ಮೊದಲೊಂದು ಕಾಲವಿತ್ತು. ಆಗ ‘ಮುಲ್ಕೀ’ (7ನೇ ತರಗತಿ) ಪಾಸಾದರೂ ಸಾಕು, ಸರ್ಕಾರಿ ನೌಕರಿ ಸಿಗುತ್ತಿತ್ತು. ಅಂಥವರನ್ನು ಊರಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು! ಅದರಲ್ಲೂ ‘ಮುಲ್ಕೀ ಮಾಸ್ತರ್’ ಎಂಬುದು ಪ್ರತಿಷ್ಠಿತ ಹುದ್ದೆಯಾಗಿತ್ತು. ಈಗ ಕಾಲ ಬದಲಾಗಿದೆ. ನೀವು ಒಂದು ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳಲು 7ನೇ ತರಗತಿಯಲ್ಲ, ಎಸ್ಸೆಸ್ಸೆಲ್ಸಿ, ಪಿಯುಸಿ ಓದಿದರೂ ಸಾಕಾಗುವುದಿಲ್ಲ.
ಎಸ್ಸೆಸ್ಸೆಲ್ಸಿ ಓದಿದರೆ ಆಯ್ದ ಕೆಲವು ‘ಗ್ರೂಪ್ ಡಿ’ ಹುದ್ದೆಗಳು, ಪಿಯು ಓದಿದವರಿಗೆ ಡ್ರೈವರ್, ಕಂಡಕ್ಟರ್, ಪೊಲೀಸ್, ಪೋಸ್ಟ್, ಮಿಲಿಟರಿಯಂಥ ಕೆಲ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಮಾತ್ರ ಕೆಲಸ ಸಿಗಬಹುದು. ಅದೂ ಕೂಡ ನೀವು ಅತ್ಯುತ್ತಮ ಶ್ರೇಣಿಯ ಅಂಕಗಳನ್ನು ಪಡೆದಿದ್ದು, ನಿಗದಿಪಡಿಸಿದ ತಾಂತ್ರಿಕ ಅರ್ಹತೆ, ದೈಹಿಕ ಸದೃಢತೆ ಮತ್ತು ಸಹಿಷ್ಣುತೆ ಹೊಂದಿದ ‘ಮೆರಿಟೆಡ್’ ವಿದ್ಯಾರ್ಥಿಯಾಗಿದ್ದರೆ ಮಾತ್ರ!
ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಅಥವಾ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳಬೇಕು ಎಂದರೆ ಶೈಕ್ಷಣಿಕ ಅರ್ಹತೆ ಕನಿಷ್ಠ ‘ಪದವಿ’ ಆಗಿರಬೇಕು. ಅನಿವಾರ್ಯವಾಗಿಯೋ ಅಥವಾ ಆಯ್ಕೆಯ ಮೂಲಕವೋ ಯಾವುದಾದರೂ ಪದವಿಯನ್ನು ಓದಿದವರು ಖಾಸಗಿ ಅಥವಾ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬಹುದು. ಆದರೆ, ‘ಪದವಿ’ ಅರ್ಹತೆಯ ಮೇಲೆ ನೇರವಾಗಿ ಯಾವುದೇ ಸರ್ಕಾರಿ ಹುದ್ದೆ ಸಿಗುವುದಿಲ್ಲ. ಇದಕ್ಕಾಗಿ ಬಯಸಿದ ಕ್ಷೇತ್ರ / ವೃತ್ತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಡ್ಡಾಯವಾಗಿ ಎದುರಿಸಲೇಬೇಕು. ಅದರಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆದು ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆಯಬೇಕು!
ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಮಹತ್ವದ ಹಾಗೂ ನಿರ್ಣಾಯಕ ಆಡಳಿತಾತ್ಮಕ ಹುದ್ದೆಗಳ ನೇಮಕಾತಿಗೂ ಪದವಿಯನ್ನು ಮೂಲ ಅರ್ಹತೆ ಎಂದು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಪದವಿ ಹಂತದಿಂದಲೇ ಸರಿಯಾದ ಸಿದ್ಧತೆ ನಡೆಸಿದರೆ ಯಶ ಪಡೆಯಲು ಸಾಧ್ಯ. ಇದೆಲ್ಲದಕ್ಕೂ ಮುನ್ನ ‘ಪದವಿ’ಯ ಬುನಾದಿ ಸುಭದ್ರವಾಗಿರಬೇಕು. ಅದಕ್ಕೆ ಕೋರ್ಸ್‌ಗೆ ಸೇರಿದ ಮೊದಲ ದಿನದಿಂದಲೇ ಅಧ್ಯಯನದತ್ತ ಗಮನ ಕೊಡಬೇಕು. ವ್ಯಕ್ತಿತ್ವವನ್ನು ಸಾಧನೆಯತ್ತ, ಅಧ್ಯಯನದತ್ತ, ಜವಾಬ್ದಾರಿ ಹೊರುವತ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.
ಸೆಮಿಸ್ಟರ್ ಕೋರ್ಸ್‌ನಲ್ಲಿ ಪರೀಕ್ಷಾ ಒತ್ತಡ ಜಾಸ್ತಿ ಇರುತ್ತದೆ. ಜಾಸ್ತಿ ಓದಬೇಕು ಎಂಬ ಒತ್ತಡದಲ್ಲಿ ಸಿಲುಕದಿರಿ. ವಾಸ್ತವವಾಗಿ ಒಂದು ವರ್ಷ ಪಠ್ಯವನ್ನು ಎರಡು ಭಾಗಗಳಾಗಿಸಿ ಅಧ್ಯಯನಕ್ಕೆ ಒದಗಿಸಲಾಗಿರುತ್ತದೆ. ಹೀಗಾಗಿ, ಸೆಮಿಸ್ಟರ್ ಕೋರ್ಸ್‌ನಲ್ಲಿ ಓದಬೇಕಾದ ವಿಷಯ ಕಡಿಮೆ ಇರುತ್ತದೆ. ಅಲ್ಲದೇ, ಸೆಮಿಸ್ಟರ್ ಸ್ಟ್ರೀಮ್ ಹೆಚ್ಚಿನ ಅಂಕಗಳನ್ನು ಪಡೆಯಲು ಪೂರಕವಾಗಿರುತ್ತದೆ.
ಪ್ರತಿ ಸೆಮಿಸ್ಟರ್‌ನಲ್ಲಿ ರಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವಜನೋತ್ಸವಗಳು, ಕ್ರೀಡಾಕೂಟಗಳು, NCC, NSS ಕ್ಯಾಂಪ್‌ಗಳು, ಪಠ್ಯೇತರ ಚಟುವಟಿಕೆಗಳು, ಮತ್ತಿತರ ಆಚರಣೆಗಳು ಇವೆಲ್ಲವನ್ನೂ ಹೊರತುಪಡಿಸಿ, ಅಧ್ಯಯನಕ್ಕೆ ವಾಸ್ತವವಾಗಿ ಸಿಗುವುದು ನಾಲ್ಕು ತಿಂಗಳು ಮಾತ್ರ. ಈ ನಾಲ್ಕು ತಿಂಗಳಿನಲ್ಲೇ ನಿತ್ಯದ ಅಧ್ಯಯನ, ಅಧ್ಯಾಪನ, ಅಸೈನ್‌ಮೆಂಟ್ಸ್, ಪ್ರಾಯೋಗಿಕ ತರಗತಿಗಳು, ಪರೀಕ್ಷಾ ತಯಾರಿ, ಪರೀಕ್ಷೆಗಳನ್ನು ಮುಗಿಸಿಕೊಳ್ಳಬೇಕು.
ಅಧ್ಯಯನದತ್ತ ಬದ್ಧತೆ ಪೂರ್ಣ ಪ್ರಮಾಣದಲ್ಲಿ ಇರಬೇಕು. ಸೆಮಿಸ್ಟರ್‌ನ ಆರಂಭದಲ್ಲಿ ನಿತ್ಯವೂ ಅಧ್ಯಯನಕ್ಕೆ ಕನಿಷ್ಠ ಮೂರು ಗಂಟೆಗಳನ್ನು ಮೀಸಲಾಗಿಡಬೇಕು. ಆಯಾ ದಿನ ತರಗತಿಗಳಲ್ಲಿ ಪ್ರಾಧ್ಯಾಪಕರು ಬೋಧಿಸಿದ ವಿಷಯಗಳನ್ನು ಮನೆಯಲ್ಲಿ ಓದಿಕೊಂಡು ಮನನ ಮಾಡಿಕೊಳ್ಳಬೇಕು. ಇದಕ್ಕೆ ವಿವಿಧ ಲೇಖಕರ ಅನುಸರಣಾ ಗ್ರಂಥಗಳನ್ನು ಓದಿಕೊಳ್ಳಬಹುದು. ಈ ರೀತಿ ಓದಿಕೊಳ್ಳುವಾಗ ಆಯಾ ಅಧ್ಯಾಯಕ್ಕೆ ಸಂಬಂಧಿಸಿದ ಕಿರು ಟಿಪ್ಪಣೆ ಸಿದ್ಧಪಡಿಸಿಕೊಳ್ಳಬೇಕು. ವಾರಾಂತ್ಯದ ರಜೆಯ ಅವಧಿಯಲ್ಲಿ ಆ ಕಿರು ಟಿಪ್ಪಣೆಯನ್ನು ಹಾಗೂ ಈ ಹಳೆಯ ಪ್ರಶ್ನೆಪತ್ರಿಕೆಗಳನ್ನು ಆಧಾರವಾಗಿ ಇಟ್ಟುಕೊಂಡು ವಿವರವಾದ ನೋಟ್ಸ್ ಅನ್ನು ನೀವು ಸಿದ್ಧಪಡಿಸಿಕೊಳ್ಳಬೇಕು.
‘ದೃಶ್ಯೀಕರಣ’ ಮರೆಯದಿರಿ: ನಿತ್ಯವೂ ಅಧ್ಯಯನದಲ್ಲಿ ತೊಡಗಿರುವಾಗ ಸಂಬಂಧಪಟ್ಟ ವಿಷಯದ ಒಂದು ಭಾಗವೇ ಆಗಿದ್ದೀರಿ ಎಂಬಂತೆ ಕಲ್ಪಿಸಿಕೊಂಡು ಓದಿ.
ಓದು ಹೇಗಿರಬೇಕು?
ಸಿಕ್ಕಿದ್ದೆಲ್ಲವನ್ನೂ ಸಿಕ್ಕಾಪಟ್ಟೆ ಓದದಿರಿ. ನಿಮ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಅಗತ್ಯವಿರುವಷ್ಟನ್ನು ಮಾತ್ರ ಓದಿ. ಈ ಹಂತದಲ್ಲಿ ನೀವೇ ಸಿದ್ಧಪಡಿಸಿಟ್ಟುಕೊಂಡಿರುವ ‘ನೋಟ್ಸ್’ ಅನ್ನು ತಪ್ಪದೇ ಓದಿ ಪುನಃಸ್ಮರಿಸಿಕೊಳ್ಳಿ.
ಗಂಟೆಗಟ್ಟಲೇ ಓದಿದ ನಂತರ ಒಂದೈದು ನಿಮಿಷ ಸುಮ್ಮನೇ ಕುಳಿತುಕೊಳ್ಳಿ. ‘ಸಬ್ ಕಾನ್ಸಿಯಸ್’ ಮನಸ್ಸಿನಲ್ಲಿ ನೀವು ಓದಿದ ವಿಷಯಗಳ ಪುನರಾವರ್ತನೆ ಮಾಡಿಕೊಳ್ಳಿ.
‘ಬೇಗ ಮಲಗಿ; ಬೇಗ ಏಳಿ’ ಎಂಬ ತತ್ವವನ್ನು ರೂಢಿಸಿಕೊಳ್ಳಿ. ತಿನ್ನುವಿಕೆ ಹಿತಮಿತವಾಗಿರಲಿ, ಓದು ನಿಯಮಿತವಾಗಿರಲಿ. ದೇಹ ಮತ್ತು ಮನಸ್ಸನ್ನು ಸದೃಢವಾಗಿ ಇಟ್ಟುಕೊಳ್ಳಿ.
ಯಶಸ್ಸಿಗೆ ‘ಗರುಡ ತಂತ್ರ’ ಪಾಲಿಸಿ!
ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಹಾಗೂ ಶಿಕಾರಿಪುರದ ಸಾಧನಾ ಅಕಾಡೆಮಿ ಸಂಸ್ಥಾಪಕ ಮಂಜುನಾಥ ಹೇಳುವಂತೆ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ‘ಗರುಡ ತಂತ್ರ’ ಅನುಸರಿಸಬೇಕು.
ಏಕಾಂತ ಅಧ್ಯಯನಕ್ಕೆ ಒತ್ತು ನೀಡಿ: ಗರುಡ ಒಂದು ವಿಶಿಷ್ಟ ಜೀವಿ. ಅದು ಎಂದಿಗೂ ಗುಂಪಿನಲ್ಲಿ ಹಾರುವುದಿಲ್ಲ. ಒಂದೇ ಹಾರುತ್ತದೆ. ಅದರಂತೆ, ದಿನಕ್ಕೆ ಕನಿಷ್ಠ 6 ಗಂಟೆ ನೀವೊಬ್ಬರೇ ಅಧ್ಯಯನ ಮಾಡಿ.
ಉನ್ನತ ಗುರಿ ಹೊಂದಿ: ಗರುಡ ಸಾಧ್ಯವಾದಷ್ಟು ಹೆಚ್ಚು ಎತ್ತರಕ್ಕೆ ಹಾರುತ್ತದೆ. ನಿತ್ಯವೂ ತನ್ನ ಹಾರುವಿಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತದೆ. ಅದರಂತೆಯೇ ನಿಮ್ಮ ಅಧ್ಯಯನ ಸಾಮರ್ಥ್ಯವನ್ನು ದಿನೇದಿನೇ ಹೆಚ್ಚಿಸಿಕೊಳ್ಳಿ.
ಸ್ಪಷ್ಟ ಮತ್ತು ನಿಖರ ಗುರಿ ಇರಲಿ: ಗರುಡ ಸಾವಿರಾರು ಅಡಿಗಳ ಎತ್ತರದಲ್ಲಿ ಹಾರುತ್ತಿದ್ದರೂ ಭೂಮಿಯ ಮೇಲಿನ ಬೇಟೆಯತ್ತ ಸ್ಪಷ್ಟ ಚಿತ್ತ ನೆಟ್ಟಿರುತ್ತದೆ. ಅದೇ ರೀತಿ ನಿಮ್ಮ ಗುರಿ ಉನ್ನತ ಸಾಧನೆಯತ್ತ ನೆಟ್ಟಿರಲಿ.
ಹಳೆಯದನ್ನು ಮರೆಯಿರಿ: ಗರುಡ ಸತ್ತ ಜೀವಿಯನ್ನು ತಿನ್ನುವುದಿಲ್ಲ. ಅದರಂತೆಯೇ ನೀವು ಗತಿಸಿದ ಅಪಯಶಸ್ಸು ಮರೆತು, ಮುಂದೇನು ಎಂದು ಯೋಚಿಸಿ, ಹೊಸತನ್ನು ಪಡೆಯಲು ಯತ್ನಿಸಿ.
ಸವಾಲುಗಳನ್ನು ಎದುರಿಸಿ: ಗರುಡ ಬಿರುಗಾಳಿ, ಮಳೆ ಇದ್ದರೂ ತನ್ನ ಪೂರ್ಣ ಸಾಮರ್ಥ್ಯ ಬಳಸಿ ಮೋಡಗಳನ್ನೂ ಮೀರಿ ಹಾರುತ್ತದೆ. ಅದರಂತೆಯೇ ಸವಾಲುಗಳನ್ನು ಎದುರಿಸಿ.
ಕಂಫರ್ಟ್ ಝೋನ್ ಬಿಡಿ: ಗರುಡದ ಮರಿಗಳು ಮೊಟ್ಟೆಯಿಂದ ಹೊರಬಂದಾಗ ತಾಯಿ ಗರುಡ ಗೂಡಿನಲ್ಲಿದ್ದ ಮೆತ್ತನೇ ಹುಲ್ಲು ಹಾಸನ್ನು ಕಿತ್ತೆಸೆಯುತ್ತದೆ. ನಿಮ್ಮ ‘ಅರಾಮ ವಲಯ’ದಿಂದ ಹೊರಬಂದು ಉನ್ನತ ಸಾಧನೆಗೆ ಪ್ರಯತ್ನಿಸಿ.
‘ರಿಚಾರ್ಜ್’ ಮತ್ತು ‘ರೀ ಸ್ಟಾರ್ಟ್’: ಗರುಡ 40 ವರ್ಷಕ್ಕೆ ತನಗೆ ಭಾರವಾದ ರೆಕ್ಕೆ, ಕೊಕ್ಕು, ಉಗುರುಗಳನ್ನು ಕಿತ್ತುಕೊಂಡು ಸುಮ್ಮನೇ ಒಂದೆಡೆ ಬಿದ್ದುಕೊಳ್ಳುತ್ತದೆ. 3 ತಿಂಗಳೊಳಗೆ ಹೊಸ ರೆಕ್ಕೆ, ಕೊಕ್ಕು, ಉಗುರುಗಳೊಂದಿಗೆ ಹೊರಬಂದು ಮತ್ತೆ 30 ವರ್ಷ ಬದುಕುತ್ತದೆ. ನೀವೂ ಅಷ್ಟೇ ನಿಮ್ಮ ದೌರ್ಬಲ್ಯ, ಜಾಡ್ಯಗಳಿಂದ ಹೊರಬಂದು ಯಶಸ್ಸಿನತ್ತ ‘ರಿಚಾರ್ಜ್’ ಆಗಿ, ‘ರೀ ಸ್ಟಾರ್ಟ್’ ಆಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.