ADVERTISEMENT

2020: ಕೃತಕ ಬುದ್ಧಿಮತ್ತೆ ಮಷಿನ್‌ ಲರ್ನಿಂಗ್‌ಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 19:30 IST
Last Updated 31 ಡಿಸೆಂಬರ್ 2019, 19:30 IST
   

ಕಳೆದ ವರ್ಷ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ), ಬಿಗ್‌ ಡೇಟಾ, ಮಷಿನ್‌ ಲರ್ನಿಂಗ್‌, ರೋಬೊಟಿಕ್ಸ್‌ ಮೊದಲಾದವು ಹೆಚ್ಚು ಸದ್ದು ಮಾಡಿದವು. ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಇದರ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದು ಸಹಜ. ಈ ವರ್ಷ ಅಂದರೆ 2020ರಲ್ಲೂ ಕೃತಕ ಬುದ್ಧಿಮತ್ತೆ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳೇ ಉದ್ಯೋಗಾರ್ಥಿಗಳನ್ನು ಸೆಳೆಯುವುದರಲ್ಲಿ ಮುಂಚೂಣಿಯಲ್ಲಿವೆ ಎನ್ನುತ್ತಾರೆ ತಜ್ಞರು.

ಸೈಬರ್‌ ಸೆಕ್ಯುರಿಟಿ ಎನ್ನುವುದು ಈಗ ಜಗತ್ತಿನಾದ್ಯಂತ ಆತಂಕ ಮೂಡಿಸುವಂತಹ ವಿಷಯ. ಸೈಬರ್‌ ದಾಳಿ ಬಹುತೇಕ ಎಲ್ಲಾ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರುವಂತಹದ್ದು. ಹೀಗಾಗಿ ಈ ವರ್ಷ ಕೂಡ ಸೈಬರ್‌ ಸೆಕ್ಯುರಿಟಿ ತಜ್ಞರಿಗೆ ಹೆಚ್ಚು ಬೇಡಿಕೆಯಿದೆ.

ತಂತ್ರಜ್ಞಾನ, ಸಂಪರ್ಕ, ಬ್ಯಾಂಕಿಂಗ್‌, ಹಣಕಾಸು, ಮನರಂಜನೆ ಮೊದಲಾದ ಕ್ಷೇತ್ರಗಳಲ್ಲಿ ಸೈಬರ್‌ ಸೆಕ್ಯುರಿಟಿ ಕುರಿತಂತೆ ತಜ್ಞರಿಗೆ ಅಪಾರ ಬೇಡಿಕೆಯಿದ್ದು, ಬೇಡಿಕೆಗೆ ತಕ್ಕಂತೆ ಉದ್ಯೋಗಿಗಳು ಸಿಗುತ್ತಿಲ್ಲ. ಈ ಕಾರಣಕ್ಕೆ ಇದಕ್ಕೆ ಸಂಬಂಧಿಸಿದ ಕೋರ್ಸ್‌ ಮಾಡಿಕೊಳ್ಳಬಹುದು.

ADVERTISEMENT

ಇದೇ ರೀತಿ ಕೃತಕ ಬುದ್ಧಿಮತ್ತೆ ಆಧಾರಿತ ಮಷಿನ್‌ ಲರ್ನಿಂಗ್‌ ಕೂಡಾ ವಿದ್ಯಾರ್ಥಿಗಳ ಆದ್ಯತೆ ಕ್ಷೇತ್ರವಾಗಿದೆ. ಬಿಗ್‌ ಡೇಟಾ ಅನಾಲಿಸಿಸ್‌ ಎಂಬುದು ಆನ್‌ಲೈನ್‌ ಮಾರುಕಟ್ಟೆಯಿಂದಾಗಿ ಮುಂಚೂಣಿಗೆ ಬಂದಿದೆ. ಅಂಕಿ– ಅಂಶಗಳನ್ನು ಸಂಗ್ರಹಿಸಿ, ವಿಶ್ಲೇಷಿಸುವ ಡೇಟಾ ವಿಜ್ಞಾನಿಗಳಿಗೂ ಬೇಡಿಕೆ ಅಪಾರ. ಕಳೆದ ವರ್ಷ ಈ ಕ್ಷೇತ್ರ ಶೇ 86ರಷ್ಟು ಬೆಳವಣಿಗೆ ಕಂಡಿದೆ ಎಂದರೆ ಇದಕ್ಕಿರುವ ಬೇಡಿಕೆಯನ್ನು ಊಹಿಸಬಹುದು.

ಆರೋಗ್ಯ ಕ್ಷೇತ್ರವೂ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು, ವೈದ್ಯರಲ್ಲದೇ, ಪ್ಯಾರಾಮೆಡಿಕಲ್‌ ಸಿಬ್ಬಂದಿಗೂ ಬೇಡಿಕೆಯಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದು.

ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಮಾಧ್ಯಮ ಎಂದು ಗುರುತಿಸಲಾಗಿದ್ದು, ಇದಕ್ಕೆ ಸಾಮಾನ್ಯ ಜ್ಞಾನ, ವೇಗವಾಗಿ ಸಂವಹನ ಮಾಡುವ ಕೌಶಲಗಳು ಅವಶ್ಯಕ. ಜೊತೆಗೆ ಈ ತಾಣಗಳನ್ನು ವಿನ್ಯಾಸ ಮಾಡುವವರಿಗೂ ಬೇಡಿಕೆಯಿದೆ.

ಮಾನವ ಸಂಪನ್ಮೂಲ ಎಂಬುದು ಕಂಪನಿಯ ಭವಿಷ್ಯದ ಯಶಸ್ಸಿಗೆ ಪ್ರಮುಖವಾದ ವಿಭಾಗ ಎಂದೇ ಈಗ ಪರಿಗಣಿಸಲಾಗುತ್ತಿದೆ. ಕಂಪನಿಗೆ ಉದ್ಯೋಗಿಗಳ ನೇಮಕಾತಿಯಿಂದ ಹಿಡಿದು ನಿರ್ವಹಣೆಯವರೆಗೂ ಅವರ ಹೊಣೆ ಇರುತ್ತದೆ. ಇದು ಕೂಡ ಡೇಟಾ ಆಧಾರದ ಮೇಲೆ ನಡೆಯುತ್ತಿದ್ದು, ಮಷಿನ್‌ ಲರ್ನಿಂಗ್‌ ಮತ್ತು ಬಿಗ್‌ ಡೇಟಾ ವಿಶ್ಲೇಷಣೆ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನು ಗಿಗ್‌ ಆಧಾರಿತ ಉದ್ಯೋಗಗಳನ್ನು ಮರೆಯಲಾದೀತೇ? ಕಂಟೆಂಟ್‌ ರೈಟರ್‌ನಿಂದ ಹಿಡಿದು ಆನ್‌ಲೈನ್‌ ಸಾಮಗ್ರಿಗಳನ್ನು ಡೆಲಿವರಿ ಮಾಡುವವರೆಗೆ ಬೇರೆ ಬೇರೆ ರೀತಿಯ ಗಿಗ್‌ ಉದ್ಯೋಗಗಳಿದ್ದು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬಹುದು. ಇದಕ್ಕೆ ಬೇಕಾದಂತಹ ಕೌಶಲಗಳಲ್ಲಿ ಪರಿಣತಿ ಗಳಿಸುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.