1. ನಾನು ಪಿಯುಸಿ (ಕಲಾ ವಿಭಾಗ) ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಮುಂದೆ ಮಾಡಬಹುದಾದ ಕೋರ್ಸ್‌ಗಳಬಗ್ಗೆ ತಿಳಿಸಿ.
ಹೆಸರು, ಊರು ತಿಳಿಸಿಲ್ಲ
ಕಲಾ ವಿಭಾಗದಲ್ಲಿ, ಬೇರೆ ವಿಭಾಗಗಳಿಗಿಂತ ಅವಕಾಶಗಳು ಕಡಿಮೆ ಎನ್ನುವ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಆದರೆ, ಈಗ ಕಲಾ ವಿಭಾಗ ಸೇರಿದಂತೆ, ಸ್ಟೀಮ್ ( STEAM-ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಆರ್ಟ್ಸ್ ಮತ್ತು ಮ್ಯಾಥಮ್ಯಾಟಿಕ್ಸ್) ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಪಿಯುಸಿ ನಂತರ, ಬಿಎ ಪದವಿಯನ್ನು ಅನೇಕ ವಿಷಯಗಳಲ್ಲಿ ಮಾಡಬಹುದು. ಉದಾಹರಣೆಗೆ, ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮನೋವಿಜ್ಞಾನ, ಮಾನವಶಾಸ್ತ್ರ, ಪುರಾತತ್ವ ಶಾಸ್ತ್ರ, ಪರಿಸರ ವಿಜ್ಞಾನ, ಪತ್ರಿಕೋದ್ಯಮ, ಲಲಿತಕಲೆ, ಹೋಟೆಲ್ ಮ್ಯಾನೇಜ್‌ಮೆಂಟ್, ಟೂರಿಸಮ್ ಇತ್ಯಾದಿ. ಹಾಗೂ, ಯಾವುದಾದರೂ ವಿಷಯದಲ್ಲಿ ವಿಶೇಷವಾದ ಆಸಕ್ತಿಯಿದ್ದಲ್ಲಿ, ಬಿಎ(ಆನರ್ಸ್) ಮಾಡಬಹುದು.
ಕಲಾ ವಿಭಾಗದಲ್ಲಿ ಪಿಯುಸಿ ನಂತರ ಮಾಡಬಹುದಾದ ಇನ್ನಿತರ ಪ್ರಮುಖ ಕೋರ್ಸ್‌ಗಳೆಂದರೆ ಬಿಬಿಎ, ಬಿಕಾಂ/ಬಿಸಿಎ(ಕೆಲವು ವಿಶ್ವವಿದ್ಯಾಲಯಗಳಲ್ಲಿ), ಬಿಎಸ್‌ಡಬ್ಲ್ಯು, ಬಿ.ಡಿಸೈನ್, ಎಲ್‌ಎಲ್‌ಬಿ (ಇಂಟಿಗ್ರೇಟೆಡ್), ಸಿಎ, ಸಿಎಸ್, ಐಎಎಸ್ (ಪದವಿಯ ನಂತರ) ಇತ್ಯಾದಿ. ಇದಲ್ಲದೆ, ನಿಮ್ಮ ಆಸಕ್ತಿ ಮತ್ತು ಅವಶ್ಯಕತೆಗೆ ತಕ್ಕಂತೆ ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್‌ಗಳನ್ನೂ ಮಾಡಬಹುದು. ವಿಶೇಷವಾಗಿ, ಆನ್‌ಲೈನ್ ಮತ್ತು ದೂರಶಿಕ್ಷಣದ ಮುಖಾಂತರ ಪದವಿ ಕೋರ್ಸ್ ಸೇರಿದಂತೆ ಹಲವಾರು ಕೋರ್ಸ್‌ಗಳನ್ನು ಮಾಡಬಹುದು. ಹಾಗಾಗಿ, ಕಲಾ ವಿಭಾಗ ಅತ್ಯಂತ ವಿಸ್ತಾರವಾದ ಕ್ಷೇತ್ರ. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant
2. 2021ರಲ್ಲಿ ಬಿಸಿಎ (ಬ್ಯಾಚುಲರ್ಸ್ ಇನ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಮುಗಿಸಿದ್ದೇನೆ. ವೆಬ್ ಡೆವೆಲಪ್‌ಮೆಂಟ್, ಐಟಿ, ಎಂಸಿಎ ಕೋರ್ಸ್‌ಳಿಗೆ ಏನು ಓದಬೇಕು ತಿಳಿಸಿಕೊಡಿ.
ಪವನ್ ಕುಮಾರ್, ಬಳ್ಳಾರಿ
ವೆಬ್ ಡೆವೆಲಪರ್ ವೃತ್ತಿಗೆ ವೆಬ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್, ಎಚ್‌ಟಿಎಂಎಲ್, ಸಿಎಸ್‌ಎಸ್, ಜಾವಸ್ಕ್ರಿಪ್ಟ್ ಪಿಎಚ್‌ಪಿ, ರೂಬಿ, ಯುಐ, ಯುಎಕ್ಸ್ ಇತ್ಯಾದಿ ವಿಷಯಗಳಲ್ಲಿ ತಜ್ಞತೆಯ ಅವಶ್ಯಕತೆಯಿರುತ್ತದೆ. ಈ ವೃತ್ತಿ ಯಲ್ಲಿ, ನಿಮ್ಮ ಕಾರ್ಯಕ್ಷೇತ್ರದ ಅನುಸಾರ (ಡಿಸೈನ್, ಫ್ರಂಟ್ ಆ್ಯಂಡ್ ಬ್ಯಾಕ್ ಎಂಡ್) ಸೂಕ್ತವಾದ ಕೋರ್ಸ್‌ಗಳನ್ನು ಮಾಡಬೇಕು. ಮಾಹಿತಿ ತಂತ್ರಜ್ಞಾನ(ಐಟಿ) ವಿಸ್ತಾರವಾದ ಕ್ಷೇತ್ರ. ಹಾಗಾಗಿ, ನಿಮ್ಮ ಅಭಿರುಚಿಯಂತೆ ವೃತ್ತಿಯ ಆಯ್ಕೆ ಮಾಡಿ, ನಂತರ ಕೋರ್ಸ್ ಆಯ್ಕೆ ಮಾಡಬೇಕು. ನೀವು ಈಗಾಗಲೇ ಬಿಸಿಎ ಮಾಡಿರುವುದರಿಂದ, ಅದೇ ವಿಷಯಗಳಲ್ಲಿ ಹೆಚ್ಚಿನ ತಜ್ಞತೆಗಾಗಿ, ಎಂಸಿಎ ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
3. ಪಿಯುಸಿ ನಂತರ, ಸಿಎ ಮಾಡುವುದರ ಕುರಿತು ಸಲಹೆ ನೀಡಿ.
ಹೆಸರು, ಊರು ತಿಳಿಸಿಲ್ಲ
4. ನಾನು ಎರಡನೇ ವರ್ಷದ ಬಿಕಾಂ ಓದುತ್ತಿದ್ದೇನೆ. ಪಿಯುಸಿ ಆದಮೇಲೆ ಸಿಎ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಕಾರಣಾಂತರಗಳಿಂದ ಮಾಡಲು ಆಗಲಿಲ್ಲ. ಆದ್ದರಿಂದ, ಈಗ ಓದಬೇಕು ಎಂದುಕೊಂಡಿದ್ದೇನೆ. ಸಲಹೆ ನೀಡಿ.
ವರ್ಷ, ಬೆಂಗಳೂರು
* ಪಿಯುಸಿ ನಂತರ, ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಮೊದಲು ಫೌಂಡೇಷನ್ ಕೋರ್ಸ್ ಮಾಡಬೇಕು. ಫೌಂಡೇಷನ್ ಕೋರ್ಸ್ ನಂತರ, ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಕೋರ್ಸ್‌ಗೆ ನೋಂದಾಯಿಸಬೇಕು. ಬಿಕಾಂ (ಕನಿಷ್ಠ ಶೇ 55) ನಂತರ, ನೇರವಾಗಿ ಸಿಎ ಮಧ್ಯಂತರ ಕೋರ್ಸ್‌ಗೆ ಅರ್ಹತೆ ಸಿಗುತ್ತದೆ.
* ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ತರಬೇತಿಗಾಗಿ ಪ್ರಾಕ್ಟೀಸ್ ಮಾಡುತ್ತಿರುವ ಚಾರ್ಟೆಡ್ ಅಕೌಂಟೆಂಟ್ ಅವರಲ್ಲಿ ಸೇರಬೇಕು.
* ಕನಿಷ್ಠ ಎರಡೂವರೆ ವರ್ಷದ ತರಬೇತಿಯ ನಂತರ, ನೀವು ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.
* ಅಂತಿಮ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು.
ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.