ಶಿಕ್ಷಣದಲ್ಲಿ ಕೃಷಿಯನ್ನು ಕಲಿಯಬೇಕು ಎಂದರೆ ಮಕ್ಕಳು ಪದವಿವರೆಗೂ ಕಾಯಬೇಕು. ಅದರ ಬದಲು ಶಾಲಾ ದಿನಗಳಲ್ಲಿಯೇ ಕೈತೋಟದ ಜೊತೆಗೆ ಕೃಷಿಯನ್ನೂ ಹೇಳಿಕೊಟ್ಟರೆ ಮಣ್ಣಿನೊಂದಿಗೆ ಅವರ ಸಂಬಂಧ ಗಟ್ಟಿಯಾಗಿ ಬೇರೂರುತ್ತದೆ. ಪ್ರಾಥಮಿಕ, ಪ್ರೌಢ ಹಂತದಲ್ಲಿಯೇ ಕೃಷಿ ಶಿಕ್ಷಣದಲ್ಲಿರಬೇಕು ಯಾಕೆ..? ಇಲ್ಲಿದೆ ವಿವರ.
ಅಂದು ಮಕ್ಕಳ ಬಳಿ ಪಾಠ ನಡುವೆ ಎಷ್ಟು ಮಂದಿ ಭತ್ತದ ಗದ್ದೆ ನಾಟಿ ನೋಡಿದ್ದೀರಿ? ಎಂದಾಗ, ತರಗತಿಯಲ್ಲಿ ಅರ್ಧಭಾಗದಷ್ಟು ಮಕ್ಕಳಿಂದ ನಾವು ನೋಡಿಲ್ಲ ಎಂಬ ಉತ್ತರ ಬಂದಿತು. ಇಂದಿನ ಆಧುನಿಕ ಶಿಕ್ಷಣದಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಪಠ್ಯ ಪುಸ್ತಕದ ಜ್ಞಾನವನ್ನು ಕಂಠಪಾಠ ಮಾಡಿಯೋ, ಸ್ಮಾರ್ಟ್ ಕ್ಲಾಸ್ ತರಗತಿಯಲ್ಲಿ ನೋಡಿಯೋ ಮಾತ್ರ ಮಕ್ಕಳು ತಿಳಿಯುತ್ತಾರೆ. ಅದರ ಹೊರತಾಗಿ ಕೃಷಿ ಚಟುವಟಿಕೆಗಳನ್ನು ಖುದ್ದಾಗಿ ವೀಕ್ಷಿಸಿ ಪ್ರಾಯೋಗಿಕ ಕಲಿಕೆಗೆ ತೆರೆದುಕೊಂಡರೆ ಕಲಿಕೆ ಹೆಚ್ಚು ಫಲಪ್ರದವಾಗುತ್ತದೆ.
ಭತ್ತದ ಗದ್ದೆಯ ಬಿತ್ತನೆ, ನಾಟಿ, ಪೈರು ಕಟಾವುಯೆಂಬುದು ಕೃಷಿ ಸಂಸ್ಕೃತಿಯ ಹೆಗ್ಗುರುತಾಗಿದೆ. ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುಗುಣವಾಗಿ ಜೋಳ, ಗೋಧಿ, ರಾಗಿ ಈ ಎಲ್ಲಾ ಬೆಳೆಗಳನ್ನು ಬೆಳೆಯುವ ವಿಧಾನ ಮಕ್ಕಳಿಗೆ ಅರಿವು ಮೂಡಬೇಕು. ಭತ್ತದ ಬೆಳೆ ಪ್ರಧಾನವಾಗಿರುವಲ್ಲಿ ಮಕ್ಕಳು ಗದ್ದೆಗಳಲ್ಲಿ ರೈತರ ಜೊತೆಗೆ ಕನಿಷ್ಠ ಒಂದು ದಿನವಾದರೂ ಭಾಗಿಯಾಗಲು ಶಿಕ್ಷಕರು ಅವಕಾಶ ಮಾಡಿಕೊಡಬೇಕಿದೆ. ಇದರಿಂದಾಗಿ ಮಕ್ಕಳಿಗೆ ಗ್ರಾಮೀಣ ಬದುಕಿನ ಕೆಲಸ ಕಾರ್ಯಗಳ ಬಗ್ಗೆ ಗೌರವ ಬೆಳೆಯುತ್ತದೆ. ಅದಲ್ಲದೇ ಆಯಾ ಕಾಲಘಟ್ಟಗಳಲ್ಲಿ ಭತ್ತದ ಬೆಳೆ ಬೆಳೆಯುವಲ್ಲಿ ಸಾಂಪ್ರದಾಯಿಕ ಪದ್ಧತಿ ಹಾಗೂ ಯಾಂತ್ರೀಕೃತ ಪದ್ಧತಿಗಳ ಪ್ರಾಮುಖ್ಯತೆ ತಿಳಿಯುತ್ತದೆ. ಬಿತ್ತನೆ, ನಾಟಿ, ಕಳೆ ತೆಗೆಯುವುದು, ಕಟಾವು, ಧಾನ್ಯ ಬೇರ್ಪಡಿಸುವಿಕೆ ಈ ಎಲ್ಲ ಹಂತಗಳ ವೀಕ್ಷಣೆ ಮಕ್ಕಳಿಗೆ ಋತುಮಾನಕ್ಕನುಗುವಾಗಿ ಕೃಷಿ ಚಟುವಟಿಕೆ ಸಾಗುವ ಬಗೆಯನ್ನು ತಿಳಿಸಿಕೊಡುತ್ತದೆ.ಮಕ್ಕಳು ಪ್ರಾಯೋಗಿಕವಾಗಿ ಕಲಿಯುವ ಈ ಚಟುವಟಿಕೆ ಕೇವಲ ಭತ್ತದ ಬೆಳೆಗೆ ಸೀಮಿತವಾಗಿರದೆ ಆಯಾ ಭೌಗೋಳಿಕ ಪರಿಸರದ ಎಲ್ಲಾ ಆಹಾರ ಬೆಳೆಗಳ ಬಗೆಗಿನ ತಿಳುವಳಿಕೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ.
ವಾಣಿಜ್ಯ ಬೆಳೆಗಳನ್ನು ಬೆಳೆಯುವ,ಅದನ್ನು ಮಾರುಕಟ್ಟೆಗೆ ಸಾಗಿಸುವ, ವ್ಯಾಪಾರ ಮಾಡುವ ವಿಧಾನವು ಆಹಾರ ಬೆಳೆಗಳಿಗಿಂತ ಭಿನ್ನವಾಗಿರುತ್ತದೆ. ಲವಂಗ, ಏಲಕ್ಕಿ, ಅರಶಿನ ,ಕಾಫಿ,ಟೀ,ಇಂತಹ ಬೆಳೆಗಳನ್ನು ಬೆಳೆಯುವ ವಿಧಾನವನ್ನು ಮಕ್ಕಳಿಗೆ ಪರಿಚಯ ಮಾಡಿಕೊಡಬೇಕಿದೆ. ಅಡಿಕೆ,ಕಾಳು ಮೆಣಸಿನಂತಹ ಬೆಳೆಗಳು ಅತಿವೃಷ್ಟಿಯಿಂದ ಕೊಳೆರೋಗಕ್ಕೆ ತುತ್ತಾಗದಂತೆ ತಡೆಯಲು ರೈತರು ಸಾಮಾನ್ಯವಾಗಿ ಮೈಲುತುತ್ತದ ದ್ರಾವಣ ಬಳಸುತ್ತಾರೆ. ಮೈಲು ತುತ್ತ( ಕಾಪರ್ ಸಲ್ಫೇಟ್), ಸುಣ್ಣ ಮತ್ತು ರಾಳವನ್ನು ( ಅಂಟು ಪದಾರ್ಥ) ಸರಿಯಾದ ಪ್ರಮಾಣದಲ್ಲಿ ಮಿಶ್ರ ಮಾಡಿ ದ್ರಾವಣ ತಯಾರಿಸುವ ವಿಧಾನ ಮತ್ತು ಮರದ ತುತ್ತ ತುದಿಗೆ ಆ ದ್ರಾವಣವನ್ನು ಸಿಂಪಡಿಸುವ ರೀತಿಯನ್ನು ಮಕ್ಕಳು ವೀಕ್ಷಣೆ ಮಾಡಲು ಅವಕಾಶ ನೀಡಿದಾಗ ಗಣಿತ ಮತ್ತು ವಿಜ್ಞಾನ ಎರಡೂ ವಿಷಯಗಳ ಪ್ರಾಯೋಗಿಕ ಕಲಿಕೆಯಾದಂತಾಗುತ್ತದೆ. ಕೃಷಿ ಪರಿಕರಗಳನ್ನು ಕೇವಲ ವಸ್ತು ಸಂಗ್ರಹಾಲಯಗಳಲ್ಲಿ ನೋಡದೆ ಆ ಪರಿಕರಗಳನ್ನು ನೈಜವಾಗಿ ನೋಡಿ,ಅದರ ನಿರ್ದಿಷ್ಟ ಉಪಯೋಗ ತಿಳಿಯುವುದು ಮಕ್ಕಳಿಗೆ ಒಂದು ವಿಶೇಷ ಅನುಭವ ನೀಡುತ್ತದೆ.
ತೋಟ ವೀಕ್ಷಣೆ ಕೇವಲ ಪ್ರಾಯೋಗಿಕ ಕಲಿಕೆಗೆ ನೆರವು ನೀಡುವುದಲ್ಲದೆ,ತೋಟದಲ್ಲಿ ಕಾಣಸಿಗುವ ಬಗೆ ಬಗೆಯ ಕೀಟಗಳು,ಹಳ್ಳ-ತೊರೆಯಂಚಿನಲ್ಲಿ ಕಾಣ ಸಿಗುವ ಏಡಿ ,ಕಪ್ಪೆಯಂತಹ ಜಲಚರಗಳನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸುತ್ತಾರೆ. ಪ್ರಶ್ನಿಸುವ, ತರ್ಕಿಸುವ ಕೌಶಲಗಳನ್ನು ಪಡೆಯುತ್ತಾರೆ. ನೀರಿನ ಸದುಪಯೋಗ, ಸಂರಕ್ಷಣೆ, ನೀರಾವರಿ ವಿಧಾನಗಳ ಬಗ್ಗೆ ತಿಳಿಯುವುದರ ಮೂಲಕ ನೀರಿನ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಡಲು ಶಾಲೆಯ ಹೊರಗೆ ನಡೆಯುವ ಈ ಕಲಿಕೆ ಸಹಾಯಕವಾಗುತ್ತದೆ.
ಕೃಷಿ ಭೂಮಿಗೆ ತೆರಳುವ ಕಾಲುದಾರಿ, ಬೇಲಿ, ಮಲೆನಾಡಿನ ಭಾಗದ ಹಳ್ಳಗಳ ಕಾಲು ಸಂಕ (ಮರದ ಸಹಾಯದಿಂದ ನಿರ್ಮಿಸಿದ ಕಿರು ಸೇತುವೆ), ಗದ್ದೆಯಂಚಿನಲ್ಲಿ ಕೆಸರಿನ ದಾರಿಯ ಹೆಜ್ಜೆಗಳು ಮಕ್ಕಳ ಬಾಲ್ಯಕ್ಕೊಂದು ಅದ್ಭುತವಾದ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತವೆ. ಕೆಲವೆಡೆ ತೋಟಗಳಲ್ಲಿ ಕಾಣಸಿಗುವ ತಿಗಣೆ( ಇಂಬಳ)ದಂತಹ ಹುಳುಗಳು ರಕ್ತ ಹೀರುವುದು, ಮುಟ್ಟಿದರೆ ಮುನಿಯಂತಹ ಸಣ್ಣ ಜಾತಿಯ ಮುಳ್ಳುಗಳು ಕಾಲಿಗೆ ತಾಗುವುದು ಇವೆಲ್ಲವೂ ರೈತಾಪಿ ಜನಗಳ ಜೀವನದ ದೈನಂದಿನ ಜೀವನದ ಭಾಗವೇ ಆಗಿದೆ ಎಂಬುದನ್ನು ಮಕ್ಕಳ ಅರಿವಿಗೆ ತರಲು ಈ ರೀತಿಯ ಕೃಷಿ ದರ್ಶನ ಚಟುವಟಿಕೆ ಸಹಾಯಕವಾಗುತ್ತದೆ.
ರೈತರು ಮತ್ತು ಕೃಷಿ ಕಾರ್ಮಿಕರ ಜೊತೆಗೆ ಮುಕ್ತವಾಗಿ ಮಾತನಾಡುವ ಅವಕಾಶ ನೀಡಿದಾಗ,ಮಕ್ಕಳ ಕುತೂಹಲಗಳಿಗೆ ಉತ್ತರ ಸಿಕ್ಕಂತಾಗುತ್ತದೆ.ಪಠ್ಯದಲ್ಲಿ ಕೇವಲ ನಿರ್ದಿಷ್ಟ ಸಾಲುಗಳಲ್ಲಿ ಕಲಿಯುವ ,ಅದರಿಂದ ಪಡೆಯುವ ಮಾಹಿತಿಗಿಂತ ರೈತರ ಸ್ವ ಅನುಭವದ ಮಾತುಗಳು ಮಕ್ಕಳ ಯೋಚನೆಯ ಹರಿವನ್ನು ಇನ್ನಷ್ಟು ವಿಶಾಲಗೊಳಿಸುತ್ತವೆ. 'ಕೈ ಕೆಸರಾದರೆ ಬಾಯಿ ಮೊಸರು' ಎಂಬ ನೈಜ ಜೀವನದ ಚಿತ್ರಣ ಮಕ್ಕಳಿಗೆ ಸಿಗಲು ಇಂತಹ ಕೃಷಿಯೊಂದಿಗಿನ ಒಡನಾಟದ ಪೂರಕ ಚಟುವಟಿಕೆಗಳನ್ನು ಶಿಕ್ಷಕರು ಹಮ್ಮಿಕೊಳ್ಳುವಂತಾಗಬೇಕು. ಪೋಷಕರು ಕೂಡ ಮಕ್ಕಳ ರಜಾ ದಿನಗಳಲ್ಲಿ ಕೃಷಿ ಕಾಯಕದ ವೀಕ್ಷಣೆಗೆ ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.