ಅವರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು. ಸಮಾನ ಮನಸ್ಕರು. ಸಾಮಾಜಿಕ ಕಾಳಜಿಯುಳ್ಳವರು. ತಮ್ಮ ಶಾಲೆಗಳಲ್ಲಿ ಕೆಲಸ ಮಾಡುತ್ತಾ, ಅಕ್ಕಪಕ್ಕದ ಸೌಲಭ್ಯ ಕೊರತೆಗಳಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಈ ಸಮಾನ ಮನಸ್ಕರ ಶಿಕ್ಷಕರ ಬಳಗದ ಈ ಕಾರ್ಯದಿಂದಾಗಿ ನೂರಾರು ಸರ್ಕಾರಿ ಶಾಲೆಗಳು ಮೂಲಸೌಲಭ್ಯ ಪಡೆದುಕೊಂಡಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು ಉಚಿತವಾಗಿ ದೊರೆತಿವೆ...!
ಇದು ಕೋಲಾರದ ‘ಸರ್ಕಾರಿ ಶಾಲಾ ಶಿಕ್ಷಕ ಗೆಳೆಯರ ಬಳಗ’ದ ಯಶೋಗಾಥೆ. ನಾರಾಯಣ ಸ್ವಾಮಿ, ವೀರಣ್ಣಗೌಡ, ಚಂದ್ರಪ್ಪ, ವೆಂಕಟಾಚಲಪತಿ ಗೌಡರಂತಹ ಕೆಲವು ಸಮಾನ ಮನಸ್ಕರು ಮತ್ತು ಮಕ್ಕಳ ಪರ ಕಾಳಜಿ ಇರುವಂತಹ ಶಿಕ್ಷಕರು ಸೇರಿ ಈ ಬಳಗ ಮಾಡಿಕೊಂಡಿದ್ದಾರೆ. ಬಳಗದ ಸದಸ್ಯರು, ಕೆಲವು ಪ್ರತಿಷ್ಠಿತ ಕಂಪನಿಗಳ ನೆರವಿನೊಂದಿಗೆ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ ಮಕ್ಕಳ ಮತ್ತು ಶಾಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹತ್ತು ವರ್ಷಗಳಿಂದ ಶಿಕ್ಷಕರ ಬಳಗ ಕೈಗೊಳ್ಳುತ್ತಿರುವ ಕಾರ್ಯಕ್ರಮ!
ಅಂದ ಹಾಗೆ, ಈ ಬಳಗದ ಶಿಕ್ಷಕರೆಲ್ಲರೂ ಹಣವಂತರಲ್ಲ. ಇವೆರಲ್ಲರೂ ಸಾಮಾನ್ಯ ಶಿಕ್ಷಕರಲ್ಲಿ ಸಾಮಾನ್ಯರು. ಆದರೆ ಅವರಲ್ಲಿರುವ ಮಕ್ಕಳ ಪರ ಕಾಳಜಿ, ಶಿಕ್ಷಣದ ಬಗ್ಗೆ ಇರುವ ಬದ್ಧತೆ, ಸರ್ಕಾರಿ ಶಾಲೆಗಳ ಮೇಲಿನ ಪ್ರೀತಿ.. ಇವೆಲ್ಲವೂ ಅವರ ‘ಶಿಕ್ಷಣ ಸೇವೆ’ಯನ್ನು ಮತ್ತಷ್ಟು ವಿಸ್ತಾರಗೊಳಿಸಿವೆ. ಪ್ರತಿಷ್ಠಿತ ಕಂಪನಿಗಳ ನೆರವಿನಿಂದ ಅವುಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಮತ್ತು ಮಕ್ಕಳಿಗೆ ಕೋಟ್ಯಂತರ ರೂಪಾಯಿಗಳ ನೆರವು ಸಿಕ್ಕಿದೆ.
ಪುಸ್ತಕ ಪ್ರೀತಿಯೊಂದಿಗೆ ಆರಂಭ
ಸರ್ಕಾರ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ನೀಡುತ್ತದೆ. ಆದರೆ, ನೋಟ್‌ಪುಸ್ತಕಗಳನ್ನು ಮಕ್ಕಳು ಖರೀದಿಸ ಬೇಕು. ಆದರೆ ಪೋಷಕರ ಬಳಿ ಹಣವಿರುವುದಿಲ್ಲ. ಇದನ್ನು ಮನಗಂಡ ಬಳಗದ ಸದಸ್ಯರು ಕೋಲಾರ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ನೋಟ್‍ಬುಕ್‍ಗಳನ್ನು ವಿತರಿಸುವ ಯೋಜನೆ ರೂಪಿಸಿದರು. ಸುಮಾರು 36 ಸಾವಿರ ಮಕ್ಕಳಿಗೆ ಒಂದು ವರ್ಷಕ್ಕೆ ಅಂದಾಜು ಒಂದು ಕೋಟಿಗೂ ಅಧಿಕ ಬೆಲೆಯ ಪುಸ್ತಕಗಳನ್ನು ಕೊಳ್ಳುವ ಯೋಜನೆ ತಯಾರಾಯಿತು. ಇದಕ್ಕಾಗಿ ಪ್ರತಿಷ್ಠಿತ ಕಂಪನಿಗಳನ್ನು, ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು, ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದವರನ್ನು ಭೇಟಿ ಮಾಡಿ, ನೆರವು ಕೇಳಿದರು. ಹಲವು ಸುತ್ತಿನ ಮನವಿಗಳ ಮೇರೆಗೆ ಅದು ಫಲ ನೀಡಿತು. ಸ್ಯಾಮ್‌ಸಂಗ್ ಮತ್ತು ಎಪ್ಸನ್ ಇಂಡಿಯಾ ಸಂಸ್ಥೆಗಳು ಬಳಗದವರ ಕಳಕಳಿಗೆ ಸ್ಪಂದಿಸಿ, ನೆರವಿಗೆ ಮುಂದಾದರು. ಈಗ ಎಂಟು ವರ್ಷಗಳಿಂದ ಕೋಲಾರ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಯಾವ ಮಗುವೂ ಒಂದು ನೋಟ್ ಪುಸ್ತಕವನ್ನು ಕೊಂಡಿಲ್ಲ. ಇದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
ಈ ಯಶೋಗಾಥೆ ಜಿಲ್ಲೆಯ ಇತರೆ ತಾಲ್ಲೂಕುಗಳಿಗೂ ತಲುಪಿತು. ಅಲ್ಲಿಯ ಸರ್ಕಾರಿ ಶಾಲೆಗಳಿಂದಲೂ ನೋಟ್ ಪುಸ್ತಕಗಳಿಗಾಗಿ ಮನವಿಗಳು ಬಂದವು. ಎರಡು–ಮೂರು ವರ್ಷ
ಗಳಿಂದ ಜಿಲ್ಲೆಯ ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ, ಕೆಜಿಎಫ್ ತಾಲ್ಲೂಕುಗಳ ಶಾಲೆಗಳಿಗೂ ನೋಟ್‌ಪುಸ್ತಕಗಳ ವಿತರಣೆ ನಡೆಯುತ್ತಿದೆ. ಈ ಸೇವೆ ಈಗ ಜಿಲ್ಲೆಯನ್ನೂ ದಾಟಿದೆ. ಇವರ ಸೇವೆ ಈಗ ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿದೆ.
ಪಾಠೋಪಕರಣಗಳ ಪೂರೈಕೆ
ಕಳೆದ ವರ್ಷ ಸ್ಯಾಮ್‌ಸಂಗ್ ಇಂಡಿಯಾ ಸಹಯೋಗದಲ್ಲಿ ಕೋಲಾರ ಜಿಲ್ಲೆಯ 56 ಸಾವಿರ ಮಕ್ಕಳಿಗೂ ಪರೀಕ್ಷೆ ಬರೆಯಲು ಸುಮಾರು ₹86 ಲಕ್ಷ ಮೌಲ್ಯದ ಪರೀಕ್ಷಾ ಪ್ಯಾಡ್ ಮತ್ತು ಜಾಮಿಟ್ರಿ ಬಾಕ್ಸ್‌ಗಳನ್ನು ವಿತರಿಸಿದ್ದಾರೆ. ಇದೇ ಕಂಪನಿಯ ಸಹಯೋಗದಲ್ಲಿ (2018-19 ನೇ ಸಾಲಿನಲ್ಲಿ) 86 ಶಾಲೆಗಳಲ್ಲಿ ₹ 63 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಅಳವಡಿಸಿ, ಅವುಗಳ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಈಗ ಇದೇ ಸೌಲಭ್ಯ ಪಡೆಯಲು 180 ಶಾಲೆಗಳು ಸರದಿಯಲ್ಲಿವೆ.
ಆರ್ಥಿಕವಾಗಿ ಹಿಂದುಳಿದವರಿಗೆ ನೆರವು...
ಸರ್ಕಾರಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ನೆರವಾಗಲು ಬೆಂಗಳೂರಿನ ರಾಜಸ್ಥಾನ್ ಕಾಸ್ಮೋ ಕ್ಲಬ್ ನೆರವು ಕೇಳಿದ್ದರು. ಮನವಿಗೆ ಸ್ಪಂದಿಸಿದ ಕ್ಲಬ್ ಸದಸ್ಯರು ಏಳೆಂಟು ವರ್ಷಗಳಿಂದ ಪ್ರತಿ ವರ್ಷ ಆರ್ಥಿಕವಾಗಿ ಹಿಂದುಳಿದ ಸುಮಾರು ನಾಲ್ಕು ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ, ಒಂದು ಶಾಲಾ ಬ್ಯಾಗ್, ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್, ಟೈ, ಬೆಲ್ಟ್ ವಿತರಿಸುತ್ತಿದ್ದಾರೆ. ಕೋಲಾರ ತಾಲ್ಲೂಕಿನ ಎಂಟು ಸಾವಿರ ಮಕ್ಕಳಿಗೆ ಸ್ಯಾಮ್‌ಸಂಗ್ ಇಂಡಿಯಾದವರು ರತ್ನಕೋಶ ನಿಘಂಟು ವಿತರಿಸಿದ್ದಾರೆ.
ಶಾಲಾ ಕಟ್ಟಡಗಳ ನಿರ್ಮಾಣ
ಒಮ್ಮೆ ನೋಟ್‍ಪುಸ್ತಕ, ಪರೀಕ್ಷಾಪ್ಯಾಡ್ ವಿತರಣೆಗಾಗಿ ಕೋಲಾರ ತಾಲ್ಲೂಕಿನ ಕೆಂಬೋಡಿ ಶಾಲೆಗೆ ಬಂದ ಸ್ಯಾಮ್‌ಸಂಗ್ ಇಂಡಿಯಾ ಮುಖ್ಯ ಹಣಕಾಸು ಅಧಿಕಾರಿ ಹ್ಯಾರಿಕ್ಯಾಂಗ್ ಅವರು ಶಿಥಿಲಾವಸ್ಥೆ ಕಟ್ಟಡವನ್ನು ನೋಡಿದರು.‘ಇದನ್ನೆಲ್ಲಾ ಸ್ವಚ್ಛ ಮಾಡಿ ಸ್ಥಳ ನೀಡಿದರೆ ಹೊಸ ಕಟ್ಟಡ ಕಟ್ಟಿಸಿಕೊಡುವುದಾಗಿ’ ಭರವಸೆ ನೀಡಿದ್ದರು. ಇದಾಗಿ ಒಂದು ವರ್ಷದಲ್ಲಿಯೇ ಸುಮಾರು ₹80 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಆರು ಶಾಲಾ ಕೊಠಡಿಗಳು ನಿರ್ಮಾಣಗೊಂಡವು. ಅಲ್ಲಿ ಮಕ್ಕಳಿಗೆ ಅಗತ್ಯವಾದ ಪೀಠೋಪಕರಣಗಳು, ಸ್ಮಾರ್ಟ್ ಕ್ಲಾಸ್ ಹೀಗೆ ಕಲಿಕೆಗೆ ಪೂರಕವಾದ ಎಲ್ಲ ಅನುಕೂಲ ಮಾಡಿಸಿಕೊಟ್ಟ ಕೊಡುಗೆ ಶಿಕ್ಷಕ ಗೆಳೆಯರ ಬಳಗಕ್ಕೆ ಸಲ್ಲುತ್ತದೆ.
ಆಧುನಿಕ ತಂತ್ರಜ್ಞಾನದ ಸ್ಪರ್ಶ
ಇನ್ಫೋಸಿಸ್ ಮತ್ತು ಆರ್.ಕೆ. ಫೌಂಡೇಶನ್ ಸಹಕಾರದಿಂದ ಎರಡು ನೂರಕ್ಕಿಂತ ಹೆಚ್ಚು ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸುವಲ್ಲಿ ಗೆಳೆಯರ ಬಳಗ ಶ್ರಮವಹಿಸಿದೆ. ಜೊತೆಗೆ ಶಿಕ್ಷಕರು ಮತ್ತು ಮಕ್ಕಳಿಗೆ ಬೇಕಾದ ಸಾಫ್ಟ್‌ವೇರ್ ಕೊಟ್ಟಿದ್ದಾರೆ. ಆ ಮುಖಾಂತರ ಮಕ್ಕಳಿಗೆ ತಂತ್ರಜ್ಞಾನದ ಕಲಿಕೆಗೆ ಅವಕಾಶ ದೊರೆಯುವಂತೆ ಮಾಡಿದ್ದಾರೆ.
ಆಯ್ದ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್‌ಗಳನ್ನು ಅಳವಡಿಸುವಲ್ಲಿ ನೆರವಾಗಿದ್ದಾರೆ ಬಳಗದ ಸದಸ್ಯರು. ನರಸಾಪುರ, ಅಂಬಿಕೊತ್ತನೂರು, ವೇಮಗಲ್ ಮತ್ತು ಕುರುಗಲ್ ಪ್ರೌಢಶಾಲೆ ಗಳಲ್ಲಿ ಮಣಿಪಾಲ್ ಫೌಂಡೇಷನ್ ಸಂಸ್ಥೆಯ ನೆರವಿನಿಂದ ಸುಮಾರು ₹ 5 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್‍ಗಳನ್ನು ಪ್ರಾರಂಭಿಸಲಾಗಿದೆ.
ಮಕ್ಕಳಿಗಷ್ಟೇ ಅಲ್ಲದೇ, ಶಿಕ್ಷಕರಿಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಶಿಕ್ಷಣ ತಜ್ಞ ಗುರುರಾಜ್ ಕರಜಗಿಯವರಂತಹ ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿ ಬದ್ಧತೆಯ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 85 ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದಾರೆ.
ಎಚ್.ಪಿ.ಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವ ಹಿಸುವ ಟೆಕಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಮಾಡಿಸುತ್ತಿದ್ದಾರೆ. ಶಾಲಾ ಅಂಗಳಗಳಲ್ಲಿ ಸಸಿ ನೆಡಿಸುತ್ತಿದ್ದಾರೆ. ಕೋಲಾರ ತಾಲ್ಲೂಕಿನ ಕೋರಗಂಡಹಳ್ಳಿ ಶಾಲಾ ಆವರಣದಲ್ಲಿ ನಾಲ್ಕು ಎಕರೆ ಜಾಗದಲ್ಲಿ ಸಸಿ ನೆಡಲಾಗಿದೆ. ಹುನುಕುಂದ, ರಾಜನಗರ, ಸುಲ್ತಾನ್ ತಿಪ್ಪಸಂದ್ರ ಹೀಗೆ ವಿವಿಧ ಶಾಲಾ ಆವರಣಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಮುಖಾಂತರ ಮಕ್ಕಳಲ್ಲಿ ಪರಿಸರ ಜಾಗೃತಿಯನ್ನೂ ಬೆಳೆಸುತ್ತಿದ್ದಾರೆ. ಶಾಲೆಗಳ ಸೌಂದರ್ಯ ವೃದ್ಧಿಗಾಗಿ ಕಟ್ಟಡಗಳಿಗೆ ಸುಣ್ಣಬಣ್ಣ ಮಾಡಿಸಿದ್ದಾರೆ.
ಇನ್ನೂ ಹಲವು ಕನಸುಗಳಿವೆ..
ಗೆಳೆಯರ ಬಳಗದ ಶಿಕ್ಷಕರಿಗೆ ಕೋಲಾರ ತಾಲ್ಲೂಕಿನಲ್ಲಿರುವ 26 ಸರ್ಕಾರಿ ಪ್ರೌಢಶಾಲೆಗಳಿಗೂ ಎಪ್ಸನ್ ಇಂಡಿಯಾ ಕಂಪನಿಯ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಮಾಡಿಸುವ ಗುರಿ ಇದೆ. ಈಗಾಗಲೇ ಮೊದಲ ಹಂತದಲ್ಲಿ ಐದು ಶಾಲೆಗಳಲ್ಲಿ ಈ ಕೆಲಸ ಪ್ರಗತಿಯಲ್ಲಿದೆ. ‘ರಾಜ್ಯದ ಎಲ್ಲಾ ಸರಕಾರಿ ಶಾಲೆಗಳು ಬಲವರ್ಧನೆ ಗೊಳ್ಳಬೇಕು’ ಎಂಬ ಕನಸು ಬಳಗದವರದ್ದು.
ಈ ಗೆಳೆಯರ ಬಳಗದವರ ಕನಸು ಬೇಗ ನನಸಾಗಲಿ ಇವರ ಸಾಧನೆ, ಸೇವೆ, ಅನುಕರಣೀಯ ಮತ್ತು ಆದರ್ಶವಾಗು ವಂತದ್ದು. ಇಂಥ ಶಿಕ್ಷಕ ಬಳಗಗಳು ಇನ್ನಷ್ಟು ಹೆಚ್ಚಾಗಲಿ.
***
ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ತೊಂದರೆ ಯಾಗಬಾರದು ಮತ್ತು ಮಕ್ಕಳು ಶಾಲೆ ಬಿಡಬಾರದು. ಮಕ್ಕಳಲ್ಲಿ ಭರವಸೆ ಮೂಡಿಸುವುದು ನಮ್ಮ ಉದ್ದೇಶ.
ವೀರಣ್ಣ ಗೌಡ, ಕಾರ್ಯದರ್ಶಿ, ಶಿಕ್ಷಕ ಗೆಳೆಯರ ಬಳಗ
***
ನಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಸಮಾಜಕ್ಕೆ ಕೊಟ್ಟಾಗ ಸಮಾಜದ ಎಲ್ಲ ವರ್ಗದವರೂ ಮೇಲೆ ಬರಲು ಕಾರಣವಾಗುತ್ತದೆ.
ಚಂದ್ರಪ್ಪ, ಖಜಾಂಚಿ
***
ಶಿಕ್ಷಕರು ಸಮಾಜದ ಋಣ ತೀರಿಸಬೇಕು. ಅನೇಕ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ನಮ್ಮದಾಗಿದೆ. ಈ ಆಶಯದೊಂದಿಗೆ ನಮ್ಮ ತಂಡ ಕೆಲಸ ಮಾಡುತ್ತಿದೆ.
ನಾರಾಯಣಸ್ವಾಮಿಅಧ್ಯಕ್ಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.