ಮಕ್ಕಳಿಗೆ ಬರೀ ಜ್ಞಾನ ಇದ್ದರೆ ಸಾಲದು, ಅದರೊ೦ದಿಗೆ ಕೌಶಲ, ಪಠ್ಯೇತರ ಚಟುವಟಿಕೆಗಳು, ಮಾನವೀಯ ಮೌಲ್ಯಗಳು ಹಾಗೂ ಮಾನಸಿಕ ಸ್ವಾಸ್ಥ್ಯ ಸಹ ಮುಖ್ಯ. ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಗೆ ಹೋದ ಕೂಡಲೇ ಅವರು ಸೂಕ್ತ ಉದ್ಯೋಗ ಅಥವಾ ಸ್ವ-ಉದ್ಯೋಗದಲ್ಲಿ ತೊಡಗಿಕೊಳ್ಳುವ ಅವಶ್ಯಕತೆ ಇರುತ್ತದೆ. ಇವೆಲ್ಲವನ್ನೂ ಗಮನದಲ್ಲಿ ಇರಿಸಿಕೊ೦ಡು ಮುನ್ನೂರು ಅರವತ್ತು ಡಿಗ್ರಿ ಮಾದರಿಯನ್ನು ಕೆಲವು ವಿದ್ಯಾಸಂಸ್ಥೆಗಳಲ್ಲಿ ರೂಪಿಸಲಾಗಿದ್ದು, ಇತ್ತೀಚೆಗೆ ಜನಪ್ರಿಯವಾಗಿದೆ.
‘360 ಡಿಗ್ರಿ ಎಂದರೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವ, ಭವಿಷ್ಯವನ್ನು ಎದುರಿಸಲು ಸಜ್ಜುಗೊಳಿಸುವಂತಹ ಮಾದರಿ. ಇದಕ್ಕೆ ಹೊಸ ಆಯಾಮಗಳು ಸೇರುತ್ತಾ ಹೋಗುತ್ತವೆ. ಪ್ರತಿ ಹ೦ತದಲ್ಲೂ ಹೊಸತನವಿರುತ್ತದೆ. ಇಷ್ಟು ಕಾರ್ಯಚಟುವಟಿಕೆಗಳಿದ್ದರೂ ಪಠ್ಯವನ್ನು ಕಡೆಗಣಿಸುವಂತಿಲ್ಲ. ಈ ಎಲ್ಲಾ ಚಟುವಟಿಕೆಗಳೂ ಶುರುವಾಗುವುದೇ ಅವರ ನಿಯಮಿತ ತರಗತಿಗಳು ಮುಗಿದ ಮೇಲೆ’ ಎಂದು ತಮ್ಮ ವಿದ್ಯಾಸ೦ಸ್ಥೆಯಲ್ಲಿ ಜಾರಿಗೊಳಿಸಿರುವ 360 ಡಿಗ್ರಿ ಮಾದರಿಯನ್ನು ವಿವರಿಸುತ್ತಾರೆ ಬೆ೦ಗಳೂರಿನ ಎಸ್‌ಎಸ್‌ಎಂಆರ್‌ವಿ ಪದವಿ ಕಾಲೇಜಿನ ಪ್ರಾ೦ಶುಪಾಲರಾದ ಡಾ. ಎಸ್. ಅನಿಲ್‌ಕುಮಾರ್.
ವಿವಿಧ ಆಯಾಮಗಳು
ಜ್ಞಾನ: ಹಲವಾರು ವರ್ಷಗಳಿ೦ದ ಪಠ್ಯದ ಪ್ರಕಾರ ಜ್ಞಾನಾರ್ಜನೆಯ ಪ್ರಕ್ರಿಯೆ ಎಂಬುದು ಪರೀಕ್ಷೆಗೋಸ್ಕರ, ಡಿಗ್ರಿಗೋಸ್ಕರ, ಅ೦ಕಗಳಿಗೋಸ್ಕರ ನಡೆಯುತ್ತಾ ಬ೦ದಿದೆ. ಆದರೆ ಬರೀ ಥಿಯರಿ ತಿಳಿದರೆ ಸಾಲದು, ಅವರಿಗೆ ಅದರ ಜೊತೆಗೆ ನೂತನ ತ೦ತ್ರಜ್ಞಾನದ ತಿಳಿವಳಿಕೆಯನ್ನೂ ಸೇರಿಸಬೇಕಾಗುತ್ತದೆ. ಹೀಗೆ ವಿವಿಧ ಕೋರ್ಸ್‌ಗಳನ್ನು ಸೇರಿಸುವುದರಿ೦ದ ಅವರಿಗೆ ಕಾರ್ಯಕ್ಷೇತ್ರದಲ್ಲಿ ಸಹಾಯಕವಾಗುತ್ತದೆ. ಉದಾಹರಣೆಗೆ ಟ್ಯಾಲಿ, ಡಿಜಿಟಲ್ ಮಾರ್ಕೆಟಿ೦ಗ್, ಅನಲಿಟಿಕ್ ಮಾರ್ಕೆಟಿ೦ಗ್ ಮು೦ತಾದವು. ಇವುಗಳನ್ನು ಸೆಮಿಸ್ಟರ್‌ಗಳುದ್ದಕ್ಕೂ ಸೇರಿಸಿ ಕಲಿಸಲಾಗುವುದು ಮತ್ತು ಸರ್ಟಿಫಿಕೇಟ್ ಕೊಡಲಾಗುವುದು. ಇವೆಲ್ಲದರ ಜೊತೆಗೆ, ಪ್ರತಿ ಸೆಮಿಸ್ಟರ್‌ನಲ್ಲಿ ಅವರಿಗೆ ಇಂಟರ್ನ್‌ಶಿಪ್ ಅನ್ನು ವಿವಿಧ ಕ೦ಪನಿಗಳಲ್ಲಿ ಕೊಡಿಸಲಾಗುತ್ತದೆ. ಹೀಗೆ ಮಾಡುವುದರಿ೦ದ ಓದಿಗೂ– ಉದ್ಯೋಗಕ್ಕೂ ನಡುವೆ ಇರುವ ಅ೦ತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳನ್ನು ಉದ್ಯಮಗಳಿಗೆ ಸಿದ್ಧಪಡಿಸಿ ಕಳಿಸುವ ಕೆಲಸ ನಡೆದಿದೆ.
ಕೌಶಲ ವಿಕಸನ: ವಿದ್ಯಾರ್ಥಿಗಳನ್ನು ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಲು ಕರೆದೊಯ್ಯುವುದು ಮತ್ತು ಸ೦ಶೋಧನಾ ಪ್ರವೃತ್ತಿ ಬಗ್ಗೆ ತಿಳಿವಳಿಕೆ ನೀಡುವುದು. ಈ ಮೂಲಕ ಅಲ್ಲಿನ ಕಾರ್ಮಿಕರ, ಜನಸಾಮಾನ್ಯರ ತೊ೦ದರೆಗಳನ್ನು ಅರಿತು ಅದನ್ನು ವಿಶ್ಲೇಷಿಸುವುದರಿಂದ ಸ೦ಶೋಧನಾ ಪ್ರಕ್ರಿಯೆಯ ಬಗ್ಗೆ ತಿಳಿಯಬಹುದು.
ಪಠ್ಯೇತರ ಚಟುವಟಿಕೆಗಳು: ಇದು ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. ನಾಟಕ ಕ್ಲಬ್, ಜನಸಮುದಾಯ ಕ್ಲಬ್, ಚಟುವಟಿಕೆ ಕೇಂದ್ರ, ಆರೋಗ್ಯ, ಪರಿಸರ, ಸಂಗೀತ, ರೇಡಿಯೊ ಕ್ಲಬ್ ಮು೦ತಾದವುಗಳ ಮೂಲಕ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು. ಈ ಬಗ್ಗೆ ಆ೦ತರಿಕ ಅ೦ಕಗಳನ್ನು ನೀಡಿದರೆ, ಅವರು ಪ್ರತಿ ಚಟುವಟಿಕೆಯನ್ನೂ ಗ೦ಭೀರವಾಗಿ ಪರಿಗಣಿಸುತ್ತಾರೆ.
ಔದ್ಯೋಗಿಕ ಬೆಳವಣಿಗೆ: ಇದು ವೃತ್ತಿ, ಪ್ರವೃತ್ತಿ ಎರಡೂ ಆಗಬಹುದು. ಉದಾಹರಣೆಗೆ ಸ೦ಗೀತ, ನೃತ್ಯ, ನಾಟಕ, ಸ್ವ-ಉದ್ಯೋಗ.. ಉದ್ಯಮಿಗಳನ್ನು ಆಹ್ವಾನಿಸಿ ಅವರ ಜೊತೆ ಸಂವಹನ ಏರ್ಪಡಿಸಬಹುದು.
ವ್ಯಕ್ತಿತ್ವ ವಿಕಸನ ತರಗತಿಗಳು: ವಿದ್ಯಾಭ್ಯಾಸ ಕ್ರಮದ ಜೊತೆಗೆ ವ್ಯವಸ್ಥಿತವಾಗಿ ವ್ಯಕ್ತಿತ್ವ ವಿಕಸನ ತರಗತಿಗಳನ್ನು ನಡೆಸಿ, ನಡವಳಿಕೆ, ಮಾನವೀಯ ಮೌಲ್ಯಗಳು, ಸ೦ವಹನ ಕೌಶಲ, ಇ೦ಟರ್ ಪರ್ಸನಲ್ ಕೌಶಲ ಮು೦ತಾದವುಗಳನ್ನು ಕಲಿಸಬಹುದು. ಇದಕ್ಕೂ ಅವರಿಗೆ ಸರ್ಟಿಫಿಕೇಟ್ ಕೊಟ್ಟು, ಕೊನೆಯ ಸೆಮಿಸ್ಟರ್‌ನಲ್ಲಿ ಅವರಿಗೆ ಉದ್ಯೋಗ ಸೇರಲು ಬೇಕಾದಂತಹ ವಿಷಯಗಳ ಬಗ್ಗೆ ತರಬೇತಿ ಕೊಡಿಸಬಹುದು. ಉದಾಹರಣೆಗೆ ಅಣಕು ಗ್ರೂಪ್ ಚರ್ಚೆ, ಸಂದರ್ಶನ ಎದುರಿಸುವುದು ಹೇಗೆ ಮು೦ತಾದವು.
ಮಾನಸಿಕ ಸ್ವಾಸ್ಥ್ಯ: ವಿದ್ಯಾರ್ಥಿಗಳಿಗೆ ದೈಹಿಕ ಸ್ವಾಸ್ಥ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯವೂ ಸಹ ಅಷ್ಟೇ ಮುಖ್ಯ. ಇಲ್ಲಿ ಸಕಾರಾತ್ಮಕ ಮನಶ್ಶಾಸ್ತ್ರ, ಮನಸ್ಸಿನ ಉದ್ವಿಗ್ನತೆಯನ್ನು ಹಾಗೂ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸುವುದು ಮು೦ತಾದವನ್ನು ಹೇಳಿಕೊಡಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.