ಕಳೆದ ಕೆಲವು ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ದತ್ತಾಂಶ ವಿಜ್ಞಾನ (ಡೇಟಾ ಸೈನ್ಸ್)ದ ಕೌಶಲದ ವ್ಯಾಪ್ತಿ ಅತ್ಯಂತ ವೇಗವಾಗಿ ವಿಸ್ತಾರಗೊಳ್ಳುತ್ತಿದೆ. ಎಲ್ಲಾ ಕ್ಷೇತ್ರಗಳ ಸಂಸ್ಥೆಗಳು ಕೃತಕ ಬುದ್ಧಿಮತ್ತೆ ಹಾಗೂ ಡೇಟಾ ಸೈನ್ಸ್ ಅನ್ನು ಹೆಚ್ಚು ಬಳಸುವತ್ತ ಗಮನಹರಿಸಿರುವುದರಿಂದ ಐಟಿ/ ಐಟಿಇಎಸ್ ಉದ್ಯಮವನ್ನೂ ಇದು ಮೀರಿ ಬೆಳೆದಿದೆ. ಉದ್ಯಮಗಳಿಂದ ಉತ್ಪತ್ತಿಯಾಗುವ ದೊಡ್ಡ ಪ್ರಮಾಣದ ದತ್ತಾಂಶಗಳಿಂದ ವಿಷಯಗಳನ್ನು ಹೊರತೆಗೆಯಲು ಈ ವಿಧಾನಗಳು ನೆರವಾಗುತ್ತವೆ. ಇದು ಉದ್ಯಮಗಳಿಗೆ ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳಲು, ಗ್ರಾಹಕರ ಅನುಭವವನ್ನು ಬದಲಾಯಿಸಲು, ಅನಗತ್ಯ ವಿಚಾರಗಳನ್ನು ಹಿಂಪಡೆಯಲು ಹಾಗೂ ಇತರೆ ಉಪಯುಕ್ತ ಉದ್ಯಮ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ.
ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಪರಿವರ್ತನೆಯ ಹಂತದಲ್ಲಿರುವ ಕೆಲ ಪ್ರಮುಖ ಕ್ಷೇತ್ರಗಳನ್ನು ನೋಡೋಣ.
ಬಿಎಫ್‌ಎಸ್‌ಐ (ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವೀಸಸ್ ಆ್ಯಂಡ್ ಇನ್ಶುರೆನ್ಸ್): ಹಣಕಾಸು ಕ್ಷೇತ್ರ ದೊಡ್ಡ ಪ್ರಮಾಣದ ದತ್ತಾಂಶವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ದಿನನಿತ್ಯ ಉತ್ಪತ್ತಿಯಾಗುವ ಅಪಾರ ಪ್ರಮಾಣದ ದತ್ತಾಂಶಗಳತ್ತ ಎಲ್ಲಾ ಆಯಾಮಗಳಲ್ಲಿ ಗಮನವಿಡುವ ಅಗತ್ಯವಿದೆ. ಅವ್ಯವಸ್ಥಿತ ದತ್ತಾಂಶ, ವಂಚನೆ ಪತ್ತೆ ಹಾಗೂ ಕಾರ್ಯನಿರ್ವಹಣೆಯಲ್ಲಿನ ಅದಕ್ಷತೆಯಂತಹ ಮಹತ್ವದ ಸವಾಲುಗಳನ್ನು ಎದುರಿಸಲು ಹಾಗೂ ಕ್ಷಿಪ್ರಗತಿಯಲ್ಲಿ ನಿರ್ಣಯ ಕೈಗೊಳ್ಳಲು ಬ್ಯಾಂಕುಗಳು ಈಗ ದೊಡ್ಡ ದತ್ತಾಂಶ ತಂತ್ರಜ್ಞಾನದ ಪ್ರಯೋಜನ ಪಡೆಯುತ್ತಿವೆ.
ಔಷಧ ಹಾಗೂ ಆರೋಗ್ಯ ಸೇವೆ: ಹೆಚ್ಚಿನ ಪ್ರಮಾಣದಲ್ಲಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆಯ ಅಳವಡಿಕೆಯಿಂದಾಗಿ ಔಷಧ ಕ್ಷೇತ್ರದಲ್ಲಿ ಮತ್ತು ಅಲ್ಲಿ ನಡೆಯುತ್ತಿರುವ ಸಂಶೋಧನೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ. ಔಷಧ ಆವಿಷ್ಕಾರ ಕ್ಷಿಪ್ರವಾಗಿ ನಡೆಯಲು ಹಾಗೂ ರೋಗಿಯ ವರ್ತನೆಯನ್ನು ಅರಿಯುವ ಮೂಲಕ ಕಾಯಿಲೆ ತಡೆಯಲು ಮತ್ತು ನಿಯಂತ್ರಿಸಲು ದತ್ತಾಂಶ ವಿಜ್ಞಾನ ನೆರವಾಗುತ್ತದೆ. ಹೆಚ್ಚಿನ ಮಟ್ಟದ ಅಧ್ಯಯನ ಮತ್ತು ತಂತ್ರಜ್ಞಾನ ಬಳಸಿ ವೈದ್ಯಕೀಯ ಹಾಗೂ ಪ್ರಯೋಗಾಲಯಗಳ ವರದಿಗಳಿಗೆ ದತ್ತಾಂಶ ವಿಜ್ಞಾನವು ದೊಡ್ಡ ಪ್ರಮಾಣದ ದತ್ತಾಂಶವನ್ನು ಪರಿಷ್ಕರಿಸುತ್ತದೆ. ಧರಿಸಬಹುದಾದ ಸಾಧನಗಳು ಉತ್ಪಾದಿಸುವ ದತ್ತಾಂಶದ ಮೇಲೆ ನಿಗಾ ಇಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.
ಇ-ಕಾಮರ್ಸ್: ಖರೀದಿ ಕುರಿತಂತೆ ಗ್ರಾಹಕರ ನಡವಳಿಕೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಇ-ಕಾಮರ್ಸ್ ಉದ್ಯಮಗಳಿಗೆ ದತ್ತಾಂಶ ವಿಜ್ಞಾನ ಗಮನಾರ್ಹ ಲಾಭ ಒದಗಿಸುತ್ತದೆ. ಉತ್ತಮವಾದ ಮಾರುಕಟ್ಟೆ, ವೈಯಕ್ತಿಕವಾಗಿ ಗುರಿ ಇಟ್ಟುಕೊಂಡಿರುವ ಜಾಹೀರಾತುಗಳು ಹಾಗೂ ಆಸಕ್ತಿದಾಯಕ ಉತ್ಪನ್ನಗಳ ಮೂಲಕ ಉದ್ಯಮಗಳು ಹೆಚ್ಚು ಗ್ರಾಹಕರನ್ನು ತಮ್ಮ ಜಾಲತಾಣದತ್ತ ಸೆಳೆಯಲು ಸಾಧ್ಯವಾಗುತ್ತದೆ. ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ (ಎನ್‌ಎಲ್‌ಪಿ)ಯಂತಹ ದತ್ತಾಂಶ ವಿಜ್ಞಾನ ತಂತ್ರಜ್ಞಾನವು ಉದ್ಯಮಗಳಿಗೆ ಅವುಗಳ ಉತ್ಪನ್ನಗಳು ಹಾಗೂ ಒದಗಿಸುವ ಸೇವೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ನೆರವಾಗುತ್ತದೆ.
ಮಾಧ್ಯಮ ಹಾಗೂ ಮನರಂಜನೆ: ಸ್ಮಾರ್ಟ್ ಫೋನ್‌ಗಳು ಜನಸಾಮಾನ್ಯರ ಕೈಗೆಟಕುತ್ತಿರುವ ಈ ಸಂದರ್ಭದಲ್ಲಿ ಡಿಜಿಟಲ್ ಮಾಹಿತಿ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಗ್ರಾಹಕರ ಮಾಧ್ಯಮ ವೀಕ್ಷಣೆ/ ಬಳಕೆ ಆಯ್ಕೆಯನ್ನು ಅರಿತು ತಮ್ಮದೇ ಕ್ಷೇತ್ರದ ಇತರೆ ಸಂಸ್ಥೆಗಳಿಗಿಂತ ಭಿನ್ನವಾಗಿರಲು ಬಹುತೇಕ ಸಂಸ್ಥೆಗಳು ದತ್ತಾಂಶ ವಿಜ್ಞಾನದಲ್ಲಿ ಬಂಡವಾಳ ಹೂಡುತ್ತಿವೆ. ದತ್ತಾಂಶ ವಿಜ್ಞಾನ ವಿಧಾನಗಳು ಕ್ಷಿಪ್ರ ಗತಿಯಲ್ಲಿ ಅತ್ಯುಪಯುಕ್ತ ಮಾಹಿತಿಗಳನ್ನು ಕಲೆ ಹಾಕಬಲ್ಲವು. ಬಹು ಮಾಧ್ಯಮಗಳಲ್ಲಿ (ಕ್ರಾಸ್ ಚಾನೆಲ್) ತಡಕಾಡಿ ಮಾಹಿತಿ ಪತ್ತೆ ಹಚ್ಚುವ ಮೂಲಕ ವೈಯಕ್ತಿಕ ಆಸಕ್ತಿಗೆ ಅನುಗುಣವಾಗಿ ಆಯ್ಕೆ ನೀಡಬಹುದು. ಸಂದೇಶಗಳ ಮೂಲಕ ಸಂಭಾವ್ಯ ಗ್ರಾಹಕರ ಮೇಲೆ ಪ್ರಭಾವ ಬೀರಲು ಹಾಗೂ ಅವರಿಗೆ ತಮ್ಮ ಸೇವೆಗಳನ್ನು ಮುಂದುವರಿಸಲು ನೆರವಾಗುತ್ತದೆ.
(ಲೇಖಕ: ಸಹ ಸಂಸ್ಥಾಪಕರು, ಗ್ರೇಟ್ ಲರ್ನಿಂಗ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.