ADVERTISEMENT

ಕೋರ್ಸ್‌ ಕಾರ್ನರ್: ಕಡಿಮೆ ಶುಲ್ಕದ ಏರ್‌ಕ್ರಾಫ್ಟ್‌ ಡಿಸೈನ್ ಕೋರ್ಸ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 19:30 IST
Last Updated 2 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಮಾನ ಪ್ರಯಾಣ ಮಾಡಬಯಸುವ ಪ್ರತಿಯೊಬ್ಬರಿಗೂ ‘ಅಷ್ಟೊಂದು ಜನರನ್ನು ಹೊತ್ತ ವಿಮಾನ ಅದು ಹೇಗೆ ರೆಕ್ಕೆ ತೆರೆದ ಹಕ್ಕಿಯ ಹಾಗೆ ನಿರಂತರ ಹಾರುತ್ತದೆ’ ಎಂಬ ಕುತೂಹಲ ಸದಾ ಇರುತ್ತದೆ. ಮೊದಲ ಬಾರಿಗೆ ಪ್ರಯಾಣಿಸುವವರಂತೂ ಅದು ಟೇಕ್ ಆಫ್ ಆಗುವಾಗ, ಲ್ಯಾಂಡ್ ಆಗುವಾಗ ಜೀವ ಕೈಯಲ್ಲಿ ಹಿಡಿದು ಕೂತಿರುತ್ತಾರೆ.

ಸಾಮಾನ್ಯವಾಗಿ ದೇಶೀಯ ವಿಮಾನಗಳು ಏರಿಳಿಯುವಾಗ ಟರ್ಬುಲೆನ್ಸ್ ಹೆಚ್ಚು. ಆದರೆ ವಿದೇಶಿ ಕಂಪನಿಯ ವಿಮಾನಗಳ ಏರಿಳಿತ ನಯವಾಗಿರುತ್ತದೆ. ಈ ವ್ಯತ್ಯಾಸಕ್ಕೆ ವಿಮಾನಗಳಲ್ಲಿರುವ ಅತ್ಯುತ್ತಮ ವಿನ್ಯಾಸವೇ ಕಾರಣ ಎನ್ನುತ್ತಾರೆ ತಜ್ಞರು.

ಇಂಥ ವಿನ್ಯಾಸವೂ ಸೇರಿದಂತೆ, ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿವೆ. ಈಗ ಪ್ರಯಾಣ ದುದ್ದಕ್ಕೂ ಸುಖಾನುಭವ ಮತ್ತು ಭದ್ರತೆಯ ಭಾವ ನೀಡುವ ಸಾಮಾನ್ಯ ವಿಮಾನಗಳಿಂದ ಹಿಡಿದು ಎರಡಂತಸ್ತಿನ ಐಶಾರಾಮಿ ವಿಮಾನಗಳೂ ಆಕಾಶದಲ್ಲಿ ಹಾರಾಡುತ್ತಿವೆ. ಇನ್ನೇನು ಚಾಲಕರಿಲ್ಲದ ಆಟೊಪೈಲಟ್ ವಿಮಾನಗಳೂ ಬರಲಿವೆ. ಅಂಥ ವಿಮಾನಗಳ ವಿನ್ಯಾಸ ಮಾಡುವುದು ಹೇಗೆ ಎನ್ನುವುದನ್ನು ಕಲಿಯಲು ಕೇಂದ್ರ ಸರ್ಕಾರ (SWAYAM – Study Webs of Active – Learning for Young Aspiring Minds) ಆನ್‌ಲೈನ್ ಕೋರ್ಸ್ ಪ್ರಾರಂಭಿಸಿದೆ.

ADVERTISEMENT

ವಿದ್ಯಾರ್ಹತೆ: ಅಂಗೀಕೃತ ವಿವಿಯಲ್ಲಿ ಎಂಜಿನಿಯರಿಂಗ್, ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಅಧ್ಯಯನ ಕೈಗೊಂಡಿರುವ ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯಲು ಆರ್ಹರು.

ಅವಧಿ: 12 ವಾರಗಳು

ಪ್ರಾರಂಭ: 24 ಜನವರಿ 2022

ಪರೀಕ್ಷೆ: 23 ಎಪ್ರಿಲ್ 2022

ದಾಖಲಾತಿಗೆ ಕೊನೆಯ ದಿನಾಂಕ: 31 ಜನವರಿ 2022

ಪರೀಕ್ಷಾ ಶುಲ್ಕ: ₹1,000

ಎರೋಸ್ಪೇಸ್ ಎಂಜಿನಿಯರಿಂಗ್ ಮತ್ತು ಫ್ಲೆಂಟ್‌ ಮೆಕಾನಿಕ್ಸ್ ಶಾಖೆಗಳಡಿ ಬರುವ ಈ ಕೋರ್ಸ್‌ನಲ್ಲಿ ಒಟ್ಟು 12 ಮಾಡ್ಯೂಲ್‌ಗಳಿವೆ. ಆನ್‌ಲೈನ್ ಕೋರ್ಸ್ ಕಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಎಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ 3 ಕ್ರೆಡಿಟ್ ಪಾಯಿಂಟ್ ಸಿಗುತ್ತವೆ. ಡಿಆರ್‌ಡಿಓ, ಎಚ್ಎಎಲ್, ಬೋಯಿಂಗ್, ಏರ್‌ಬಸ್‌, ಬೆಲ್, ಮೆಕ್‌ಡೊನೆಲ್ ಡೌಗ್ಲಸ್, ಯುಎವಿ ಫ್ಯಾಕ್ಟರಿ, ಲಾಕ್‌ಹೀಡ್ ಮಾರ್ಟಿನ್ ಕಂಪನಿಗಳು ಈ ಕೋರ್ಸ್‌ಗೆ ಮಾನ್ಯತೆ ನೀಡಿ ಉದ್ಯೋಗಾವಕಾಶ ಕಲ್ಪಿಸುತ್ತವೆ.

ಪ್ರಯಾಣಿಕ ಸುರಕ್ಷತೆ, ಪೇಲೋಡ್, ಗಾತ್ರ, ಇಂಧನ ಸರಬರಾಜು ವ್ಯವಸ್ಥೆ, ಪ್ರೊಪೆಲ್ಶನ್, ದೌರ್ಬಲ್ಯ, ಸ್ಥಿರತೆ, ನಿಯಂತ್ರಣ ಮತ್ತು ಸುಲಭ ಚಾಲನಾ ತಂತ್ರಗಳಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಈ ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ. ಒಟ್ಟು 12 ಅಸೈನ್‌ಮೆಂಟ್‌ ಗಳಿರುತ್ತವೆ.

₹1,000 ಪರೀಕ್ಷಾ ಶುಲ್ಕ ಭರಿಸಿ, ಯಾವುದಾದರೂ ಆಯ್ದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. ಪರೀಕ್ಷೆಯ ಅವಧಿ ಮೂರು ಗಂಟೆಗಳು. ಕೋರ್ಸ್‌ ಪಾಸಾದ ನಂತರ, ಐಐಟಿ ಕಾನ್ಪುರ ಮತ್ತು NPTEL (National Program on Technology Enhanced Learning) ಗಳು ಜಂಟಿಯಾಗಿ ಪ್ರಮಾಣ ಪತ್ರವನ್ನು ನೀಡುತ್ತವೆ.

ಕೋರ್ಸ್‌ ಕುರಿತ ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ: https://onlinecourses.nptel.ac.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.