ಕೊರೊನಾ ಸಂಕಷ್ಟ, ಗೊಂದಲಗಳ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಈಗಿನ ಪ್ರಶ್ನೆ ‘ಮುಂದೇನು’? ಎನ್ನುವುದು. ಎಲ್ಲ ಕಾಲಮಾನಕ್ಕೂ ಎಲ್ಲ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಪ್ರಶ್ನೆ ಇದು. ಆದರೆ ಕಳೆದ ಒಂದು ವರ್ಷದಿಂದ ಇದರ ಸ್ಥಿತಿ ಹೊಸ ರೂಪ ಪಡೆದಿದೆ ಅಷ್ಟೆ.
‘ಆಯ್ಕೆಗಳು ಗುರಿಗೆ ಕೀಲುಗಳಿದ್ದಂತೆ’ ಎನ್ನುತ್ತಾರೆ ಅಮೆರಿಕಾದ ಖ್ಯಾತ ಬರಹಗಾರ ಮಾರ್ಕಮ್. ಹೌದು, ಸರಿಯಾದ ಸಮಯದಲ್ಲಿ ಮಾಡುವ ಆಯ್ಕೆ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಪಿಯುಸಿ ಮುಗಿದ ನಂತರ ಮುಂದೇನು ಎಂದು ಯೋಚಿಸುವ ಬದಲು, ಎಸ್ಸೆಸ್ಸೆಲ್ಸಿ ನಂತರವೇ ಮುಂದಿನ ಭವಿಷ್ಯದ ದಾರಿಯನ್ನು ನಿರ್ಧರಿಸುವುದು ಒಳ್ಳೆಯದು. ಪಿಯುಸಿಯಲ್ಲಿ ಸೈನ್ಸ್, ಕಾಮರ್ಸ್, ಮತ್ತು ಆರ್ಟ್ಸ್‌ಗಳಿಗೆ ಸೇರುವವರೇ ಹೆಚ್ಚು. ಆದರೆ ಅದರ ಹೊರತಾಗಿಯೂ ಸಾಕಷ್ಟು ವೃತ್ತಿಪರ ಕೋರ್ಸ್‌ಗಳಿದ್ದು, ಆಸಕ್ತಿಯ ಕ್ಷೇತ್ರಗಳಲ್ಲಿಯೇ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
1. ರಾಜ್ಯದಲ್ಲಿ ಈಗಾಗಲೆ ಇರುವ 33 ಡಿಪ್ಲೊಮಾ ಕೋರ್ಸ್‌ಗಳ ಜೊತೆಗೆ ಈ ಬಾರಿ ಎಂಟು ಹೊಸ ಡಿಪ್ಲೊಮಾ ಕೋರ್ಸ್‌ಗಳು ಸೇರ್ಪಡೆಯಾಗಿವೆ. ಆಲ್ಟರ್‌ನೇಟಿವ್ ಎನರ್ಜಿ ಟೆಕ್ನಾಲಜೀಸ್, ಸೈಬರ್ ಭದ್ರತೆ, ಆಹಾರ ಸಂಸ್ಕರಣೆ, ಪ್ರವಾಸೋದ್ಯಮ , ಕ್ಲೌಡ್ ಕಂಪ್ಯೂಟಿಂಗ್, ಆಟೋಮೇಷನ್ ಮತ್ತು ರೋಬೊಟಿಕ್ಸ್, ನಿರ್ದೇಶನ ಮತ್ತು ಚಿತ್ರಕಥೆ ರಚನೆ, ಟಿ.ವಿ ಕಾರ್ಯಕ್ರಮಗಳ ನಿರ್ಮಾಣ ಹಾಗೂ ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ.
2. ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ – ಎರಡು ವರ್ಷ ಅವಧಿಯ ಈ ಕೋರ್ಸ್‌ನಲ್ಲಿ ಹೋಟೆಲ್ ಉದ್ಯಮದ ನಿರ್ವಹಣೆಯ ಬಗ್ಗೆ ಹಾಗೂ ಕೇಟರಿಂಗ್ ಸೌಲಭ್ಯಗಳ ಬಗ್ಗೆ ಕಲಿಸಲಾಗುತ್ತದೆ. ಓದಿದ ನಂತರ ಹೋಟೆಲ್‌ಗಳಲ್ಲಿ ಕೇಟರಿಂಗ್ ಆಫೀಸರ್ ಆಗಿ, ಕ್ಯಾಬಿನ್ ಸಿಬ್ಬಂದಿಯಾಗಿ, ಆತಿಥ್ಯ ನಿರ್ವಹಣಾ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸಬಹುದು.
3. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ - ಟಿವಿ, ರೇಡಿಯೊ ಅಥವಾ ಪತ್ರಿಕೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಉಳ್ಳವರು ಎಸ್ಸೆಸ್ಸೆಲ್ಸಿಯ ಆಧಾರದ ಮೇಲೆ ಪತ್ರಿಕೋದ್ಯಮದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಷಯದ ಆಧಾರದ ಮೇಲೆ ಆರು ತಿಂಗಳಿನಿಂದ ಹಿಡಿದು ಎರಡು ವರ್ಷಗಳವರೆಗಿನ ಕೋರ್ಸ್‌ಗಳೂ ಲಭ್ಯ.
4. ಫ್ಯಾಷನ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ - ಮೂರು ವರ್ಷಗಳ ಈ ಕೋರ್ಸ್ ಮುಗಿಸಿದವರು ವಸ್ತ್ರ ವಿನ್ಯಾಸಕರಾಗಿ, ಟೆಕ್ಸ್‌ಟೈಲ್ ವಿನ್ಯಾಸಕರಾಗಿ ಕೆಲಸ ಮಾಡಬಹುದು.
5. ಅಗ್ನಿ ಶಾಮಕ ವಿಷಯದಲ್ಲಿ ಡಿಪ್ಲೊಮಾ – ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಆರು ತಿಂಗಳ ಈ ಡಿಪ್ಲೊಮಾವನ್ನು ಮಾಡಬಹುದು.
ಎರಡು ಅಥವಾ ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಕಷ್ಟು ಡಿಪ್ಲೊಮಾ ಕೋರ್ಸ್‌ಗಳಿವೆ. ಗ್ರಾಫಿಕ್ ಡಿಸೈನ್, ಅನಿಮೇಷನ್, ಬಾಣಸಿಗ (ಶೆಫ್), ವಿಷ್ಯುವಲ್ ಆರ್ಟ್ಸ್, ಸೈಕಾಲಜಿ, ಲಲಿತ ಕಲೆ, ಛಾಯಾಚಿತ್ರ ಕಲೆ, ವಿಡಿಯೋಗ್ರಫಿ, ವೆಬ್ ಡಿಸೈನಿಂಗ್, ಗೇಮಿಂಗ್, ದಂತ ಯಂತ್ರಶಾಸ್ತ್ರ (ಡೆಂಟಲ್ ಮೆಕ್ಯಾನಿಕ್ಸ್), ಬ್ಯಾಂಕಿಂಗ್, ಸೇಫ್ಟಿ ಮತ್ತು ಇನ್ಶೂರೆನ್ಸ್, ದಂತ ನೈರ್ಮಲ್ಯ ತಜ್ಞ (ಡೆಂಟಲ್ ಹೈಜಿನಿಸ್ಟ್), ಸ್ಪೋಕನ್ ಇಂಗ್ಲಿಷ್, ಹಿಂದಿಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳು, ಸಾಮಾಜಿಕ ಜಾಲತಾಣ ನಿರ್ವಹಣೆ. ಡೀಸೆಲ್ ಮೆಕ್ಯಾನಿಕ್ಸ್ , ಸ್ಟೆನೊಗ್ರಫಿ, ಬ್ಯೂಟಿಷಿಯನ್ ಕೋರ್ಸ್‌ಗಳು… ಹೀಗೆ ವೃತ್ತಿಯನ್ನಾರಿಸಲು ಸಾಕಷ್ಟು ಅವಕಾಶಗಳಿವೆ.
6. ಅರೆ ವೈದ್ಯಕೀಯ /ಪ್ಯಾರಾ ಮೆಡಿಕಲ್ ಕೋರ್ಸ್‌ಗಳು- ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರು ಈ ಡಿಪ್ಲೊಮಾ ಕೋರ್ಸ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಆಸ್ಪತ್ರೆ ನೆರವು ಸಿಬ್ಬಂದಿ, ಗ್ರಾಮೀಣ ಆರೋಗ್ಯ ರಕ್ಷಣಾ ಸಿಬ್ಬಂದಿ, ಲ್ಯಾಬ್ ಟೆಕ್ನೀಷಿಯನ್, ಶುಶ್ರೂಷಾ ಸಹಾಯಕರು, ಎಕ್ಸ್ ರೇ ತಂತ್ರಜ್ಞಾನ, ಇಸಿಜಿ ತಂತ್ರಜ್ಞಾನ, ರೇಡಿಯೋಲಜಿ ಹಾಗೂ ಡಿಪ್ಲೊಮಾ ಇನ್ ಫಾರ್ಮಸಿ.
7. ಪ್ರವಾಸೋದ್ಯಮ- ಪ್ರಯಾಣ ಪ್ರಿಯರಿಗೆ, ಹೊಸ ಜಾಗಗಳ ಅನ್ವೇಷಣೆ ಮಾಡುವ ಹವ್ಯಾಸವಿರುವವರಿಗೆ ಇದು ಹೇಳಿ ಮಾಡಿಸಿದ ವೃತ್ತಿ. ಇದರಲ್ಲೂ ಹಲವು ವಿಶೇಷ ಕೋರ್ಸ್‌ಗಳಿವೆ. ಉದಾಹರಣೆಗೆ ವ್ಯಾಪಾರ ನಿರ್ವಹಣೆಯಲ್ಲಿ ಡಿಪ್ಲೊಮಾ (ಬ್ಯುಸಿನೆಸ್ ಮ್ಯಾನೇಜ್‌ಮೆಂಟ್), ಆಹಾರ ತಂತ್ರಜ್ಞಾನ (ಫುಡ್ ಟೆಕ್ನಾಲಜಿ) ಹಾಗೂ ಆತಿಥ್ಯ ನಿರ್ವಹಣೆ (ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್).
8. ನಟನೆಯಲ್ಲಿ ಆಸಕ್ತಿ ಇರುವವರಿಗಾಗಿಯೇ ಹಲವು ನಟನಾ ಸಂಸ್ಥೆಗಳಿವೆ. ಅಲ್ಲಿ ತರಬೇತಿ ಪಡೆದು ನಟನೆಯನ್ನೂ ವೃತ್ತಿಯಾಗಿಸಿಕೊಳ್ಳಬಹುದು.
ಈ ಕೋರ್ಸ್‌ಗಳನ್ನು ಮಾಡುವುದರಿಂದ ಒಂದಿಷ್ಟು ಅನುಕೂಲಗಳು ಇವೆ. ಕಡಿಮೆ ಸಮಯದಲ್ಲಿ ದುಡಿಯುವ ದಾರಿ ಹುಡುಕುವವರಿಗೆ ಇವು ವರದಾನ. ಆಯ್ಕೆಗೆ ಸಾಕಷ್ಟು ಅವಕಾಶಗಳಿರುವುದರಿಂದ ಆಸಕ್ತಿಯ ಕ್ಷೇತ್ರವನ್ನೇ ವೃತ್ತಿಯಾಗಿಸಿಕೊಳ್ಳಬಹುದು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗಬಲ್ಲವು. ಕಡಿಮೆ ಖರ್ಚಿನಲ್ಲಿ ವೃತ್ತಿಪರ ವಿಷಯಗಳನ್ನು ಓದಬಹುದು. ಹೆಚ್ಚಿನ ಕೋರ್ಸ್‌ಗಳು ಓದಿನ ಜೊತೆಗೆ ತರಬೇತಿಯನ್ನೂ ನೀಡುತ್ತವೆ.
ಯಾರದ್ದೋ ಬಲವಂತಕ್ಕೆ ಅಥವಾ ಪ್ರತಿಷ್ಠೆಗಾಗಿ ಇಷ್ಟವಿಲ್ಲದ ಕೋರ್ಸ್‌ಗಳಿಗೆ ಸೇರಿ ಸಮಯ, ನೆಮ್ಮದಿ ಮತ್ತು ಹಣ ಮೂರನ್ನೂ ವ್ಯಯ ಮಾಡುವುದರ ಬದಲು ಆಸಕ್ತಿಯ ಕ್ಷೇತ್ರವನ್ನೋ, ಹವ್ಯಾಸವನ್ನೋ ವೃತ್ತಿಯಾಗಿಸಿಕೊಳ್ಳುವುದು ಸರಿಯಲ್ಲವೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.