ADVERTISEMENT

ಇ–ಕೋರ್ಸ್ ಭಾಗ 4: ವೆಬ್‌ಡಿಸೈನಿಂಗ್ ಕೋರ್ಸ್

ಪ್ರಜಾವಾಣಿ ವಿಶೇಷ
Published 14 ಮೇ 2023, 22:31 IST
Last Updated 14 ಮೇ 2023, 22:31 IST
   

-ಸಿಬಂತಿ ಪದ್ಮನಾಭ ಕೆ.ವಿ.

ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ- ಆನ್‌ಲೈನ್ ಇರುವಿಕೆ ಪ್ರಸ್ತುತದ ಅನಿವಾರ್ಯ. ಕಟ್ಟಡ, ಕಚೇರಿ ಇನ್ನಿತರ ಸೌಕರ‍್ಯಗಳಿಗಿಂತಲೂ ಒಂದು ಸಂಸ್ಥೆಯ ವಿವರಗಳು ಅಂತರ್ಜಾಲದಲ್ಲಿ ಲಭ್ಯವಿವೆಯೇ, ಅವು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲಾಗಿದೆಯೇ ಎಂಬುದು ಜನರಿಗೆ ಮುಖ್ಯವಾಗುತ್ತದೆ. ಯಾವುದೇ ವ್ಯವಹಾರವನ್ನು ಆರಂಭಿಸುವುದಕ್ಕಿಂತ ಮುಂಚೆ ಆನ್‌ಲೈನ್‌ ವಿವರಗಳನ್ನು ಪರಿಶೀಲಿಸುವುದು ಇಂದಿನ ಕ್ರಮ. ಹೀಗಾಗಿ ಸಾಮಾನ್ಯ ಸಂಸ್ಥೆಗಳಿಂದ ತೊಡಗಿ ದೊಡ್ಡದೊಡ್ಡ ಕಂಪೆನಿಗಳವರೆಗೆ ಎಲ್ಲರೂ ತಮ್ಮದೇ ಆದ ವೆಬ್‌ಸೈಟನ್ನು ಹೊಂದಬೇಕೆಂದು ಬಯಸುತ್ತಾರೆ. ಪರಿಣಾಮ, ಜಾಲತಾಣಗಳನ್ನು ವಿನ್ಯಾಸಗೊಳಿಸುವವರಿಗೆ ಮತ್ತು ಅಭಿವೃದ್ಧಿಪಡಿಸುವವರಿಗೆ ಇಂದು ಎಲ್ಲಿಲ್ಲದ ಬೇಡಿಕೆ.

ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಜಾಲತಾಣಗಳನ್ನು ಅಭಿವೃದ್ಧಿಪಡಿಸಿಕೊಡುವುದಕ್ಕೆಂದೇ ಇಂದು ನೂರಾರು ಏಜೆನ್ಸಿಗಳಿವೆ; ಸ್ವತಂತ್ರವಾಗಿ ಕೆಲಸ ಮಾಡುವ ವ್ಯಕ್ತಿಗಳಿದ್ದಾರೆ. ವೆಬ್‌ಸೈಟ್‌ ಅಭಿವೃದ್ಧಿಪಡಿಸಿಕೊಡುವ ಕಂಪನಿಯ ಉದ್ಯೋಗಿಗಳಾಗಿಯೋ, ಸ್ವತಂತ್ರವಾಗಿಯೋ ಈ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಕೈತುಂಬ ಸಂಪಾದನೆಯಿದೆ. ಈ ಕ್ಷೇತ್ರಕ್ಕೆ ಎರಡು ರೀತಿ ಪ್ರವೇಶಿಸಬಹುದು: ಮೊದಲನೆಯದು, ಔಪಚಾರಿಕ ಎಂಜಿನಿಯರಿಂಗ್‌ ಪದವಿ ಪಡೆಯುವುದು; ಎರಡನೆಯದು, ಸ್ವತಂತ್ರವಾಗಿ ಅಭ್ಯಸಿಸುವುದು.

ADVERTISEMENT

ಔಪಚಾರಿಕ ಪದವಿಯಿಲ್ಲದೆಯೂ ಸ್ವಪ್ರಯತ್ನದಿಂದ ವೆಬ್‌ ಡೆವಲಪ್‌ಮೆಂಟ್‌ ಕಲಿತುಕೊಂಡು ಉತ್ತಮ ಬದುಕನ್ನು ರೂಪಿಸಿಕೊಂಡ ಸಾಕಷ್ಟು ಮಂದಿ ಇದ್ದಾರೆ. ಹೀಗೆ ಅಭ್ಯಾಸ ಮಾಡುವವರಿಗೆ ಹೇರಳ ಆನ್‌ಲೈನ್‌ ಕೋರ್ಸ್‌ಗಳು ಹಾಗೂ ಸಂಪನ್ಮೂಲಗಳಿವೆ.

ಏನಿದು ಕೋರ್ಸ್‌ ?

ವೆಬ್‌ಡಿಸೈನಿಂಗ್‌ ಅಥವಾ ವೆಬ್‌ ಡೆವಲಪ್‌ಮೆಂಟ್ಟ್‌ ಅನೇಕ ಕೌಶಲಗಳ ಒಂದು ಗುಚ್ಛ. ಈ ಕೌಶಲಗಳನ್ನು ಒಟ್ಟಾಗಿಯೂ ಕಲಿಯಬಹುದು, ಪ್ರತ್ಯೇಕವಾಗಿಯೂ ಅಭ್ಯಾಸ ಮಾಡಬಹುದು. ಜಾಲತಾಣ ಅಭಿವೃದ್ಧಿಪಡಿಸುವವರು ಎಚ್‌ಟಿಎಂಎಲ್‌, ಜಾವಾಸ್ಕ್ರಿಪ್ಟ್‌, ಸಿಎಸ್‌ಎಸ್‌ ಮುಂತಾದ ಕೋಡಿಂಗ್‌ ಭಾಷೆಗಳನ್ನು ಕಲಿಯುವುದು ಒಂದು ಪ್ರಾಥಮಿಕ ಅವಶ್ಯಕತೆ. ಕೋಡಿಂಗ್‌ ಇಲ್ಲದೆಯೂ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸುವುದಕ್ಕೆ ಇಂದು ಅವಕಾಶವಿದೆ. ಸಿದ್ಧ ಟೆಂಪ್ಲೆಟ್‌ಗಳನ್ನು ಒದಗಿಸುವ ಅನೇಕ ಆನ್‌ಲೈನ್‌ ವೇದಿಕೆಗಳಿದ್ದು, ಅವುಗಳನ್ನು ಬಳಸಿಕೊಂಡು ಜಾಲತಾಣಗಳನ್ನು ಸುಲಭವಾಗಿ ಅಭಿವೃದ್ಧಿಪಡಿಸಬಹುದು.

ಆದರೆ ಈ ದಾರಿಗೆ ಅನೇಕ ಮಿತಿಗಳಿವೆ. ಈ ಸಿದ್ಧ ವಿನ್ಯಾಸಗಳನ್ನು ಬಳಸಿಕೊಂಡು ನಮ್ಮ ಕಲ್ಪನೆಯ ವೆಬ್‌ಸೈಟ್‌ಗಳನ್ನು ರೂಪುಗೊಳಿಸುವುದು ಕಷ್ಟ. ಅವುಗಳಲ್ಲಿ ನಮ್ಮ ಅಪೇಕ್ಷೆಯ ಬದಲಾವಣೆಗಳನ್ನು ತರುವುದಕ್ಕೆ ಮತ್ತೆ ಕೋಡಿಂಗ್‌ ಜ್ಞಾನ ಅನಿವಾರ್ಯವಾಗುತ್ತದೆ. ಆರಂಭಿಕ ಹಂತದಲ್ಲಿ ಬ್ಲಾಗರ್‌, ಗೋಡ್ಯಾಡಿ, ವರ್ಡ್‌ಪ್ರೆಸ್‌, ಜೂಮ್ಲಾ, ದ್ರುಪಲ್‌, ಶಾಪಿಫೈ, ಮಜೆಂಟೊ, ವಿಕ್ಸ್‌ - ಮುಂತಾದ ವೇದಿಕೆಗಳನ್ನು ಬಳಸಿಕೊಂಡು ವೆಬ್‌ ವಿನ್ಯಾಸದ ಪ್ರಾಥಮಿಕ ಜ್ಞಾನ ಪಡೆದುಕೊಂಡು, ಮುಂದೆ ಹಂತಹಂತವಾಗಿ ಕೋಡಿಂಗ್‌ ತಿಳುವಳಿಕೆ ಪಡೆದುಕೊಳ್ಳುವುದು ಉತ್ತಮ.

ಯಾರಿಗೆ ಸೂಕ್ತ?

ಪಿಯುಸಿ ಪೂರೈಸಿದವರು, ಪದವಿ ವ್ಯಾಸಂಗ ಮಾಡುತ್ತಿರುವವರು ಧಾರಾಳವಾಗಿ ವೆಬ್‌ ಡಿಸೈನಿಂಗ್‌ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ವಿಜ್ಞಾನ ವಿಷಯಗಳ ಹಿನ್ನೆಲೆ ಇರುವವರಿಗೆ ಮಾತ್ರ ಇದು ಸೀಮಿತವಲ್ಲ. ಕಲೆ ಹಾಗೂ ವಾಣಿಜ್ಯ ವಿಭಾಗದವರೂ ತೊಡಗಿಸಿಕೊಳ್ಳಬಹುದು. ಕಂಪ್ಯೂಟರ್‌, ಇಂಟರ್ನೆಟ್‌ ಹಾಗೂ ಹಾಗೂ ಇಂಗ್ಲಿಷಿನ ಪ್ರಾಥಮಿಕ ಜ್ಞಾನ ಇದ್ದರೆ ಸಾಕು. ವಿನ್ಯಾಸ, ಸೌಂದರ್ಯಪ್ರಜ್ಞೆ, ಬಣ್ಣಗಳ ಸಂಯೋಜನೆಯ ಜ್ಞಾನ ಇದ್ದಷ್ಟು ಒಳ್ಳೆಯದು. ಬರವಣಿಗೆ ಕೌಶಲ ಇನ್ನೊಂದು ಅರ್ಹತೆ.

ಎಲ್ಲಿ ಲಭ್ಯ?

ಕೋಡಿಂಗ್‌ ಭಾಷೆಗಳನ್ನು ಕಲಿಯುವುದು ಕೊಂಚ ಕಷ್ಟ ಎನಿಸುವವರು ಆರಂಭಿಕ ಹಂತದಲ್ಲಿ ಸಿದ್ಧ ವಿನ್ಯಾಸಗಳ ಸಹಾಯದಿಂದ ಜಾಲತಾಣಗಳನ್ನು ಅಭಿವೃದ್ಧಿಪಡಿಸುವುದನ್ನು ಕಲಿಯಬಹುದು. ಈ ಯೂಟ್ಯೂಬ್‌ ಕೊಂಡಿಯು ಅಂತಹ ಅನೇಕ ವೇದಿಕೆಗಳನ್ನು ನಿಮಗೆ ಪರಿಚಯಿಸುತ್ತದೆ :https://www.youtube.com/watch?v=Pvi_metetxk

ಇನ್‌ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ವೆಬ್‌ ವಿನ್ಯಾಸ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಣ್ಣ ಹಾಗೂ ದೊಡ್ಡಕೋರ್ಸ್‌ಗಳ ಒಂದೇ ಕಡೆ ನೀಡುತ್ತದೆ. ಅಡೋಬ್‌ ಡ್ರೀಮ್‌ವೀವರ್‌, ಎಚ್‌ಟಿಎಂಎಲ್‌, ಸಿಎಸ್‌ಎಸ್‌, ಜಾವಾಸ್ಕ್ರಿಪ್ಟ್‌ನಂತಹ ಭಾಷೆಗಳನ್ನು ಪ್ರತ್ಯೇಕವಾಗಿ ಕಲಿಸುವ, ವೆಬ್‌ ವಿನ್ಯಾಸದ ಪಾಥಮಿಕ ತಿಳುವಳಿಕೆಯನ್ನು ನೀಡುವ ಅನೇಕ ಕೋರ್ಸ್‌ಗಳು ಇಲ್ಲಿವೆ. ವಿವರಗಳಿಗೆ ಲಿಂಕ್‌ ನೋಡಿ. :https://infyspringboard.onwingspan.com/  

 ಗೂಗಲ್‌ ಕಂಪನಿಯು ವೆಬ್‌ ಡೆವಲಪರ್‌ ಎಂಬ ವೃತ್ತಿಪರ ಕೋರ್ಸ್‌ ಅನ್ನು ಒದಗಿಸುತ್ತಿದ್ದು, ಇದು ವೆಬ್‌ಡೆವಲಪ್‌ಮೆಂಟ್‌ಗೆ ಸಂಬಂಧಿಸಿದ ಎಲ್ಲ ಕೌಶಲಗಳನ್ನೂ ಒಂದೇ ಕಡೆ ನೀಡುತ್ತದೆ. ಇದಕ್ಕೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ. ಲಿಂಕ್‌ ಇಲ್ಲಿದೆ:

https://learndigital.withgoogle.com/digitalgarage/course/web-developer

 ಗ್ರೇಟ್‌ ಲರ್ನಿಂಗ್‌ ಅಕಾಡೆಮಿಯು ವೆಬ್‌ ಅಭಿವೃದ್ಧಿಗೆ ಸಂಬಂಧಿಸಿದ ಐದು ಪ್ರತ್ಯೇಕ  ಕೋರ್ಸ್‌ಗಳನ್ನು ಉಚಿತವಾಗಿ ನೀಡುತ್ತದೆ. ಇಂಟ್ರೊಡಕ್ಷನ್‌ ಟು ವೆಬ್‌ ಡಿಸೈನಿಂಗ್‌, ಯುಐ/ ಯುಎಕ್ಸ್ ಫಾರ್‌ ಬಿಗಿನರ್ಸ್‌, ಫ್ರಂಟ್‌ ಎಂಡ್ ಡೆವಲಪ್‌ಮೆಂಟ್‌-‌ ಎಚ್‌ಇಎಂಎಲ್/ಸಿಎಸ್‌ಎಸ್‌ ಮುಂತಾದ ಕೋರ್ಸ್‌ಗಳಿವೆ. ಈ ಕೊಂಡಿ ನೋಡಿ: https://www.mygreatlearning.com/web-design/free-courses

(ಮುಂದಿನ ವಾರ: ಸೈಬರ್‌ ಸೆಕ್ಯೂರಿಟಿ ಕೋರ್ಸ್‌ಗಳು)

(ಲೇಖಕರು: ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ)

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.