ಪಾಲಿಯನ್ನು ಇತ್ತೀಚೆಗೆ ಶಾಸ್ತ್ರೀಯ ಭಾಷೆಯನ್ನಾಗಿ ಭಾರತ ಸರ್ಕಾರ ಗುರುತಿಸಿದೆ. ಸಂಸ್ಕೃತಿ ಸಚಿವಾಲಯವು, ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ (IBC) ಸಹಭಾಗಿತ್ವದಲ್ಲಿ, ಏಷ್ಯನ್ ಬೌದ್ಧ ಶೃಂಗಸಭೆಯ (ABS)ಉದ್ಘಾಟನಾ ಸಭೆಯನ್ನು ಈಚೆಗೆ ನವದೆಹಲಿಯಲ್ಲಿ ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಬಲುಸಂಭವನೀಯ ವಿಷಯವಾಗಿ, ಪರೀಕ್ಷಾರ್ಥಿಗಳಿಗಾಗಿ ಬೌದ್ಧ ಧರ್ಮದ ಕುರಿತ ಲೇಖನವಿದು
––––
ಬೌದ್ಧಧರ್ಮವು ಗೌತಮ ಬುದ್ಧನಿಂದ ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಸ್ಥಾಪನೆಗೊಂಡಿತು. ಗೌತಮ ಬುದ್ಧನ ಮೂಲ ಹೆಸರು ಸಿದ್ಧಾರ್ಥ.
ಸಿದ್ಧಾರ್ಥ ಬುದ್ಧನಾಗಲು ಕಾರಣವೇನು?
ಕಪಿಲವಸ್ತುವಿನ ರಾಜಕುಮಾರನಾಗಿ ಜನಿಸಿದ್ದ ಸಿದ್ಧಾರ್ಥನೇ ಜೀವನದಲ್ಲಿ ನಡೆದ ಹಲವು ಘಟನೆಗಳ ನಂತರ ಮನಃಪರಿವರ್ತನೆಗೊಂಡು ಬುದ್ಧನಾದನು. ಐಷಾರಾಮಿ ಜೀವನದಲ್ಲಿ ಬೆಳೆದ ಸಿದ್ಧಾರ್ಥನಿಗೆ ಜೀವನದಲ್ಲಿ ಯಾವುದೇ ನೋವು ಮತ್ತು ಸಂಕಟಗಳಿಗೆ ಸಾಕ್ಷಿಯಾಗಲು ಅವಕಾಶವಿರಲಿಲ್ಲವಾದರೂ ನಂತರದಲ್ಲಿ ಕಂಡ ನಾಲ್ಕು ದೃಶ್ಯಗಳು ಆತನ ಜೀವನದ ದಿಕ್ಕನ್ನೇ ಬದಲಿಸಿದವು.
ನಗರಸಂಚಾರಕ್ಕೆಂದು ಹೊರಬಂದ ಸಿದ್ಧಾರ್ಥನು ಕಂಡ ನಾಲ್ಕು ಘಟನೆಗಳು ಹೀಗಿವೆ.
ಅವುಗಳೆಂದರೆ, ಒಬ್ಬ ವೃದ್ಧ, ಒಬ್ಬ ರೋಗಿಷ್ಟ ವ್ಯಕ್ತಿ, ಒಂದು ಸಾವು ಮತ್ತು ಒಬ್ಬ ಸನ್ಯಾಸಿ. ಸನ್ಯಾಸಿಯು ಲೌಕಿಕ ಮೋಹಗಳನ್ನು ತ್ಯಜಿಸಿದ ನಂತರ ಪ್ರಪಂಚದ ಸಮಸ್ಯೆಗಳಿಂದ ವಿಚಲಿತನಾಗದೆ ಸಂತೋಷ ಮತ್ತು ಶಾಂತಿಯಲ್ಲಿರುವುದನ್ನು ಸಿದ್ಧಾರ್ಥನು ಕಂಡುಕೊಂಡನು.
ಈ ನಾಲ್ಕು ಘಟನೆಗಳಿಂದ ಅವನೊಳಗಿದ್ದ ತೊಳಲಾಟ ಹೆಚ್ಚಿತು. ಬದುಕಿನ ಅರ್ಥವೇನೆಂಬುದನ್ನು ಕಂಡುಕೊಳ್ಳಲು ಐಷರಾಮಿ ಬದುಕನ್ನು ತ್ಯಜಿಸಲು ನಿರ್ಧರಿಸಿದ ಸಿದ್ಧಾರ್ಥ ಅರಮನೆಯನ್ನು ತೊರೆದ.
ಬೌದ್ಧ ಧರ್ಮದ ಪ್ರಮುಖ ತತ್ವಗಳು
ಬುದ್ಧನು ನಾಲ್ಕು ಉದಾತ್ತ ಸತ್ಯಗಳನ್ನು ಪ್ರತಿಪಾದಿಸಿದನು ( ಚತ್ತರಿ ಅರಿಯ ಸಚ್ಚಾನಿ )
ಅವುಗಳನ್ನು ನಾಲ್ಕು ಆರ್ಯ ಸತ್ಯಗಳು ಎನ್ನಲಾಗುತ್ತದೆ. ಅವು ಹೀಗಿವೆ
l ಜೀವನವು ಸಂಕಟಮಯವಾಗಿದೆ -ದುಃಖ
l ದುಃಖದ ಕಾರಣಗಳು ಆಸೆ ಮತ್ತು ಲೋಭ -ಸಮುದಾಯ
l ಆಸೆ ಮತ್ತು ಲೋಭಗಳನ್ನು ತೊರೆದರೆ ದುಃಖ ನಿವಾರಣೆಯಾಗುತ್ತದೆ - ನಿರೋಧ
l ಆಸೆ ಲೋಭಗಳನ್ನು ತೊರೆಯಲು ಸಾಧುಮಾರ್ಗವಿದೆ. ಅದರ ನಿರೂಪಣೆಯನ್ನು ತನ್ನ ಸುಪ್ರಸಿದ್ಧ ವಾರಾಣಾಸಿ ವಚನದಲ್ಲಿ ಬುದ್ಧನು ಈ ರೀತಿ ನಿರೂಪಿಸಿದನು.
ದುಃಖದ ವ್ಯಾಖ್ಯಾನ: ‘ಹುಟ್ಟುವುದು ದುಃಖ , ವೃದ್ಧಾಪ್ಯದ ದುಃಖ, ಅಸ್ವಸ್ಥತೆ ದುಃಖ, ಮರಣ ದುಃಖ, ಪ್ರಿಯವಲ್ಲದುದರೊಂದಿಗೆ ಐಕ್ಯವಾಗುವುದು ದುಃಖ, ಪ್ರಿಯವಾದುದುದರಿಂದ ಪ್ರತ್ಯೇಕಗೊಳ್ಳುವುದು ದುಃಖ’
‘ಓ ಬಿಕ್ಕುಗಳೇ ದುಃಖವನ್ನು ಇಲ್ಲವಾಗಿಸುವ ಮಾರ್ಗವನ್ನಾಗಿ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಿರಿ’
ದುಃಖದ ಮೂರು ಬಗೆಗಳನ್ನು ಈ ಬಗೆಯಾಗಿ ವರ್ಗೀಕರಿಸಲಾಗಿದೆ
1) ದುಃಖ ಎಂದರೆ
ದೈಹಿಕ ಸಂಕಟಗಳು - ಹೆರಿಗೆ, ಅನಾರೋಗ್ಯ, ವೃದ್ಧಾಪ್ಯ, ಸಾವು ಇತ್ಯಾದಿ
2) ವಿಪರಿನಾಮ ದುಃಖ ಎಂದರೆ ಬದಲಾವಣೆಯು ತರುವ ದುಃಖ - ನಿರಂತರವಾಗಿ ಬದಲಾಗುತ್ತಿರುವ ವಿಷಯಗಳನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಾಗ ಆಗುವ ಆತಂಕ ಅಥವಾ ಒತ್ತಡದ ದುಃಖ
3) ಸಂಹಾರ ದುಃಖ
ನಿಯಮಾಧೀನ ಮನಸ್ಸಿನ ಸಂಕಟ - ಜಗತ್ತು ನಮ್ಮ ಆದರ್ಶಗಳನ್ನು ಎಂದಿಗೂ ಅಳೆಯುವುದಿಲ್ಲ ಎಂಬ ನೋವು.
ಸಂಕಟದ ವಿವಿಧ ರೂಪಗಳು: ದುಃಖವು ಈ ಕೆಳಗಿನ ಮೂರು ರೂಪಗಳಲ್ಲಿ ಬರುತ್ತದೆ. ಗೌತಮ ಬುದ್ಧನು ಅವುಗಳನ್ನು ದುಷ್ಟತನದ ಮೂರು ಬೇರುಗಳು ಅಥವಾ ಮೂರು ಬೆಂಕಿ ಅಥವಾ ಮೂರು ವಿಷಗಳು ಎಂದು ವಿವರಿಸಿದ್ದಾನೆ.
l ದುರಾಸೆ ಮತ್ತು ಬಯಕೆ ( ಹುಂಜ)
l ದ್ವೇಷ/ವಿನಾಶಕಾರಿ ಪ್ರಚೋದನೆಗಳು (ಹಾವು)
l ಅಜ್ಞಾನ/ಭ್ರಮೆ (ಹಂದಿ)
ಇವುಗಳಲ್ಲಿ ಪ್ರತಿಯೊಂದೂ ಪರಸ್ಪರ ಒಂದಕ್ಕೊಂದು ಒತ್ತಾಸೆಯಾಗುತ್ತವೆ.
ದುಃಖದ ನಿವಾರಣೆ ಹೇಗೆ?:
l ಅಪೇಕ್ಷೆಗಳನ್ನು ಸಂಪೂರ್ಣವಾಗಿ ಬಿಡುವ ಮೂಲಕ ದುಃಖಗಳನ್ನು ನಿವಾರಿಸಬಹುದು
l ಆಸೆಗಳನ್ನು ತೊಡೆದು ಹಾಕಿ ನಿರ್ವಾಣ ಅಥವಾ ಜ್ಞಾನೋದಯಕ್ಕೆ ಕಾರಣವಾಗುತ್ತದೆ.
l ನಿರ್ವಾಣವು ಲೋಭ, ಭ್ರಮೆ ಮತ್ತು ದ್ವೇಷ ಎಂಬ ಮೂರು ಅಗ್ನಿಗಳನ್ನು ನಂದಿಸುತ್ತದೆ.
l ನಿರ್ವಾಣವು ನಕಾರಾತ್ಮಕ ಭಾವನೆಗಳು ಮತ್ತು ಭಯರಹಿತವಾದ ಆಳವಾದ ಆಧ್ಯಾತ್ಮಿಕ ಸಂತೋಷವನ್ನು ತರುವ ಮನಸ್ಸಿನ ಸ್ಥಿತಿಯಾಗಿದೆ.
l ಜ್ಞಾನೋದಯವನ್ನು ಪಡೆದ ಯಾವುದಾದರೂ ವ್ಯಕ್ತಿ ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿಯಿಂದ ತುಂಬಿರುತ್ತಾನೆ .
ದುಃಖದ ನಿಲುಗಡೆಯ ಹಾದಿ: ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವ ಮೂಲಕ ದುಃಖವನ್ನು ನಿವಾರಿಸಬಹುದು.
1. ಸೂಕ್ತವಾದ ನಂಬಿಕೆ 2. ಸೂಕ್ತವಾದ ಯೋಚನೆ
3. ಸೂಕ್ತವಾದ ಮಾತು 4. ಸೂಕ್ತವಾದ ನಡತೆ
5. ಸೂಕ್ತವಾದ ಜೀವನ 6. ಸೂಕ್ತವಾದ ಪ್ರಯತ್ನ
7. ಸೂಕ್ತ ವಿಚಾರಗಳ ಗ್ರಹಿಕೆ
8. ಸೂಕ್ತ ರೀತಿಯ ಧ್ಯಾನ
ಬದುಕಿನ ಜಂಜಾಟಗಳಲ್ಲಿ ಕಳೆದುಹೋದವರಿಗೆ ಮನೋಚಿಕಿತ್ಸಕನ ರೂಪದಲ್ಲಿ ತನ್ನ ಧರ್ಮದ ತತ್ವಗಳನ್ನು ಬೋಧಿಸಿದ ಬುದ್ಧ, ಲೋಕ ಕಂಡ ಮೇರು ದಾರ್ಶನಿಕ. ಮನುಷ್ಯನ ಬದುಕಿನ ಅಂತಃಸತ್ವವನ್ನೇ ಕೇಂದ್ರವಾಗಿಟ್ಟುಕೊಂಡಿರುವ ಬುದ್ಧನ ತತ್ವಗಳು, ನೀತಿಶಾಸ್ತ್ರಕ್ಕೆ ಅಪರೂಪದ ಕೊಡುಗೆ ಎನಿಸಿವೆ.
ಬುದ್ಧ ಬೋಧಿಸಿದ ಮಧ್ಯಮಮಾರ್ಗ
ಈ ಅಷ್ಟಾಂಗ ಮಾರ್ಗವನ್ನು ಮಧ್ಯಮಮಾರ್ಗಗಳೆಂದು ಕರೆಯಲಾಗಿದೆ. ಬುದ್ಧನ ಪ್ರಕಾರ ವಿಪರೀತವಾದ ಇಂದ್ರಿಯಾಸಕ್ತಿಗಳು ಹಾಗೂ ಸಂತೋಷದ ಬಯಕೆ ಮತ್ತು ವಿಪರೀತ ದೇಹ ದಂಡನೆ ಎರಡೂ ಅತಿರೇಕಗಳಾಗಿವೆ. ಮನುಷ್ಯ ಆಹಾರ, ಬಟ್ಟೆ ಮುಂತಾದ ಶಾರೀರಿಕ ಅಗತ್ಯಗಳನ್ನು ಅನುಸರಿಸಬೇಕು ಮತ್ತು ಕನಿಷ್ಠ ಸೌಕರ್ಯಗಳನ್ನು ಆನಂದಿಸಬೇಕು. ಅಂದರೆ ಮಧ್ಯಮಮಾರ್ಗವನ್ನು ಅನುಸರಿಸಬೇಕು. ಅತಿರೇಕ ಸಲ್ಲದು.
ಬುದ್ಧ ಪ್ರತಿಪಾದಿಸಿದ ತತ್ವಗಳು
lಬುದ್ಧನು ಸಾರ್ವತ್ರಿಕ ಸಹಾನುಭೂತಿ, ಉಪಕಾರ ಮತ್ತು ದಯೆಯನ್ನು ಪ್ರತಿಪಾದಿಸಿದನು.
lಬೌದ್ಧಧರ್ಮ ಜಾತಿ ಪದ್ಧತಿಯನ್ನು ವಿರೋಧಿಸುತ್ತದೆ. ಬೌದ್ಧಧರ್ಮವು ದೇವರು ಅಥವಾ ಆತ್ಮದ ಅಸ್ತಿತ್ವವನ್ನು ನಂಬುವುದಿಲ್ಲ ಅಥವಾ ಪ್ರಶ್ನಿಸುವುದೂ ಇಲ್ಲ.ಅದರ ಗೊಡವೆಗೆ ಬುದ್ಧ ಹೋಗಲಿಲ್ಲ.
lಬೌದ್ಧಧರ್ಮವು ಸೈದ್ಧಾಂತಿಕ ಚಿಂತನೆಗೆ ಒಲವು ತೋರಲಿಲ್ಲ ಮತ್ತು ಅದು ಪ್ರಾಯೋಗಿಕ ಬುದ್ಧಿವಂತಿಕೆಯ ಮೇಲೆ ತನ್ನ ಚಿಂತನೆಯನ್ನು ಕೇಂದ್ರೀಕರಿಸಿತು.
lಬುದ್ಧನು ಅಹಿಂಸೆಯನ್ನು ಬೋಧಿಸಿದನು. ಆದರೆ ತನ್ನ ತತ್ವ ಪ್ರತಿಪಾದನೆಯಲ್ಲಿ ಅತಿರೇಕಕ್ಕೆ ಹೋಗಲಿಲ್ಲ.
lಎಲ್ಲಾ ಬೋಧನೆಗಳ ಮೂಲಕ ಬೌದ್ಧ ಧರ್ಮವು ನೀತಿ ಶಾಸ್ತ್ರಕ್ಕೆ ತನ್ನದೆಯಾದ ವಿಶೇಷ ಕೊಡುಗೆಗಳನ್ನು ನೀಡಿದೆ.ಮಾನವ ಕುಲಕ್ಕೆ ಇಂತಹಾ ಅಪೂರ್ವ ತತ್ವಗಳನ್ನು ನೀಡಿದ ಬುದ್ಧನನ್ನು ಏಷ್ಯಾದ ಬೆಳಕು ಎಂದೇ ಗುರುತಿಸಲಾಗುತ್ತದೆ.
ನೀತಿ ಶಾಸ್ತ್ರಕ್ಕೆ ಬೌದ್ಧ ಧರ್ಮದ ಕೊಡುಗೆ
l ನಾಲ್ಕು ಸತ್ಯಗಳು
l ಅಷ್ಟಾಂಗ ಮಾರ್ಗಗಳು ಮತ್ತು ಮಧ್ಯಮ ಮಾರ್ಗ
l ಅನಿತ್ಯ ಮತ್ತು ಅಶಾಶ್ವತತೆಯ ಬಗ್ಗೆ ಕಲ್ಪನೆ
l ಮರಣಾನಂತರದ ಬದುಕಿನ ಬಗ್ಗೆ ಮಾತನಾಡದೆ, ದೊರೆತ ಜೀವನವನ್ನು ಕುಶಲವಾಗಿ ಬದುಕುವ ಬಗ್ಗೆ ಮನುಕುಲಕ್ಕೆ ಸರಿಯಾದ ದಾರಿಯನ್ನು ತೋರಿಸಿದ ಬುದ್ಧ.
l ಸಮ್ಯಕ್ ಗ್ರಹಿಕೆ - ಲೋಕದ ಕುರಿತ ಸರಿಯಾದ ಚಿಂತನೆ
l ಕರುಣೆ ಮತ್ತು ಮೈತ್ರಿಯ ನಡವಳಿಕೆ
l ಭಿಕ್ಷೆ ಮತ್ತು ಬಿಕ್ಕುಗಳ ಮೂಲಕ ಸಾಂಕೇತಿಕವಾಗಿ ತೋರಿಸುವ ನಮ್ರತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.