ADVERTISEMENT

ಬಿ.ಎಸ್ಸಿ(ಸಿಬಿಝೆಡ್‌) ನಂತರ ಯಾವ ಕೋರ್ಸ್ ಸೂಕ್ತ ?

ಪ್ರದೀಪ್ ಕುಮಾರ್
Published 2 ಆಗಸ್ಟ್ 2022, 7:24 IST
Last Updated 2 ಆಗಸ್ಟ್ 2022, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನಾನು ಬಿಎಸ್ಸಿ (ಸಿಬಿಝೆಡ್) ಪೂರ್ಣಗೊಳಿಸಿದ್ದೇನೆ. ಆಹಾರ ವಿಜ್ಞಾನ ಅಥವಾ ನ್ಯೂಟ್ರಿಷನ್ ಸಂಬಂಧಪಟ್ಟಂತೆ ಎಂಎಸ್ಸಿ ಮಾಡಬೇಕೆಂದಿದ್ದೇನೆ. ಆದರೆ, ನನ್ನ ಗೆಳೆಯರು ಎಂಎಸ್ಸಿ (ಆಹಾರ ವಿಜ್ಞಾನ) ಬದಲಾಗಿ ಎಂಎಸ್ಸಿ (ಪ್ರಾಣಿವಿಜ್ಞಾನ) ಮಾಡುವಂತೆ ಹೇಳುತ್ತಿದ್ದಾರೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ?

ಸಿಂಧೂ, ತುಮಕೂರು.

ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು , ಆಹಾರ ವಿಜ್ಞಾನ ಮತ್ತು ಪುಷ್ಟಿ ವಿಜ್ಞಾನ (ನ್ಯೂಟ್ರಿಷನ್) ಮುಂಚೂಣಿಯಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ಧಪಡಿಸುವ ಕಾರ್ಯಗಳಲ್ಲಿ ಆಹಾರ ವಿಜ್ಞಾನ, ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದಲ್ಲಿ, ಎಂಎಸ್ಸಿ ಕೋರ್ಸ್ ಮಾಡಬಹುದು.

ADVERTISEMENT

ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ (ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್‌ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿ ವಿಪುಲವಾದ ಉದ್ಯೋಗಾವಕಾಶಗಳಿವೆ.

2. ನಾನು ದೂರಶಿಕ್ಷಣದಲ್ಲಿ ಬಿಎ ಪದವಿ ಪಡೆದಿದ್ದೇನೆ. ಮುಂದೆ, ಎಲ್‌ಎಲ್‌ಬಿ ಮಾಡುವ ಆಸೆ ಇದೆ. ಇದಕ್ಕೆ ಬೇರೆ ಯಾವುದಾದರೂ ಕೋರ್ಸ್ ಮಾಡಬೇಕೆ ಅಥವಾ ನೇರವಾಗಿ ಎಲ್‌ಎಲ್‌ಬಿ ಮಾಡಬಹುದೇ ತಿಳಿಸಿ?⇒

ದೀಪಿಕಾ, ದಾವಣಗೆರೆ.

ದೂರ ಶಿಕ್ಷಣ ಬ್ಯೂರೊ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವೀಧರರಿಗೆ, ಎಲ್‌ಎಲ್‌ಬಿ ಕೋರ್ಸ್ ಮಾಡಲು ಅರ್ಹತೆ ಇರುತ್ತದೆ.

3. ನಾನು ಪದವಿ ಮುಗಿಸಿದ್ದು, ಆಧಾರ್ ಎನ್‌ರೋಲ್‌ಮೆಂಟ್ ಪರೀಕ್ಷೆ ಪಾಸ್ ಆಗಿದ್ದೇನೆ ಮತ್ತು ಏಜೆನ್ಸಿಯ ಅವಧಿ 1 ವರ್ಷವಿದೆ. ನಂತರದಲ್ಲಿ ನಾವು ಕೆಲಸ ಇಲ್ಲದೆ ಇರಬೇಕಾಗುತ್ತದೆ. ಆದ್ದರಿಂದ, ನಾನು ಯುಐಡಿಎಐ (UIDAI) ಸಂಸ್ಥೆಯಲ್ಲಿ ಮುಂದುವರಿಯುವುದು ಹೇಗೆ? ಇದಕ್ಕೆ ಸರ್ಕಾರಿ ನೇಮಕಾತಿ ಇದೆಯೇ?

ದುರ್ಗೇಶ್ ಪಾಟೀಲ, ಊರು ತಿಳಿಸಿಲ್ಲ.

ಯುಐಡಿಎಐ (UIDAI), ಭಾರತ ಸರ್ಕಾರದ ವಿದ್ಯುನ್ಮಾನಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಒಂದು ಶಾಸನಬದ್ಧ ಪ್ರಾಧಿಕಾರವಾಗಿರುತ್ತದೆ. ಈ ಸಂಸ್ಥೆಯಲ್ಲಿನ ಹಲವಾರು ಹುದ್ದೆಗಳಿಗೆ ನೇರವಾಗಿ ನೇಮಕಾತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://uidai.gov.in/about-uidai/work-with-uidai.html

4. ನಾನು ಪಿಯುಸಿ ಕಲಾ ವಿಭಾಗದಲ್ಲಿ ಶೇ 93 ಅಂಕದೊಂದಿಗೆ ಪಾಸಾಗಿದ್ದೇನೆ. ಕಲಾ ವಿಭಾಗ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಬಹಳ ಜನ ಹೇಳುತ್ತಾರೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ. ಸಲಹೆ ಕೊಡಿ

ಹೆಸರು, ಊರು ತಿಳಿಸಿಲ್ಲ.

ಕಲಾ ವಿಭಾಗದಲ್ಲಿ ಅವಕಾಶಗಳು ಕಡಿಮೆ ಎನ್ನುವ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಪಿಯುಸಿ ನಂತರ ಅನೇಕ ವಿಷಯಗಳಲ್ಲಿ ಬಿಎ ಪದವಿಯನ್ನು ಮಾಡಬಹುದು. ಉದಾಹರಣೆಗೆ, ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ ಸಮಾಜಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮನೋವಿಜ್ಞಾನ, ಮಾನವಶಾಸ್ತ್ರ, ಪುರಾತತ್ವ ಶಾಸ್ತ್ರ ಪರಿಸರ ವಿಜ್ಞಾನ, ಪತ್ರಿಕೋದ್ಯಮ, ಲಲಿತಕಲೆ, ಹೋಟೆಲ್ ಮ್ಯಾನೇಜ್‌ಮೆಂಟ್, ಟೂರಿಸಮ್ ಇತ್ಯಾದಿ. ಜೊತೆಗೆ, ಯಾವುದಾದರೂ ವಿಷಯದಲ್ಲಿ ವಿಶೇಷವಾದ ಆಸಕ್ತಿಯಿದ್ದಲ್ಲಿ, ಬಿಎ (ಆನರ್ಸ್) ಮಾಡಬಹುದು.

ಕಲಾ ವಿಭಾಗದಲ್ಲಿ ಮಾಡಬಹುದಾದ ಇನ್ನಿತರ ಪ್ರಮುಖ ಕೋರ್ಸ್‌ಗಳೆಂದರೆ ಬಿಬಿಎ, ಬಿಕಾಂ/ಬಿಸಿಎ (ಕೆಲವು ವಿಶ್ವವಿದ್ಯಾಲಯಗಳಲ್ಲಿ), ಬಿಎಸ್‌ಡಬ್ಲು, ಬಿ.ಡಿಸೈನ್, ಎಲ್‌ಎಲ್‌ಬಿ (ಇಂಟಿಗ್ರೇಟೆಡ್), ಸಿಎ, ಸಿಎಸ್, ಐಎಎಸ್ (ಪದವಿಯ ನಂತರ) ಇತ್ಯಾದಿ. ಹಾಗಾಗಿ, ಕಲಾ ವಿಭಾಗ ವಿಸ್ತಾರವಾದ ಕ್ಷೇತ್ರ. ನಿಮ್ಮ ಆಸಕ್ತಿ, ಅಭಿರುಚಿಯಂತೆ ಕೋರ್ಸ್ ಆಯ್ಕೆ ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ.

5. ನನ್ನ ಮಗ ಪಿಯುಸಿ ಮುಗಿಸಿ, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸ್‌ಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾನೆ. ಅವನಿಗೆ ಮಾರ್ಗದರ್ಶನ ನೀಡಬಹುದೇ?
ಹೆಸರು, ಊರು ತಿಳಿಸಿಲ್ಲ.

ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್. ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ನಿಮ್ಮ ಮಗನ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನ ಬೇಕಾದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

6. ಬಿಕಾಂ ಪದವಿ ಪಡೆದ ಮೇಲೆ, ನಮಗೆ ಯಾವ ರೀತಿಯ ಉದ್ಯೋಗಾವಕಾಶಗಳು ದೊರೆಯುತ್ತವೆ?

ಹೆಸರು, ಊರು ತಿಳಿಸಿಲ್ಲ.

ಬಿಕಾಂ ಪದವೀಧರರಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಪದವಿಯ ನಂತರ ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್‌ಮೆಂಟ್, ಇನ್ಶ್ಯೂರೆನ್ಸ್‌, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.‌
ಜೊತೆಗೆ, ಬಿಕಾಂ ನಂತರ ಶಿಕ್ಷಣವನ್ನು ಮುಂದುವರೆಸಿ, ಸಿಎ (ಚಾರ್ಟೆಡ್ ಅಕೌಂಟೆಂಟ್), ಸಿಎಸ್ (ಕಂಪನಿ ಸೆಕ್ರೆಟರಿ), ಎಂಕಾಂ, ಎಂಬಿಎ ಮುಂತಾದ ಕೋರ್ಸ್‌ಗಳನ್ನು ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=jmijSoqBDVw

7. ನಾನು ಪಿಯುಸಿ ಪರೀಕ್ಷೆಯಲ್ಲಿ ಶೇ 54ರಷ್ಟು ಅಂಕ ಪಡೆದಿದ್ದೇನೆ. ಕೌಟುಂಬಿಕ ಸಮಸ್ಯೆಗಳಿಂದ ಓದಿ ಸರಿಯಾದ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ವೈದ್ಯಳಾಗಬೇಕೆಂಬುದು ನನ್ನ ಕನಸು. ನೀಟ್ ಪರೀಕ್ಷೆಗೆ ತಯಾರಿ ನಡೆಸಲು ಯೋಚಿಸಿದ್ದೇನೆ. ಆದರೆ, ವೈದ್ಯರಾಗೋಕೆ ತುಂಬಾ ಹಣ ಬೇಕು; ಜೊತೆಗೆ ತುಂಬಾ ಸಮಯ ಹಿಡಿಯುತ್ತೆ; ಹಾಗಾಗಿ ಬೋಧನಾ ಕೋರ್ಸ್‌ಗಳನ್ನು ಆಯ್ಕೆ ಮಾಡುವಂತೆ ನಮ್ಮ ತಾಯಿ ಹೇಳುತ್ತಿದ್ದಾರೆ. ವೈದ್ಯಳಾಗುವುದು ನನ್ನ ಕನಸು. ಈಗ ಏನು ಮಾಡಬಹುದು, ಸರ್?
ಹೆಸರು, ಊರು ತಿಳಿಸಿಲ್ಲ.

ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ಶೈಕ್ಷಣಿಕ ಕನಸುಗಳನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ, ಭಾರತದ ಪ್ರಮುಖ ಬ್ಯಾಂಕ್‌ಗಳು ಶಿಕ್ಷಣ ಸಾಲವನ್ನು ನೀಡುತ್ತಿವೆ. ವಿಶೇಷವಾಗಿ, ವಿದ್ಯಾರ್ಥಿನಿಯರಿಗೆ ರಿಯಾಯಿತಿ ದರದಲ್ಲಿ ಸಾಲವನ್ನು ನೀಡುವ ಯೋಜನೆಗಳೂ ಅನೇಕ ಬ್ಯಾಂಕ್‌ಗಳಲ್ಲಿವೆ. ಜೊತೆಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ, ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ. ಆ ಅನುಕೂಲಗಳನ್ನು ಪಡೆದುಕೊಳ್ಳಿ. ಮುಖ್ಯವಾಗಿ, ಎನ್‌ಇಇಟಿ(ನೀಟ್) ಪರೀಕ್ಷೆಯಲ್ಲಿ ಕನಿಷ್ಠ 600 (ಗರಿಷ್ಠ 720) ಅಂಕಗಳನ್ನು ಗಳಿಸಿ, ಸರ್ಕಾರಿ ಕೋಟಾದ ಸೀಟ್ ಪಡೆಯಲು ಪ್ರಯತ್ನಿಸಿ. ಶುಭಹಾರೈಕೆಗಳು.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು
shikshana@prajavani.co.in ಗೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.