ನಾನು ಪ್ರೌಢಶಾಲೆ ಸೇರಿದ ಮೊದಲ ದಿನ. ರಸಾಯನಶಾಸ್ತ್ರದ ಶಿಕ್ಷಕರು ತಮಗೆ ನಿಯುಕ್ತವಾದ ವಿಷಯವನ್ನು ಬದಿಗಿಟ್ಟು ಲೋಕಾರೂಢಿ ಮಾತುಕತೆ ನಡೆಸಿದ್ದರು. RAT RACE! ಈ ಪದವನ್ನು ಕೇಳಿ ಇದೂ ಎಂದಿನಂತೆ ಎಲ್ಲರೂ ಕೊಡುವ ಬೋಧನೆ ಎನ್ನಿಸಿತು. ಅವರು ಮುಂದುವರೆದು ‘ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವ್ಯವಸ್ಥಿತ ಸ್ಪರ್ಧೆ ಅನ್ನುವುದಾದರೂ ಎಲ್ಲಿದೆ. ಆದ್ದರಿಂದ RAT RACE ಅನಿವಾರ್ಯ ಎನ್ನುವ ಅಭಿಪ್ರಾಯ ಇದೆ. ಆದರೆ ನೀವು ಇಲಿಗಳಲ್ಲ, ಮನುಷ್ಯರು.
ನಿಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲ ರೀತಿಯಲ್ಲಿ ಭಿನ್ನರು, ತಮ್ಮದೇ ಆದ ವ್ಯಕ್ತಿತ್ವ ಉಳ್ಳವರು ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ; ಹೀಗಿರುವಾಗ ಈ ಏಕರೂಪತೆಯ ಸ್ಪರ್ಧೆ ಆವಶ್ಯಕತೆ ಇದೆಯೇ?’ ಇಂಥದೊಂದು ಪ್ರಶ್ನೆಯೊಂದಿಗೆ ಅಂದಿನ ಮಾತುಕತೆ ಶುರುವಾಗಿ ಮುಂದವರೆದಿತ್ತು. ಹಲವಾರು ವರ್ಷಗಳ ನಂತರ ಹಿಂದಿರುಗಿ ನೋಡಿದಾಗ ಇದೇ ಪ್ರಶ್ನೆ ಇಂದಿಗೂ ಪ್ರಸ್ತುತ ಎನ್ನುವ ಪರಿಸ್ಥಿತಿ ಇದೆ. ಸ್ಪರ್ಧೆಗೆ ಅಣಿಗೊಳಿಸುವ ಉದ್ದೇಶವೇ ಶಿಕ್ಷಣದ್ದು ಎಂಬ ಅಭಿಪ್ರಾಯ ಸಾರ್ವತ್ರಿಕ ‘ಮನ್ನಣೆ’ಯನ್ನು ಪಡೆದು, ಅದುವೇ ಸರಿ ಎನ್ನುವಂತೆಯೂ ಆಗಿದೆ.
ಇಲ್ಲಿ ಸ್ಪರ್ಧೆ ಯಾವುದಕ್ಕೆ ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ ಸಾಮಾನ್ಯವಾಗಿ ಸಿಗುವ ಉತ್ತರ – ಜೀವನೋಪಾಯ ಮಾರ್ಗವನ್ನು ಸಾಧಿಸುವುದು; ಅದಕ್ಕೆ ಮಕ್ಕಳನ್ನು ಸಜ್ಜುಗೊಳಿಸುವುದು ಎಂದು. ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಲ್ಲ ಶಕ್ತಿ ಇರುವ ಮಕ್ಕಳು ಈ ಏಕರೂಪ ಸ್ಪರ್ಧೆಯಲ್ಲಿ ಸಿಲುಕಬೇಕೆ? – ಎಂಬ ಪ್ರಶ್ನೆಯನ್ನು ಬದಿಗಿಟ್ಟು, ಈ ಸೀಮಿತ ಉದ್ದೇಶವಾದರೂ ಈಡೇರಿದೆಯೇ ಎಂಬುದನ್ನು ಗಮನಿಸಿದಾಗ ಸಿಗುವ ಉತ್ತರ ಅಷ್ಟೇನೂ ಆಶಾದಾಯಕವಾಗಿಲ್ಲ. ಇಂದು ಉದ್ಯಮ ಕ್ಷೇತ್ರದ ಎಷ್ಟೋ ಕಂಪೆನಿಗಳು ಸ್ವಂತ ಪಠ್ಯ ರಚಿಸುವ ಮತ್ತು ಪರೀಕ್ಷೆ ನಡೆಸುವ ಸ್ವಾಯತ್ತತೆಯುಳ್ಳ ಶಿಕ್ಷಣ ಸಂಸ್ಥೆಗಳೊಡನೆ ಸಹಭಾಗಿತ್ವ ಹೊಂದಿವೆ.
ವಿಶ್ವವಿದ್ಯಾಲಯಗಳು ರೂಪಿಸಿರುವ ಪಠ್ಯದ ಹೊರತಾಗಿ ವಾಸ್ತವದಲ್ಲಿ ಉದ್ಯಮ ಕ್ಷೇತ್ರದಲ್ಲಿ ಅನುಕೂಲವಾಗುವಂತಹ ವಿಷಯಗಳ ಪಠ್ಯವನ್ನು ಅಳವಡಿಸಿ ಬೋಧಿಸುವ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ತಿಳಿಯುವ ಸರಳ ಅಂಶವೆಂದರೆ– ಜೀವನೋಪಾಯವನ್ನು ದಕ್ಕಿಸಿಕೊಡುವಲ್ಲೂ ಶಿಕ್ಷಣಕ್ಷೇತ್ರದ ವೈಫಲ್ಯವೇ ಕಾಣುತ್ತಿದೆ ಎನ್ನುವುದು.
ಸ್ಪರ್ಧಾತ್ಮಕತೆಯ ಒತ್ತಡದಲ್ಲಿ ಪೋಷಕರೂ ಸಹ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗಮನ ಕೊಡಲಾಗದೆ ತಮ್ಮದೇ ಆದ ಸಾಮಾಜಿಕ ಒತ್ತಡಗಳಿಗೆ ಒಳಗಾಗಿ, ಮಕ್ಕಳನ್ನೂ ಅದೇ ದಾರಿಯಲ್ಲಿ ಕೊಂಡೊಯ್ಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಪೋಷಕರಿಗೆ ತಮ್ಮ ಮಕ್ಕಳು ಶ್ರೇಷ್ಠ ಶಿಕ್ಷಣ ಪಡೆಯಬೇಕೆಂಬ ಹಂಬಲವು ತಪ್ಪಲ್ಲವಾದರೂ, ಆ ಶ್ರೇಷ್ಠತೆಯನ್ನು ಅರ್ಥೈಸಿಕೊಂಡಿರುವ ರೀತಿಯಲ್ಲಿ ದೋಷವಿದೆ ಎನ್ನಬೇಕಾಗುತ್ತದೆ. ಮಗುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಪ್ರತಿಹಂತದ ವಿಕಸನವನ್ನು ಗಮನಿಸುವ ವ್ಯವಧಾನ ಈ ಸ್ಪರ್ಧೆಯ ಗದ್ದಲದಲ್ಲಿ ಮರೆಯಾಗಿದೆ.
ಕಲಿಕೆಯಲ್ಲಿ ವಿರಾಮದ ಬದಲು ಒತ್ತಡವೇ ಹೆಚ್ಚಾಗಿದೆ. ನೂರಕ್ಕೆ ನೂರು ಎಂಬ ಕಷ್ಟಸಾಧ್ಯವಾದ ಗುರಿಯೇ ಎಲ್ಲ ಚಟುವಟಿಕೆಗಳ ಗಮ್ಯವಾಗಿ ಅದಕ್ಕೆ ತಕ್ಕಂತೆ ಬೋಧನಾಕ್ರಮ, ಅಭ್ಯಾಸ ಕ್ರಮಗಳು ಬದಲಾಗಿವೆ. ವಿಷಯಗ್ರಹಣ, ತಮ್ಮ ಆಸಕ್ತಿಯ ಆವಿಷ್ಕಾರ ಇನ್ನಿತರ ಬಹುಮುಖ್ಯ ಆಯಾಮಗಳು ಮರೆಯಾಗುವಂತಾಗಿದೆ. ಮಗು ಹುಟ್ಟಿದಾಗಲೇ (ಅಥವಾ ಹುಟ್ಟುವ ಮೊದಲೇ?) ಶಾಲೆಗಳಲ್ಲಿ ಸೀಟು ಕಾದಿರಿಸುವ ವೈಪರೀತ್ಯಗಳು ಸರ್ವೇಸಾಮಾನ್ಯವಾಗಿದ್ದು, ಈ ರೀತಿಯ ನಡಾವಳಿಗಳು ನಗರ ಪ್ರದೇಶವಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ವ್ಯಾಪಿಸಿರುವುದು ಗಮನಾರ್ಹ.
ಇಂತಹ ಸ್ಪರ್ಧಾತ್ಮಕತೆಯ ಕಲ್ಪನೆ ಮತ್ತು ಅದನ್ನು ಸಾಧಿಸುವ ಶ್ರೇಷ್ಠ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸುವ ಪೋಷಕರ ಹಂಬಲ,ಇವರೆಡೂ ಬೇರೆಯೇ ರೀತಿಯ ಬದಲಾವಣೆಗಳನ್ನೂ ಪ್ರಭಾವಿಸಿದೆ ಎನ್ನಬಹುದು. ಇಂದು ಶಿಶುವಿಹಾರ, ಎಲ್ ಕೆ ಜಿ, ಯು ಕೆ ಜಿ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚ, ತಾಂತ್ರಿಕ ಶಿಕ್ಷಣದ ಪೂರ್ಣಾವಧಿ ಶುಲ್ಕಕ್ಕೆ ಸಮ ಎಂಬುದನ್ನು ಗಮನಿಸಿದರೆ ನಮಗೆ ಪರಿಸ್ಥಿತಿಯ ವಾಸ್ತವ ಅರ್ಥವಾದೀತು. ಆರ್ಥಿಕವಾಗಿ ಹಿಂದುಳಿದವರೂ ಮಕ್ಕಳಿಗೆ ಶತಾಯಗತಾಯ ಅಂತಹುದೇ ಶಿಕ್ಷಣವನ್ನೇ ಕೊಡಿಸಬೇಕನ್ನುವ ಒತ್ತಡಕ್ಕೆ ಒಳಗಾಗುತ್ತಿರುವುದು ನಮ್ಮ ಅನುಭವಕ್ಕೇ ಬಂದಿರುವ ವಿಷಯವಾಗಿದೆ. ಸರ್ವರಿಗೂ ಶಿಕ್ಷಣಕ್ಕೆ ಅವಕಾಶ ಇರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲವಾದರೂ, ಅನಗತ್ಯವಾಗಿ ಆರ್ಥಿಕ ಒತ್ತಡಕ್ಕೆ ಒಳಗಾಗುವಂತಹ ಪರಿಸ್ಥಿತಿಯ ನಿರ್ಮಾಣ ಎಷ್ಟು ಸರಿ ಎಂಬ ಪ್ರಶ್ನೆ ಬರದಿರಲಾರದು.
ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಕಷ್ಟದಲ್ಲಿದ್ದ ಒಬ್ಬಾಕೆಯ ಮಗನಿಗೆ ನಮ್ಮೂರ ಮಾದರಿ ಶಾಲೆಯೊಂದರಲ್ಲಿ ಉಚಿತ ಶಿಕ್ಷಣ, ಪುಸ್ತಕ ಮತ್ತು ಸಮವಸ್ತ್ರದ ವ್ಯವಸ್ಥೆ ಮಾಡಲಾಗಿತ್ತು. ಆ ಹುಡುಗನ ಅಣ್ಣ ಕೆಲಸಕ್ಕೆ ಸೇರಿದ, ಆಕೆ ಶಾಲೆಯ ಮುಖ್ಯೋಪಾಧ್ಯಾಯರ ಬಳಿ ಬಂದು ‘ನಿಮ್ಮಿಂದ ಬಹಳ ಉಪಕಾರವಾಯಿತು. ಈಗ ದೇವರು ಸ್ವಲ್ಪ ಶಕ್ತಿ ಕೊಟ್ಟಿದ್ದಾನೆ. ಒಳ್ಳೆಯ ಶಾಲೆಗೆ ಸೇರಿಸೋ ಶಕ್ತಿ ಬಂದಿದೆ. ಟಿ.ಸಿ. ಕೊಟ್ರೆ ಅನುಕೂಲವಾಗುತ್ತದೆ’ ಎಂದು ಆಕೆ ಬಹಳ ಸಹಜವಾಗಿಯೇ ಕೇಳಿದರು. ಈ ಸಣ್ಣ ಸಂಗತಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಪಾಠ–ಪ್ರವಚನಗಳನ್ನು ನಿಯಮಿತವಾಗಿ ನಡೆಸಿಕೊಂಡು ಹೋಗುತ್ತಿದ್ದ, ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದ ಶಾಲೆಯನ್ನು ಬಿಡಿಸಬೇಕು ಅನ್ನುವ ಸಹಜ ಒತ್ತಡ ಬಂದದ್ದಾರೂ ಹೇಗೆ? ಇದು ಮುಖ್ಯವಾಗಿ ಸರ್ಕಾರಿ ಶಾಲೆಗಳು ಮತ್ತು ಕೆಲವು ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇರುವ ಸವಲತ್ತುಗಳ ಬಗ್ಗೆಯೂ ಪ್ರಶ್ನೆ ಮೂಡಿಸಿದರೂ, ಮೇಲೆ ನೋಡಿದ ಸ್ಪರ್ಧಾತ್ಮಕತೆಯ ಒತ್ತಡವೂ ಇಲ್ಲಿ ಗಣನೀಯವಾಗಿ ಕೆಲಸ ಮಾಡಿದೆ ಎನ್ನುವುದು ಸುಳ್ಳಲ್ಲ.
ಬೇಸಿಗೆರಜೆಯಲ್ಲಿ ಮನೆ-ಮನೆ ಸಂಪರ್ಕಿಸಿ ಶಾಲೆಗೆ ಸೇರಿಸುವ ಕಾರ್ಯದಲ್ಲಿ ನಿರತರಾಗಿದ್ದ ಶಿಕ್ಷಕಿಯೊಬ್ಬರನ್ನು ಇತ್ತೀಚೆಗೆ ಮಾತನಾಡಿಸುವ ಸಂದರ್ಭ ಒದಗಿತ್ತು. ಅವರು ಸಂಪರ್ಕಿಸಿದ್ದ ಅನೇಕ ಪೋಷಕರಿಗೆ ಮಕ್ಕಳನ್ನು ಸ್ಪರ್ಧಾತ್ಮಕ ಪ್ರಪಂಚದ ಬೇಡಿಕೆಗಳಿಗೆ ತಯಾರು ಮಾಡುವುದರಲ್ಲೇ ಹೆಚ್ಚಿನ ಗಮನವೆಂದರು. ಮಕ್ಕಳ ಸರ್ವತೋಮುಖ ಬೆಳವಣಿಗೆ, ತಮ್ಮ ಅಂತಃಶಕ್ತಿಯನ್ನು ಶೋಧಿಸುವ ಪ್ರಕ್ರಿಯೆಯನ್ನು ಜಾಗೃತಗೊಳಿಸುವ ಪರಿಕಲ್ಪನೆಗಳಿಗೆ ಪೋಷಕರ ಒಲವೇನೂ ವ್ಯಕ್ತವಾಗಲಿಲ್ಲ ಎಂಬ ಬಗ್ಗೆ ಗಮನ ಸೆಳೆದರು. ಈ ಧೋರಣೆಯಿಂದ ಮಕ್ಕಳು ತೆರಬೇಕಾದ ಬೆಲೆಯೇನು ಎಂಬುದನ್ನು ಯೋಚಿಸದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು.
ಇತ್ತೀಚಿಗೆ ಹೆಗ್ಗೋಡಿನ ‘ನೀನಾಸಂ’ನಲ್ಲಿ ನಡೆದ ಸಂಸ್ಕೃತಿ ಶಿಬಿರದ ವಿಚಾರಗೋಷ್ಠಿಯಲ್ಲಿ ಕ್ಲಾಡ್ ಆಲ್ವಾರಿಸ್ ಅವರು ಶಿಕ್ಷಣಪದ್ಧತಿಯ ಬಗ್ಗೆ ಮಾತನಾಡುತ್ತ ಹೇಳಿದ ಮಾತು ಇಲ್ಲಿ ಮನನೀಯ: ‘ಪಠ್ಯಶಿಕ್ಷಣ ಎಂಬುದು ಇಂದು ಸಂಗೀತ, ಚಿತ್ರಕಲೆ, ನೃತ್ಯ, ಕರಕುಶಲತೆ ಇಂತಹ ವಿಷಯಗಳನ್ನು ‘‘ಪಠ್ಯೇತರ ಚಟುವಟಿಕೆಗಳು’’ (Extra curricular activities ) ಎಂದು ಸಹಜವಾಗಿಯೇ ಪರಿಗಣಿಸುತ್ತದೆ. ಈ ಪರಿಭಾಷೆಯೇ ನಿಂದನಾತ್ಮಕವಾದದ್ದು.’
ಸ್ಪರ್ಧಾತ್ಮಕತೆಯ ಮನಃಸ್ಥಿತಿಗೆ ಮಕ್ಕಳು ತೆರಬೇಕಾದ ಬೆಲೆ ಮತ್ತು ಅದರಿಂದ ಸಮಾಜದ ಮೇಲಾಗುವ ಪರಿಣಾಮಗಳನ್ನು ಯೋಚಿಸಿದಾಗ, ಪ್ರಸ್ತುತ ಪರಿಸ್ಥಿತಿಯಲ್ಲಿ ನಮಗೆ ಬೇಕಾಗಿರುವ ಶಿಕ್ಷಣ ಎಂಥದ್ದು ಎಂಬುದರ ಬಗ್ಗೆ ಚಿಂತಿಸಬೇಕಾಗುತ್ತದೆ.
‘Take a plough-man from plough and wash off his dirt, and he is fit to rule a kingdom’(ನೇಗಿಲನ್ನು ಹಿಡಿದಿರುವ ರೈತನೊಬ್ಬ ಗದ್ದೆಯಿಂದ ಹೊರಗೆ ಬಂದು, ಕೆಸರನ್ನು ತೊಳೆದುಕೊಂಡರೆ ಅವನು ರಾಜ್ಯವನ್ನೂ ಆಳಲು ಸಮರ್ಥ) – ಎಂಬ ಶ್ರೀಲಂಕಾದ ಪ್ರಸಿದ್ಧ ನುಡಿಗಟ್ಟೊಂದನ್ನು ಉದ್ಧರಿಸುತ್ತಾ, ಶಿಕ್ಷಣದಲ್ಲಿ ಅಳವಡಿಸಬೇಕಾದ ಮೌಲ್ಯವನ್ನು ಧ್ವನಿಸುತ್ತಾರೆ, ಆನಂದ ಕುಮಾರಸ್ವಾಮಿ ತಮ್ಮ ‘ಎಜುಕೇಶನ್ ಇನ್ ಇಂಡಿಯಾ ’ ಎಂಬ ಪ್ರಬಂಧದಲ್ಲಿ. ಸ್ವಾಮಿ ವಿವೇಕಾನಂದರು ತಮ್ಮ ಬರವಣಿಗೆಯಲ್ಲಿ ಶಿಕ್ಷಣದ ಉದ್ದೇಶವನ್ನು ಪ್ರತಿಪಾದಿಸುತ್ತಾ ‘ಶಿಕ್ಷಣವು ಮೆದುಳಿನಲ್ಲಿ ಸಂಗ್ರಹರೂಪವಾಗಿರುವ ಅಜೀರ್ಣವಾದ ವಿಷಯ ಸಂಗ್ರಹವಲ್ಲವಷ್ಟೆ. ಅದು ಜೀವನನಿರ್ಮಾಣ, ಮನುಷ್ಯ ನಿರ್ಮಾಣ ಮತ್ತು ವಿಚಾರಗಳ ಸಮೀಕರಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು’ ಎನ್ನುತ್ತಾರೆ.
ಮಹಾಚಿಂತಕ ಡಿ.ವಿ. ಗುಂಡಪ್ಪನವರ ಮಾತಿನಲ್ಲೇ ಹೇಳುವುದಾದರೆ:
ಕಲೆಗಳಲಿ ಪರಮಕಲೆ ಜೀವನದ ಲಲಿತ ಕಲೆ
ಕಲಿಸಲದನಳವಲ್ಲ ಬಾಹ್ಯ ಬೋಧನೆಯಿಂ
ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ
ತಿಳಿವುದೊಳಹದದಿಂದ - ಮಂಕುತಿಮ್ಮ
ಶಿಕ್ಷಣವು ಕೇವಲ ಜೀವನೋಪಾಯದಮಾರ್ಗವಷ್ಟೇ ಆಗದೆ ಜೀವನನಿರ್ಮಾಣದ ಸಾಧನವಾಗಬೇಕೆಂಬ ಆದರ್ಶವೂ ಮಿಳಿತವಾದ ಪದ್ಧತಿಯೊಂದು ಮೂಡಿದರೆ, ಆಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಅಂತಃಶೋಧೆಗೆ ದಾರಿಯಾಗಬಲ್ಲದು. ಶಿಕ್ಷಣವ್ಯವಸ್ಥೆಯು ಎದುರಿಸುತ್ತಿರುವ ಎಲ್ಲ ಪ್ರಸ್ತುತ ಪ್ರಶ್ನೆಗಳಿಗೂ ಅದು ಉತ್ತರವೂ ಆಗಬಲ್ಲದು.
*
* ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಲ್ಲ ಶಕ್ತಿ ಇರುವ ಮಕ್ಕಳು ಏಕರೂಪ ಸ್ಪರ್ಧೆಯಲ್ಲಿ ಸಿಲುಕಬೇಕೆನ್ನುವ ಅಪೇಕ್ಷೆ ಸರಿ ಅಲ್ಲ
* ಜೀವನೋಪಾಯವನ್ನು ದಕ್ಕಿಸಿಕೊಡುವಲ್ಲೂ ಶಿಕ್ಷಣಕ್ಷೇತ್ರದ ವೈಫಲ್ಯವೇ ಕಾಣುತ್ತಿದೆ
* ‘ನೂರಕ್ಕೆ ನೂರು’ ಎಂಬ ಕಷ್ಟಸಾಧ್ಯವಾದ ಗುರಿಯೇ ಎಲ್ಲ ಚಟುವಟಿಕೆಗಳ ಗಮ್ಯವಾಗಿ ಮಾರ್ಪಟ್ಟಿದೆ
* ಸ್ಪರ್ಧಾತ್ಮಕತೆಯ ಮನಃಸ್ಥಿತಿಗೆ ಮಕ್ಕಳು ತೆರಬೇಕಾದ ಬೆಲೆ ಮತ್ತು ಅದರಿಂದ ಸಮಾಜದ ಮೇಲಾಗುವ ಪರಿಣಾಮಗಳನ್ನು ಯೋಚಿಸಬೇಕಾದ ಮತ್ತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯ ಈಗಿದೆ
*
ಶಿಕ್ಷಣವು ಮೆದುಳಿನಲ್ಲಿ ಸಂಗ್ರಹರೂಪವಾಗಿರುವ ಅಜೀರ್ಣವಾದ ವಿಷಯ ಸಂಗ್ರಹವಲ್ಲವಷ್ಟೆ. ಅದು ಜೀವನ ನಿರ್ಮಾಣ, ಮನುಷ್ಯ ನಿರ್ಮಾಣ ಮತ್ತು ವಿಚಾರಗಳ ಸಮೀಕರಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು.
–ಸ್ವಾಮಿ ವಿವೇಕಾನಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.