ADVERTISEMENT

ಉನ್ನತ ಶಿಕ್ಷಣಕ್ಕೆ ಅಮೆರಿಕ, ಅಮೆರಿಕ! ಹುಬ್ಬಳ್ಳಿಯಲ್ಲೇ ಕನಸು ಮೂಡಿಸಿದ ವಿ.ವಿಗಳು

ಸಿ.ಕೆ.ಮಹೇಂದ್ರ
Published 14 ಸೆಪ್ಟೆಂಬರ್ 2018, 14:34 IST
Last Updated 14 ಸೆಪ್ಟೆಂಬರ್ 2018, 14:34 IST
ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಕೇಟ್‌ ಅವರು ಕೆಎಲ್‌ಇ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಕೇಟ್‌ ಅವರು ಕೆಎಲ್‌ಇ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು   

ಹುಬ್ಬಳ್ಳಿಯಲ್ಲೇ ಅಮೆರಿಕ ಅನಾವರಗೊಂಡಿತ್ತು. ಅಲ್ಲಿನ 16 ವಿಶ್ವವಿದ್ಯಾಲಯಗಳಿಂದ ರೆಡ್‌ಕಾರ್ಪೆಟ್‌ ಆಹ್ವಾನ.

–ಇದು, ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ನನಸಾಗಿಸಲು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವು ಅಮೆರಿಕದ ವಿ.ವಿಗಳು ಹಾಗೂ ಬೆಂಗಳೂರಿನ ಯಶನ ಟ್ರಸ್ಟ್ ಜತೆ ಸೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಯುಎಸ್‌ ಯುನಿವರ್ಸಿಟಿ ಫೇರ್‌’ನಲ್ಲಿ ಕಂಡ ದೃಶ್ಯ.

ಇದೇ ಮೊದಲ ಸಲ ಇಂಥ ಮೇಳ ಆಯೋಜಿಸಿದ್ದರಿಂದ ವಿದ್ಯಾರ್ಥಿಗಳು ಮಾಹಿತಿ ಪಡೆಯಲು ಮುಗಿಬಿದ್ದು ಸೇರಿದ್ದರು. ಅಮೆರಿಕದಲ್ಲಿ ಶಿಕ್ಷಣ ಕೈಗೆಟಕುವ ಮಾತೇ ಎಂಬ ಪ್ರಶ್ನೆಗೆ ಮೇಳದಲ್ಲಿ ಉತ್ತರ ಸಿಕ್ಕಿತು. ಅಮೆರಿಕ ಹಂಬಲದ ವಿದ್ಯಾರ್ಥಿಗಳ ಮುಖದಲ್ಲಿ ನಗೆಯು ಮಿಂಚಿತು.

ADVERTISEMENT

ಬಿ.ಇ, ಎಂ.ಟೆಕ್‌, ಎಂ.ಬಿ.ಎ ಕೋರ್ಸ್‌ಗಳ ಬಗ್ಗೆ ಹೆಚ್ಚು ವಿದ್ಯಾರ್ಥಿಗಳು ಮಾಹಿತಿ ಪಡೆದರು. ಅಲ್ಲಿಗೆ ಓದಲು ಹೋಗಲು ವೀಸಾ ಪಡೆಯುವುದು ಹೇಗೆ? ಅಲ್ಲಿನ ಪ್ರವೇಶ ನೀತಿ, ಶುಲ್ಕ, ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಹಣಕಾಸಿನ ಸೌಲಭ್ಯ ಮುಂತಾದ ಬಗ್ಗೆ ಅಲ್ಲಿನ ವಿ.ವಿಗಳ ಅಧಿಕಾರಿಗಳು ಉತ್ತರಿಸಿದರು.

ಅರಿಝೋನ್‌ ಸ್ಟೇಟ್‌ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್‌ ಮೆಸ್ಯಾಚುಸೆಟ್ಸ್‌, ಡಲ್ಲಾಸ್‌ ಬ್ಯಾಪಿಸ್ಟ್ ಯೂನಿವರ್ಸಿಟಿ, ಡೆಕ್ಸಲ್‌ ಯೂನಿವರ್ಸಿಟಿ, ವರ್ಜಿನಿಯಾದ ಈಸ್ಟ್ ಕೋಸ್ಟ್‌ ಪಾಲಿಟೆಕ್ನಿಕ್‌ ಇನ್ಸ್‌ಸ್ಟಿಟ್ಯೂಟ್‌, ಕೆಕ್‌ ಗ್ರಾಜ್ಯುಯೇಟ್‌ ಯೂನಿವರ್ಸಿಟಿ, ನ್ಯೂಯಾರ್ಕ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ನ್ಯೂಯಾರ್ಕ್‌ ಯೂನಿವರ್ಸಿಟಿ, ನಾರ್ತ್‌ ಅಮೆರಿಕನ್ಯೂನಿವರ್ಸಿಟಿ, ರೋಚೆಸ್ಟರ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಿರಕ್ಯೂಸ್‌ಯೂನಿವರ್ಸಿಟಿ,ಯೂನಿವರ್ಸಿಟಿ ಆಫ್‌ ಬ್ರಿಡ್ಜ್‌ ಪೋರ್ಟ್‌,ಯೂನಿವರ್ಸಿಟಿ ಆಫ್‌ ಸೌತ್ ಕ್ಯಾಲಿಫೋರ್ನಿಯಾ,ಯೂನಿವರ್ಸಿಟಿ ಆಫ್‌ ವಿಸ್‌ಕೊನ್‌ಸಿನ್‌, ವೂಡ್‌ಬರಿಯೂನಿವರ್ಸಿಟಿ ಮೇಳದಲ್ಲಿ ಭಾಗವಹಿಸಿದ್ದವು.

ಹಣಕಾಸಿನ ಸಹಾಯ

‘ನಮ್ಮಲ್ಲಿ ವಿ.ವಿಗಳು ವಿವಿಧ ಉದ್ಯೋಗದಾತ ಕೈಗಾರಿಕೆಗಳ ಜತೆ ಉತ್ತಮ ಒಡನಾಟ ಹೊಂದಿರುತ್ತವೆ. ಕೈಗಾರಿಕೆಗಳಿಗೆ ಬೇಕಾದ ರೀತಿಯಲ್ಲಿ ಮಾನವ ಸಂಪನ್ಮೂಲ ಸೃಷ್ಟಿಸುವ ಕೆಲಸ ಮಾಡುತ್ತವೆ. ಹೀಗಾಗಿ ಉದ್ಯೋಗದ ಅವಕಾಶಗಳು ಹೆಚ್ಚು’ ಎಂದು ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಲಿಯಾನ ತಿಳಿಸಿದರು.

ಹಣಕಾಸಿನ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 20 ಗಂಟೆಗಳ ದುಡಿಮೆಯ ಅವಕಾಶವನ್ನು ಒದಗಿಸಿಕೊಡಲಾಗುವುದು. ಇಂಥ ನೂರಾರು ಕೆಲಸಗಳನ್ನು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಅವರಿಗೆ ಇಷ್ಟಬಂದ ಕೆಲಸ ಮಾಡಬಹುದು ಎಂದು ಹೇಳಿದರು.

‘ಓದಲು ಬೇಕಾದ ಹಣಕಾಸಿನ ನೆರವಿನ ಬಗ್ಗೆ ಹೆದರಬೇಕಿಲ್ಲ. ಶೇ 20ರಿಂದ ಶೇ 40ರಷ್ಟು ವಿದ್ಯಾರ್ಥಿ ವೇತನ ಸಿಗಲಿದೆ. ಮೆರಿಟ್‌ ಆಧರಿತ ವಿದ್ಯಾರ್ಥಿ ವೇತನ, ಶಿಷ್ಯಭತ್ಯೆ ಸಹ ಸಿಗ‌ಲಿದೆ’ ಎಂದು ರೋಚೆಸ್ಟರ್‌ ವಿ.ವಿಯ ಕ್ಯಾಥರೀನ್ ಹೇಳಿದರು.

ಕ್ಯಾಲಿಫೋರ್ನಿಯಾದ ವೂಡ್‌ಬರಿ ವಿ.ವಿಯ ಸುಧಾಕುಮಾರ್‌ ಪ್ರಕಾರ, ‘ಸಾಫ್ಟ್‌ ವೇರ್‌, ತಾಂತ್ರಿಕ ಉದ್ಯೋಗ ಸೃಷ್ಟಿಸುವಲ್ಲಿ ಕ್ಯಾಲಿಫೋರ್ನಿಯ ಜಗತ್ತಿನ ನಂಬರ್‌ 1 ಆಗಿದೆ. ನಮ್ಮ ವೂಡ್‌ಬರಿ ವಿ.ವಿ ಗುಣಮಟ್ಟದಲ್ಲಿ ಅಮೆರಿಕದಲ್ಲಿ 8ನೇ ಸ್ಥಾನದಲ್ಲಿದೆ. ಇಲ್ಲಿ ಕಲಿತವರು ಕೆಲಸದ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ’ ಎಂದು ವಿದ್ಯಾರ್ಥಿಗಳನ್ನು ಸೆಳೆದರು.

ಮೊದಲ ಎರಡು ಸೆಮಿಸ್ಟರ್‌ಗೆ ಕೆಲಸ ಮಾಡಿಕೊಂಡು ಓದುವ ಅವಕಾಶ ನೀಡುವುದಿಲ್ಲ. ಎರಡು ಸೆಮಿಸ್ಟರ್ ಬಳಿಕ ಸಿಒಪಿ (ಕರಿಕ್ಯುಲಂ ಪ್ರಾಕ್ಟೀಸ್‌ ಟ್ರೈನಿಂಗ್) ತರಬೇತಿ ನೀಡಲಾಗುವುದು. ಇದಾದ ಬಳಿಕ ವಿ.ವಿಯೇ ಪಾರ್ಟ್‌ ಟೈಂ ಕೆಲಸದ ಅವಕಾಶ ಒದಗಿಸಿಕೊಡುತ್ತದೆ. ಕೊನೇ ಸೆಮಿಸ್ಟರ್‌ ಇರುವಾಗ ಒಪಿಟಿ (ಆಪ್ಟಿಮಲ್‌ ಪ್ರಾಕ್ಟೀಸ್‌ ಟ್ರೈನಿಂಗ್‌) ತರಬೇತಿ ನೀಡಲಾಗುವುದು. ಈ ತರಬೇತಿಯಲ್ಲಿ ಪದವಿ ಬಳಿಕ ಉದ್ಯೋಗ ಹುಡುಕುವುದು ಹೇಗೆ? ಕಂಪನಿಗಳ ಜತೆ ವ್ಯವಹರಿಸುವುದು. ಉದ್ಯೋಗದ ಒಡಂಬಡಿಕೆಯ ಬಗ್ಗೆ ಕಲಿಸಿಕೊಡಲಾಗುವುದು ಎಂದು ತಿಳಿಸಿದರು.

ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದ್ದರೂ ಅಮೆರಿಕದಲ್ಲಿ ಓದಲು ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ದೇಶದ ಎಂಟು ನಗರಗಳಲ್ಲಿ ಇಂಥ ಮೇಳ ಆಯೋಜಿಸಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರಿದ್ದಾರೆ ಎಂದು ಬೆಂಗಳೂರಿನ ಯಶನ್‌ ಟ್ರಸ್ಟ್‌ನ ಶ್ವೇತಾ ಮುತ್ತಣ್ಣ ತಿಳಿಸಿದರು.

’ಅಮೆರಿಕದಲ್ಲಿ ಹಲವು ನಕಲಿ ವಿಶ್ವವಿದ್ಯಾಲಯಗಳು ಭಾರತೀಯ ವಿದ್ಯಾರ್ಥಿಗಳಿಗೆ ವಂಚಿಸುತ್ತಿವೆ. ಇದನ್ನು ತಡೆಯಲು ಅಮೆರಿಕ ಸರ್ಕಾರವೇ ಈ ಮೇಳ ಆಯೋಜಿಸಿದೆ. ನಮ್ಮ ಟ್ರಸ್ಟ್ ಇದರ ಸಹಯೋಗ ಪಡೆದಿದೆ’ ಎಂದರು.

ಶಿಕ್ಷಣ ಪಡೆಯಲು ಬ್ಯಾಂಕ್‌ಗಳು ಶೇ 50ರಷ್ಟು ಸಾಲ ನೀಡುತ್ತವೆ. ₹25ರಿಂದ 50 ಲಕ್ಷ ಇದ್ದರೆ ಎಂಜಿನಿಯರಿಂಗ್ ಪದವಿ ಪಡೆಯಬಹುದು. ವಿದ್ಯಾರ್ಥಿಗಳು ಅಲ್ಲಿ ಪಾರ್ಟ್‌ ಟೈಂ ಕೆಲಸ ಮಾಡುವ ಮೂಲಕ, ವಿ.ವಿ ಪ್ರೊಫೆಸರ್‌ಗಳಿಗೆ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಖರ್ಚಿಗೆ ಬೇಕಾದಷ್ಟು ದುಡಿಯುವ ಅವಕಾಶವೂ ಇದೆ. ಬುದ್ಧಿವಂತ ವಿದ್ಯಾರ್ಥಿಗಳಿಗೆ ಎಲ್ಲ ಶುಲ್ಕವನ್ನು ಕೆಲವು ವಿ.ವಿಗಳು ಮನ್ನಾ ಮಾಡುತ್ತವೆ ಎಂದು ಮಾಹಿತಿ ನೀಡಿದರು.

chea.org ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. ಚೆನ್ನೈನಲ್ಲಿರುವ ಅಮೆರಿಕ ಧೂತವಾಸದಲ್ಲಿ ವೀಸಾ, ಐ–20 ಫಾರ್ಮ್‌ ನೀಡಲಾಗುತ್ತದೆ ಎಂದರು.

ಅಮೆರಿಕವೇ ಏಕೆ ಬೇಕು?

ಉತ್ತರ ಕರ್ನಾಟಕದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರಿಗೆ ಸುಲಭವಾಗಿ ಕೆಲಸ ಸಿಗುವುದಿಲ್ಲ. ಗುಣಮಟ್ಟದ ಶಿಕ್ಷಣ ಇಲ್ಲ ಎಂದು ಸಾಕಷ್ಟು ಕಂಪನಿಗಳು ಹಿಂದೆ–ಮುಂದೆ ನೋಡುತ್ತವೆ. ಹೀಗಾಗಿ ಹೊರದೇಶದ ಪದವಿ ಭವಿಷ್ಯದ ಉದ್ಯೋಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಸಾಕಷ್ಟು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

‘ಇಲ್ಲಿ ಕಾಲೇಜುಗಳಿವೆ. ಆದರೆ ಉದ್ಯೋಗಕ್ಕೆ ಬೇಕಾದಂಥ ಶಿಕ್ಷಣ ಕೊಡುವುದಿಲ್ಲ. ಕ್ಯಾಂಪಸ್‌ ಸಂದರ್ಶನವೂ ಅಷ್ಟಕಷ್ಟೇ. ಸಂದರ್ಶನ ಎದುರಿಸುವಾಗ ಮುಜುಗರ ಎದುರಿಸಬೇಕಾಗುತ್ತದೆ. ಇಲ್ಲಿಯ ಶಿಕ್ಷಣದ ಬಗ್ಗೆ ಉದ್ಯೋಗದಾತ ಕಂಪನಿಗಳಿಗೆ ವಿಶ್ವಾಸ ಇಲ್ಲವಾಗಿದೆ. ಹೀಗಾಗಿ ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಉತ್ಸುಕವಾಗಿದ್ದೇವೆ’ ಎಂದರು.

‘ಇಲ್ಲಿಯ ಶಿಕ್ಷಣ ಸಂಸ್ಥೆಗಳು ಮನೋಧೋರಣೆ ಬದಲಿಸಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ರೀತಿಯ ಕೌಶಲ ಬೆಳೆಸಬೇಕು.ಬರೀ ಪಾಠ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗದು’ ಎಂದು ಪೋಷಕರಾದ ಶ್ರೀಧರ ಅಯ್ಯರ್‌ ತಿಳಿಸಿದರು.

ಅಮೆರಿಕ ಮತ್ತು ಕಾಲೇಜು ಬಂಕ್‌

‘ನಾವು ಕ್ಲಾಸ್‌ಗಳಿಗೆ ಬಂಕ್‌ ಹೊಡೆಯುತ್ತೇವೆ. ಅಮೆರಿಕದಲ್ಲೂ ಇದಕ್ಕೆ ಅವಕಾಶವಿದೆಯೇ? ಅಲ್ಲೂ ವಿದ್ಯಾರ್ಥಿಗಳು ಕಾಲೇಜಿಗೆ ಬಂಕ್‌ ಹೊಡೆಯುತ್ತಾರಾ‘ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆ ಮೇಳದಲ್ಲಿ ನಗೆ ಉಕ್ಕಿಸಿತು.

ಇದಕ್ಕೆ ಉತ್ತರಿಸಿದ ಸುಧಾಕುಮಾರ್‌, ‘ನಾವು ಅತ್ಯುತ್ತಮ ಬೋಧನೆ, ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇವೆ.ಕಾಲೇಜಿಗೆ ಬಂದು ಪಾಠ ಕೇಳುವುದು, ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ. ಕ್ಲಾಸ್‌ಗೆ ಬರಬೇಕೆಂದು ಯಾರನ್ನೂ ಒತ್ತಾಯಿಸುವುದಿಲ್ಲ. ಕಲಿಯಬೇಕು ಎಂಬ ಕನಸ್ಸಿದ್ದವರು ಕ್ಲಾಸ್‌ಗೆ ಬರಲೇಬೇಕಲ್ಲ’ ಎಂದು ಉತ್ತರಿಸಿದರು.

ವಾಪಸ್‌ ಬರುವೆ

ಅಮೆರಿಕದಲ್ಲಿ ಎಂ.ಟೆಕ್‌ ಮಾಡುವ ಕನಸಿದೆ. ಇಂಥ ಮೇಳ ಆಯೋಜಿಸಿದ್ದು, ಖುಷಿಯಾಗಿದೆ. ಇಷ್ಟು ಮಾಹಿತಿ ಪಡೆಯಲು ಕನ್ಸಲ್‌ಟೆನ್ಸಿ ಕೇಂದ್ರಗಳಿಗೆ ₹ 30 ಸಾವಿರ ಹಣ ಕೊಡಬೇಕಿತ್ತು. ಇಲ್ಲಿ ಉಚಿಯವಾಗಿಯೇ ಸಿಕ್ಕಿತು. ಸಾಕಷ್ಟು ಅನುಮಾನಗಳು ಬಗೆಹರಿದಿವೆ. ಅಲ್ಲಿ ಹೋಗಿ ಓದಬಹುದು ಎಂಬ ವಿಶ್ವಾಸ ಹೆಚ್ಚಾಯಿತು. ತಿಂಗಳಿಗೆ 11 ಡಾಲರ್‌ ಸಿಗುವ ಕೆಲಸವನ್ನೂ ಅಲ್ಲಿಯ ವಿ.ವಿಯೇ ಒದಗಿಸಲಿದೆ. ಓದಿದ ಬಳಿಕ ವಾಪಸ್‌ ದೇಶಕ್ಕೆ ಬರುವೆ. ಅಲ್ಲಿಯೇ ಕೆಲಸ ಮಾಡುವ ಉದ್ದೇಶ ಇಲ್ಲ.

-ಐಶ್ವರ್ಯ ಎಸ್‌.

ಬೆಂಗಳೂರಿಗೆ ಹೋಗುವುದು ತಪ್ಪಿತು

ಈ ಮಾಹಿತಿ ಪಡೆಯಲು ಬೆಂಗಳೂರಿಗೆ ಹೋಗುವುದು ಇದರಿಂದ ತಪ್ಪಿತು. ನನ್ನ ಮಗನದು ಬಿ.ಇ. ಮುಗಿದಿದೆ. ಎಂ.ಟೆಕ್‌ ಮಾಡಲು ಕಳುಹಿಸಬೇಕಾಗಿದೆ. ₹40ರಿಂದ 60 ಲಕ್ಷ ಬೇಕಾಗಬಹುದು. ಶಿಕ್ಷಣ ಸಾಲ ಪಡೆದು ಅಲ್ಲಿಗೆ ಕಳುಹಿಸಲು ನಿರ್ಧರಿಸಿದ್ದೇನೆ. ಕೆಲಸ ಮಾಡಿಕೊಂಡು ಓದಿದರೆ ಸ್ವಲ್ಪ ಖರ್ಚು ಕಡಿಮೆಯಾಗಬಹುದು. ಭವಿಷ್ಯದಲ್ಲಿ ಉತ್ತಮ ಉದ್ಯೋಗ ಸಿಗಬಹುದೆಂಬ ಆಸೆ ಇದೆ.

–ಶರಣಗೌಡ ಪಾಟೀಲ, ಪೋಷಕರು

ಅಲ್ಲಿಯ ಅನುಭವವೇ ಬೇರೆ

ಅಲ್ಲಿ ಎಂ.ಬಿ.ಎ ಮಾಡುವ ಆಸೆ ಇದೆ. ಅಮೆರಿಕದ ಅನುಭವವೇ ಬೇರೆ. ಇಡೀ ಜಗತ್ತಿನ ಜತೆ ತೆರೆದುಕೊಳ್ಳಬಹುದು. ಅಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗದು. ಇಲ್ಲಿ ಒಳ್ಳೆಯ ಕಾಲೇಜುಗಳಿವೆ. ಆದರೆ ಒಳ್ಳೆಯ ಅನುಭವ ಸಿಗುವುದಿಲ್ಲ.

‌-ಸಿ.ಎಸ್‌.ನಿಖಿತಾ

ಉದ್ಯೋಗ ಅವಕಾಶ ಕಡಿಮೆ

ನಮ್ಮಲ್ಲಿ ಉದ್ಯೋಗ ಅವಕಾಶ ಕಡಿಮೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಎಂಜಿನಿಯರಿಂಗ್ ಮಾಡಿದರೆ ಕಂಪನಿಗಳು ಹೆಚ್ಚು ಆಸಕ್ತಿ ತೋರುವುದಿಲ್ಲ. ಈ ಪದವಿಯ ಜತೆಗೆ ಅಮೆರಿಕದ ಪದವಿ ಇದ್ದರೆ ಉದ್ಯೋಗದ ಅವಕಾಶ ಹೆಚ್ಚು. ಉತ್ತಮ ಉದ್ಯೋಗ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಮುಂದಾಗಿರುವೆ.

–ನೀಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.