ADVERTISEMENT

ಕೃತಕ ಬುದ್ಧಿಮತ್ತೆ ನೆರವಿನೊಂದಿಗೆ ಸರಳ ಇಂಗ್ಲಿಷ್‌ ಕಲಿಕೆಗೆ ‘ತಾರಾ’

ಸುಬ್ರಹ್ಮಣ್ಯ ಎಚ್.ಎಂ
Published 29 ಆಗಸ್ಟ್ 2021, 19:30 IST
Last Updated 29 ಆಗಸ್ಟ್ 2021, 19:30 IST
ತಾರಾ ಉಪಕರಣ ಮೂಲಕ ವಿದ್ಯಾರ್ಥಿಗಳ ಕಲಿಕೆ
ತಾರಾ ಉಪಕರಣ ಮೂಲಕ ವಿದ್ಯಾರ್ಥಿಗಳ ಕಲಿಕೆ   

ಶಿಕ್ಷಣ ಪರಿವರ್ತನೆಯ ಹಾದಿಗೆ ದಿಕ್ಸೂಚಿ. ಸುಂದರ ಹೂವಿನಂತೆ ಬದುಕು ಅರಳಲು ಶಿಕ್ಷಣವೇ ಶಕ್ತಿ ಎಂಬ ಅರಿವು ಬಂದಾಗಿದೆ. ಈಗಾಗಲೇ ಶಿಕ್ಷಣದೊಂದಿಗೆ ತಂತ್ರಜ್ಞಾನವೂ ಸಮ್ಮಿಳಿತಗೊಂಡಿದೆ. ಆದರೆ, ದೇಶದ ಸಣ್ಣ ಮಟ್ಟದ ನಗರ, ಪಟ್ಟಣ ಪ್ರದೇಶ, ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಈಗಲೂ ಇಂಗ್ಲಿಷ್‌ ಬೆದರು ಬೊಂಬೆಯಾಗಿಯೇ ನಿಂತಿದೆ.

ಈ ನಿಟ್ಟಿನಲ್ಲಿ ಇಂಗ್ಲಿಷ್‌ ಗೊತ್ತಿಲ್ಲದ ಪರಿಸರದಲ್ಲಿ ‘ತಾರಾ’ ಇಂಗ್ಲಿಷ್ ಕಲಿಸುವ ‘ಶಿಕ್ಷಕಿ’ಯಾಗಿ ಈಗಾಗಲೇ ಹಲವು ರಾಜ್ಯಗಳಲ್ಲಿ ನಿರತಳಾಗಿದ್ದಾಳೆ. ಶಾಲಾ ಪಠ್ಯಕ್ಕೆ ಅನುಗುಣವಾಗಿ ಆರಂಭಿಕ ಹಂತದಿಂದಲೇ ಇಂಗ್ಲಿಷ್‌ ಕಲಿಕೆ ಇದರ ಹೆಗ್ಗಳಿಕೆ. ಪರಸ್ಪರ ಕ್ರಿಯಾತ್ಮಕ ಸಂವಹನದ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರನ್ನು ಸಕ್ರಿಯಗೊಳಿಸುವುದೇ ಇದರ ವಿಶೇಷ.

ಏನಿದು ‌‘ತಾರಾ’?
ಇಂಗ್ಲಿಷ್‌ ಕಲಿಕೆಗೆ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನ ನೆರವಿನಿಂದ ರೂಪಿಸಿರುವ ಎಲೆಕ್ಟ್ರಾನಿಕ್‌ ಉಪಕರಣ. ಧ್ವನಿ ಆಧಾರಿತ ‘ತಾರಾ’ ಇಂಗ್ಲಿಷ್‌ ಗೊತ್ತಿಲ್ಲದವರ ಅಚ್ಚುಮೆಚ್ಚಿನ ಶಿಕ್ಷಕಿ. ಕಲಿಕೆ, ಪುನರ್‌ ಮನನ, ಪ್ರಯೋಗ ಮತ್ತುಪ್ರಯತ್ನದ ತಂತ್ರಜ್ಞಾನ ಆಧಾರಿತ ವ್ಯವಸ್ಥೆ. ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ‌ ಅಗತ್ಯವಾಗಿರುವ ಸಂದರ್ಭದಲ್ಲಿ ‘ತಾರಾ’ ಪ್ರಮುಖ ಪಾತ್ರ ವಹಿಸಿದೆ.

ADVERTISEMENT

ಪ್ರಶ್ನೆ, ಸಂದೇಹಗಳಿಗೆ ಉತ್ತರ ನೀಡುವ ಧ್ವನಿ ಆಧಾರಿತ ತಂತ್ರಜ್ಞಾನ ‘ಅಲೆಕ್ಸಾ’ ಮಾದರಿಯಲ್ಲಿ ‘ಲರ್ನಿಂಗ್‌ ಮ್ಯಾಟರ್ಸ್‌’ ಕಂಪನಿಯ ಇಡಿ–ಟೆಕ್‌ ಸಂಘಟನೆ ಯಡಿ ಧ್ವನಿ ಆಧಾರಿತ ‘ತಾರಾ’ ತಂತ್ರಜ್ಞಾನವನ್ನು ರೂಪಿಸಿದೆ. ಸರ್ಕಾರಿ ಹಾಗೂ ಕೆಲವು ಖಾಸಗಿ ಶಾಲೆ ವಿದ್ಯಾರ್ಥಿಗಳು ಇದರಿಂದ ಇಂಗ್ಲಿಷ್‌ ಕಲಿಯಬಹುದಾಗಿದೆ.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವುದು, ತಪ್ಪಾಗಿ ವ್ಯಾಕರಣ ಪ್ರಯೋಗ ಮಾಡಿದರೆ ತಿದ್ದುವುದು, ಮಾಹಿತಿ ಮತ್ತು ವಿಶ್ಲೇಷಣೆ ಮೂಲಕ ಮಾರ್ಗದರ್ಶನ ನೀಡುತ್ತದೆ. ಶಾಲಾ ಶಿಕ್ಷಕರೂ ಕೂಡ ‘ತಾರಾ’ ನೆರವಿನಿಂದ ಇಂಗ್ಲಿಷ್ ಕಲಿಯುತ್ತಿದ್ದಾರೆ. ಎಷ್ಟೋ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಸುವ ಶಿಕ್ಷಕರ ಹೊರೆಯನ್ನು ‘ತಾರಾ’ ಕಡಿಮೆ ಮಾಡಿದೆ. ವಿದ್ಯಾರ್ಥಿಗಳು ಕೂಡ ಈ ತಂತ್ರಜ್ಞಾನ ಉಪಕರಣಕ್ಕೆ ಬಹುಬೇಗನೆ ಹೊಂದಿಕೊಳ್ಳುತ್ತಾರೆ ಎಂದು ಶಿಕ್ಷಕರೇ ಖುಷಿಯಿಂದ ಹೇಳುತ್ತಾರೆ.

‘ಅವಕಾಶ ಮತ್ತು ಸೌಲಭ್ಯ ಇರುವ ಜನರಿಗೆ ಇಂಗ್ಲಿಷ್‌ ಕಲಿಕೆ ದೊಡ್ಡ ಸಮಸ್ಯೆಯೇ ಅಲ್ಲ. ಮನೆ ಹಾಗೂ ಶಾಲೆ ಪರಿಸರ ಮೂಲಕ ಅವರೆಲ್ಲಾ ಇಂಗ್ಲಿಷ್‌ ಭಾಷೆ ಮೇಲೆ ಪಾರಮ್ಯ ಸಾಧಿಸುತ್ತಾರೆ. ಆದರೆ, ದೇಶದ ಗ್ರಾಮೀಣ ಭಾಗದಲ್ಲಿ ಇಂದಿಗೂ ಇಂಗ್ಲಿಷ್‌ ದೊಡ್ಡ ಸಮಸ್ಯೆ’ ಎಂದು ‘ಲರ್ನಿಂಗ್‌ ಮ್ಯಾಟರ್ಸ್‌’ ಸಂಸ್ಥೆ ಸ್ಥಾಪಕರಲ್ಲಿ ಒಬ್ಬರಾದ ಸರಸ್ವತಿ ರಾಮಮೂರ್ತಿ ಹೇಳುತ್ತಾರೆ.

ಇದನ್ನು ಅರಿತು ಸಂಸ್ಥೆಯು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್‌, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾರಾಜ್ಯಗಳ 170 ಶಾಲೆಗಳಲ್ಲಿ ‘ತಾರಾ’ ಯೋಜನೆ ಅನುಷ್ಠಾನಗೊಳಿಸಲು ತಯಾರಿ ನಡೆಸಿದೆ.

ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಕ್ಕೆ ಚಿಂತನೆ
ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯೊಂದಿಗೆ ‘ಲರ್ನಿಂಗ್‌ ಮ್ಯಾಟರ್ಸ್‌’ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ ರಾಯಚೂರು, ಯಾದಗಿರಿ, ದಕ್ಷಿಣ ಕನ್ನಡ, ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಹಲವೆಡೆ ಸರ್ಕಾರಿ ಶಾಲೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ನಡೆಸಿದೆ. ಕೆಲವು ಕಂಪನಿಗಳ ಸಿಎಸ್‌ಆರ್‌ ಅನುದಾನದ ಸಹಯೋಗದೊಂದಿಗೆ ಗ್ರಾಮೀಣ ಹಿಂದುಳಿದ ಶಾಲೆಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣ ಪ್ರಸರಣವೇ ಮುಖ್ಯ ಉದ್ದೇಶವಾಗಿರುವ ಈ ಕಾರ್ಯಕ್ಕೆ ಸಂಸ್ಥೆಯ ಸ್ಥಾಪಕರಾದ ರಾಮಮೂರ್ತಿ, ಗೌರಿ ಮಹೇಶ್‌ ಬೆನ್ನೆಲುಬು. ‌

ಕೋವಿಡ್‌ನಿಂದ ಈ ಕಾರ್ಯಕ್ಕೆ ಅಡ್ಡಿಯಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಕುಗ್ರಾಮದ ಜನರಿಗೂ ಸೌಲಭ್ಯ ತಲುಪಬೇಕಾಗಿದ್ದು, ಅದರಲ್ಲೂ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ. ಸ್ಥಳೀಯ ಭಾಷೆ, ಸಂಸ್ಕೃತಿ ಕಲಿಕೆಯೊಂದಿಗೆ ವ್ಯಾವಹಾರಿಕ ಜ್ಞಾನಕ್ಕಾಗಿ ಇಂಗ್ಲಿಷ್ ಕಲಿಕೆ ಅಗತ್ಯ. ಇದು ಈ ಸಂಸ್ಥೆಯ ಧ್ಯೇಯ ಕೂಡ.

(ಸಂಪರ್ಕ: 9611142775‌, ಇ–ಮೇಲ್‌: saras.r@learningmatters.xyz)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.