ’ ಪಡೆದು ಉದ್ಯೋಗ ಗಿಟ್ಟಿಸಬಹುದು. ಅವುಗಳಲ್ಲಿ ಪ್ರಮುಖವಾದವೆಂದರೆ: ಹೊಲಿಗೆ, ಸಿದ್ಧ ಉಡುಪಗಳ ತಯಾರಿಕೆ, ಬ್ಯೂಟಿ ಪಾರ್ಲರ್, ಕಂಪ್ಯೂಟರ್–ಡಿ.ಟಿ.ಪಿ., ಮರಗೆಲಸ, ಗಾರೆಗೆಲಸ, ಪ್ಲಂಬರ್, ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಖಾತೆ ನಿರ್ವಹಣೆ ಮತ್ತು ಲೆಕ್ಕ ವಿಭಾಗ, ವಿದ್ಯುತ್ ಮೋಟಾರ್ ರೀವೈಂಡಿಂಗ್, ರೇಡಿಯೊ–ಟಿ.ವಿ. ರಿಪೇರಿ, ಮನೆಯಲ್ಲೇ ತಯಾರಿಸಬಹುದಾದ ವಸ್ತುಗಳು, ಫೋಟೋಗ್ರಫಿ, ವಿಡಿಯೊಗ್ರಫಿ, ಕೃಷಿ, ಹೈನುಗಾರಿಕೆ, ನೇಯ್ಗೆ – ಇವುಗಳೆಲ್ಲ ಸ್ವಯಂ ಉದ್ಯೋಗ ಹೊಂದುವ ಸಾಮರ್ಥ್ಯವನ್ನೂ ರೂಪಿಸುತ್ತವೆ. ಈ ಕುರಿತು ಧರ್ಮಸ್ಥಳದ ‘ರುಡ್‌ಸೆಟ್ ಸಂಸ್ಥೆ’, ‘ಜೆ.ಎಸ್.ಡಬ್ಲೂ ಫೌಂಡೇಶನ್’, ತೋರಣಗಲ್ಲಿನ ‘ಓ.ಪಿ.ಜೆ ಸೆಂಟರ್’ (08395–242343) ಗಳನ್ನು ಸಂಪರ್ಕಿಸಬಹುದು.

ಶೈಕ್ಷಣಿಕ ಸಾಲ
ಪಿಯುಸಿ ನಂತರದ ಶಿಕ್ಷಣಕ್ಕೆ ಹಣ ಹೊಂದಿಸುವುದು ಕಷ್ಟವಾದರೆ ‘ಶಿಕ್ಷಣ ಸಾಲ’ ಪಡೆಯಲಿಕ್ಕೆ ಅವಕಾಶವಿದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳು ವಿವಿಧ ಯೋಜನೆಗಳ ಅಡಿಯಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಾಲ ನೀಡುತ್ತವೆ. ಕಾಲೇಜಿನ ಶುಲ್ಕ, ಪಠ್ಯ ಪುಸ್ತಕ, ಕಂಪ್ಯೂಟರ್–ಲ್ಯಾಪ್‌ಟಾಪ್ ಖರೀದಿ, ಊಟ–ವಸತಿ ಖರ್ಚುಗಳನ್ನು ಗಮನಿಸಿ, ಸಾಲ ನೀಡುವ ಸೌಲಭ್ಯವಿದೆ. 10 ಸಾವಿರ ರೂಪಾಯಿಯಿಂದ 25 ಲಕ್ಷ ರೂಪಾಯಿವರೆಗೂ ವಿವಿಧ ಷರತ್ತುಗಳ ಆಧಾರದ ಮೇಲೆ ಸಾಲ ಪಡೆಯಬಹುದು. ಅಗತ್ಯವುಳ್ಳವರು ತಮ್ಮ ಹತ್ತಿರದ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು. ಬ್ಯಾಂಕ್‌ಗಳ ಜಾಲತಾಣಗಳಲ್ಲಿ ಕೂಡ ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ದೊರೆಯುತ್ತದೆ.

ಮಾಧ್ಯಮಗಳಲ್ಲಿ ಮಾಹಿತಿ
ವಿವಿಧ ದಿನ ಪತ್ರಿಕೆಗಳ ಶೈಕ್ಷಣಿಕ ವಿಶೇಷಾಂಕಗಳು, ಮಲಯಾಳಂ ಮನೋರಮಾದವರ ‘ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್’, ಖಾಸಗಿ ಪ್ರಕಾಶನಗಳ ‘ಡೈರೆಕ್ಟರಿ ಆಫ್ ಹೈಯರ್ ಎಜುಕೇಷನ್’, ‘ಎಜು-ಛಾಯ್ಸ್’, ‘ಕರ್ನಾಟಕ ಎಜುಕೇಷನ್ ಡೈರೆಕ್ಟರಿ’ ಮೊದಲಾದ ಬೃಹತ್ ಕೋಶಗಳು ನಮ್ಮ ರಾಜ್ಯದಲ್ಲಿರುವ ವಿವಿಧ ಶಾಲಾ–ಕಾಲೇಜುಗಳನ್ನು ಮತ್ತು ಅಲ್ಲಿ ಲಭ್ಯವಿರುವ ಹಲವು ಕೋರ್ಸ್‌ಗಳ ಕುರಿತು ಮಾಹಿತಿ ನೀಡುತ್ತವೆ.

ಜಯಂತಿ ಘೋಷ್ ಅವರ ‘harpercollins encyclopedia of careers’ ಕೃತಿಯಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದ ಪಠ್ಯಕ್ರಮ ವಿವರಗಳ ಜೊತೆಗೆ, ಹತ್ತಾರು ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿಳಾಸಗಳ ಜೊತೆ ವೃತ್ತಿಕ್ಷೇತ್ರಕ್ಕೆ ಹೇಗೆ ಪ್ರವೇಶ ಗಿಟ್ಟಿಸಿಕೊಳ್ಳಬಹುದು ಎಂಬ ವಿವರಗಳಿವೆ. ಕೋರ್ಸ್‌ಗಳು, ತರಬೇತಿ ಕೇಂದ್ರಗಳು, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ವಿದೇಶಿ ವಿಶ್ವವಿದ್ಯಾಲಯಗಳ ಸ್ಟಡಿ ಸೆಂಟರ್‌ಗಳು, ತರಬೇತಿ ವಿಷಯಗಳ ವಿವರಗಳ ಜೊತೆ ಶೈಕ್ಷಣಿಕ ಸಾಲ ದೊರೆಯುವ ಬಗ್ಗೆಯೂ ಮಾಹಿತಿ ಇಲ್ಲಿ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.