ADVERTISEMENT

ಪ್ರಾಚೀನ ಭಾರತೀಯ ಸಾಮ್ರಾಜ್ಯಗಳ 16 ಮಹಾಜನಪದಗಳು

ಯು.ಟಿ. ಆಯಿಷಾ ಫರ್ಝಾನ
Published 24 ಅಕ್ಟೋಬರ್ 2024, 0:03 IST
Last Updated 24 ಅಕ್ಟೋಬರ್ 2024, 0:03 IST
   

16 ಮಹಾಜನಪದಗಳು ಪ್ರಾಚೀನ ಭಾರತೀಯ ಸಾಮ್ರಾಜ್ಯಗಳಾಗಿದ್ದು, ಇದು ಆರಂಭಿಕ ಐತಿಹಾಸಿಕ ಅವಧಿಯಲ್ಲಿ ಸುಮಾರು ಕ್ರಿ.ಪೂ 6 ರಿಂದ 4ನೇ ಶತಮಾನದವರೆಗೆ ಅಸ್ತಿತ್ವದಲ್ಲಿತ್ತು. ಪ್ರಾಚೀನ ಭಾರತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಈ ಪ್ರಬಲ ರಾಜ್ಯಗಳು ಅಸ್ತಿತ್ವದಲ್ಲಿದ್ದ ಕಾಲವು ಭಾರತೀಯ ನಾಗರಿಕತೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ದಾಖಲಾಗಿದೆ.

ಈ ಮಹಾಜನಪದಗಳು ಇಂದಿನ ಅಫ್ಘಾನಿಸ್ತಾನದಿಂದ ಬಂಗಾಳದವರೆಗೆ ವಿಸ್ತರಿಸಿರುವ ಇಂಡೋ-ಗಂಗಾ ಬಯಲಿನಲ್ಲಿ ನೆಲೆಗೊಂಡಿವೆ. ಬೌದ್ಧ ಮತ್ತು ಜೈನ ಪಠ್ಯಗಳಲ್ಲಿ ಅವುಗಳನ್ನು ಬಗ್ಗೆ ಉಲ್ಲೇಖಿಸಲಾಗಿದ್ದು,  ಇದು ಆ ಮಹಾಜನಪದಗಳ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ವಿವರವಾದ ಮಾಹಿತಿಗಳನ್ನು ಒದಗಿಸುತ್ತದೆ.

1. ಅಂಗ: ಭಾರತದ ಪೂರ್ವ ಭಾಗದಲ್ಲಿ ನೆಲೆಗೊಂಡಿರುವ ಅಂಗವು ಸಂಪತ್ತು ಮತ್ತು ವಾಣಿಜ್ಯಕ್ಕೆ ಹೆಸರುವಾಸಿಯಾಗಿದೆ. ಚಂಪಾ, ಅದರ ರಾಜಧಾನಿಯಾಗಿದ್ದು ಅಂದಿನ‌ ಕಾಲಕ್ಕೆ ಪ್ರಮುಖ ವ್ಯಾಪಾರ ಮಾರ್ಗಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿತ್ತು.

ADVERTISEMENT

2. ಮಗಧ: ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ ಒಂದಾದ ಮಗಧವು ಮೌರ್ಯ ಮತ್ತು ಗುಪ್ತ ಸಾಮ್ರಾಜ್ಯಗಳ ಉದಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಅದರ ರಾಜಧಾನಿಯಾದ ರಾಜಗೃಹವು ನಂತರ ಪಾಟಲಿಪುತ್ರಕ್ಕೆ ಸ್ಥಳಾಂತರಗೊಂಡಿದ್ದು ಇದು ಶಕ್ತಿ ಮತ್ತು ಸಂಸ್ಕೃತಿಯ ಅಪ್ರತಿಮ ಕೇಂದ್ರವಾಯಿತು.

 3. ವಜ್ಜಿ (ವೃಜ್ಜಿ): ಲಿಚ್ಚವಿಗಳು ಸೇರಿದಂತೆ ಹಲವು ಕುಲಗಳ ಒಕ್ಕೂಟವಾಗಿದ್ದು, ವಜ್ಜಿ ಗಣರಾಜ್ಯವು ಪ್ರಜಾಪ್ರಭುತ್ವದ ಆಡಳಿತಕ್ಕೆ ಹೆಸರುವಾಸಿಯಾಗಿದೆ. ವೈಶಾಲಿ, ಅದರ ರಾಜಧಾನಿಯಾಗಿತ್ತು. ಇದು ಬೌದ್ಧಧರ್ಮದ ಆರಂಭಿಕ ಕಾಲದ ಪ್ರಮುಖ ಕೇಂದ್ರವಾಯಿತು.

4. ಮಲ್ಲ: ಗಣರಾಜ್ಯ ಸರ್ಕಾರಕ್ಕೆ ಹೆಸರುವಾಸಿಯಾದ ಮಲ್ಲನಗರವನ್ನು ಕುಸಿನಗರ ಮತ್ತು ಪಾವದಲ್ಲಿ ರಾಜಧಾನಿಗಳನ್ನು ನಿರ್ಮಿಸಿ ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಬುದ್ಧನು ಮಹಾಪರಿನಿರ್ವಾಣವನ್ನು ಪಡೆದ ಸ್ಥಳವಾಗಿರುವುದಕ್ಕೆ ಇದು ಚಾರಿತ್ರಿಕವಾಗಿ ಅತ್ಯಂತ ಮಹತ್ವದ್ದಾಗಿದೆ.

5. ಕಾಶಿ : ವಾರಣಾಸಿಯಲ್ಲಿ ರಾಜಧಾನಿಯನ್ನು ಹೊಂದಿರುವ ಕಾಶಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿತ್ತು. ಕೋಸಲ ಮತ್ತು ಮಗಧದ ನಡುವೆ ಕೆಲವು ವಿಚಾರಗಳಲ್ಲಿ ಆಗಾಗ್ಗೆ ಸ್ಪರ್ಧೆ ನಡೆಯುತ್ತಿತ್ತು.

6. ಕೋಸಲ: ಕೋಸಲದ ರಾಜಧಾನಿ ಶ್ರಾವಸ್ತಿಯಾಗಿದ್ದು ಪ್ರಾಚೀನ ಭಾರತದಲ್ಲಿ ಪ್ರಭಾವಶಾಲಿ ಸಾಮ್ರಾಜ್ಯವಾಗಿತ್ತು. ಈ ಪ್ರದೇಶವು ಬುದ್ಧನ ಜೀವನದಲ್ಲಿ ಮಹತ್ವದ್ದಾಗಿದ್ದು, ಮತ್ತು ಅದರ ರಾಜ ಪ್ರಸೇನಜಿತ್ ಬುದ್ಧನ ಸಮಕಾಲೀನನಾಗಿದ್ದನು.

7. ವತ್ಸ : ಕೌಸಂಬಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿರುವ ವತ್ಸವು ತನ್ನ ವ್ಯಾಪಾರ ಮತ್ತು ಸಂಪತ್ತಿಗೆ ಹೆಸರುವಾಸಿಯಾಗಿತ್ತು. ಇದರ ದೊರೆ ಉದಯನ ಪ್ರಾಚೀನ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ವ್ಯಕ್ತಿಯಾಗಿದ್ದನು.

8. ಕುರು: ಹಸ್ತಿನಾಪುರ ಮತ್ತು ಇಂದ್ರಪ್ರಸ್ಥದ ಸುತ್ತ ಕೇಂದ್ರೀಕೃತವಾಗಿರುವ ಕುರು ಸಾಮ್ರಾಜ್ಯವು ಐತಿಹಾಸಿಕವಾಗಿ ಮಹಾಭಾರತ ಮಹಾಕಾವ್ಯದೊಂದಿಗೆ ನೇರವಾಗಿ ಸಂಬಂಧಿಸಿದೆ. ಕುರು ಸಾಮ್ರಾಜ್ಯವು ತನ್ನ ಯೋಧ ವರ್ಗಕ್ಕೆ ಹೆಸರುವಾಸಿಯಾಗಿತ್ತು.

9. ಪಾಂಚಾಲ : ಪಾಂಚಾಲವನ್ನು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದೆ.ಉತ್ತರ ಪಾಂಚಾಲವು ಅಹಿಚ್ಛತ್ರವನ್ನು ತನ್ನ ರಾಜಧಾನಿಯಾಗಿ ಮತ್ತು ದಕ್ಷಿಣ ಪಾಂಚಾಲವು ಕಂಪಿಲ್ಯವನ್ನು ತನ್ನ ರಾಜಧಾನಿಯಾಗಿ ಹೊಂದಿತ್ತು. ಇದು ಮಹಾಭಾರತದಲ್ಲಿ ಮಹತ್ವದ ಪಾತ್ರವನ್ನು ಹೊಂದಿತ್ತು.(ಪಾಂಚಾಲಿ ಎಂದು ದ್ರೌಪದಿಯನ್ನು ಕರೆಯಲಾಗುತ್ತದೆ.)

10. ಮತ್ಸ್ಯ: ವಿರಾಟ್ ನಗರದಲ್ಲಿ ತನ್ನ ರಾಜಧಾನಿಯನ್ನು ಹೊಂದಿರುವ ಮತ್ಸ್ಯವು ಇತರ ರಾಜ್ಯಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದರೂ ಮಹತ್ವದ್ದಾಗಿತ್ತು. ಇದು ಮಹಾಭಾರತದ ಅವಧಿಯಲ್ಲಿ ಪಾಂಡವರೊಂದಿಗೆ ನಿಕಟವಾದ ಸಂಬಂದವನ್ನು ಹೊಂದಿತ್ತು.

11. ಚೇದಿ : ಶುಕ್ತಿಮತಿಯಿಂದ ಆಳ್ವಿಕೆಗೆ ಒಳಗಾದ ಚೇದಿಯು ಬುಂದೇಲ್‌ಖಂಡ ಪ್ರದೇಶದಲ್ಲಿ ನೆಲೆಗೊಂಡಿತ್ತು. ಇದನ್ನು ಹಲವಾರು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ಉತ್ತರ ಭಾರತದ ರಾಜಕೀಯ ವಲಯದ ಒಂದು ಮಹತ್ವದ ಭಾಗವಾಗಿತ್ತು.

 12. ಸುರಸೇನ : ಮಥುರಾದಲ್ಲಿ ತನ್ನ ರಾಜಧಾನಿಯನ್ನು ಹೊಂದಿರುವ ಸುರಸೇನವು ಯಾದವ ರಾಜವಂಶದ ಮೇಲೆ ತನ್ನ ಪ್ರಭಾವಕ್ಕೆ ಹೆಸರುವಾಸಿಯಾಗಿತ್ತು. ಮಥುರಾ ಮಹತ್ವದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿತ್ತು. ವಿಶೇಷವಾಗಿ ಕೃಷ್ಣನ ಆರಾಧನೆಗಾಗಿ ಹೆಸರುವಾಸಿಯಾದ ನಗರವಾಗಿತ್ತು.

 13. ಅಸ್ಸಾಕ (ಅಶ್ಮಾಕ): ದಖ್ಖನ್ ಪ್ರಸ್ಥಭೂಮಿ ಪ್ರದೇಶದಲ್ಲಿ ನೆಲೆಗೊಂಡಿರುವ ಕೆಲವೇ ಮಹಾಜನಪದಗಳಲ್ಲಿ ಅಸ್ಸಾಕ ಒಂದಾಗಿದ್ದು ವಿಂಧ್ಯದ ದಕ್ಷಿಣಕ್ಕೆ ನೆಲೆಗೊಂಡಿವೆ. ಉತ್ತರದ ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಭಾವವನ್ನು ದಕ್ಷಿಣಕ್ಕೆ ವಿಸ್ತರಿಸುವಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸಿದೆ.

14. ಅವಂತಿ : ಅವಂತಿಯು ಉಜ್ಜಯಿನಿ ಮತ್ತು ಮಾಹಿಷ್ಮತಿ ಎಂಬ ಎರಡು ರಾಜಧಾನಿಗಳೊಂದಿಗೆ ಒಂದು ಪ್ರಮುಖ ರಾಜ್ಯವಾಗಿತ್ತು. ಇದು ಆ ಕಾಲದ ರಾಜಕೀಯದ ಪ್ರಮುಖ ಪ್ರದೇಶವಾಗಿದ್ದು, ನಂತರದಲ್ಲಿ ಮಗಧ ಸಾಮ್ರಾಜ್ಯದ ಭಾಗವಾಯಿತು.

15. ಗಾಂಧಾರ: ತಕ್ಷಶಿಲಾದಲ್ಲಿ ತನ್ನ ರಾಜಧಾನಿಯನ್ನು ಹೊಂದಿರುವ ಗಾಂಧಾರವು ಕಲಿಕೆ ಮತ್ತು ವ್ಯಾಪಾರದ ಕೇಂದ್ರವಾಗಿತ್ತು. ಇದು ಭಾರತವನ್ನು ಮಧ್ಯ ಏಷ್ಯಾ ಮತ್ತು ಪರ್ಷಿಯನ್ ಸಾಮ್ರಾಜ್ಯದೊಂದಿಗೆ ಸಂಪರ್ಕಿಸಿತು. ಹಾಗೂ ಬೌದ್ಧಧರ್ಮದ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿತು.

16. ಕಾಂಬೋಜ : ವಾಯುವ್ಯದಲ್ಲಿರುವ ಕಾಂಬೋಜವು ಕುದುರೆಗಳು ಮತ್ತು ಯೋಧರಿಗೆ ಹೆಸರುವಾಸಿಯಾಗಿದೆ. ಇದು ಪರ್ಷಿಯಾ ಮತ್ತು ಮಧ್ಯ ಏಷ್ಯಾದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿತ್ತು ಮತ್ತು ವಿಶಾಲವಾದ ಇಂಡೋ-ಆರ್ಯನ್ ಸಂಸ್ಕೃತಿಯ ಭಾಗವಾಗಿತ್ತು.

ಪಾಟಲಿಪುತ್ರ, ವಾರಣಾಸಿ ಮತ್ತು ಉಜ್ಜಯಿನಿಯಂತಹ ನಗರಗಳು ಸಂಸ್ಕೃತಿ ಮತ್ತು ಆಡಳಿತದ ಕೇಂದ್ರಗಳಾಗಿದ್ದವು. ಈ ರಾಜ್ಯಗಳು ಮೌರ್ಯರು ಮತ್ತು ಗುಪ್ತರಂತಹ ಮಹಾನ್ ಸಾಮ್ರಾಜ್ಯಗಳ ಉದಯಕ್ಕೆ ವೇದಿಕೆಯನ್ನು ಸ್ಥಾಪಿಸಿದವು. ಮಹಾಜನಪದ ಅವಧಿಯು ಪ್ರಾಚೀನ ಭಾರತದ ಸಾಮಾಜಿಕ-ರಾಜಕೀಯ ಜೀವನವನ್ನು ರೂಪಿಸುವಲ್ಲಿ ಪ್ರಮುಖವಾಗಿದ್ದು, ಭಾರತೀಯ ನಾಗರಿಕತೆಯ ವಿಕಾಸಕ್ಕೆ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡಿತು.

 ಮಹಾಜನಪದಗಳ ಪ್ರಮುಖ ಲಕ್ಷಣಗಳು 

ಭೌಗೋಳಿಕ ವಿತರಣೆ: ಈ ಮಹಾಜನಪದಗಳು ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಹರಡಿವೆಯಲ್ಲದೇ ಆಧುನಿಕ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ ಮತ್ತು ಇಂದಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕೆಲವು ಭಾಗಗಳನ್ನು ಒಳಗೊಂಡಿದೆ.

ಆಡಳಿತ: ಹೆಚ್ಚಿನ ಮಹಾಜನಪದಗಳು ರಾಜಪ್ರಭುತ್ವದಲ್ಲಿದ್ದರೂ, ಕೆಲವು ಗಣರಾಜ್ಯ ಅಥವಾ ಒಲಿಗಾರ್ಚಿಕಲ್ ವ್ಯವಸ್ಥೆಯನ್ನು ಹೊಂದಿದ್ದವು. ರಾಜರು ಅಥವಾ ಆಳುವ ಕುಟುಂಬಗಳು ಅವರನ್ನು ಹೆಚ್ಚಾಗಿ ನಿಯಂತ್ರಿಸುತ್ತಿದ್ದವು. ಈ ಗಣರಾಜ್ಯಗಳಲ್ಲಿ ಶ್ರೀಮಂತರ ಗುಂಪುಗಳು ಅಧಿಕಾರವನ್ನು ಹೊಂದಿದ್ದವು.

ಆರ್ಥಿಕ ಚಟುವಟಿಕೆ: ಕೃಷಿಯು ಆರ್ಥಿಕತೆಯ ಬೆನ್ನೆಲುಬಾಗಿತ್ತು. ವ್ಯಾಪಾರ ಮತ್ತು ಕರಕುಶಲ ಕಲೆಗಳೂ ಚಾಲ್ತಿಯಲ್ಲಿದ್ದವು. ವಾರಣಾಸಿ ಮತ್ತು ತಕ್ಷಶಿಲಾದಂತಹ ನಗರಗಳು ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು.

ಮಿಲಿಟರಿ ಬಲ: ಮಹಾಜನಪದಗಳು ಬಲವಾದ ಸೈನ್ಯವನ್ನು ಹೊಂದಿದ್ದು ಆಗಾಗ್ಗೆ ತಮ್ಮ ಪ್ರದೇಶ ಮತ್ತು ಪ್ರಭಾವವನ್ನು ವಿಸ್ತರಿಸಲು ಪರಸ್ಪರ ಯುದ್ಧಗಳಲ್ಲಿ ತೊಡಗಿದ್ದರು.

ಬೌದ್ಧ ಮತ್ತು ಜೈನ ಧರ್ಮದ ಉದಯ: ಮಹಾಜನಪದಗಳ ಅವಧಿಯಲ್ಲಿಯೇ ಬೌದ್ಧ ಮತ್ತು ಜೈನ ಧರ್ಮದಂತಹ ಧಾರ್ಮಿಕ ಚಳುವಳಿಗಳ ಉದಯವಾಯಿತು. ಇದು ಆ ಕಾಲದ ಸಾಮಾಜಿಕ-ಧಾರ್ಮಿಕ ರಚನೆಯನ್ನು ಹೆಚ್ಚು ಪ್ರಭಾವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.