ಶಾ ಶಾಲೆಗೆ ಹೋಗುವ ಮಕ್ಕಳ ಚೀಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಇತ್ತೀಚೆಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ಶಾಲೆಗಳಿಗೆ ಹೊರಡಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಹೈದರಾಬಾದ್ ಮೂಲದ ಸ್ಟಾರ್ಟ್–ಅಪ್ ಕಂಪೆನಿ ‘ಎಜುಟರ್ ಟೆಕ್ನಾಲಜೀಸ್’ ಇದೇ ಉದ್ದೇಶ ಇಟ್ಟುಕೊಂಡು ಕಳೆದ ಆರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.
ಇದರ ಜೊತೆಗೆ, ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ‘ಕಾಗದ ರಹಿತ’ (ಪೇಪರ್‌ಲೆಸ್) ತರಗತಿಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯೂ ಕಂಪೆನಿಗಿದೆ. ಇದಕ್ಕಾಗಿ ‘ಇಗ್ನೈಟರ್’ ಎಂಬ ವಿನೂತನ ಯೋಜನೆಯನ್ನು ರೂಪಿಸಿದೆ.
ಬೆಂಗಳೂರು ಸೇರಿದಂತೆ ದೇಶದ ಹಲವಾರು 110ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಕಂಪೆನಿಯು ತನ್ನ ಯೋಜನೆಯನ್ನು ಅನುಷ್ಠಾನಗೊಳಿಸಿದೆ. 80 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ.
‘ಇಗ್ನೈಟರ್’ ಅನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಇದು ಇ–ಕಲಿಕೆಯ ಒಂದು ವಿಧಾನ. ಇಲ್ಲಿ ಟ್ಯಾಬ್ಲೆಟ್ ಮೂಲಕ ಕಲಿಸಲಾಗುತ್ತದೆ. ಅರ್ಥಾತ್ ‘ಟ್ಯಾಬ್ಲೆಟ್ ಲರ್ನಿಂಗ್’. ಇಲ್ಲಿ ಪಠ್ಯಪುಸ್ತಕ ಇಲ್ಲ; ಟ್ಯಾಬ್ಲೆಟ್ಟೇ ಎಲ್ಲ. ಮಕ್ಕಳು ಶಾಲೆಗೆ ಪುಸ್ತಕಗಳನ್ನು ತರಬೇಕಾಗಿಲ್ಲ. ಟ್ಯಾಬ್ಲೆಟ್‌ಗಳು ಇಲ್ಲಿ ಪುಸ್ತಕಗಳಂತೆ (ಇ–ಬುಕ್) ಕಾಯರ್ನಿವರ್ಹಿಸುತ್ತವೆ.
ಇದರಲ್ಲಿ ಪಠ್ಯಪುಸ್ತಕಗಳನ್ನು ಡಿಜಿಟಲ್ ಮಾದರಿಗೆ ಪರಿವರ್ತಿಸಿ ಟ್ಯಾಬ್ಲೆಟ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಶಿಕ್ಷಕರು ನಿರ್ದಿಷ್ಟ ವಿಷಯದ ಪಾಠ ಮಾಡುವಾಗ ಮಕ್ಕಳು ತಮ್ಮ ಟ್ಯಾಬ್ಲೆಟ್‌ನಲ್ಲಿ ಆ ಪಾಠವನ್ನು ತೆರೆದಿಟ್ಟರೆ ಸಾಕು.
ಪಾಠದಲ್ಲಿರುವ ವಿಷಯಗಳಿಗೆ ಪೂರಕವಾದ ಆಡಿಯೊ– ವಿಡಿಯೊ ದೃಶ್ಯಾವಳಿ, ಇತರೆ ಮಾಹಿತಿಗಳನ್ನು ಸಂಗ್ರಹಿಸಿಡಲೂ ಇದರಲ್ಲಿ ಅವಕಾಶ ಇದೆ. ಹೆಚ್ಚಿನ ಮಾಹಿತಿ ಪಡೆಯಲು ವೆಬ್‌ಲಿಂಕ್‌ಗಳನ್ನೂ ಕೊಡಬಹುದು.
‘ಡಿಜಿಟಲ್ ಸ್ಲೇಟ್’ ಎಂದೇ ಪರಿಗಣಿಸುವ ಈ ಟ್ಯಾಬ್ಲೆಟ್‌ಗಳನ್ನು ಮಕ್ಕಳು ನೋಟ್ ಪುಸ್ತಕದ ರೀತಿಯಲ್ಲಿ ಬಳಸಬಹುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಪರಿಣಾಮಕಾರಿಯಾದ ಸಂವಹನ ಕೂಡ ಇದರಲ್ಲಿ ಸಾಧ್ಯ.
ಸದ್ಯ ಸಿಬಿಎಸ್‌ಇ ಶಾಲೆಗಳ ಆರನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳಿಗೆ ‘ಇಗ್ನೈಟರ್’ ಲಭ್ಯ. ವೃತ್ತಿ ಪರ ಶಿಕ್ಷಣ ಕೋರ್ಸ್‌ಗಳಿಗೂ ತನ್ನ ಯೋಜನೆಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಕಂಪೆನಿಯದ್ದು.
‘ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬೇಕು ಎಂಬುದು ನಮ್ಮ ಆಶಯ. ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಿಕೆ ಇದರಿಂದ ಸಾಧ್ಯ’ ಎಂದು ಹೇಳುತ್ತಾರೆ ‘ಇಗ್ನೈಟರ್’ ರೂವಾರಿ, ಎಜುಟರ್ ಟೆಕ್ನಾಲಜಿಸ್ ಸಂಸ್ಥಾಪಕ ರಾಮ್ ಗೊಲ್ಲಮುಡಿ.
‘ಇ–ಕಲಿಕೆಯ ಪರಿಕಲ್ಪನೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈಗಾಗಲೇ ಇವೆ. ನಮ್ಮಲ್ಲಿ ಇದು ಹೊಸದು. ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ಕಾಗದ ರಹಿತ ತರಗತಿ ವ್ಯವಸ್ಥೆ ರೂಪಿಸುವುದು ನಮ್ಮ ಉದ್ದೇಶ’ ಎಂದು ಯೋಜನೆಯ ಪ್ರಮುಖ ಧ್ಯೇಯವನ್ನು ವಿವರಿಸುತ್ತಾರೆ ಅವರು.
‘ಇಗ್ನೈಟರ್’ ಆರಂಭಿಸಲು ಕಾರಣವಾದ ಅಂಶಗಳ ಬಗ್ಗೆ ಅವರು ವಿವರಿಸುವುದು ಹೀಗೆ: ‘ಮೊತ್ತ ಮೊದಲಾಗಿ ಶಾಲಾ ಮಕ್ಕಳ ಚೀಲದ ತೂಕವನ್ನು ಕಡಿಮೆಗೊಳಿಸಲು ಏನಾದರೂ ಮಾಡಬೇಕು ಎಂದಿತ್ತು.
ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಣ ಸಂವಹನವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಬೇಕು ಎಂಬ ತುಡಿತವೂ ಇತ್ತು. ಹಾಗಾಗಿ, ಟ್ಯಾಬ್ಲೆಟ್‌ಗಳನ್ನು ಪಠ್ಯಪುಸ್ತಕಗಳ ರೀತಿಯಲ್ಲಿ ಬಳಸಲು ಯೋಚಿಸಿದೆವು’.
‘ಪಠ್ಯಪುಸ್ತಕಗಳನ್ನು ಟಿಜಿಟಲ್ ಮಾದರಿಗೆ ಪರಿವರ್ತಿಸಿ (ಪಠ್ಯಪುಸ್ತಕ ಪ್ರಕಾಶಕರು ಈ ಕೆಲಸ ಮಾಡುತ್ತಾರೆ) ಮೆಮೊರಿ ಚಿಪ್‌ಗಳಲ್ಲಿ ಸಂಗ್ರಹಿಸಿ ಟ್ಯಾಬ್ಲೆಟ್‌ಗಳಿಗೆ ಅಳವಡಿಸುತ್ತೇವೆ.
ಮಕ್ಕಳು ಈ ಟ್ಯಾಬ್ಲೆಟ್‌ಗಳನ್ನು ಶಾಲೆಗೆ ತೆಗೆದುಕೊಂಡು ಹೋದರೆ ಆಯಿತು. ಇದಕ್ಕೆ ಇಂಟರ್‌ನೆಟ್ ಸೌಲಭ್ಯ ಅಗತ್ಯವಿಲ್ಲ’ ಎಂದು ಅವರು ಟ್ಯಾಬ್ಲೆಟ್ ಕಾರ್ಯನಿರ್ವಹಣೆಯನ್ನು ವಿವರಿಸುತ್ತಾರೆ.
ಮಕ್ಕಳ ಕೈಗೆ ಮೊಬೈಲ್, ಟ್ಯಾಬ್ಲೆಟ್‌ಗಳನ್ನು ಕೊಡುವುದು ಸರಿಯೇ ಎಂದು ಕೇಳಿದ್ದಕ್ಕೆ, ‘ಮಕ್ಕಳು ಗೇಮ್‌ಗಳನ್ನು ಆಡುತ್ತಾರೆ. ಅಶ್ಲೀಲ ಚಿತ್ರಗಳನ್ನೋ, ವಿಡಿಯೊಗಳನ್ನೋ ನೋಡುತ್ತಾರೆ ಎಂಬ ಕಾರಣಕ್ಕೆ ಎಲೆಕ್ಟ್ರಾನಿಕ್ ಸಾಧನಗಳನ್ನು ಮಕ್ಕಳ ಕೈಗೆ ನೀಡುವುದಕ್ಕೆ ಪೋಷಕರು ಹಿಂಜರಿಯುತ್ತಾರೆ ಎಂಬುದು ನಿಜ.
ಆದರೆ, ಇಗ್ನೈಟರ್‌ನಲ್ಲಿ ಇಂಥವುಗಳನ್ನು ನಿರ್ಬಂಧಿಸುವ ವ್ಯವಸ್ಥೆ ಇದೆ. ಮಕ್ಕಳು ನೋಡಬಾರದ, ಮಾಡಬಾರದ ವಿಷಯಗಳಿಗೆ ಇಲ್ಲಿ ಅವಕಾಶ ಇಲ್ಲ’ ಎಂದು ರಾಮ್ ಉತ್ತರಿಸುತ್ತಾರೆ.
‘ಸದ್ಯ ನಾವು 6ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಸೇವೆ ಒದಗಿಸುತ್ತಿದ್ದೇವೆ. ಬೆಂಗಳೂರಿನ ರಾಯಲ್ ಕಾನ್‌ಕೋರ್ಡ್ ಇಂಟರ್‌ನ್ಯಾಷನಲ್ ಸ್ಕೂಲ್, ನಾವ್ಕಿಸ್ ಎಜುಕೇಷನಲ್ ಸೆಂಟರ್, ಬಿಎಎಸ್ಇ, ನಾರಾಯಣ ಪಿಯು ಕಾಲೇಜು,
ಆಕಾಶ್ ಇನ್‌ಸ್ಟಿಟ್ಯೂಟ್‌ಗಳ ವಿದ್ಯಾರ್ಥಿಗಳು ನಮ್ಮ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಭಾರತ ಮಾತ್ರವಲ್ಲದೇ ಮಧ್ಯಪ್ರಾಚ್ಯ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ನಮಗೆ ಗ್ರಾಹಕರಿದ್ದಾರೆ’ ಎಂದು ವಿವರಿಸುತ್ತಾರೆ ಅವರು.
‘ಶ್ರೀಮಂತ ಶಾಲೆಗಳು ಮಾತ್ರವಲ್ಲ, ಸಾಮಾನ್ಯ ವರ್ಗದ ಶಾಲೆಗಳೂ ನಮ್ಮ ತಂತ್ರಜ್ಞಾನವನ್ನು ಬಳಸುತ್ತಿವೆ. ಬಡವರ ಮಕ್ಕಳಿಗೂ ಇದು ಲಭ್ಯವಾಗಬೇಕು ಎಂಬುದು ನಮ್ಮ ಅಭಿಲಾಷೆ. ಭಾರತೀಯ ಪೋಷಕರನ್ನು ಗುರಿಯಾಗಿಸಿಕೊಂಡೇ ಈ ಯೋಜನೆ ರೂಪಿಸಿದ್ದೇವೆ. ಹಾಗಾಗಿ, ಅವರ ಕೈಗೆಟುಕುವ ದರದಲ್ಲಿ ಇದು ಲಭ್ಯ’ ಎಂಬ ಭರವಸೆಯನ್ನೂ ಅವರು ನೀಡುತ್ತಾರೆ.
ವಿವರಗಳಿಗೆ : http://www.ignitorlearning.com/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.