ಶಾಲೆಯಿಂದ ಮನೆಗೆ ಓಡಿ ಬಂದ ಆಕಾಂಕ್ಷಾ ಅಜ್ಜಿಯ ಹತ್ತಿರ ಬಂದು ‘ಅಜ್ಜಿ ನಾನು ನಮ್ಮ ಸ್ಕೂಲ್‌ನಲ್ಲಿ ಹೇಳಿ ಕೊಟ್ಟ ಹಾಡು ಹೇಳಲಾ?’ ಎಂದು ಮುದ್ದು ಮುದ್ದಾಗಿ ಕೇಳಿದಳು. ಅಜ್ಜಿ ಬೇಡವೆನ್ನುತ್ತಾಳಾ, ಆನಂದವಾಗಿ ಮೊಮ್ಮಗಳ ಹಾಡನ್ನು ಕೇಳಿದಳು. ‘ಬಾರೆಲೆ ಹಕ್ಕಿ.. ಬಣ್ಣದ ಹಕ್ಕಿ..’ ಪದ್ಯಕ್ಕೆ ಮೊಮ್ಮಗಳು ಕೈಯನ್ನು ಅಲ್ಲಾಡಿಸುತ್ತಾ ಕುಲುಕುತ್ತಾ, ನರ್ತಿಸುತ್ತಾ, ರಾಗವಾಗಿ ಮುದ್ದು ಮುದ್ದಾಗಿ ಹಾಡುತ್ತಿದ್ದರೆ ಮನೆಯವರೆಲ್ಲರ ಆನಂದಕ್ಕೆ ಪಾರವಿರಲಿಲ್ಲ.
ರಾಗವಾಗಿ ಹಾಡುತ್ತಾ, ಕುಣಿಯುತ್ತಾ, ಅಭಿನಯ ಮಾಡುವುದು ಮಕ್ಕಳಿಗೆ ಬಹಳ ಇಷ್ಟ. ಈಗ ಶಾಲೆಗಳಲ್ಲಿ ಅಭಿನಯ ಗೀತೆ ಅರ್ಥಾತ್ ಆ್ಯಕ್ಷನ್ ಸಾಂಗ್ ಹೇಳಿ ಕೊಡುವುದು ಚಾಲ್ತಿಯಲ್ಲಿದೆ. ನಿಜಕ್ಕೂ ಅದರಿಂದ ಏನಾದರೂ ಉಪಯೋಗವಿದೆಯೇ ಎಂದು ಯೋಚಿಸಿದಾಗ ಬಹಳಷ್ಟು ಪ್ರಯೋಜನಗಳು ಗೋಚರಿಸುತ್ತವೆ.
ಮಕ್ಕಳ ನೆನಪಿನ ಶಕ್ತಿ ವರ್ಧಿಸುತ್ತದೆ
ವಿಷಯವನ್ನು ವಿಭಿನ್ನ ರೀತಿಗಳಲ್ಲಿ ಪ್ರಸ್ತುತಪಡಿಸುವುದರಿಂದ ಕಲಿಕೆಯ ಅನುಭವ ಹೆಚ್ಚಾಗುತ್ತದೆ. ಒಂದೇ ಬಾರಿಗೆ ನೋಡುವುದು, ಹಾಡುವುದು, ಹೇಳುವುದು, ದೇಹದ ಭಾಗಗಳ ಚಲನೆಯು ಒಟ್ಟಾರೆ ದೃಶ್ಯ, ಸಂಗೀತ, ನೃತ್ಯ ಮತ್ತು ಬಾಯಿಯಲ್ಲಿ ಹಾಡುವುದು ಎಲ್ಲವನ್ನೂ ಒಳಗೊಂಡಿರುತ್ತದೆ. ಕಲಿತದ್ದನ್ನು ಮತ್ತೆ ನೆನಪಿಸಿಕೊಳ್ಳಲು ಇದು ಪೂರಕ.
ಚಲನ ಶಕ್ತಿಗೆ ಪ್ರೇರಕ
ಬೆರಳುಗಳ ಚಲನೆ, ಶರೀರದ ಮೇಲ್ಭಾಗ ಮತ್ತು ಕೆಳಭಾಗದ ಚಲನೆಯಿಂದ ಕೈ ಮತ್ತು ಕಾಲು ಬೆರಳುಗಳ ಚಲನೆಗೆ ಸಹಾಯವಾಗುತ್ತದೆ. ಶಿಸ್ತುಬದ್ಧ ಅಭಿನಯ ಮತ್ತು ಚಲನೆ ಮನಸ್ಸು ಮತ್ತು ದೇಹದ ನಿಯಂತ್ರಣಕ್ಕೆ ಒತ್ತು ನೀಡುತ್ತದೆ. ‘ಒಂದು ಎರಡು.. ಬಾಳೆಲೆ ಹರಡು’..‘ಫೈವ್ ಲಿಟ್ಲ್ ಡಕ್ಸ್...’ ಎಂದೆಲ್ಲಾ ಮಗು ಬೆರಳನ್ನು ಮಡಿಸಿ, ಬಿಚ್ಚುವುದು ಮಾಡುತ್ತಿದ್ದರೆ ಅದು ಬೆರಳುಗಳ ಚಲನಶೀಲತೆ ಹೆಚ್ಚಿಸುತ್ತದೆ. ‘ಗೇರ್ ಗೇರ್ ಮಂಗಣ್ಣ..’ ಎಂದು ಕುಪ್ಪಳಿಸಿದರೆ ಮಗುವಿನ ಸ್ನಾಯುಗಳು ವಿಕಾಸ ಹೊಂದುತ್ತವೆ. ‘ರೋ ರೋ ರೋ ದಿ ಬೋಟ್..‘ ಎಂದು ಬಗ್ಗಿ ಹುಟ್ಟು ಹಾಕುವಂತೆ ಅಭಿನಯಿಸುವಾಗ ದೇಹದ ಸಮತೋಲನ ಸಾಧಿಸುವಲ್ಲಿ ಮಗು ಯಶಸ್ವಿಯಾಗುತ್ತದೆ.
ಕಣ್ಣು ಮತ್ತು ಕೈಗಳ ಅನ್ಯೋನ್ಯತೆ
ಕಣ್ಣುಗಳನ್ನು ಯಾವ ರೀತಿ ತಿರುಗಿಸುತ್ತಾರೋ ಜೊತೆಗೆ ಕೈಗಳ ಚಲನೆಯೂ ಅದಕ್ಕೆ ಪೂರಕವಾಗಿರುತ್ತದೆ. ಕಣ್ಣುಗಳ ಚಲನೆಗನುಗುಣವಾಗಿ ಕೈಗಳ ಚಲನೆಯೂ ಸಾಗುತ್ತದೆ.
ಆಲಿಕೆ ಮತ್ತು ಗ್ರಹಣ ಶಕ್ತಿಗೆ ಪೂರಕ
ಹೇಳುವವರನ್ನು ಗಮನಿಸುತ್ತಾ, ಅವರು ಹೇಳುವುದನ್ನು ಕೇಳುವ ಅಭ್ಯಾಸದಿಂದ ಗಮನವನ್ನು ಕೇಂದ್ರೀಕರಿಸಲು ಸಹಾಯಕವಾಗುತ್ತದೆ. ಅವರಲ್ಲೂ ಹೊಸ ಹೊಸ ಭಾವಗಳು ಮೂಡುತ್ತವೆ. ಜೊತೆಗೆ ಮಗು ಆದೇಶವನ್ನು, ಸೂಚನೆಯನ್ನು ಪಾಲಿಸುವುದನ್ನು ಕಲಿಯುತ್ತದೆ.
ಭಾಷಾ ಜ್ಞಾನ ಮತ್ತು ಶಬ್ದ ಸಂಪತ್ತು
ಹೊಸ ಹೊಸ ಹಾಡುಗಳನ್ನು ಕೇಳುವುದರಿಂದ ಮಕ್ಕಳಿಗೆ ಭಾಷೆಯ ಬಗ್ಗೆ ಒಲವು ಮೂಡಿ ಹೊಸ ಪದಗಳನ್ನು ಕಲಿಯುತ್ತಾರೆ. ಕಲಿಕೆ ಇಲ್ಲಿ ಒಂದು ರೀತಿಯಲ್ಲಿ ಮನರಂಜನೀಯವಾಗಿರುತ್ತದೆ. ಉದಾಹರಣೆಗೆ ‘ಗರ ಗರ ಬುಗುರಿ..’ ಎಂದು ಸುತ್ತು ತಿರುಗುವಾಗ ಗರ ಗರ ಎನ್ನುವುದರ ಅರ್ಥ ಕಲಿಯುತ್ತದೆ. ಅಂದರೆ ಶಬ್ದ ಮತ್ತು ಅದರ ಕ್ರಿಯೆ ಅದಕ್ಕೆ ಮನದಟ್ಟಾಗುತ್ತದೆ.
ಕಲಿಕೆ
ಅಕ್ಷರಗಳು, ಅಂಕಿಗಳು ಎಲ್ಲವೂ ಈ ಹಾಡುಗಳಲ್ಲಿ ಬರುವುದರಿಂದ ಅಕ್ಷರ ಜ್ಞಾನ ಹೆಚ್ಚುತ್ತದೆ ಮತ್ತು ಬಣ್ಣಗಳು, ಹೂವು, ಹಣ್ಣುಗಳ, ಪ್ರಾಣಿಗಳ ಪರಿಚಯವೂ ಆಗುತ್ತದೆ. ಸಂಗೀತವನ್ನು ಆನಂದಿಸುವ, ಆಸ್ವಾದಿಸುವ ಗುಣ ಅವರಲ್ಲಿ ಮೂಡುತ್ತದೆ. ಹಾಡುತ್ತಾ, ಅಲ್ಲಾಡುತ್ತಾ ತಮ್ಮ ದನಿಯನ್ನು ಕೇಳಿಸಿಕೊಳ್ಳುತ್ತಾ, ಅವರಲ್ಲಿ ಕಲ್ಪನಾಶಕ್ತಿ ರೂಪುಗೊಳ್ಳುತ್ತದೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಸೃಜನಶೀಲತೆ, ಹೊಂದಾಣಿಕೆ ಸಹಾ ಕಾಣ ಬರುತ್ತದೆ. ಹಾಡುವುದು ಮತ್ತು ನರ್ತಿಸುವುದರ ಜೊತೆಗೆ ಇನ್ನೂ ಅನೇಕ ಪ್ರತಿಭೆಗಳು ಅವರಲ್ಲಿ ಹೊರಹೊಮ್ಮುತ್ತವೆ. ಕಲಿಸುವವರ, ಕಲಿಯುವವರ ಮತ್ತು ಪೋಷಕರ ನಡುವಿನ ಆರೋಗ್ಯಕರ ಬಾಂಧವ್ಯಕ್ಕೆ ನಾಂದಿಯಾಗುತ್ತದೆ.
ಭಾವನೆಗಳ ಅನಾವರಣ
ಮಕ್ಕಳು ತಮ್ಮ ಮುಖದಲ್ಲಿ ಹಾಗೂ ಚಲನೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಅವರಲ್ಲಿ ಬಾಡಿ ಲ್ಯಾಂಗ್ವೇಜ್ ಬಗ್ಗೆ ಅರಿವು ಮೂಡುತ್ತದೆ.
ಸಾಮಾಜಿಕ ಕೌಶಲಗಳ ವೃದ್ಧಿ
ಗುಂಪಿನಲ್ಲಿ ಹಾಡು ಹೇಳಿಕೊಂಡು ನರ್ತಿಸುವುದರಿಂದ ಪರಸ್ಪರ ಗೌರವಿಸುವುದು, ಇತರ ಮಕ್ಕಳ ಜೊತೆ ಮಾತನಾಡಿ ಸಾಮಾಜಿಕ ಬಾಂಧವ್ಯ ಹೆಚ್ಚಿಸಿಕೊಳ್ಳುವುದು ಈ ವಯಸ್ಸಿನಲ್ಲೇ ಸಾಧ್ಯ.
ಆಧುನಿಕ ಜಗತ್ತಿನಲ್ಲಿ ಒಂದು ಗುಂಡಿಯನ್ನೊತ್ತಿದರೆ ಎಲ್ಲ ಜ್ಞಾನವೂ ಲಭ್ಯ, ದೊಡ್ಡವರು ಹೆಚ್ಚು ಸಮಯವನ್ನು ಟಿ.ವಿ. ಅಥವಾ ಕಂಪ್ಯೂಟರ್ ಮುಂದೆ ಕಳೆಯುವುದರಿಂದ ಮಕ್ಕಳಿಗೂ ಅದೇ ಅಭ್ಯಾಸವಾಗಿ ಬಿಡುತ್ತದೆ. ಅವರು ಒಂಟಿಯಾಗಿ ಬಿಡುತ್ತಾರೆ. ಅಜ್ಜ– ಅಜ್ಜಿಯರ ಜೊತೆ ಕಾಲ ಕಳೆಯುವುದು, ಅವರ ಜೊತೆ ಕಥೆ ಕೇಳುವುದು ಎಲ್ಲವೂ ಕಡಿಮೆಯಾಗುತ್ತಿದೆ. ಈಗಿನ ಮಕ್ಕಳಿಗೆ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಮನೆಗೆಲ್ಲಾ ಒಂದು ಮಗು. ಹೀಗಾಗಿ ಅವರಿಗೆ ಹಂಚಿ ತಿನ್ನುವ , ಜೊತೆ ಜೊತೆಗೆ ಆಡುವ ಅಭ್ಯಾಸ ಕಡಿಮೆಯಾಗುತ್ತಿದೆ. ಇನ್ನು ಹಾಡುವ, ಕುಣಿಯುವ ಅಥವಾ ಭಾವನಾತ್ಮಕ ವಿಷಯಗಳಿಗೆ ನೆಲೆಯೆಲ್ಲಿ? ಪ್ರತಿಯೊಂದು ಮಗುವೂ ನೈಸರ್ಗಿಕವಾಗಿಯೇ ಸೃಜನಶೀಲತೆ, ಕಲಾತ್ಮಕತೆ ಮತ್ತು ಸಂಗೀತದಲ್ಲಿ ಆಸ್ಥೆಯನ್ನು ಹೊಂದಿರುತ್ತದೆ. ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ನರ್ತಿಸುತ್ತಿರುತ್ತದೆ, ಆಗಲೇ ಚಲನಾ ಶಕ್ತಿ ಮಗುವಿಗಿರುತ್ತದೆ. ಹುಟ್ಟಿದ ಆರು ತಿಂಗಳಿಗೆ ಮಗು ಹಾಡಿಗೆ ಸ್ಪಂದಿಸುತ್ತದೆ. ಜೋಗುಳ ಹಾಡಿದರೆ ಬೇಗ ಮಲಗಿ ಬಿಡುತ್ತದೆ. ಮಗು ಮಾತನಾಡಲು ಪ್ರಾರಂಭ ಮಾಡುವುದೇ ರಾಗವಾಗಿ. ಹಾಡುವುದೂ ಒಂದು ರೀತಿಯ ವ್ಯಾಯಾಮವೇ. ಇದು ಹೃದಯ ಮತ್ತು ಶ್ವಾಸಕೋಶಕ್ಕೆ ಶಕ್ತಿ ನೀಡುತ್ತದೆ.
“ಸಂಗೀತ ಮತ್ತು ನೃತ್ಯಕ್ಕೆ ಭಾಷೆಯಿಲ್ಲ, ಮಕ್ಕಳು ತಮ್ಮ ಮನಸ್ಸಿನ ಭಾವನೆಗಳನ್ನು ತಮ್ಮ ಆಂಗಿಕ ಅಭಿನಯದಿಂದ ವ್ಯಕ್ತಪಡಿಸಬಹುದು. ಮುಖ, ಧ್ವನಿ, ಮತ್ತು ಅಂಗಗಳ ಚಲನೆಯಿಂದ ಮಕ್ಕಳು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಕಲಿಯುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರಲ್ಲಿನ ಕಲ್ಪನಾ ಶಕ್ತಿ ಹೆಚ್ಚಿ ಭಾವನಾತ್ಮಕವಾಗಿ ಮತ್ತೊಬ್ಬರೊಡನೆ ಸ್ಪಂದಿಸಲು ಕಲಿಯುತ್ತಾರೆ ಎಂದು ಬ್ರಿಟಿಷ್ ಕೌನ್ಸಿಲ್‌ನ ವರ್ಲ್ಡ್ ವಾಯ್ಸ್ ಕಾರ್ಯಕ್ರಮದ ಮುಖ್ಯ ಹಾಡುಗಾರ ಲಿನ್ ಮಾರ್ಷ್ ಹೇಳುತ್ತಾರೆ. ಈ ಅಭಿನಯದ ಜೊತೆಗಿನ ಗೀತೆ ಅರ್ಥಾತ್ ಆ್ಯಕ್ಷನ್ ಸಾಂಗ್ ನೋಡಲು ಆನಂದವನ್ನು ನೀಡುವುದಲ್ಲದೆ ವೈಜ್ಞಾನಿಕವಾಗಿಯೂ ಬಹಳಷ್ಟು ಪ್ರಯೋಜನಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.